ಈ ದಿನ ಸಂಪಾದಕೀಯ | ಅಮೆರಿಕದ ದಬ್ಬಾಳಿಕೆ-ಮೋದಿ ಸರ್ಕಾರದ ಮೌನ; ಭಾರತದ ಸಾರ್ವಭೌಮತ್ವಕ್ಕೆ ಶೋಭೆಯಲ್ಲ!

Date:

ತನ್ನ ಹಿತಾಸಕ್ತಿಗಾಗಿ ಭಾರತದ ಇಂಧನ, ವ್ಯಾಪಾರ ಹಾಗೂ ವಿದೇಶಾಂಗ ನೀತಿಗಳನ್ನು ನಿಯಂತ್ರಿಸಲು ಹೊರಟಿದೆ ಅಮೆರಿಕ. ಟ್ರಂಪ್ ಆಡಳಿತದ ಆರ್ಥಿಕ ದಬ್ಬಾಳಿಕೆಗೆ ತಲೆಬಾಗುತ್ತಿರುವ ಮೋದಿ ಸರ್ಕಾರ, ಭಾರತದ ಸಾರ್ವಭೌಮತ್ವವನ್ನೇ ಒತ್ತೆಯಿಡುತ್ತಿದೆ!

ಅಮೆರಿಕಕ್ಕೆ ಭಾರತದ ಸ್ನೇಹ ಬೇಕು. ಆದರೆ, ಅದು ಸಮಾನ ಗೌರವದ ಸ್ನೇಹವಲ್ಲ. ತನ್ನ ಮಾತಿಗೆ ತಲೆಯಾಡಿಸುವ, ತನ್ನ ಆಜ್ಞೆಯನ್ನು ತಲೆಬಾಗಿ, ಶಿರಸಾ ಪಾಲಿಸುವ ಸ್ನೇಹ ಅರ್ಥಾತ್ ಅಡಿಯಾಳು. ತನ್ನ ಹಿತಾಸಕ್ತಿಗೆ ಅನುಗುಣವಾಗಿ ವ್ಯಾಪಾರ ಮಾಡುವ, ತಾನು ಸೂಚಿಸಿದ ದೇಶದಿಂದ ತೈಲ ಖರೀದಿಸುವ, ತಾನು ವಿರೋಧಿಸಿದ ದೇಶದೊಂದಿಗಿನ ಸಂಬಂಧ ಕಡಿದುಕೊಳ್ಳುವ ಭಾರತವನ್ನು ಅಮೆರಿಕ ಬಯಸುತ್ತಿದೆ. ಭಾರತವು ಸ್ವತಂತ್ರವಾಗಿ ವಿದೇಶಾಂಗ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು, ಭಾರತದ ಪ್ರತಿ ನಿರ್ಧಾರದಲ್ಲಿಯೂ ತನ್ನ ನಿಯಂತ್ರಣ ಇರಬೇಕು ಎಂಬುದು ಟ್ರಂಪ್ ಆಡಳಿತದ ಅಮೆರಿಕದ ಧೋರಣೆ.

- Advertisement -

ಇದು ಅಕ್ಷರಶಃ ಆರ್ಥಿಕ ಬಲಪ್ರಯೋಗ. ಆದರೆ, ಈ ದಬ್ಬಾಳಿಕೆಯನ್ನು ಪ್ರಧಾನಿ ಮೋದಿ ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ಪಾಲಿಸುತ್ತಿದ್ದಾರೆ. ಇದು ಭಾರತ ಮತ್ತು ಭಾರತೀಯರ ದುರದೃಷ್ಟ. ಇದನ್ನು, ಇತ್ತೀಚಿನ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಭೇಟಿ ಸಾಬೀತು ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ರುಬಿಯೊ ಅವರು ದೆಹಲಿಗೆ ಬಂದು ರಾಜತಾಂತ್ರಿಕ ಮಾತುಕತೆ ನಡೆಸದೆ, ನೇರವಾಗಿ ಮುಂಬೈಗೆ ಬಂದಿಳಿದರು. ಅವರಿದ್ದಲ್ಲಿಗೆ ನಮ್ಮ ವಿದೇಶಾಂಗ ಸಚಿವ ಜೈ ಶಂಕರ್ ಓಡೋಡಿ ಹೋದರು. ರುಬಿಯೋ ಅವರು ಮುಂಬೈನ ವ್ಯಾಪಾರ ಕೇಂದ್ರಗಳು, ಜಾಮ್‌ನಗರದ ತೈಲ ಸಂಸ್ಕರಣಾ ಸಂಕೀರ್ಣಗಳಿಗೆ ಭೇಟಿ ನೀಡಿದರು. ಯಾಕೆಂದರೆ, ಅಮೆರಿಕದ ಆದ್ಯತೆಗಳು ಈ ಆರ್ಥಿಕ ಕೇಂದ್ರಗಳೇ ಆಗಿವೆ. ಮಾತ್ರವಲ್ಲ, ಇದು ಅಮೆರಿಕದ ವಿದೇಶಾಂಗ ನೀತಿಯಲ್ಲಿ ಭಾರತದ ಸ್ಥಾನ ಏನು ಎಂಬುದರ ಜೊತೆಗೆ, ‘ಅಮೆರಿಕಕ್ಕೆ ಭಾರತ ಬೇಕಿರುವುದು ಭಾರತದ ಅಭಿವೃದ್ಧಿಗಾಗಿಯಲ್ಲ; ಅಮೆರಿಕದ ಅಗತ್ಯಗಳನ್ನು ಪೂರೈಸುವುದಕ್ಕಾಗಿ’ ಎಂಬುದನ್ನು ಬಯಲುಮಾಡಿದೆ.

ಕಳೆದ ವರ್ಷ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಖರೀದಿಸಿದ್ದಕ್ಕಾಗಿ ಭಾರತದ ಸರಕುಗಳ ಮೇಲೆ ಅಮೆರಿಕ ದಂಡಾತ್ಮಕ ಸುಂಕ ವಿಧಿಸಿತು. ಭಾರತದ ಇಂಧನ ಭದ್ರತೆಯ ಕುರಿತು ಆಗ ಟ್ರಂಪ್ ಸರ್ಕಾರಕ್ಕೆ ಕಾಳಜಿ ಇರಲಿಲ್ಲ. ಭಾರತೀಯ ಗ್ರಾಹಕರು ತೆರಬೇಕಾದ ಬೆಲೆ, ರೈತರು ಎದುರಿಸುವ ಉತ್ಪಾದನಾ ವೆಚ್ಚ, ದೇಶದ ಕೈಗಾರಿಕೆಗಳ ಸಂಕಷ್ಟ ಯಾವುದೂ ಮುಖ್ಯವಾಗಿರಲಿಲ್ಲ.

ಆದರೆ ಈಗ ಅಮೆರಿಕದ ಲೆಕ್ಕಾಚಾರ ಬದಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆಯ ಅನಿಶ್ಚಿತತೆ ಹೆಚ್ಚಾಗಿರುವ ಮತ್ತು ಅಮೆರಿಕದಲ್ಲಿ ಡೀಸೆಲ್ ದರದ ಒತ್ತಡ ತಗ್ಗಿಸಬೇಕಿರುವ ಒತ್ತಡ ಅಮೆರಿಕಕ್ಕಿದೆ. ಅದಕ್ಕಾಗಿ, ವೆನೆಜುವೆಲಾದ ಭಾರವಾದ ಕಚ್ಚಾತೈಲ ಸಂಸ್ಕರಿಸಲು ಭಾರತದ ರಿಫೈನರಿಗಳ ಸಾಮರ್ಥ್ಯ ಬೇಕಾಗಿದೆ. ಹೀಗಾಗಿ ನಿನ್ನೆ ನಿರ್ಬಂಧದ ಬೆದರಿಕೆ ಹಾಕಿದ ಅಮೆರಿಕವೇ ಇಂದು ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ಕೊಂಡಾಡುತ್ತಿದೆ. ಇದು ಅಮೆರಿಕದ ಅನುಕೂಲಸಿಂಧು ನೀತಿಯಲ್ಲದೆ ಮತ್ತೇನು?

ಭಾರತವು ತೈಲವನ್ನು ರಷ್ಯಾ – ಅಮೆರಿಕ – ವೆನೆಜುವೆಲಾ ಅಥವಾ ಯಾರಿಂದ ಖರೀದಿಸಬೇಕು ಎಂಬುದನ್ನು ನಿರ್ಧರಿಸಬೇಕಾದವರು ಭಾರತೀಯರು. ಬೆಲೆ, ಗುಣಮಟ್ಟ, ಪೂರೈಕೆಯ ಭದ್ರತೆ ಮತ್ತು ದೇಶದ ಆರ್ಥಿಕ ಅಗತ್ಯಗಳೇ ಈ ನಿರ್ಧಾರಕ್ಕೆ ಆಧಾರವೂ ಆಗಿರಬೇಕು.

ಆದರೆ, ರುಬಿಯೊ ಅವರು ರಷ್ಯಾದ ಕಚ್ಚಾ ತೈಲ ಬದಲಿಗೆ, ವೆನೆಜುವೆಲಾದ ತೈಲವನ್ನು ಖರೀದಿಸುವಂತೆ ಭಾರತಕ್ಕೆ ಕೇಳಿದ್ದಾರೆ, ಅಲ್ಲ, ತಾಕೀತು ಮಾಡಿದ್ದಾರೆ.  ಈ ಧೋರಣೆಯು ತಾನು ಹೇಳಿದಂತೆ ನಡೆದುಕೊಂಡರೆ ಸಹಕಾರ. ಇಲ್ಲದಿದ್ದರೆ ಸುಂಕ, ನಿರ್ಬಂಧ, ಹಣಕಾಸಿನ ಒತ್ತಡ ಹೇರುವ ಅಮೆರಿಕದ ದಾರ್ಷ್ಟ್ಯವನ್ನು ತೋರುತ್ತದೆ. ಮೋದಿ ಸರ್ಕಾರವೂ ಅದಕ್ಕೆ ತಲೆಯಾಡಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವಗುರು ಎಂದು ಬಿಂಬಿಸಿಕೊಳ್ಳುತ್ತಾರೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ಗೌರವ ಹೆಚ್ಚಿದೆ ಎಂದು ಹೇಳಿಕೊಳ್ಳುತ್ತಾರೆ. ವಿದೇಶಿ ನಾಯಕರೊಂದಿಗಿನ ಆಪ್ತತೆಯನ್ನು ರಾಜತಾಂತ್ರಿಕ ಸಾಧನೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಾರೆ.

ಆದರೆ, ರಾಷ್ಟ್ರದ ಸಾರ್ವಭೌಮತ್ವವು ಇಂತಹ ಪ್ರಚಾರಗಳಿಂದ ಸಾಬೀತಾಗುವುದಿಲ್ಲ. ಬಲಿಷ್ಠ ರಾಷ್ಟ್ರವೊಂದು ಅನ್ಯಾಯದ ಷರತ್ತುಗಳನ್ನು ಮುಂದಿಟ್ಟಾಗ ಅವುಗಳನ್ನು ಎದುರಿಸುವ ದೃಢತೆಯಲ್ಲಿಯೇ ನಿಜವಾದ ರಾಜತಾಂತ್ರಿಕ ಸಾಮರ್ಥ್ಯ ಅಡಗಿದೆ. ಇದನ್ನು ಮೋದಿ ಮರೆತಿದ್ದಾರೆ.

ಟ್ರಂಪ್ ಸರ್ಕಾರ ಭಾರತದ ಸರಕುಗಳ ಮೇಲೆ ದಂಡಾತ್ಮಕ ಸುಂಕ ವಿಧಿಸಿದಾಗ ಮೋದಿ ಸರ್ಕಾರ ಅದಕ್ಕೆ ತಕ್ಕ ರಾಜಕೀಯ ಉತ್ತರ ನೀಡಬೇಕಿತ್ತು. ಭಾರತದ ಇಂಧನ ಖರೀದಿಯ ಸ್ವಾತಂತ್ರ್ಯವನ್ನು ಪ್ರಶ್ನಾತೀತವಾಗಿ ಸಮರ್ಥಿಸಬೇಕಿತ್ತು. ಆದರೆ, ಪ್ರಧಾನಿ ಮೋದಿ ಈ ಎರಡನ್ನೂ ಮಾಡಲಿಲ್ಲ. ಬದಲಾಗಿ, ಮೋದಿ ಸರ್ಕಾರದ ಪ್ರತಿಕ್ರಿಯೆಗಳು ಅಮೆರಿಕದೊಂದಿಗೆ ಸಂಬಂಧ ಹದಗೆಡಬಾರದೆಂಬ ಆತಂಕದಿಂದಲೇ ಕೂಡಿದ್ದವು. ಆದರೂ, ಭಾರತದ ಮೇಲೆ ಅಮೆರಿಕ ಬಲಪ್ರಯೋಗ ನಡೆಸುತ್ತಿದೆಯೇ ಹೊರತು, ರಾಜತಾಂತ್ರಿಕ ಸೌಹಾರ್ದತೆ ತೋರುತ್ತಿಲ್ಲ.

ಇರಾನ್‌ಗೆ ಔಷಧ ಸಾಗಿಸುವ ವಿಷಯದಲ್ಲಿ ಭಾರತ ತೆಗೆದುಕೊಂಡಿರುವ ನಿರ್ಧಾರ ಮತ್ತು ತಳೆದಿರುವ ಧೋರಣೆಯೂ ಇದೇ ಸಮಸ್ಯೆಯ ಮತ್ತೊಂದು ಮುಖವಾಗಿದೆ. ಅಮೆರಿಕದ ನಿರ್ಬಂಧಗಳ ಬೆದರಿಕೆಗೆ ಹೆದರಿರುವ ಭಾರತವು, ಇಲ್ಲಿ ಇರಾನ್‌ ಖರೀದಿಸಿರುವ ಔಷಧಗಳನ್ನು ಕೊಂಡೊಯ್ಯಲು ಇರಾನ್‌ನ ವಿಮಾನಗಳ ಲ್ಯಾಂಡಿಂಗ್‌ಗೆ ಅವಕಾಶ ಕೊಡುತ್ತಿಲ್ಲ. ಪರ್ಯಾಯ ದಾರಿಗಳನ್ನು ಹುಡುಕಿಕೊಂಡು, ಔಷಧ ಕೊಂಡೊಯ್ಯುವಂತೆ ಇರಾನ್‌ಅನ್ನು ಭಾರತ ಕೇಳಿದೆ. ಅಂದರೆ, ತನ್ನ ನೆಲದಲ್ಲಿ ಯಾವ ವಿಮಾನ ಇಳಿಯಬೇಕು ಎಂಬುದನ್ನೂ ಮೋದಿ ಸರ್ಕಾರವು ಅಮೆರಿಕದ ಆಣತಿಯಂತೆ ನಿರ್ಧರಿಸುತ್ತಿದೆ.

ಅಮೆರಿಕದ ಏಕಪಕ್ಷೀಯ ನಿರ್ಬಂಧಗಳು ಭಾರತದ ಮಾನವೀಯ ನೆರವು ಮತ್ತು ವ್ಯಾಪಾರ ಸಂಬಂಧಗಳನ್ನು ನಿಯಂತ್ರಿಸುತ್ತಿದೆ. ಅಮೆರಿಕ ತನ್ನ ಹಿತಾಸಕ್ತಿಯನ್ನು ಕಾಪಾಡಲು ಎಲ್ಲ ಮಾರ್ಗಗಳನ್ನು ಬಳಸುತ್ತಿದೆ. ಆದರೆ, ಭಾರತ ತನ್ನ ಹಿತಾಸಕ್ತಿಯ ಹೆಸರಿನಲ್ಲಿ ಸ್ವತಂತ್ರ ಮತ್ತು ಸಾರ್ವಭೌಮತ್ವವನ್ನು ಮರೆದು ಅಮೆರಿಕದ ಕಟ್ಟುಪಾಡುಗಳಿಗೆ ತಲೆ ಬಾಗುತ್ತಿದೆ.

ಭಾರತ ಮತ್ತು ಅಮೆರಿಕ ನಡುವೆ ತಂತ್ರಜ್ಞಾನ, ರಕ್ಷಣಾ ಉತ್ಪಾದನೆ, ಕೃತಕ ಬುದ್ಧಿಮತ್ತೆ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಸಹಕಾರ ಬೆಳೆಯುತ್ತಿರುವುದು ನಿಜ. ಈ ಸಹಕಾರದಿಂದ ಭಾರತಕ್ಕೆ ಪ್ರಯೋಜನಗಳೂ ಇರಬಹುದು. ಆದರೆ, ಅವುಗಳ ಹೆಸರಿನಲ್ಲಿ ವಿದೇಶಾಂಗ ಸ್ವಾಯತ್ತತೆಯನ್ನು ಒತ್ತೆಯಿಡುವುದು ರಾಜತಾಂತ್ರಿಕ ಜಾಣ್ಮೆಯೇ? ಖಂಡಿತಾ ಅಲ್ಲ, ಇದು ದಡ್ಡತನ!

ಈ ಲೇಖನ ಓದಿದ್ದೀರಾ?: ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಅಮೆರಿಕ ನಮ್ಮ ಮಾರುಕಟ್ಟೆಯನ್ನು ಬಳಸಿಕೊಳ್ಳಬಹುದು. ನಮ್ಮ ತಂತ್ರಜ್ಞರನ್ನು ನೇಮಿಸಿಕೊಳ್ಳಬಹುದು. ನಮ್ಮ ರಿಫೈನರಿಗಳಿಂದ ಪ್ರಯೋಜನ ಪಡೆಯಬಹುದು. ಆದರೆ, ನಮ್ಮ ಇಂಧನ ಖರೀದಿಯ ನಿರ್ಧಾರಗಳ ಮೇಲೆ ನಿಯಂತ್ರಣ ಹೇರಲು ಹೊರಟರೆ ಅದನ್ನು ಒಪ್ಪಿಕೊಳ್ಳಲಾಗದು.

ಭಾರತದ ಕೃಷಿ ಮಾರುಕಟ್ಟೆ, ಸಣ್ಣ ಕೈಗಾರಿಕೆಗಳು, ಔಷಧ ಉದ್ಯಮ ಹಾಗೂ ಕಾರ್ಮಿಕರ ಹಿತಾಸಕ್ತಿಗಳನ್ನು ಬಲಿಕೊಟ್ಟು ಅಮೆರಿಕದ ಮಾರುಕಟ್ಟೆಯನ್ನು ತೃಪ್ತಿಪಡಿಸುವ ವ್ಯಾಪಾರ ಒಪ್ಪಂದಕ್ಕೂ ಸಹಿ ಹಾಕಲು ಮೋದಿ ಸರ್ಕಾರ ಮುಂದಾಗಿದೆ. ಇದು ಸಹಕಾರವಲ್ಲ, ಅಕ್ಷರಶಃ ದೇಶದ ಹಿತಾಸಕ್ತಿಗಳೊಂದಿಗೆ ಮಾಡಿಕೊಂಡ ರಾಜಿ.

ಭಾರತದ ವಿದೇಶಾಂಗ ನೀತಿಗೆ ಸ್ವಾತಂತ್ರ್ಯ ಹೋರಾಟದಿಂದ ಬೆಳೆದುಬಂದ ಐತಿಹಾಸಿಕ ಪರಂಪರೆಯಿದೆ. ವಸಾಹತುಶಾಹಿಯ ವಿರುದ್ಧ ಹೋರಾಡಿದ ದೇಶವಿದು. ಅಲಿಪ್ತ ಚಳವಳಿಯ ಮೂಲಕ ಜಾಗತಿಕ ಶಕ್ತಿಗಳ ಪ್ರಾಬಲ್ಯವನ್ನು ಪ್ರಶ್ನಿಸಿದ ದೇಶವಿದು. ಅಮೆರಿಕದ ನೆಲದಲ್ಲಿಯೇ ಅಮೆರಿಕಗೆ ಸವಾಲು ಹಾಕಿ, ಧೀಮಂತ ನಾಯಕತ್ವ ತೋರಿದ ಇಂದಿರಾ ಗಾಂಧಿ ಮುನ್ನಡೆಸಿದ್ದ ನಾಡಿದು. ಆ ಪರಂಪರೆಯ ಅರಿವು ಪ್ರಧಾನಿ ಮೋದಿಗೆ ಇದ್ದಂತಿಲ್ಲ!

ರಷ್ಯಾ, ಚೀನಾ, ಇರಾನ್ ಅಥವಾ ಅಮೆರಿಕ — ಯಾವುದೇ ರಾಷ್ಟ್ರದೊಂದಿಗೆ ಭಾರತದ ಸಂಬಂಧವು ಭಾರತದ ಜನರ ಹಿತಾಸಕ್ತಿಯನ್ನು ಆಧರಿಸಿರಬೇಕು. ಯಾರೊಬ್ಬರ ರಾಜಕೀಯ ಆಜ್ಞೆಯನ್ನು ಆಧರಿಸಿರಬಾರದು. ಭಾರತದ ಸಾರ್ವಭೌಮತ್ವ ಕೇವಲ ಗಡಿಗಳ ರಕ್ಷಣೆಗೆ ಸಂಬಂಧಿಸಿದ್ದಲ್ಲ. ದೇಶದ ಆರ್ಥಿಕ ನಿರ್ಧಾರಗಳು, ಇಂಧನ ಭದ್ರತೆ, ವ್ಯಾಪಾರ ಸಂಬಂಧಗಳು ಹಾಗೂ ರಾಜತಾಂತ್ರಿಕ ಆಯ್ಕೆಗಳ ಮೇಲಿನ ಸ್ವತಂತ್ರ ಅಧಿಕಾರಕ್ಕೂ ಸಂಬಂಧಿಸಿದೆ. ಇದನ್ನು ಮೋದಿ ಸರ್ಕಾರ ಮರೆಯಬಾರದು.

ಭಾರತ ಯಾರ ಸಾಮಂತ ರಾಷ್ಟ್ರವೂ ಅಲ್ಲ. ಟ್ರಂಪ್ ಅವರ ಆದೇಶ ಪಾಲಿಸಲು ಭಾರತೀಯರು ಮೋದಿ ಸರ್ಕಾರಕ್ಕೆ ಅಧಿಕಾರ ನೀಡಿಲ್ಲ. ಭಾರತಕ್ಕೆ ಅಮೆರಿಕದ ಸ್ನೇಹ ಬೇಕೇ ಹೊರತು ಅದರ ಯಜಮಾನಿಕೆಯಲ್ಲ. ಈ ವ್ಯತ್ಯಾಸವನ್ನು ಅಮೆರಿಕಗೆ ಸ್ಪಷ್ಟವಾಗಿ ತಿಳಿಸುವುದು ಮೋದಿ ಸರ್ಕಾರದ ಕರ್ತವ್ಯ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | ಮಾದಕ ದ್ರವ್ಯ, ಡಿಜಿಟಲ್ ವಂಚನೆ ವಿರೋಧಿ ಜನಜಾಗೃತಿ ಜಾಥಾ ಮತ್ತು ಯುವ ಸಮಾವೇಶ

ಮಾದಕ ದ್ರವ್ಯಗಳ ದುಷ್ಪರಿಣಾಮ ಮತ್ತು ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳ ಬಗ್ಗೆ ಯುವಜನರಲ್ಲಿ...

ಜ.1ರಿಂದ ವಾಟ್ಸಾಪ್‌, ಟೆಲಿಗ್ರಾಂ ಬಳಕೆಗೆ ಹೊಸ ರೂಲ್ಸ್; ಸಿಮ್‌ ತೆಗೆದರೆ ಖಾತೆ ಬಂದ್‌!

ವಾಟ್ಸಾಪ್‌, ಟೆಲಿಗ್ರಾಂ ಸೇರಿದಂತೆ ಮೊಬೈಲ್‌ ಸಂಖ್ಯೆಯ ಆಧಾರದಲ್ಲಿ ಕಾರ್ಯನಿರ್ವಹಿಸುವ ಮೆಸೇಜಿಂಗ್‌ ಆ್ಯಪ್‌ಗಳ...

ದೀಪಾವಳಿ ಸೀಸನ್‌ನಲ್ಲಿ ನಷ್ಟದ ಆತಂಕ: ‘ಇಂಡಿಯಾ’ ಒಕ್ಕೂಟದ ರ‍್ಯಾಲಿ ಮುಂದೂಡಲು ರಾಹುಲ್ ಗಾಂಧಿಗೆ ವರ್ತಕರ ಮನವಿ!

ದೀಪಾವಳಿ, ಧನತ್ರಯೋದಶಿ ಹಬ್ಬಗಳ ಸೀಸನ್‌ನಲ್ಲಿ ರಾಜಧಾನಿ ದೆಹಲಿಯಲ್ಲಿ ಭಾರಿ ಪ್ರಮಾಣದ ಶೃಂಗಾರ...