ಮುಂಬರುವ ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ನಾರಾಯಣಪುರ ಜಲಾಶಯದಿಂದ 6 ಟಿಎಂಸಿ ನೀರು ಕಾಯ್ದಿರಿಸುವಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಕ್ಟೋಬರ್ 15ರಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಉಳಿದ ಅವಧಿ ಹಾಗೂ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ವಿಡಿಯೋ ಸಂವಾದದ ಮೂಲಕ ಭಾಗವಹಿಸಿದ ಜಿಲ್ಲಾಧಿಕಾರಿ, ಕಲಬುರಗಿ ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆ ಕುರಿತು ಪ್ರಸ್ತಾವನೆ ಸಲ್ಲಿಸಿದರು.
ಜಿಲ್ಲೆಯ ವಿವಿಧ ನಗರ, ಗ್ರಾಮೀಣ ಪ್ರದೇಶಗಳು ಹಾಗೂ ಕುಡಿಯುವ ನೀರಿನ ಯೋಜನೆಗಳ ಅಗತ್ಯತೆ ಆಧರಿಸಿ ಒಟ್ಟು 6 ಟಿಎಂಸಿ ನೀರಿನ ಬೇಡಿಕೆ ಸಲ್ಲಿಸಲಾಗಿದೆ. ಅದರಂತೆ ಕಲಬುರಗಿ ನಗರಕ್ಕೆ 2.50 ಟಿಎಂಸಿ, ಭೀಮಾ ನದಿ ದಡದ ಗ್ರಾಮಗಳಿಗೆ 1.50 ಟಿಎಂಸಿ, ಅಫಜಲಪುರ ನಗರಕ್ಕೆ 1 ಟಿಎಂಸಿ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ 0.40 ಟಿಎಂಸಿ ನೀರು ಅಗತ್ಯವಿದೆ. ಇದರೊಂದಿಗೆ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ಕೆರೆಗಳನ್ನು ಅವಲಂಬಿಸಿರುವ ಗ್ರಾಮಗಳು ಹಾಗೂ ಪಟ್ಟಣಗಳ ಕುಡಿಯುವ ನೀರಿನ ಅಗತ್ಯತೆಗಾಗಿ ತಲಾ 0.30 ಟಿಎಂಸಿಯಂತೆ ಒಟ್ಟು 0.60 ಟಿಎಂಸಿ ನೀರು ಕಾಯ್ದಿರಿಸುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆ, ಅಫಜಲಪುರ ಪುರಸಭೆ, ಭೀಮಾ ಏತ ನೀರಾವರಿ ಯೋಜನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಲ್ಲಿಸಿರುವ ಬೇಡಿಕೆಗಳ ಆಧಾರದಲ್ಲಿ ಈ ಪ್ರಸ್ತಾವನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಮರಣಾನಂತರ ದೇಹದಾನಕ್ಕೆ ಮುಂದಾದ ಮೂವರು ಶಿಕ್ಷಕರು, ಸಾಹಿತಿ
ಪ್ರಸ್ತುತ ಪರಿಸ್ಥಿತಿಯಿಂದ ಮುಂದಿನ ಜೂನ್ ತಿಂಗಳವರೆಗಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಾರಾಯಣಪುರ ಜಲಾಶಯದಿಂದ ಅಗತ್ಯ ಪ್ರಮಾಣದ ನೀರನ್ನು ಕಾಯ್ದಿರಿಸಲು ಪ್ರಸ್ತಾವನೆ ಮಂಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.





