ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮರಣಾನಂತರ ತಮ್ಮ ದೇಹದಾನ ಮಾಡಲು ಸ್ವಯಂಪ್ರೇರಣೆಯಿಂದ ಮುಂದೆ ಬಂದ ಬೀದರ್ ಜಿಲ್ಲೆಯ ಮೂವರು ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಒಬ್ಬ ಸಾಹಿತಿಯನ್ನು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಬೀದರ್ನ ಶಿವನಗರ ನಿವಾಸಿ ಸಾಹಿತಿ ಜಗದೇವಿ ಎಸ್. ದುಬಲಗುಂಡೆ, ಹುಮನಾಬಾದ್ ತಾಲೂಕಿನ ಗಡವಂತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಎಸ್. ಕಾಳಗಿ, ಹುಮನಾಬಾದ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಡಾ. ಸಾರಿಕಾ ಎಸ್. ಗಂಗಾ ಹಾಗೂ ಹುಮನಾಬಾದ್ನ ಹಂದಿಕೇರಾ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಜುಕುಮಾರ ಅತಿವಾಳೆ ಅವರು ದೇಹದಾನಕ್ಕೆ ಸಂಕಲ್ಪ ಮಾಡಿದ್ದಾರೆ.
ಅ.16ರಂದು ಬ್ರಿಮ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಡಾ.ಶಾಂತಲಾ ಕೌಜಲಗಿ, ಪ್ರಾಂಶುಪಾಲ ಡಾ.ರಾಜೇಶ ಪಾರಾ ಹಾಗೂ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಂದೀಪ ದೇಶಮುಖ ಅವರು ದೇಹದಾನಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ, ದೇಹದಾನದ ಪ್ರಮಾಣಪತ್ರಗಳನ್ನು ವಿತರಿಸಿದರು.
ದೇಹದಾನದ ಮಹತ್ವದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಓದಿ ಪ್ರೇರಿತರಾದ ಇವರು, ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆ ಮತ್ತು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

ದೇಹದಾನಿ ಸಂಜುಕುಮಾರ ಅತಿವಾಳೆ ಮಾತನಾಡಿ, “ಸಮಾಜದಲ್ಲಿ ಪರಸ್ಪರ ದ್ವೇಷ ಮತ್ತು ಅಸೂಯೆ ಹೆಚ್ಚುತ್ತಿರುವ ಇಂತಹ ವೇಳೆ ಜನರಿಗೆ ಒಳಿತು ಮಾಡುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ದಾನಗಳಲ್ಲಿಯೇ ದೇಹದಾನ ಶ್ರೇಷ್ಠವಾದದ್ದು ಎಂಬ ನಂಬಿಕೆಯಿಂದ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲು ಈ ನಿರ್ಧಾರ ಕೈಗೊಂಡಿದ್ದೇನೆ. ಇದು ನನಗೆ ಹೆಮ್ಮೆಯ ವಿಷಯವಾಗಿದೆ” ಎಂದರು.
ಶಿಕ್ಷಕಿಯರಾದ ಸಾರಿಕಾ ಎಸ್. ಗಂಗಾ ಮತ್ತು ಜಯಶ್ರೀ ಎಸ್. ಕಾಳಗಿ ಮಾತನಾಡಿ, “ವಿವಿಧ ಸರ್ಕಾರಿ ಸಂಘ-ಸಂಸ್ಥೆಗಳ ಮೂಲಕ ಜನಸೇವೆ ಮಾಡುತ್ತ ಬಂದಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಸಾಧನೆಗೈದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಅವರಿಗೆ ಬಾಲಪ್ರತಿಭಾ ಪುರಸ್ಕಾರ ದೊರೆಯುವಂತೆ ಪ್ರೋತ್ಸಾಹಿಸಿದ್ದೇವೆ. ಹಲವು ವರ್ಷಗಳಿಂದ ದೇಹದಾನ ಮಾಡುವ ಇಚ್ಛೆ ಹೊಂದಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಆ ಅವಕಾಶ ದೊರೆತಿರುವುದು ಸಂತಸ ತಂದಿದೆ. ಮಾನವ ದೇಹದ ಪ್ರತಿಯೊಂದು ಅಂಗ ಮತ್ತು ರಚನೆಯೂ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಅಮೂಲ್ಯ ಕೊಡುಗೆಯಾಗಲಿದೆ” ಎಂದು ತಿಳಿಸಿದರು.
ಬ್ರಿಮ್ಸ್ ನಿರ್ದೇಶಕಿ ಡಾ.ಶಾಂತಲಾ ಕೌಜಲಗಿ ಮಾತನಾಡಿ, “ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಅನ್ನದಾನ, ವಿದ್ಯಾದಾನ, ರಕ್ತದಾನ ಹಾಗೂ ನೇತ್ರದಾನದಂತೆ ದೇಹದಾನ ಉದಾತ್ತವಾದ ಮಾನವೀಯ ಸೇವೆಯಾಗಿದೆ. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಮೌಲ್ಯವು ನಮ್ಮ ದೇಹ ಮತ್ತು ಸಾಮರ್ಥ್ಯ ಇತರರ ಒಳಿತಿಗೂ ಬಳಕೆಯಾಗಬೇಕು ಎಂಬ ಸಂದೇಶ ನೀಡುತ್ತದೆ” ಎಂದರು.

ತಮ್ಮ ದೇಹವನ್ನು ವೈದ್ಯಕೀಯ ಶಿಕ್ಷಣಕ್ಕೆ ಸಮರ್ಪಿಸುವ ನಿರ್ಧಾರ ಸಾಮಾನ್ಯವಾದುದಲ್ಲ. ಇದರ ಹಿಂದೆ ವಿಶಾಲ ಹೃದಯ, ಮಾನವೀಯ ಕಾಳಜಿ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕೆಂಬ ಉದಾತ್ತ ಮನೋಭಾವವಿದೆ. ದೇಹದಾನಿಗಳ ಈ ನಿರ್ಧಾರ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅಂಗರಚನಾಶಾಸ್ತ್ರ ವಿಭಾಗದ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.
ಅಂಗರಚನಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಡಿ.ಬಿ. ಪಾಟೀಲ, ಡಾ. ವರ್ಷಾಲಿ, ಡಾ. ರೋಷನ್, ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಆಹಿರಾ, ದೇಹದಾನ ಸಂಚಾಲಕರಾದ ನಾಗೇಂದ್ರ ಕಮಲಾಪುರೆ, ಶಿವಪುತ್ರ ಮುತ್ತತ್ತಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಭಾಲ್ಕಿ | ಪತ್ರಿಕಾ ಭವನ ನಿರ್ಮಾಣಕ್ಕೆ ಪತ್ರಕರ್ತರ ಮನವಿ





