ಪುರುಷ ನಾಯಕರ ಕೋಣೆಗೆ ಹೋಗದೆ ಶೇ. 90ರಷ್ಟು ಮಹಿಳೆಯರಿಗೆ ರಾಜಕೀಯ ಪ್ರವೇಶ ಅಸಾಧ್ಯ ಎಂಬ ಬಿಹಾರ ಸಂಸದ ಪಪ್ಪು ಯಾದವ್ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಮಹಿಳಾ ರಾಜಕಾರಣಿಗಳ ಬಗೆಗಿನ ಈ ಕೀಳುಮಟ್ಟದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬಿಹಾರ ಮಹಿಳಾ ಆಯೋಗವು ಸಂಸದರಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ (131ನೇ ಸಂವಿಧಾನ ತಿದ್ದುಪಡಿ ಮಸೂದೆ-2026) ಅಂಗೀಕಾರಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪಪ್ಪು ಯಾದವ್, ವ್ಯವಸ್ಥೆ ಹಾಗೂ ಪುರುಷ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಭಾರತದಲ್ಲಿ ಮಹಿಳೆಯರನ್ನು ದೇವತೆಗಳೆಂದು ಕರೆಯಲಾಗುತ್ತದೆ, ಆದರೆ ಅವರಿಗೆ ಎಂದಿಗೂ ಇಲ್ಲಿ ಗೌರವ ಸಿಗುವುದಿಲ್ಲ, ಇದಕ್ಕೆ ಈ ವ್ಯವಸ್ಥೆ ಹಾಗೂ ಸಮಾಜವೇ ಕಾರಣ ಎಂದು ಅವರು ಹೇಳಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ, ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವುದಕ್ಕೆ ರಾಜಕಾರಣಿಗಳೇ ಕಾರಣ ಎಂದಿರುವ ಅವರು, ರಾಜಕಾರಣಿಯೊಬ್ಬರ ಮಲಗುವ ಕೋಣೆ ಪ್ರವೇಶಿಸದೆ ಶೇ.90ರಷ್ಟು ಮಹಿಳೆಯರು ರಾಜಕೀಯಕ್ಕೆ ಕಾಲಿಡಲು ಕೂಡ ಸಾಧ್ಯವಿಲ್ಲ ಹಾಗೂ ಮಹಿಳೆಯರನ್ನು ಶೋಷಿಸುವ ಸಂಸ್ಕೃತಿ ಬೇರೂರಿದೆ ಎಂದು ಆರೋಪಿಸಿದ್ದರು. ಅವರ ಈ ಮಾತಿನ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಪ್ಪು ಯಾದವ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಹಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಅಪ್ಸರಾ, ಈ ಕುರಿತು ಸ್ವಯಂಪ್ರೇರಿತವಾಗಿ ನೋಟಿಸ್ ನೀಡಿದ್ದಾರೆ. ಈ ಹೇಳಿಕೆಯು ಮಹಿಳೆಯರ ಸ್ವಾಭಿಮಾನ ಮತ್ತು ಸಾಮಾಜಿಕ ಘನತೆಗೆ ತೀವ್ರ ಧಕ್ಕೆ ತರುವಂತಹದ್ದಾಗಿದೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಸ್ವಂತ ಸಾಮರ್ಥ್ಯದಿಂದ ಮೇಲೇರುವುದಿಲ್ಲ ಎಂಬ ಕೀಳುಮಟ್ಟದ ಹಾಗೂ ಆಧಾರರಹಿತ ಸಾಮಾನ್ಯೀಕರಣವನ್ನು ಇದು ಸೂಚಿಸುತ್ತದೆ ಎಂದು ಆಯೋಗವು ನೋಟಿಸ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ
ಅಲ್ಲದೆ, ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಸಂಸದೀಯ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಲೋಕಸಭಾ ಸ್ಪೀಕರ್ ಅವರಿಗೆ ಏಕೆ ಶಿಫಾರಸು ಮಾಡಬಾರದು ಎಂದು ಆಯೋಗ ಪ್ರಶ್ನಿಸಿದ್ದು, ನೋಟಿಸ್ ತಲುಪಿದ ಮುಂದಿನ ಮೂರು ದಿನಗಳೊಳಗೆ ಖುದ್ದಾಗಿ ಸ್ಪಷ್ಟನೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪಪ್ಪು ಯಾದವ್ ಅವರ ಈ ಹೇಳಿಕೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ಬೆಂಬಲಿತ ಸಂಸದರ ಮಹಿಳಾ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ, ಇಡೀ ದೇಶವು ನಾರಿಶಕ್ತಿಯನ್ನು ಬೆಂಬಲಿಸುತ್ತಿರುವಾಗ ಇಂತಹ ಹೇಳಿಕೆ ಅತ್ಯಂತ ಆಘಾತಕಾರಿ ಮತ್ತು ಪಪ್ಪು ಯಾದವ್ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಕೂಡ ಇದೊಂದು ಅತ್ಯಂತ ಕೀಳುಮಟ್ಟದ ಹೇಳಿಕೆ ಎಂದು ಖಂಡಿಸಿದ್ದು, ನಮ್ಮಲ್ಲಿ ಹಲವರು ಕಠಿಣ ಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ, ಈ ಅವಹೇಳನಕಾರಿ ಮಾತುಗಳಿಗಾಗಿ ಪಪ್ಪು ಯಾದವ್ ಬೇಷರತ್ ಕ್ಷಮೆ ಕೇಳಬೇಕು ಎಂದು ಎಕ್ಸ್ ಮೂಲಕ ಒತ್ತಾಯಿಸಿದ್ದಾರೆ.





