ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ (ಏಪ್ರಿಲ್ 21) ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನಾನು ಪ್ರಧಾನಿಯವರನ್ನು ‘ಉಗ್ರ’ ಎಂದು ಕರೆದಿಲ್ಲ. ಬದಲಿಗೆ, ಮೋದಿ ಸರ್ಕಾರವು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದೌರ್ಜನ್ಯದ ಬಗ್ಗೆಯಷ್ಟೇ ಮಾತನಾಡಿದ್ದೇನೆ” ಎಂದಿದ್ದಾರೆ. ಅಲ್ಲದೆ, ಪ್ರಧಾನಿಯವರು ರಾಜಕಾರಣಿಗಳನ್ನು ಬೆದರಿಸುತ್ತಿದ್ದಾರೆ ಮತ್ತು ದೇಶದಲ್ಲಿ ‘ತೆರಿಗೆ ಭಯೋತ್ಪಾದನೆ’ ನಡೆಯುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
‘ಎಎನ್‌ಐ’ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, “ನಾನು ಪ್ರಧಾನಿಯವರ ವಿರುದ್ಧ ಮಾತನಾಡಿಲ್ಲ. ಅವರು ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳನ್ನು ಭಯಭೀತರನ್ನಾಗಿಸುತ್ತಿದ್ದಾರೆ. ಇದರ ಬಗ್ಗೆಯೇ ನಾನು ‘ತೆರಿಗೆ ಭಯೋತ್ಪಾದನೆ’ ನಡೆಯುತ್ತಿದೆ ಎಂದು ಹೇಳಿದ್ದೆ. ಇ.ಡಿ, ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ಮೂಲಕ ದಾಳಿಗಳನ್ನು ನಡೆಸಲಾಗುತ್ತಿದ್ದು, ಈ ಕೃತ್ಯಗಳಿಗೆ ಪ್ರಧಾನಿಯವರೇ ಕುಮ್ಮಕ್ಕು ನೀಡುತ್ತಿದ್ದಾರೆ. ನಾನು ಅವರನ್ನು ಉಗ್ರ ಎಂದು ಕರೆದಿಲ್ಲ; ಅವರು ಜನರನ್ನು ಹೆದರಿಸುತ್ತಿದ್ದಾರೆ. ತನಿಖಾ ಸಂಸ್ಥೆಗಳ ದಾಳಿಯ ಮೂಲಕ ವಿರೋಧಿಗಳ ಬಾಯಿಮುಚ್ಚಿಸಿ, ಚುನಾವಣೆಯಲ್ಲಿ ಅವರನ್ನು ಸೋಲಿಸಲು ಯತ್ನಿಸುತ್ತಿದ್ದಾರೆ. ಚೆನ್ನೈನಲ್ಲಿ ನಾನು ಹೇಳಿದ್ದು ಇದನ್ನೇ” ಎಂದು ವಿವರಿಸಿದ್ದಾರೆ.
ಇಸಿಐ ವಿರುದ್ಧ ಮಮತಾ ಆಕ್ರೋಶ
ಇನ್ನೊಂದು ಕಡೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತೀಯ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭವಾನಿಪುರ ಕ್ಷೇತ್ರದ ಕಾಲಿನ್ ಲೇನ್ ಪ್ರದೇಶದಲ್ಲಿ ಸಭೆ ನಡೆಸಲು ಮಮತಾ ಅವರಿಗೆ ಆಯೋಗವು ಅನುಮತಿ ನಿರಾಕರಿಸಿದೆ. ಆದರೆ, ಅದೇ ಪ್ರದೇಶದಲ್ಲಿ ಆರು ಗಂಟೆಗಳ ಅಂತರದಲ್ಲಿ ಪ್ರಧಾನಿ ಮೋದಿಯವರ ಸಭೆಗೆ ಆಯೋಗ ಆದ್ಯತೆ ಮೇರೆಗೆ ಅನುಮತಿ ನೀಡಿದೆ ಎಂದು ಮಮತಾ ದೂರಿದ್ದಾರೆ. ಜೋರಾಸಾಂಕೋ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, “ನನ್ನ ಸ್ವಂತ ಕ್ಷೇತ್ರದಲ್ಲಿ ಸಭೆಗೆ ಇಸಿಐ ಹೇಗೆ ಅನುಮತಿ ನಿರಾಕರಿಸುತ್ತದೆ? ಅಲ್ಲಿ ಬೇರೆ ಯಾವ ಸಭೆಗಳು ನಿರ್ಧರಿತವಾಗಿರಲಿಲ್ಲ. ಇದು ಪಕ್ಷಪಾತದ ನಡೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರ ಮಂಗಳವಾರ (ಏಪ್ರಿಲ್ 22) ಅಂತ್ಯಗೊಂಡಿದೆ. ಏಪ್ರಿಲ್ 23 ರಂದು 152 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಒಟ್ಟು 1,478 ಅಭ್ಯರ್ಥಿಗಳು ಚುನಾವಣಾ ಕದನದಲ್ಲಿದ್ದಾರೆ. ಅಧಿಕಾರರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ವಿಶೇಷವೆಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಸಿಪಿಐ-ಎಂ ಪಕ್ಷಗಳು ಈ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ.





