ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ...
‘ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ’ ಪುಸ್ತಕಕ್ಕೆ ಮುನ್ನುಡಿ ಬರೆದು ಮುಗಿಸಿದ ನಂತರ 6 ಮಾರ್ಚ್ 1963ರಂದು ಲೋಹಿಯಾ ಬೆಂಗಳೂರಿನತ್ತ ಪಯಣ ಬೆಳೆಸಿದ್ದರು. ಬೆಂಗಳೂರಿನ ಹಾದಿಯಲ್ಲಿ ರಮಾಗೆ ಬರೆದ ಪತ್ರದಲ್ಲಿ ಲೋಹಿಯಾರ ಮನದಲ್ಲಿ ಹಾದು ಹೋಗುತ್ತಿದ್ದ ತಳಮಳಗಳ ಸೂಚನೆಗಳಿವೆ
ಪ್ರಿಯ ರಮಾ,
ಈ ಸಲ ಯಾಕೋ ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಮನಸ್ಸು ಹೆಚ್ಚು ಕೆಟ್ಟಂತಿದೆ. ಎಲ್ಲ ಸಂಗಾತಿಗಳಿಗೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳಬೇಕೆನ್ನಿಸುತ್ತದೆ: ಪ್ರತಿಯೊಂದು ವಿದಾಯವೂ ಕೊನೆಯದೆಂದು ತಿಳಿದು ಹೊರಡಬೇಕು. ಯಾರಿಗೆ ಗೊತ್ತು ಪ್ರತಿ ಭೇಟಿಯನ್ನೂ ಹೊಸದು ಎಂದು ತಿಳಿದು ಭೇಟಿಯಾಗಬೇಕು. ಆಗಲೇ ಹೆಚ್ಚಿನ ಆನಂದ ದೊರೆಯುವುದು.
ನಿನಗೆ ಸರಿಯೆನ್ನಿಸಿದರೆ, ಮಧು ಲಿಮಯೆ ಬಗ್ಗೆ ನೀನು ಏನು ಬರೆದಿದ್ದೀಯೋ ಆ ಕುರಿತು ಅವನಿಗೇ ಒಂದು ಪತ್ರ ಬರೆ. ಮನುಷ್ಯ ತನ್ನ ಕರ್ತವ್ಯ ಮಾಡುತ್ತಾ ಹೋಗಬೇಕು; ಎಲ್ಲಿ ಆ ಕರ್ತವ್ಯಕ್ಕೆ ಬೆಲೆಯಿಲ್ಲವೋ ಅಲ್ಲಿ ಕೂಡ ಕರ್ತವ್ಯ ಮಾಡುತ್ತಾ ಹೋಗಬೇಕು… ‘ರುಪೀಸ್ 25000 ಎ ಡೇ’ ಪುಸ್ತಕ ಬಂದಿದೆ. ಬೆಂಗಳೂರಿನಿಂದಲೇ ನಿನಗೆ ಒಂದು ಪುಸ್ತಕ ಕಳಿಸುತ್ತೇನೆ. ನಿನ್ನ ಕಣ್ಣು ನಾಲ್ಕೂ ಕಡೆ ನೋಡುತ್ತಿರಬೇಕು.
ನಿನ್ನ
ರಾಮ್ಮನೋಹರ್
ಆ ವಾರ ಲೋಹಿಯಾ ಮಡಿಕೇರಿ, ಮೈಸೂರಿನ ಸುತ್ತಮುತ್ತ ಅಡ್ಡಾಡುತ್ತಿದ್ದರು. ಆ ಕಾಲಕ್ಕಾಗಲೇ ಲೋಹಿಯಾ ಮತ್ತು ಕರ್ನಾಟಕದ ನಂಟು ಗಾಢವಾಗಿತ್ತು.
2
ಕರ್ನಾಟಕದ ಜೊತೆಗೆ ಲೋಹಿಯಾ ನಂಟು ಬೆಳೆಯುವ ಹೊತ್ತಿಗೆ ಇಲ್ಲಿ ನೂರಾರು ತರುಣ ಸಮಾಜವಾದಿಗಳು ರೂಪುಗೊಂಡಿದ್ದರು. ಮೈಸೂರು ರಾಜ್ಯದ ಕೆಲವೆಡೆ ಕ್ಲಿಟ್ ಇಂಡಿಯಾ ಚಳುವಳಿಗೆ ಧುಮುಕಿದ್ದ ಸಮಾಜವಾದಿ ತರುಣರ ಭೂಗತ ಚಟುವಟಿಕೆಗಳಿಗೆ ಮಂಗಳೂರಿನ ಕಮಲಾದೇವಿ ಚಟ್ಟೋಪಾಧ್ಯಾಯ ಮಾರ್ಗದರ್ಶನ ಮಾಡುತ್ತಿದ್ದರು. ಬಾಲವೈಧವ್ಯದ ಸಂಕಷ್ಟವನ್ನು ಎದುರಿಸಿ, ನಂತರ ಕಲಾವಿದ ಹರೀಂದ್ರನಾಥ ಚಟ್ಟೋಪಾಧ್ಯಾಯರನ್ನು ಮದುವೆಯಾಗಿದ್ದ ಕಮಲಾದೇವಿ ಕಾಂಗ್ರೆಸ್ ಸೇರಿದ್ದರು. ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ದಂಡಿಯಾತ್ರೆಯ ಹಾದಿಯಲ್ಲೇ ಗಾಂಧೀಜಿಯ ಜೊತೆ ವಾದ ಮಾಡಿ, ಮಹಿಳೆಯರೂ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿಯಾಗುವಂತೆ ಗಾಂಧೀಜಿಯನ್ನು ಒಪ್ಪಿಸಿದ್ದರು. ನಂತರ ತಮ್ಮ ಧೋರಣೆಗಳಿಗೆ ಹತ್ತಿರವಿದ್ದ ಕಾಂಗ್ರೆಸ್ ಸೋಷಲಿಸ್ಟ್ ಪಕ್ಷ ಸೇರಿದ ಕಮಲಾದೇವಿ, ಕರ್ನಾಟಕದಲ್ಲಿ ಕೋಣೆ ಸದಾಶಿವ ಕಾರಂತ, ಬಾ.ಸು. ಕೃಷ್ಣಮೂರ್ತಿ ಮೊದಲಾದವರ ಜೊತೆ ಭೂಗತ ಚಳುವಳಿಯನ್ನು ಮುನ್ನಡೆಸುತ್ತಿದ್ದರು. ಧಾರವಾಡದಿಂದ ‘ಜಾಗೃತಿ’ ಪತ್ರಿಕೆಯನ್ನು ಹೊರತರುತ್ತಾ ರಾಜ್ಯದೆಲ್ಲೆಡೆ ಕಳಿಸುತ್ತಿದ್ದರು. ಸೋಗಾಲ ನಾಗಭೂಷಣ, ಅಮ್ಮೆಂಬಳ ಬಾಳಪ್ಪ, ಕೆ.ಕೆ. ಶೆಟ್ಟಿ ಮೊದಲಾದ ತರುಣರು ಅವರೊಡನೆ ಸೇರಿಕೊಂಡರು. ಕ್ವಿಟ್ ಇಂಡಿಯಾ ಚಳುವಳಿಯ ಕಾಲ ಕರ್ನಾಟಕದಲ್ಲಿ ಸಮಾಜವಾದಿ ಚಿಂತನೆ ಹಬ್ಬಿದ ಕಾಲವೂ ಆಗಿತ್ತು. ಕಮಲಾದೇವಿ ಅನುವಾದಿಸಿದ ಜಯಪ್ರಕಾಶ್ ನಾರಾಯಣರ ‘ವೈ ಸೋಷಲಿಸಂ?’ ಪುಸ್ತಕದ ಕನ್ನಡಾನುವಾದ ‘ಸಾಮ್ಯವಾದವೇ ಏಕೆ?’ ಗೋಪಾಲಗೌಡರನ್ನು ಸಮಾಜವಾದದತ್ತ ಸೆಳೆಯಿತು. ವೈದೇಹಿ ನಿರೂಪಿಸಿದ ಕಮಲಾದೇವಿಯವರ ನೆನಪುಗಳ ‘ನೆನಪು ನೀಲಾಂಜನ’ 2025ರಲ್ಲಿ ಪ್ರಕಟವಾಯಿತು.
ಇದನ್ನು ಓದಿದ್ದೀರಾ?: ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’
1943-44ರ ನಡುವೆ ಜೈಲಿನಲ್ಲಿದ್ದ ದಕ್ಷಿಣ ಕನ್ನಡದ ಅಮ್ಮೆಂಬಳ ಬಾಳಪ್ಪ ಪೊಲೀಸರಿಂದ ಚಿತ್ರಹಿಂಸೆ ಅನುಭವಿಸಿದ್ದರು. ಜೈಲಿನಲ್ಲಿದ್ದಾಗ ಹಿಂದಿ, ಇಂಗ್ಲಿಷ್ ಕಲಿತು ಸಮಾಜವಾದಿ ಚಿಂತನೆಗಳನ್ನು ಅರಿತರು. ಜಾರ್ಜ್ ಫರ್ನಾಂಡಿಸರನ್ನು ಸಮಾಜವಾದದೆಡೆಗೆ ಕರೆತಂದವರೂ ಬಾಳಪ್ಪನವರೇ. ಮಂಗಳೂರಿನ ಬಿಜೈನಲ್ಲಿದ್ದ ಜಾರ್ಜ್ ಬೆಂಗಳೂರಿನ ಸೆಮಿನರಿಯಲ್ಲಿ ಥಿಯಾಲಜಿ ಅಧ್ಯಯನ ಮಾಡುತ್ತಿದ್ದವರು ಅದನ್ನು ಅರ್ಧದಲ್ಲೇ ಬಿಟ್ಟು ಬಂದರು. ಜಾರ್ಜರನ್ನು ತಂದೆ ಮನೆ ಬಿಟ್ಟು ಓಡಿಸಿದಾಗ, ತೊಟ್ಟಿದ್ದ ನಿಕ್ಕರ್, ಶರ್ಟಿನಲ್ಲಿ ಮಂಗಳೂರಿನ ಫುಟ್ ಪಾತಿನಲ್ಲಿ ದಿನ ಸವೆಸುತ್ತಿದ್ದ ಹದಿಹರೆಯದ ಚಾರ್ಜರನ್ನು ಬಾಳಪ್ಪ ಮಂಗಳೂರಿನ ಸಮಾಜವಾದಿ ಪಕ್ಷದ ಕಚೇರಿಗೆ ಕರೆತಂದರು. ‘ಅಮ್ಮೆಂಬಳ ಬಾಳಪ್ಪ, ಡಿಮೆಲ್ಲೋ ಹಾಗೂ ಲೋಹಿಯಾ ನನ್ನ ಬದುಕಿನ ಮೂವರು ಗುರುಗಳು’ ಎಂದು ಜಾರ್ಜ್ ಮುಂದೊಮ್ಮೆ ಬರೆದರು.
ಮಾರ್ಕ್ಸ್ವಾದ, ಸಮಾಜವಾದ, ರಷ್ಯಾ ಕ್ರಾಂತಿ ಇವುಗಳ ಬಗ್ಗೆ ಚೆನ್ನಾಗಿ ಓದಿಕೊಂಡಿದ್ದ ಕೋಣೆ ಸದಾಶಿವ ಕಾರಂತ ಹಲವಾರು ತರುಣರಿಗೆ ಸಮಾಜವಾದದ ಗುರುವಾಗಿದ್ದರು. ವಿಧವಾ ವಿವಾಹವಾಗಿದ್ದ ಪತ್ರಕರ್ತ ಅಮ್ಮೆಂಬಳ ಆನಂದರನ್ನು ಕಮಲಾದೇವಿ ಸಮಾಜವಾದಿ ಚಳುವಳಿಗೆ ಕರೆತಂದರು. 1948ರಲ್ಲಿ ಬೆಂಗಳೂರಿನಲ್ಲಿ ಜೆ.ಪಿ. ಅಧ್ಯಕ್ಷತೆಯಲ್ಲಿ ನಡೆದ ಸೋಷಲಿಸ್ಟ್ ಪಕ್ಷದ ಸಮ್ಮೇಳನದಲ್ಲಿ ಪಕ್ಷವು ‘ಮಾಸ್ ಬೇಸ್ಡ್’ ಪಾರ್ಟಿಯಾಗಬೇಕೆಂಬ ನಿರ್ಣಯ ಅಂಗೀಕಾರವಾಯಿತು.
ಐವತ್ತರ ದಶಕದಲ್ಲೇ ಶುರುವಾಗಿದ್ದ ಕರ್ನಾಟಕದ ಜೊತೆಗಿನ ಲೋಹಿಯಾ ನಂಟು ಅರವತ್ತರ ದಶಕದ ಹೊತ್ತಿಗೆ ಆಳವಾಗತೊಡಗಿತ್ತು. ಸಮಾಜವಾದಿ ಪಕ್ಷದಲ್ಲಿದ್ದ ಶಾಂತವೇರಿ ಗೋಪಾಲಗೌಡ, ಅಬ್ಬಿಗೇರಿ ವಿರೂಪಾಕ್ಷಪ್ಪ, ಕೋಣಂದೂರು ಲಿಂಗಪ್ಪ, ವೀರಣ್ಣ ತಿಮ್ಮಾಜಿ ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಲೋಹಿಯಾರ ಆತ್ಮೀಯರಾಗಿದ್ದರು. ಕರ್ನಾಟಕದ ಸಮಾಜವಾದಿ ಪಕ್ಷ ಹಾಗೂ ಪ್ರಜಾ ಸಮಾಜವಾದಿ ಪಕ್ಷ ಈ ಎರಡರಲ್ಲೂ ಖಡಕ್ ಧೋರಣೆಯ ರಾಜಕಾರಣಿಗಳು ತಯಾರಾಗಿದ್ದರು.
ರೋಣ ತಾಲೂಕಿನ ಸೂಡಿ ಗ್ರಾಮದ ಅಬ್ಬಿಗೇರಿ ವಿರೂಪಾಕ್ಷಪ್ಪ 1953ರಲ್ಲಿ ಕಂಡ ಲೋಹಿಯಾರ ಮೊದಲ ನೋಟ: ‘ಹಾಳತ ಮೈಕಟ್ಟಿನ, ಕುಳ್ಳ ನಿಲುವಿನ, ಚುರುಕು ಸ್ವಭಾವದ ವ್ಯಕ್ತಿ. ಗೋದಿಗೆಂಪು ಬಣ್ಣ, ಗುಂಡುಮುಖ, ದೊಣ್ಣೆ ಮೂಗು, ದಪ್ಪನೆಯ ಕನ್ನಡಕ, ಅದರ ಹಿಂದೆ ಹೊಳೆಯುವ ಪಿಳಿಪಿಳಿ ಕಣ್ಣುಗಳು, ಮುಖದ ಮೇಲೆ ಒಮ್ಮೊಮ್ಮೆ ಅಶಾಂತ ಜೀವದ ವಿದ್ರೋಹದ ಭಾವಮುದ್ರೆ. ಒಮ್ಮೊಮ್ಮೆ ಹಸುಳೆಯಾಗಿ ಹೂ ನಗೆ, ಮತ್ತೊಮ್ಮೆ ಎಳೆ ಹುಡುಗನ ತುಂಟ ನಗೆ…’
ಲೋಹಿಯಾರನ್ನು ಕಂಡ ಮೂವತ್ತು ವರ್ಷಗಳ ನಂತರ ವಿರೂಪಾಕ್ಷಪ್ಪ ಆ ದಿನವನ್ನು ರೋಮಾಂಚನದಿಂದ ಬಣ್ಣಿಸುತ್ತಾರೆ:
‘…ಅಂದು ಮೂರು ಕಡೆ ಲೋಹಿಯಾರ ಭಾಷಣ ಕಾರ್ಯಕ್ರಮ. ಗಜೇಂದ್ರಗಡದಿಂದಲೇ ಕಾರ್ಯಕ್ರಮದ ಆರಂಭ. ಪರಿಚಯದ ಆರಂಭದಿಂದಲೇ ಲೋಹಿಯಾ ನಮಗೆ ಆತ್ಮೀಯರಾಗಿ ಕಂಡರು. ಅವರೊಬ್ಬ ಸೀದಾ ಸಾದಾ ಸಾಚಾ ಮನುಷ್ಯ. ಕಂಗಳಲ್ಲಿ ಸದಾ ಮಾನವೀಯತೆಯ ಅನುಕಂಪದ ಕಾಂತಿ ಮೊಳಗುತ್ತಿತ್ತು. ನಡೆ ನುಡಿಗಳಲ್ಲಿ ಆತ್ಮೀಯವಾದ ಸ್ನೇಹ, ಬಾಂಧವ್ಯ ತುಂಬಿ ತುಳುಕುತ್ತಿತ್ತು.
ಗಜೇಂದ್ರಗಡದ ನಂತರ ಸೂಡಿಯಲ್ಲಿ ಕಾರ್ಯಕ್ರಮ. ಮಟಮಟ ಮಧ್ಯಾಹ್ನ, ನಿಗಿನಿಗಿ ಮುಗಿಲು, ಧಗಧಗಿಸುವ ಬಿಸಿಲು, ಟೆಂಪೋದಂಥ ತುಸು ದೊಡ್ಡದಾದ ಜೀಪಿನಲ್ಲಿ ನಾವೆಲ್ಲ ಹತ್ತಾರು ಜನ ತುಂಬಿಕೊಂಡಿದ್ದೆವು. ಒಂದು ಕಡೆ ಮೂಲೆಯಲ್ಲಿ ಲೋಹಿಯಾ. ಚಕ್ಕಡಿ ದಾರಿಯಲ್ಲಿ ಸಂಕನೂರ ಸಮೀಪದಲ್ಲಿ ಒಂದು ಹಳ್ಳ. ಹಳ್ಳದ ಮಧ್ಯಕ್ಕೆ ಬರುತ್ತಲೇ ಜೀಪು ನಿಂತು ಬಿಟ್ಟಿತು. ಜೀಪಿನ ಚಕ್ರಗಳು ಮಳಲಿನಲ್ಲಿ ಆಳವಾಗಿ ಸಿಕ್ಕಿಕೊಂಡವು, ಚಾಲಕ ಸಾಕಷ್ಟು ಕಸರತ್ತು ಮಾಡಿದರೂ ಗಾಲಿಗಳು ಚಲಿಸಲಿಲ್ಲ. ಲೋಹಿಯಾ ಸರಭರನೆ ಇಳಿದರು. ಸ್ವಲ್ಪ ದೂರ ಹೋಗಿ ಮಳಲಿನ ಹಾಸುಗೆಯ ಮೇಲೆ ಕುಳಿತರು. ಜೀಪು ಚಲಿಸುವಂತೆ ಮಾಡಲು ಅದಕ್ಕೆ ತಮ್ಮ ಬಲವನ್ನೆಲ್ಲ ಹಚ್ಚಿ ನಾವು ದೂಡುತ್ತಿದ್ದೆವು. ಹತ್ತಾರು ನಿಮಿಷಗಳಾದರೂ ಜೀಪು ಚಲಿಸಲಿಲ್ಲ. ಲೋಹಿಯಾ ಚಂಗನೆ ನೆಗೆದು ಬಂದರು. ‘ಪಹಿಯಾ ಬಾಲು ಮೆ ಢಸ್ಗಯೆ ಹೈ. ಜೋರ್ಸೆ ತಾಕತ್ ಲಗಾಕರ್ ಗಾಡಿಕೊ ಢಕಲೋ, ಹೂಂ. ಜೋರ್ಸೆ ತಾಕತ್ ಲಗಾವೊ’ ಎನ್ನುತ್ತ ಗಾಡಿಯ ಹಿಮ್ಮಗ್ಗಲಿಗೆ ಕೈಹಚ್ಚಿ ದೂಡಹತ್ತಿದರು. ಸ್ವಲ್ಪ ಹೊತ್ತಿನಲ್ಲಿ ಚಕ್ರಗಳು ಚಲಿಸಹತ್ತಿದವು.
ಇದನ್ನು ಓದಿದ್ದೀರಾ?: ರವಿಕುಮಾರ್ ನೀಹ ಅವರ ‘ನೀಗೊನಿ’
ಸಭೆ ಮುಗಿಸಿಕೊಂಡು ಎಲ್ಲರೂ ನಮ್ಮ ಮನೆಯತ್ತ ಸಾಗಿದ್ದೆವು. ದಾರಿಯಲ್ಲಿ ಯಾವ ಸಾಮಾನ್ಯ ದೃಶ್ಯವನ್ನು ಕಂಡರೂ ಲೋಹಿಯಾ ಅವರಿಗೆ ಕೌತುಕ. ದಾರಿಯ ಪಕ್ಕದಲ್ಲಿ ಗೋಲಿ ಗಜ್ಜುಗ, ದಾಂಡು-ಚೆಂಡು ಆಡುವ ಎಳೆಯ ಮಕ್ಕಳನ್ನು ಕಂಡು ಅವರಿಗೆ ಸಂಭ್ರಮ. ಆಟಗುಳಿ ಹುಡುಗ ಆಸೆಗೊಂಡು ನಿಲ್ಲುವಂತೆ ಅವರು ಅಲ್ಲಿ ನಿಂತು ನೋಡುತ್ತಾರೆ. ‘ಬಚ್ಚೆ ಖೇಲ್ ರಹಾ ಹೈ…’ ಎಂದು ಹರುಷದ ನುಡಿಯಾಡಿ ಮುಂದೆ ಸಾಗುತ್ತಾರೆ. ನಮ್ಮ ಮನೆಗೆ ಬಂದಾಗ ಕಟ್ಟೆಯ ತುಂಬೆಲ್ಲ ಓಣಿಯ ಒಕ್ಕಲಿಗರು; ದೇಶದ ರೈತ-ಕೂಲಿಕಾರರ ನೇತಾರನನ್ನು ಕಾಣಲು ಅವರಿಗೆ ಕಟ್ಟೊಡೆವ ಕಾತರ… ನೆಲದ ಮಕ್ಕಳೆಲ್ಲ ತಮ್ಮ ನೆಚ್ಚಿನ ನೇತಾರನಿಗೆ ಕೈ ಮುಗಿದು ವಂದನೆ ಸಲ್ಲಿಸುತ್ತಾರೆ. ನೇಗಿಲಯೋಗಿಗಳನ್ನು ಕಂಡು ಲೋಹಿಯಾರ ಎದೆಯೇ ಬಾಗುತ್ತದೆ. ‘ಯೇ ತೋ ಕಿಸಾನ್ ಲೋಗ್ ಹೈ, ಕ್ಯಾ ಹೈ ಇನ್ಕಿ ಸಮಸ್ಯಾಯೆ?’ ಎನ್ನುತ್ತಾ ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾರೆ.
ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ. ಲೋಹಿಯಾ ಕೊಠಡಿಯ ಗೋಡೆಗೆ ಬೆನ್ನು ಹಚ್ಚಿ ಕೂತಿದ್ದಾರೆ. ಗೋಡೆಯ ಮೇಲೊಂದು ಚಿತ್ರ. ಅದನ್ನವರು ತುಸು ದಿಟ್ಟಿಸಿ ನೋಡುತ್ತಿದ್ದಾರೆ. ಆ ನೆಹರೂ ರೇಖಾಚಿತ್ರ ನೋಡಿದ ನಂತರ ಲೋಹಿಯಾ ಹೇಳಿದರು: ‘ಯಹಾ ಭಿ ಆಯೆ ನೆಹರೂ? ಜಹಾಂ ದೇಖೆ ವಹಾ ನೆಹರೂ, ದೇಶ್ ಕ ಕೋನೆ ಕೋನೆ ಮೆ ನೆಹರೂ, ನಿರಾಲಾ ಆದ್ವಿ; ನಿರಾಲಿ ಖಾತ್.’
ಊಟೋಪಚಾರದಲ್ಲೂ ಲೋಹಿಯಾ ಬಹಳ ಸಾದಾ. ಎರಡೇ ಎರಡು ಚಪಾತಿ. ಅಕ್ಕಿಯ ಅನ್ನ ಉಣ್ಣಲೇ ಇಲ್ಲ. ಮೊಸರು, ಹಾಲು ಏನೂ ಬೇಡ. ಬಟ್ಟಲು ಮಜ್ಜಿಗೆ ಕುಡಿದು ವಿಶ್ರಾಂತಿ ಪಡೆದರು.
ಮುಂದಿನ ಕಾರ್ಯಕ್ರಮ ರೋಣದಲ್ಲಿ, ಜೀಪು ಚಲಿಸಿತು. ಊರ ದಂಡೆ ದಾಟುತ್ತಿದ್ದೆವು. ಹಠಾತ್ತನೆ ಜೀಪಿನಿಂದ ಇಣುಕುತ್ತ ದೇವಾಲಯವೊಂದರ ಕಡೆಗೆ ಬೆರಳೆತ್ತಿ ತೋರಿಸುತ್ತಾ ಲೋಹಿಯಾ, ‘ವೋ ಕ್ಯಾ ಹೈ?’ ಎಂದು ಕೇಳಿದರು. ದೇವಾಲಯದ ಹೊರಮೈ ವಾಸ್ತು, ವೈಭವ ಅವರ ದೃಷ್ಟಿಯನ್ನು ಸೆಳೆದಿತ್ತು… ‘ಹೌ ಬ್ಯೂಟಿಫುಲ್!’ ಎಂದು ಉದ್ಗರಿಸಿದರು.’
ರೋಣಕ್ಕೆ ಲೋಹಿಯಾ ಬಂದಾಗ ಹದಿಹರೆಯದ ರಾಚಪ್ಪ ಹಡಪದ ಸಮಾಜವಾದಿ ಮುಂಡಾಳು ರಾಚಪ್ಪ ಬೆಟಸೂರರ ‘ಪಟಪಟಿ’ (ಮೋಟಾರ್ ಬೈಕ್) ಮೇಲೆ ಕೂತು ರೋಣಕ್ಕೆ ಬಂದರು. ಮೊದಲ ಬಾರಿಗೆ ಲೋಹಿಯಾರನ್ನು ಕಂಡರು. ಕ್ಷೌರಿಕ ಸಮುದಾಯದಿಂದ ಬಂದಿದ್ದ ರಾಚಪ್ಪ ಹಡಪದ ಧಾರವಾಡದಲ್ಲಿ ಬಹುಕಾಲ ಕ್ಷೌರಿಕ ವೃತ್ತಿ ನಡೆಸಿ ಕೊನೆಯವರೆಗೂ ಸಮಾಜವಾದಿಯಾಗಿಯೇ ಉಳಿದರು. ರಾಚಪ್ಪನವರ ‘ಸಮತಾ ಹೇರ್ ಕಟಿಂಗ್ ಸೆಲೂನ್’ನಲ್ಲಿ ಗಾಂಧಿ, ಲೋಹಿಯಾ, ಭಗತ್ ಸಿಂಗ್, ಜೆ.ಪಿ. ಫೋಟೋಗಳಿದ್ದವು.
ಲೋಹಿಯಾ ಗುಲಬರ್ಗಾಕ್ಕೂ ಬರುತ್ತಿದ್ದರು. ಗುಲಬರ್ಗಾದ ಖುರ್ದ್ ರೋಜಾದಲ್ಲಿದ್ದ ವೀರಣ್ಣ ತಿಮ್ಮಾಜಿಯವರ ಪುಟ್ಟ ಮನೆಯಲ್ಲಿ ಉಳಿಯುತ್ತಿದ್ದರು. ಗುಲಬರ್ಗಾ ಜಿಲ್ಲೆಯ ಸೋಷಲಿಸ್ಟ್ ಪಾರ್ಟಿಯ ಸಂಘಟನೆಯ ಹೊಣೆಯನ್ನೂ ಹೊತ್ತಿದ್ದ ತಿಮ್ಮಾಜಿಯನ್ನು ಲೋಹಿಯಾ ‘ಹಿಮ್ಮತ್ವಾಲಾ ತಿಮ್ಮಾಜಿ’ ಎನ್ನುತ್ತಿದ್ದರು. ಲೋಹಿಯಾ ಗುಲಬರ್ಗಾಕ್ಕೆ ಬಂದಾಗ ಅವರ ಭಾಷಣವನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸುತ್ತಿದ್ದ ತಿಮ್ಮಾಜಿ, ‘ಚೌಖಂಭಾ’ದ ನೂರೈವತ್ತು ಪ್ರತಿಗಳನ್ನು ಮಾರುತ್ತಿದ್ದರು. ‘ಶೋಷಿತರ ಕೂಗು’ ಎಂಬ ಪತ್ರಿಕೆ ನಡೆಸುತ್ತಿದ್ದ ತಿಮ್ಮಾಜಿ ಪತ್ರಕರ್ತರಾಗಿ, ಚಳುವಳಿಗಾರನಾಗಿ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸುತ್ತಿದ್ದರು. ಲೋಹಿಯಾರ ಕೊನೆಯ ದಿನಗಳಲ್ಲಿ ತಿಮ್ಮಾಜಿ ದಿಲ್ಲಿಯಲ್ಲಿದ್ದರು.
3
ಅರವತ್ತರ ದಶಕದಲ್ಲಿ ಮೈಸೂರಿನಲ್ಲಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪ ಮೊದಲಾದವರ ಜೊತೆ ಲೋಹಿಯಾ ರಾಜಪ್ರಭುತ್ವದ ಸಂಕೇತವಾದ ಜಂಬೂಸವಾರಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾದರು. ಅಲ್ಲಿ ಕೆಲವರು ಭಾಷಣ ಮಾಡಿದರು. ಆಗ ಕವಿತೆ ಬರೆಯುತ್ತಿದ್ದ ಕೋಣಂದೂರು ಲಿಂಗಪ್ಪ, ‘ಜಂಬು-ಬೊಂಬು ಸವಾರಿ’ ಎಂಬ ಕವಿತೆ ಓದಿದರು. ಕೋಣಂದೂರು ಕವಿತೆ ಓದುತ್ತಿದ್ದರೆ, ಲೋಹಿಯಾ ‘ಇಸ್ಕಾ ಮತ್ಲಬ್ ಕ್ಯಾ ಹೈ?’ ಎಂದು ಜೊತೆಯಲ್ಲಿದ್ದ ಗೆಳೆಯರನ್ನು ಕೇಳಿ ಅರ್ಥ ಮಾಡಿಕೊಳ್ಳಲೆತ್ನಿಸುತ್ತಿದ್ದರು. ಆಗಿನಿಂದ ಲೋಹಿಯಾ ಬಾಯಲ್ಲಿ ಕೋಣಂದೂರು ‘ಕವಿ ಮಹಾರಾಜ್’ ಆದರು!
ಇದನ್ನು ಓದಿದ್ದೀರಾ?: ಮಂಜುನಾಥ್ ಚಾಂದ್ ಅವರ ‘ಮಹಾತ್ಮನ ಮಗಳು’
ಒಮ್ಮೆ ಬೆಂಗಳೂರಿನ ಶಾಸಕರ ಭವನದಲ್ಲಿದ್ದ ಲೋಹಿಯಾ ಲಿಂಗಪ್ಪನವರನ್ನು ಕೇಳಿದರು: ‘ಕವಿ ಮಹಾರಾಜ್! ಕ್ಯಾ ತುಮ್ ಶರಾಬ್ ಪೀತೇ ಹೋ?’ ಲಿಂಗಪ್ಪನವರಿಗೆ ಕೊಂಚ ಕೋಪ ಬಂತು. ‘ನಹೀ ಸಾಬ್! ಮೈ ಬಿಯರ್ ಪೀತಾ ಹೂಂ’ ಎಂದರು!
ಕೋಣಂದೂರು ಆಗ ಶರಾಬ್ ಎಂದರೆ ‘ಸರಾಯಿ’ ಎಂದುಕೊಂಡಿದ್ದರು; ತನ್ನನ್ನು ಡಾಕ್ಟರ್ ಸಾಹೇಬರು ಸರಾಯಿಯ ಮಟ್ಟಕ್ಕೆ ಇಳಿಸಿಬಿಟ್ಟರಲ್ಲ ಎಂದು ಪೆಚ್ಚಾಗಿ ಈ ಉತ್ತರ ಕೊಟ್ಟಿದ್ದರು! ಕೋಣಂದೂರರ ಹಿಂದಿ ಭಾಷಾ ಮುಗ್ಧತೆ ಕಂಡು ಲೋಹಿಯಾ ಮನಸಾರೆ ನಕ್ಕರು.
ಕರ್ನಾಟಕದ ಸಮಾಜವಾದಿ ಯುವಜನ ಸಭಾ ಮುಂದೆ ಎಪ್ಪತ್ತರ ದಶಕದಲ್ಲಿ ‘ಅತಿಯಾದ ಮದ್ಯಪಾನ’ದ ವಿರುದ್ಧ ಠರಾವನ್ನೂ ಪಾಸು ಮಾಡಿತು! ಅದೇನೇ ಇರಲಿ, ಲಂಕೇಶರಂಥ ಲೇಖಕರಿಗೆ ಸೋಷಲಿಸ್ಪರ ಜೊತೆಗಿನ ಅಪರೂಪದ ಸಂಜೆಗಳು ಹೊಸ ನೋಟ ಕೊಟ್ಟ ಸಂಜೆಗಳಾಗಿದ್ದವು. ಅರವತ್ತು, ಎಪ್ಪತ್ತರ ದಶಕದಲ್ಲಿ ನವ್ಯ ಲೇಖಕರಾಗಿ ವ್ಯಕ್ತಿಯ ತೀವ್ರ ಪರೀಕ್ಷೆಯ ಕತೆ, ಕವಿತೆಗಳ ಬರವಣಿಗೆಯಲ್ಲಿ ತೊಡಗಿದ್ದ ಲಂಕೇಶರ ಪ್ರಜ್ಞೆ ಗೋಪಾಲಗೌಡರಿಂದ, ಸಮಾಜವಾದಿ ಪಕ್ಷದ ಇತರರ ಸಂಗದಿಂದ, ಸಂಜೆಯ ಚರ್ಚೆಗಳಿಂದ ನಿಧಾನವಾಗಿ, ಸೂಕ್ಷ್ಮವಾದ ಸಮುದಾಯ ಪ್ರಜ್ಞೆಯಾಗಿ ಬದಲಾದ ಸೂಚನೆಗಳು ಲಂಕೇಶರ ಆತ್ಮಕಥನ ‘ಹುಳಿಮಾವಿನಮರ’ದಲ್ಲಿವೆ:
‘ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು. ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಭಿವ್ಯಕ್ತಿ ಪಡೆದು, ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗುತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು ಮತ್ತು ರೈತರು, ಕಾರ್ಮಿಕರು- ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗೆನ್ನಿಸುತ್ತದೆ.’
ಕನ್ನಡದ ವ್ಯಕ್ತಿಕೇಂದ್ರಿತ ನವ್ಯ ನಿಧಾನವಾಗಿ ಸಮಾಜಮುಖಿ ನವ್ಯವಾದದ್ದರ ಹಿನ್ನೆಲೆಯನ್ನೂ ಲಂಕೇಶರ ಮಾತು ಸೂಚಿಸುತ್ತದೆ. ಲೋಹಿಯಾ ಚಿಂತನೆ, ಗೋಪಾಲಗೌಡರ ರಾಜಕಾರಣ ಹಾಗೂ ಅವರ ಸಖ್ಯದಿಂದಾಗಿ ಕನ್ನಡ ನವ್ಯ ಸಾಹಿತಿಗಳು ಸಮಾಜವಾದದ ಕಡೆಗೆ ಒಲವು ತೋರತೊಡಗಿದ್ದರು. ಶೂದ್ರ ಬರಹಗಾರರ ಒಕ್ಕೂಟ, ಬ್ರಾಹ್ಮಣ-ಶೂದ್ರ ಇತ್ಯಾದಿ ತಾತ್ವಿಕ ಚರ್ಚೆಗಳು; ಕಮ್ಯುನಿಸಮ್ಮಿನ ವಿರೋಧ; ಸಮಾನತೆಯ ಚರ್ಚೆಗಳು; ಹಿಂದುಳಿದ ವರ್ಗಗಳ ಚಲನೆ; ಲಿಂಗ ಸಮಾನತೆಯ ಕಲ್ಪನೆ ಇವೆಲ್ಲವೂ ಲೋಹಿಯಾ ವಿವರಿಸುತ್ತಿದ್ದ ಸಮಾಜವಾದದ ಫಲವಾಗಿ ಕೂಡ ಗಟ್ಟಿಯಾಗತೊಡಗಿದವು. ಕೆಲವು ನವ್ಯ ಲೇಖಕರು ಗಾಂಧಿಯನ್ನು ಮರಳಿ ಹುಡುಕಿಕೊಂಡದ್ದು ಕೂಡ ಲೋಹಿಯಾ ಚಿಂತನೆಗಳ ಹಿನ್ನೆಲೆಯಲ್ಲಿಯೇ. ನವ್ಯ ಮಾರ್ಗದಲ್ಲಿ ಬರೆಯುತ್ತಿದ್ದ ಲಂಕೇಶ್, ತೇಜಸ್ವಿ, ಚಂದ್ರಶೇಖರ ಪಾಟೀಲ, ಶ್ರೀಕೃಷ್ಣ ಆಲನಹಳ್ಳಿ, ಅನಂತಮೂರ್ತಿ, ಎಚ್.ಎಂ. ಚನ್ನಯ್ಯ ಮೊದಲಾದವರ ಬರವಣಿಗೆಯ ದಿಕ್ಕನ್ನು ಲೋಹಿಯಾ ಫಿಲಾಸಫಿ ನಿರ್ಣಾಯಕವಾಗಿ ಬದಲಿಸಿತು.

4
ನೆಹರೂಯುಗ ಕುರಿತ ಲೋಹಿಯಾರ ವಿಮರ್ಶೆಯ ಪ್ರಭಾವದಿಂದ 1958ರಲ್ಲಿ ಗೋಪಾಲಕೃಷ್ಣ ಅಡಿಗರು ಬರೆದ ‘ನೆಹರೂ ನಿವೃತ್ತರಾಗುವುದಿಲ್ಲ’ ಪದ್ಯದ ಚಿತ್ರಗಳು:
ಭರತವಾಕ್ಯಕು ಬೆದರನೀತ ಧೀರೋದಾತ್ತ ಯುವಕ
ತೆರೆ ಬಿದ್ದರೂ ರಂಗ ಬಿಡದ ಚಿರ ಯುವಕ;
ಹೊತ್ತು ಸುತ್ತುತ್ತಾನೆ ಬಲು ಭಾರಿ ಭೂಗೋಳ,
ಗಂಟೆಗೆಂಬತ್ತು ಮೈಲಿ ಸ್ವಗತ…
ಒಮ್ಮೆ ಲೋಹಿಯಾ ಸಾಗರಕ್ಕೆ ಬಂದಾಗ, ಗೋಪಾಲಗೌಡರು ಅಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕವಿ ಚಂದ್ರಶೇಖರ ಕಂಬಾರರನ್ನು ಲೋಹಿಯಾಗೆ ಪರಿಚಯಿಸಿದರು. ಗೋಪಾಲಗೌಡರ ಕೋರಿಕೆಯಂತೆ ಕಂಬಾರರು ತಮ್ಮ ‘ಹೇಳತೇನ ಕೇಳ’ ಎಂಬ ಖಂಡಕಾವ್ಯವನ್ನು ಲೋಹಿಯಾ ಎದುರು ಹಾಡಿದರು. ‘ಈ ಖಂಡಕಾವ್ಯ ವಸಾಹತುಶಾಹಿಯ ಆಗಮನದ ಸಂದರ್ಭವನ್ನು, ಅದರ ಪರಿಣಾಮಗಳನ್ನು ಕುರಿತು ಹೇಳುತ್ತಿದೆ’ ಎಂದು ಗೋಪಾಲಗೌಡರು ಲೋಹಿಯಾಗೆ ವಿವರಿಸತೊಡಗಿದರು.
ಇದನ್ನು ಓದಿದ್ದೀರಾ?: ರಾಜಾರಾಂ ತಲ್ಲೂರು ಅವರ ‘ಮಮ ಡೇಟಾ’: ನಮಗೆ ಡೇಟಾ ಈಗ ಯಾಕೆ ಮುಖ್ಯ?
ಒಮ್ಮೆ ಕಂಬಾರರು ಈ ಪ್ರಸಂಗ ನೆನಪಿಸಿಕೊಳ್ಳುತ್ತಾ ನಟರಾಜ್ ಹುಳಿಯಾರ್ಗೆ ಹೇಳಿದರು: ‘ವಸಾಹತುಶಾಹಿ ಎನ್ನುವ ಶಬ್ದ ಮೊದಲು ನನ್ನ ಕಿವಿಗೆ ಬಿದ್ದಿದ್ದೇ ಆಗ ಕಣ್ರಿ! ಆ ತನಕ ನನ್ನ ಪದ್ಯ ವಸಾಹತುಶಾಹಿಯನ್ನು ಟೀಕಿಸುತ್ತಿದೆ ಎಂಬುದು ನನಗೆ ಗೊತ್ತಿರಲಿಲ್ಲ!’ ನಿರ್ವಸಾಹತೀಕರಣ ಚಿಂತಕರೂ ಆಗಿದ್ದ ಲೋಹಿಯಾ ಭೇಟಿ ಹಾಗೂ ಗೋಪಾಲಗೌಡರ ಸಾಂಸ್ಕೃತಿಕ ವ್ಯಾಖ್ಯಾನ ಕಂಬಾರರ ಮಹತ್ವದ ಖಂಡಕಾವ್ಯಕ್ಕೆ ವಿಶೇಷ ರಾಜಕೀಯ ಅರ್ಥಗಳನ್ನು ಕೊಟ್ಟಿದ್ದವು. ಆ ಕಾಲಕ್ಕೆ ಹಿಮ್ಮುಖ ನೋಟದ ಕವಿಯಾಗಿದ್ದ ಕಂಬಾರರಿಗೆ ಹೊಸ ರಾಜಕೀಯ ಪ್ರಜ್ಞೆ ಮೂಡಿಸಿದ ಅರ್ಥಪೂರ್ಣ ಸಂದರ್ಭ ಇದು.
ಅನಂತಮೂರ್ತಿ ಪಿಎಚ್.ಡಿ ಅಧ್ಯಯನಕ್ಕಾಗಿ ಇಂಗ್ಲೆಂಡಿಗೆ ಹೊರಟಾಗ ಅವರಿಗೊಂದು ಪರಿಚಯ ಪತ್ರ ಬರೆದುಕೊಡಲು ಲೋಹಿಯಾರನ್ನು ಕೋರುವಂತೆ ಗೋಪಾಲಗೌಡರು ಓಂಪ್ರಕಾಶ್ ದೀಪಕ್ಗೆ ಪತ್ರ ಬರೆದರು.
ಗೋಪಾಲಗೌಡರ ಪತ್ರಕ್ಕೆ ಉತ್ತರಿಸುತ್ತಾ ಓಂಪ್ರಕಾಶ್ ದೀಪಕ್ ಬರೆದ 25.7.1963ರ ಪತ್ರ:
ಪ್ರಿಯ ಗೋಪಾಲ್,
ಒಂದೆರಡು ದಿನಗಳ ಕೆಳಗೆ ನಿಮ್ಮ ಪತ್ರ ತಲುಪಿತು ನೀವು ಆಗಸ್ಟ್ ತಿಂಗಳಲ್ಲಿ ದೆಹಲಿಗೆ ಬಂದರೆ, ನೀವೇ ಡಾಕ್ಟರ್ರನ್ನು ಖುದ್ದಾಗಿ ಕಂಡು ಅನಂತಮೂರ್ತಿ ಯುನೈಟೆಡ್ ಕಿಂಗ್ಡಂಗೆ ಹೋಗುವ ಕುರಿತು ಹಾಗೂ ಅವರ ಪರಿಚಯ ಪುತ್ರ ಕುರಿತು ಮಾತಾಡಿದರೆ ಒಳ್ಳೆಯದು. ಅನಂತಮೂರ್ತಿ ಹಾಗೂ ಅಡಿಗರಿಗೆ ಲೇಖನಗಳಿಗಾಗಿ ಪತ್ರ ಬರೆಯಲೆ? ಮುಂದಿನ ವಾರ ಅವರಿಗೆ ಮತ್ತೆ ಬರೆಯುವೆ.
1963ರಲ್ಲಿ ಬರ್ಮಿಂಗಂಗೆ ಹೋದ ಅನಂತಮೂರ್ತಿ 1965ರಲ್ಲಿ ಬರೆದು ಮುಗಿಸಿದ ‘ಸಂಸ್ಕಾರ’ ಅರವತ್ತು, ಎಪ್ಪತ್ತರ ದಶಕದಲ್ಲಿ ಸ್ಫೋಟಕ ಕಾದಂಬರಿಯೆಂದು ಹೆಸರಾಯಿತು. ಈ ಕಾದಂಬರಿಯನ್ನು ಶಾಂತವೇರಿ ಗೋಪಾಲಗೌಡರು ಲೋಹಿಯಾರ ಜಾತಿಪದ್ಧತಿಯ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಗ್ರಹಿಸಿದ್ದರು; ಆಗ ಮದ್ರಾಸಿನಲ್ಲಿದ್ದ ಸ್ನೇಹಲತಾರೆಡ್ಡಿ ಹಾಗೂ ಅವರ ಪತಿ ಪಟ್ಟಾಭಿರಾಮರೆಡ್ಡಿಯವರಿಗೆ ‘ಸಂಸ್ಕಾರ’ದ ಕಥಾಹಂದರವನ್ನು ಹೇಳಿದರು. ಈ ಕುರಿತು ಸ್ನೇಹಲತಾ ಮುಂದೊಮ್ಮೆ ಬರೆದರು: ‘…’ಸಂಸ್ಕಾರ’ ಡಾ. ಲೋಹಿಯಾರ ಚಿಂತನೆಗಳು ಹಾಗೂ ಫಿಲಾಸಫಿಯಿಂದ ಪ್ರೇರಣೆಗೊಂಡಿತ್ತು. ಈ ಕತೆಯನ್ನು 1966ರಲ್ಲಿ ಗೋಪಾಲಗೌಡರ ಬಾಯಿಂದ ನಾವು ಮೊದಲ ಬಾರಿಗೆ ಕೇಳಿದಾಗ ಡಾಕ್ಟರ್ ಇದ್ದರು. ಡಾಕ್ಟರ್ ಈ ಕತೆಯನ್ನು ಮೆಚ್ಚುತ್ತಾ, ವಸ್ತು ತುಂಬಾ ಚೆನ್ನಾಗಿದೆ ಎಂದಿದ್ದು ನನಗೆ ನೆನಪಿದೆ. ಆಗ ಪಟ್ಟಾಭಿ, ಸಾಧ್ಯವಾದರೆ ಒಂದು ದಿನ ಇದನ್ನು ಸಿನಿಮಾ ಮಾಡುತ್ತೇನೆ ಎಂದಿದ್ದರು.’
5
ಲೋಹಿಯಾರ ಮೈಸೂರು ನಂಟು ಗಾಢವಾಗಿತ್ತು. ಲೋಹಿಯಾ ಮೈಸೂರಿಗೆ ಬಂದಾಗ ನ್ಯಾಯವಾದಿ, ಸಮಾಜವಾದಿ ಟಿ.ಎನ್. ನಾಗರಾಜರ ಲಕ್ಷ್ಮೀಪುರಂ ಮನೆಯಲ್ಲಿ ಉಳಿಯುತ್ತಿದ್ದುದನ್ನು ಎನ್.ಆರ್. ಸ್ನೇಹ ದಾಖಲಿಸಿದ್ದಾರೆ: ಲೋಹಿಯಾ ಮೈಸೂರಿಗೆ ಬಂದಾಗಲೆಲ್ಲ ನಾಗರಾಜ್ ಲೋಹಿಯಾಗೆ ಹೊಸ ಬಟ್ಟೆ ಹೊಲಿಸಿ ಕೊಡುತ್ತಿದ್ದುದೂ ಇತ್ತು. ಟಿ.ಎನ್. ನಾಗರಾಜರ ಕೊನೆಯ ಮಗಳ ಬಣ್ಣ ಕಪ್ಪಾಗಿದ್ದುದನ್ನು ಕಂಡು ಅವರ ತಾಯಿ ಅತ್ತಿದ್ದರು. ಆಗ ಲೋಹಿಯಾ ಆಕೆಯನ್ನು ಸಮಾಧಾನಪಡಿಸುತ್ತಾ, ‘ಬಿಳಿಯರು ಜಗತ್ತಿನಲ್ಲಿ ಅಧಿಕಾರದಲ್ಲಿರುವುದರಿಂದ ಬಿಳಿ ಬಣ್ಣ ಸುಂದರವಾಗಿ ಕಾಣುತ್ತದೆ, ಅಷ್ಟೆ. ಕರಿಯರು ಅಧಿಕಾರಕ್ಕೆ ಬಂದರೆ ಕಪ್ಪು ಸುಂದರವಾಗಿ ಕಾಣುತ್ತದೆ. ಅಧಿಕಾರ ಸೌಂದರ್ಯದ ಬಣ್ಣವನ್ನು ನಿರ್ದೇಶಿಸುತ್ತದೆ’ ಎಂದಿದ್ದರು. ಸ್ನೇಹಾರ ತಂದೆ ಕೆ. ರಾಮದಾಸ್ ಬಾಲ್ಯದಲ್ಲಿ ಸಾಗರದಲ್ಲಿದ್ದಾಗ ಲೋಹಿಯಾರನ್ನು ನೋಡಿದ್ದರು; ರಾಮದಾಸ್ ಮುಂದೆ ಮೈಸೂರಿಗೆ ಬಂದು ನೆಲೆಸಿ, ಕನ್ನಡ ಪ್ರೊಫೆಸರ್ ಆಗಿ ಹಲವು ತಲೆಮಾರುಗಳಲ್ಲಿ ಲೋಹಿಯಾರ ಚಳುವಳಿ, ರಾಜಕಾರಣ, ಚಿಂತನೆ, ಆ್ಯಕ್ಟಿವಿಸಂಗಳನ್ನು ಜೀವಂತವಾಗಿಟ್ಟರು. ಅರವತ್ತು-ಎಪತ್ತರ ದಶಕದಲ್ಲಿ ಮೈಸೂರಿನ ಸಾಹಿತ್ಯಕ-ಸಾಂಸ್ಕೃತಿಕ ಪರಿಸರ ಲೋಹಿಯಾರ ದಟ್ಟ ಪ್ರಭಾವದಲ್ಲಿತ್ತು’ ಎಂದು ಚ. ಸರ್ವಮಂಗಳ ಹೇಳುತ್ತಾರೆ.
ಇದನ್ನು ಓದಿದ್ದೀರಾ?: ಶೂದ್ರ ಶ್ರೀನಿವಾಸರ ‘ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ’
ಅರವತ್ತರ ದಶಕದ ಆರಂಭದಲ್ಲಿ ಮೈಸೂರಿನಲ್ಲಿ ನಡೆದ ಲೋಹಿಯಾ-ಕುವೆಂಪು ನಡುವಣ ಅಪೂರ್ವ ಭೇಟಿಯನ್ನು ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದ ‘ಡಾ. ರಾಮಮನೋಹರ ಲೋಹಿಯಾ’ ಎಂಬ ಅಧ್ಯಾಯ ದಾಖಲಿಸಿದೆ:
‘ಅಣ್ಣನ ಜೀವನದಲ್ಲಿ ರಾಜಕಾರಣಕ್ಕೆ ಸಂಬಂಧಪಟ್ಟ ಎರಡು ಮುಖ್ಯ ಘಟನೆಗಳಲ್ಲಿ ಒಂದು ವಿನೋಬಾ ಭಾವೆಯವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದು, ಎರಡನೆಯದು ಡಾ. ರಾಮಮನೋಹರ ಲೋಹಿಯಾ ನಮ್ಮ ಮನೆಗೆ ಬಂದು ಅಣ್ಣನೊಡನೆ ವಿಚಾರ ವಿನಿಮಯ ಮಾಡಿದ್ದು. ಅಣ್ಣ ಕನ್ನಡ ಮಾಧ್ಯಮವನ್ನು ಯೂನಿವರ್ಸಿಟಿಯಲ್ಲಿ ಜಾರಿಗೆ ತರಲು ಸಾಹಸಪಡುತ್ತಿದ್ದ ಕಾಲದಲ್ಲಿ ಇಡೀ ಭಾರತದಲ್ಲಿ ಭಾಷೆಯ ಬಗ್ಗೆ ಅನೇಕ ಅಭಿಪ್ರಾಯಗಳ ಗೊಂದಲಗಳೇರ್ಪಟ್ಟಿದ್ದವು… ಅಣ್ಣ ಲೋಹಿಯಾ ಬಗ್ಗೆಯಾಗಲೀ ಅವರ ಸಮಾಜವಾದೀ ನಿಲುವಿನ ಬಗ್ಗೆಯಾಗಲೀ ಹೆಚ್ಚು ತಿಳಿದಿರಲಿಲ್ಲ. ಲೋಹಿಯಾರ ಜಾತಿವಿನಾಶ ಮಾಡಬೇಕೆಂಬ ನಿಲುವಿನಿಂದಾಗಿ ಇಡೀ ದೇಶದ ಸಂಪ್ರದಾಯಸ್ಥ ಬ್ರಾಹ್ಮಣ ವರ್ಗವೆಲ್ಲಾ ಲೋಹಿಯಾ ಬಗ್ಗೆ ಒಳಗೊಳಗೇ ಕತ್ತಿ ಮಸೆಯುತ್ತಿದ್ದರು. ಆಗ ಪತ್ರಿಕಾ ಮಾಧ್ಯಮಗಳೆಲ್ಲ ಈ ವರ್ಗದ ಕೈಲೇ ಇದ್ದಿದ್ದರಿಂದ ಲೋಹಿಯಾರವರ ಚಿಂತನೆಗಳನ್ನೂ ಕಾರ್ಯಕ್ರಮಗಳನ್ನೂ ಆದಷ್ಟು ವಿರೂಪಗೊಳಿಸಿ, ಅಪವ್ಯಾಖ್ಯಾನ ಮಾಡಿ ಲೋಹಿಯಾ ಒಬ್ಬ ತಿಕ್ಕಲು ಮನುಷ್ಯ ಎನ್ನುವಂತೆ ಚಿತ್ರಿಸುತ್ತಿದ್ದವು. ಇವತ್ತಿಗೂ ಈ ವರ್ಗವು ಮಾಧ್ಯಮಗಳ ಮೂಲಕ ಜಾತಿ ವೈಷಮ್ಯವನ್ನು ಬಿತ್ತುವುದನ್ನೇ ಮಾಡುತ್ತಾ ಇರುವುದನ್ನು ನೋಡಬಹುದು…
ಲೋಹಿಯಾರಿಗೆ ಪತ್ರಿಕೆಗಳು ಮಾಡಿದ್ದೂ ಇದನ್ನೇ. ಲೋಹಿಯಾರವರ ಅಂಗ್ರೇಜಿ ಹಟಾವೋ ಚಳುವಳಿಯನ್ನು ಕೇವಲ ಹಿಂದೀವಾದಿಗಳ ಚಳುವಳಿ, ದೇಶಕ್ಕೆಲ್ಲಾ ಹಿಂದಿಯೊಂದೇ ಇರಬೇಕೆಂಬುದು ಇವರ ಉದ್ದೇಶ ಎಂದು ವ್ಯಾಖ್ಯಾನಿಸಿ ದಕ್ಷಿಣ ಭಾರತದ ಪ್ರಾದೇಶಿಕ ಭಾಷಾ ಸಮುದಾಯವೆಲ್ಲಾ ಅವರನ್ನು ಗುಮಾನಿಯಿಂದ ನೋಡುವಂತೆ ಮಾಡಿದರು. ಅಣ್ಣ ಶಿಕ್ಷಣ ಮಾಧ್ಯಮವಾಗಿ ಹಾಗೂ ಆಡಳಿತ ಭಾಷೆಯಾಗಿ ಇಂಗ್ಲಿಷನ್ನು ಉಚ್ಚಾಟಿಸಬೇಕೆಂದು ಹೇಳುತ್ತಿದ್ದರೇ ವಿನಃ ಅದರ ಬದಲಿಗೆ ಹಿಂದಿಯನ್ನು ಪ್ರತಿಷ್ಠಾಪಿಸಬೇಕೆಂಬುದಕ್ಕೆ ಬದ್ಧ ವಿರೋಧಿಯಾಗಿದ್ದರು, ನೆಹರೂರ ಜಾತ್ಯತೀತ ಧೋರಣೆಯನ್ನು ಎಷ್ಟು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದರೋ ಅಷ್ಟೇ ಉಗ್ರವಾಗಿ ನೆಹರೂರ ಪಶ್ಚಿಮದ ವ್ಯಾಮೋಹವನ್ನೂ, ಅವರ ಇಂಗ್ಲಿಷ್ ವ್ಯಾಮೋಹವನ್ನೂ ವಿರೋಧಿಸುತ್ತಿದ್ದರು. ಲೋಹಿಯಾ ಹಿಂದಿವಾದಿ ಎನ್ನುವ ಗುಮಾನಿಯಿಂದಲೇ ಅಣ್ಣ ಲೋಹಿಯಾರ ಭಾಷಾನೀತಿ ಮತ್ತು ವಿಶ್ಲೇಷಣೆಗಳನ್ನು ಸರಿಯಾಗಿ ತಿಳಿದುಕೊಳ್ಳಲು ಪ್ರಯತ್ನಿಸಲಿಲ್ಲ. ನಮಗೆ ಆಗ ಹೆಚ್ಚಾಗಿ ಗೊತ್ತಿದ್ದು ಗೋಪಾಲಗೌಡರ ಹೆಸರೇ. ಕಾಗೋಡು ಸತ್ಯಾಗ್ರಹದಿಂದ ಆಗಲೇ ಗೋಪಾಲಗೌಡರು ಕರ್ನಾಟಕದಲ್ಲಿ ಪ್ರಸಿದ್ಧರಾಗಿದ್ದರು… ಲೋಹಿಯಾ ಸಹ ಗೋಪಾಲಗೌಡರ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು ಅಣ್ಣನಿಗೆ ಗೊತ್ತಿತ್ತು… ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಕೋಣಂದೂರು ಲಿಂಗಪ್ಪ ಮತ್ತು ಅನಂತಮೂರ್ತಿಯವರ ಬಾಯಲ್ಲಿ ಲೋಹಿಯಾ ಬಗ್ಗೆ ತುಣುಕುಮಿಣುಕು ಸಮಾಚಾರಗಳನ್ನು ಕೇಳುತ್ತಿದ್ದೆ. ಆಯಾ ಸಂದರ್ಭದ ಸಮರ್ಥನೆಗೆ ಇವರು ಲೋಹಿಯಾರಿಂದ ಉದ್ಧರಿಸಿ ಹೇಳುತ್ತಿದ್ದ ತುಣುಕು ಸಮಾಚಾರಗಳು ನನ್ನಲ್ಲಿ ಅವರ ಬಗ್ಗೆ ಅಂಥದೇನೂ ಕುತೂಹಲ ಹುಟ್ಟಿಸಲಿಲ್ಲ. ಲೋಹಿಯಾ ಆಗೆಲ್ಲ ಹೆಚ್ಚಾಗಿ ನಮಗೆ ಗೊತ್ತಾಗುತ್ತಿದ್ದುದು ಅವರು ನೆಹರೂರನ್ನು ಉಗ್ರವಾಗಿ ಟೀಕಿಸುತ್ತಿದ್ದುದರಿಂದ.
ಇದನ್ನು ಓದಿದ್ದೀರಾ?: ವಿಕಾಸ್ ಮೌರ್ಯರ ‘ನುಡಿ ಚಮ್ಮಾಳಿಗೆ’
ಲೋಹಿಯಾ ನಮ್ಮ ಮನೆಗೆ ಬಂದಾಗ ಅವರೊಡನೆ ಗೋಪಾಲಗೌಡರು ಮತ್ತು ಖಾದ್ರಿ ಶಾಮಣ್ಣ ಇದ್ದರು. ಕುವೆಂಪು ವೈಸ್ಛಾನ್ಸಲರ್ ಆಗಿರುವುದೂ ಅವರು ಆಡಳಿತ ಮತ್ತು ಶಿಕ್ಷಣದಲ್ಲಿ ಇಂಗ್ಲಿಷ್ ವರ್ಜಿಸಿ ಕನ್ನಡ ಅನುಷ್ಠಾನಕ್ಕೆ ತರಲು ಹೋರಾಡುತ್ತಿದ್ದುದೂ ತಿಳಿದು, ಅಂಗ್ರೇಜಿ ಹಟಾವ್ ಸಮ್ಮೇಳನಕ್ಕೆ ಅಣ್ಣನನ್ನು ಅಧ್ಯಕ್ಷತೆ ವಹಿಸಬೇಕೆಂದು ಒಪ್ಪಿಸಲು ಲೋಹಿಯಾ ಬಂದಿದ್ದರು. ಅಣ್ಣ ಅಷ್ಟು ದೂರ ಬಂದು ಸಮ್ಮೇಳನದಲ್ಲಿ ಭಾಗವಹಿಸಲು ತಮ್ಮಿಂದ ಸಾಧ್ಯವಿಲ್ಲವೆಂದೂ ಕರ್ನಾಟಕದೊಳಗೇ ಎಲ್ಲಾದರೂ ನಡೆದಿದ್ದರೆ ಬರುತ್ತಿದ್ದೆನೆಂದೂ ಹೇಳಿದರು. ಲೋಹಿಯಾ ಅವತ್ತು ಅಣ್ಣನಿಗೆ ಹೇಗೆ ಇಂಗ್ಲಿಷ್ ಭಾಷೆ ಭಾರತದಲ್ಲಿ ಶೋಷಣೆಗೆ ಉಳ್ಳವರ ಆಯುಧವಾಗಿ ಪರಿಣಮಿಸಿದೆಯೆಂದು ವಿವರಿಸಿದರು. ಧರ್ಮ, ಜಾತಿ, ಭಾಷೆ ಇವೆಲ್ಲವುಗಳ ಬಗ್ಗೆ ತುಂಬಾ ಹೊತ್ತು ವಿಚಾರವಿನಿಮಯ ನಡೆಯಿತು. ಮಹಾತ್ಮಾಗಾಂಧಿಯವರ ಜೊತೆ ಲೋಹಿಯಾ, ಜೆ.ಪಿ. ಎಲ್ಲರೂ ಇದ್ದಿದ್ದು ಅಣ್ಣನಿಗೆ ಗೊತ್ತಿದ್ದರಿಂದ ಲೋಹಿಯಾರವರ ಆಳವಾದ ತತ್ವಚಿಂತನೆ, ಪಾಂಡಿತ್ಯಗಳು ‘ಅಣ್ಣನಿಗೇನೂ ಹೊಸದಾಗಿ ಕಾಣಲಿಲ್ಲ. ಆದರೂ ಅವರ ವಿಚಾರಧಾರೆಗೂ ತಮ್ಮ ಅಭಿಪ್ರಾಯಗಳಿಗೂ ಇರುವ ಸಮಾನಾಂಶಗಳಿಂದ ಅಣ್ಣನಿಗೆ ಅವತ್ತು ತುಂಬಾ ಸಂತೋಷವಾಯ್ತು, ‘ನೀವು ಯಾವುದನ್ನು ರಾಜಕೀಯದ ಪರಿಭಾಷೆಯಲ್ಲಿ ಹೇಳುತ್ತಿದ್ದೀರೋ ಅದರ ಸಾಂಸ್ಕೃತಿಕ ಆವೃತ್ತಿಯನ್ನಷ್ಟೇ ನಾನು ಹೇಳುತ್ತಿರುವುದು’ ಎಂದು ಅವರ ಕೈ ಕುಲುಕುತ್ತಾ ಕೊನೆಯಲ್ಲಿ ಹೇಳಿದರು.’

ಈ ಲೋಹಿಯಾ-ಕುವೆಂಪು ಭೇಟಿ 1962ರಲ್ಲಿ ನಡೆದಿರಬಹುದೆಂದು ಊಹಿಸಬಹುದು. ಬದ್ರಿ ವಿಶಾಲಪಿಟ್ಟಿ 14.9.1962ರಂದು ಗೋಪಾಲಗೌಡರಿಗೆ ಬರೆದ ಪತ್ರದಲ್ಲಿ ಹೈದರಾಬಾದಿನಲ್ಲಿ ಅಕ್ಟೋಬರ್ 12, 13, 14ರಂದು ನಡೆಯಲಿದ್ದ ಅಖಿಲ ಭಾರತೀಯ ಅಂಗ್ರೇಜಿ ಹಟಾವೋ ಸಮ್ಮೇಳನದ ಮೂರನೇ ಅಧಿವೇಶನಕ್ಕೆ ಕುವೆಂಪು ಅವರನ್ನು ಆಹ್ವಾನಿಸುವ ಕುರಿತು ಬರೆಯುತ್ತಾರೆ. ‘ಡಾ. ಕೆ.ವಿ.ಪುಟ್ಟಪ್ಪನವರು ರೈಲ್ವೇ ಪ್ರಯಾಣದ ಕಾರಣದಿಂದಾಗಿ ಈ ಸಮ್ಮೇಳನಕ್ಕೆ ಬರುವುದು ತ್ರಾಸದಾಯಕವಾಗುವಂತಿದ್ದರೆ, ಅವರ ವಿಮಾನ ಪ್ರಯಾಣದ ವೆಚ್ಚವನ್ನು ನಾವು ಭರಿಸುತ್ತೇವೆ. ಹೇಗಾದರೂ ಮಾಡಿ ಅವರು ಈ ಸಮ್ಮೇಳನದಲ್ಲಿ ಭಾಗಿಯಾಗುವಂತೆ ಅವರ ಮನವೊಲಿಸಲೇಬೇಕು. ನೀವು ಈ ಸಮ್ಮೇಳನ ಕುರಿತು ಅವರ ಹೇಳಿಕೆಯನ್ನು ಪಡೆದುಕೊಂಡು ಕಳಿಸಬೇಕೆಂದು ಡಾ.ಲೋಹಿಯಾ ಕೇಳಿದ್ದಾರೆ.’
ಗೋಪಾಲಗೌಡರು ಆರಂಭದಿಂದಲೂ ಲೋಹಿಯಾ ಜೊತೆಗಿದ್ದರು. ‘ಐವತ್ತರ ದಶಕದ ಮಧ್ಯಭಾಗದಲ್ಲಿ ಸಮಾಜವಾದಿ ಚಳುವಳಿಯನ್ನು ಅಪ್ಪಳಿಸಿದ ಭಾರಿ ವಿವಾದದಲ್ಲಿ ಗೋಪಾಲ್ ಡಾ. ಲೋಹಿಯಾ ಅವರನ್ನು ಪೂರ್ಣವಾಗಿ ಬೆಂಬಲಿಸಿದರು’ ಎಂದು ಮಧು ಲಿಮಯೆ ಬರೆಯುತ್ತಾರೆ. ಮುಂದೆ ಗೋವಾ ವಿಮೋಚನಾ ಚಳುವಳಿಯಲ್ಲೂ ಶಾಂತವೇರಿ ಗೋಪಾಲಗೌಡರು ಭಾಗವಹಿಸಿದ್ದರು. ಗೋಪಾಲಗೌಡ, ಜೆ.ಎಚ್. ಪಟೇಲ್ ಹಾಗೂ ವೆಂಕಟರಾಮ್ ಆಗ ಕರ್ನಾಟಕದ ಸಮಾಜವಾದಿ ಪಕ್ಷದ ಮುಂಚೂಣಿ ನಾಯಕರಾಗಿದ್ದರು. ಹೀಗಾಗಿ ‘ನಮ್ಮದು ಗೌಡ್ರು, ಪಟೇಲ್ರು, ಶಾನುಭೋಗರ ಪಕ್ಷ’ ಎಂದು ಸಮಾಜವಾದಿಗಳೇ ತಮಾಷೆ ಮಾಡಿಕೊಳ್ಳುತ್ತಿದ್ದುದನ್ನು ಕೋಣಂದೂರು ಲಿಂಗಪ್ಪ ನೆನೆಯುತ್ತಾರೆ. ಕೋಲಾರ ಕಡೆಯ ಬ್ರಾಹ್ಮಣ ಕುಟುಂಬದಿಂದ ಬಂದಿದ್ದ ಎಸ್.ವೆಂಕಟರಾಮ್ ‘ಶಾನುಭೋಗ’ ಎನಿಸಿಕೊಂಡಿದ್ದರು! ಇದು ಸಮಾಜವಾದಿಗಳು ತಂತಮ್ಮ ಜಾತಿಗಳನ್ನು ತಮಾಷೆ ಮಾಡಿಕೊಳ್ಳುವ, ಜಾತಿ ಮೀರುವ, ಜಾತ್ಯತೀತ ರೀತಿಯೂ ಆಗಿತ್ತು.
ಗೋಪಾಲಗೌಡ-ಲೋಹಿಯಾರ ಒಡನಾಟದ ಪ್ರಸಂಗಗಳನ್ನು ಶಿವಮೊಗ್ಗದ ಪೆರಡೂರು ಪುಟ್ಟಯ್ಯ ನೆನೆಯುತ್ತಾರೆ:
ಒಂದು ಸಂಜೆ ಶಿವಮೊಗ್ಗೆಯಿಂದ ಬೆಂಗಳೂರಿಗೆ ಹೊರಡಲು ಲೋಹಿಯಾ ಕೂತಿದ್ದ ಟ್ರೈನಿನ ಬೋಗಿಗೆ ಗೋಪಾಲಗೌಡರೂ ಹತ್ತಿ ಮಾತಾಡುತ್ತಾ ಕೂತರು.
‘ಗೋಪಾಲ್! ನೀವೂ ಬೆಂಗಳೂರಿಗೆ ಬನ್ನಿ’ ಎಂದರು ಲೋಹಿಯಾ.
‘ಸರಿ’ ಎಂದು ಗೋಪಾಲಗೌಡರು ಕೂತೇಬಿಟ್ಟರು.
ಗೋಪಾಲಗೌಡರ ಬಳಿ ಟಿಕೇಟೂ ಇರಲಿಲ್ಲ. ಜೇಬಿನಲ್ಲಿ ದುಡ್ಡೂ ಇರಲಿಲ್ಲ. ಅವರನ್ನು ಕಳಿಸಲು ಬಂದ ಗೆಳೆಯರು ತಮ್ಮ ಬಳಿಯಿದ್ದ ಐವತ್ತು ಪೈಸೆ, ಒಂದು ರೂಪಾಯಿ, ಎರಡು ರೂಪಾಯಿ ಸೇರಿಸಿ ಟಿಕೆಟ್ ತಂದು ಗೌಡರ ಕೈಗೆ ಕೊಟ್ಟರು. ಲೋಹಿಯಾ ಜೊತೆಗೆ ಗೌಡರು ಬೆಂಗಳೂರಿಗೆ ಹೊರಟರು!
ಗೋಪಾಲಗೌಡರ ಸುದೀರ್ಘ ಸ್ನಾನ ಆ ಕಾಲದಲ್ಲಿ ದಂತಕತೆಯಾಗಿತ್ತು! ಒಮ್ಮೆ ಮಲೆನಾಡಿನಲ್ಲಿ ಲೋಹಿಯಾ ಉಳಿದಿದ್ದ ಮನೆಯಲ್ಲಿ ಬೆಳಗ್ಗೆ ಗೌಡರು ಸುದೀರ್ಘ ಸ್ನಾನದಲ್ಲಿ ತೊಡಗಿದ್ದರು. ಸ್ನಾನದ ಮನೆಯಿಂದ ಹೊರಟ ಸೋಪಿನ ಪರಿಮಳ ಮನೆಯನ್ನೆಲ್ಲ ಸುತ್ತುತ್ತಿತ್ತು. ಕೊನೆಗೂ ಗೋಪಾಲಗೌಡರು ಸ್ನಾನ ಮುಗಿಸಿ ಬಂದಾಗ, ‘ಆವೋ ಜಾಸ್ಮಿನ್ ಆವೋ!’ ಎಂದು ಲೋಹಿಯಾ ತಮಾಷೆ ಮಾಡತೊಡಗಿದರು.
ಇದನ್ನು ಓದಿದ್ದೀರಾ?: ‘ಇಂದಿನ ಜಗತ್ತಿಗೆ ಬೌದ್ಧಧರ್ಮ’ ಬುದ್ಧನನ್ನು ಅರಿಯಲು ಮತ್ತೊಂದು ಮಾರ್ಗ
ಲೋಹಿಯಾ ಒಮ್ಮೆ ಮಲೆನಾಡು ಭಾಗದ ಅಡ್ಡಾಟದಲ್ಲಿ ಊಟಕ್ಕೆ ಕೂತಾಗ ಪಟೇಲ್, ಗೋಪಾಲಗೌಡ ಮೊದಲಾದವರ ಮೇಲೆ ಸಿಟ್ಟಾದರು. ಕಾರಣ, ಈ ಇಬ್ಬರೂ ಕಾರಿನ ಡ್ರೈವರನ್ನು ಊಟಕ್ಕೆ ಕರೆಯದೆ ಬಂದಿದ್ದರು. ಈ ಪ್ರಸಂಗವನ್ನು ನೆನೆದ ಕೋಣಂದೂರು ಲಿಂಗಪ್ಪ ಮತ್ತೊಂದು ಪ್ರಸಂಗವನ್ನೂ ಹೇಳಿದರು:
‘1962ರಲ್ಲಿ ಕಡಿದಾಳ್ ಮಂಜಪ್ಪನವರು ಗೋಪಾಲಗೌಡರಿಗೆ ಧಾರವಾಡದ ಸೋನಕ್ಕನವರನ್ನು ಮದುವೆಯಾಗಲು ಸಲಹೆ ಕೊಟ್ಟರು. ಗೌಡರು ಸೋನಕ್ಕನವರ ಮನೆಯವರನ್ನು ಭೇಟಿಯಾಗಿ ಬಂದ ಮೇಲೂ, ಒಂದೆರಡು ತಿಂಗಳು ಆ ಕುರಿತು ಏನೂ ಹೇಳಲಿಲ್ಲ. ಗೌಡರು ಲೋಹಿಯಾರ ಒಪ್ಪಿಗೆಗೆ ಕಾದಿದ್ದರೆಂದು ಸೋನಕ್ಕನವರಿಗೆ ನಂತರ ತಿಳಿಯಿತು! ಕೊನೆಗೂ ಲೋಹಿಯಾ ಗೋಪಾಲಗೌಡರಿಗೆ ಬರೆದ ಒಂದು ಸಾಲಿನ ಪತ್ರದಲ್ಲಿ ‘ಪ್ರಿಯ ಸಾಥಿ, ಸುಖೀ ರಹೋ’ ಎಂಬ ಸಂದೇಶ ಬಂತು. ಗೌಡರು ತಮ್ಮ ಮದುವೆಗೆ ಒಪ್ಪಿಗೆ ಕೊಟ್ಟರು.
ಕರ್ನಾಟಕದ ಅಂದಿನ ಸಮಾಜವಾದಿಗಳಲ್ಲಿ ಜಯದೇವಪ್ಪ ಹಾಲಪ್ಪ ಪಟೇಲ್ ಕೊಂಚ ಸ್ಥಿತಿವಂತ ಮನೆತನದಿಂದ ಬಂದಿದ್ದರು. ಸಮಾಜವಾದಿಗಳ ಓಡಾಟಕ್ಕೆ, ಪಕ್ಷದ ನಿರ್ವಹಣೆಗೆ ಅಷ್ಟಿಷ್ಟು ನೆರವಾಗಬಲ್ಲ ಸ್ಥಿತಿಯಲ್ಲೂ ಇದ್ದರು. ಈ ಕುರಿತು ಜೆ.ಎಚ್. ಪಟೇಲರ ಅಣ್ಣ ಹೇಳಿದ ಪ್ರಸಂಗವೊಂದನ್ನು ಚಂದ್ರಶೇಖರ ತೌಡೂರು ದಾಖಲಿಸಿದ್ದಾರೆ: ‘ಒಮ್ಮೆ ಕೂಡಲೆ ಹದಿನೈದು ಸಾವಿರ ರೂಪಾಯಿ ತಗೊಂಡು ಬಾ’ ಅಂತ ಲೋಹಿಯಾ ನನ್ನ ತಮ್ಮನಿಗೆ ಫೋನ್ ಮಾಡಿದರು. ಈತ ಹಣ ತಗೊಂಡು ಹೊರಟ. ಮೂರೇ ದಿನದಲ್ಲಿ ವಾಪಸ್ ಬಂದ.
ಅಪ್ಪ ಕೇಳಿದರು: ‘ಯಾಕಪ್ಪ ಮೂರೇ ದಿನದಲ್ಲಿ ಬಂದುಬಿಟ್ಯಲ್ಲ? ಹೋಗಿದ್ದ ಕೆಲಸ ಸುಸೂತ್ರವಾಗಿ ಆಯ್ತಾ?’
‘ಹೌದಪ್ಪ, ಲೋಹಿಯಾ ಮತ್ತು ಅವರ ಜೊತೆಯವರು ನಾನು ಹೋಗೋದನ್ನೇ ಕಾಯ್ತಾ ಇದ್ದರು. ಏರ್ಪೋರ್ಟ್ಗೇ ಬಂದಿದ್ದರು’ ಎಂದ ಜಯದೇವ.
ಅಪ್ಪ ನಗ್ತಾ, ‘ಅವರ ಕೈಯಲ್ಲಿ ದುಡ್ಡಿದ್ದಿಲ್ಲೇನೋ, ಅದಕ್ಕೇ ಅವಸರವಾಗಿ ನಿನ್ನ ರಿಸೀವ್ ಮಾಡ್ಕೊಳೋಕೆ ವಿಮಾನ ನಿಲ್ದಾಣಕ್ಕೇ ಬಂದಿರಬೇಕು ಬಿಡು’ ಅಂದರು.
ಜಯದೇವನಿಗೆ ಕೋಪ ಬಂತು. ಅಪ್ಪ ಲೋಹಿಯಾಗೆ ಅವಮಾನ ಮಾಡ್ತಾ ಇದಾರೆ ಅಂತ ತಿಳಕೊಂಡ.
‘ನಾನು ಈ ಕ್ಷಣವೇ ಮನೆ ಬಿಟ್ಟು ಹೊರಟು ಹೋಗ್ತಾ ಇದೀನಿ, ನಿಮ್ ಆಸ್ತೀನೂ ಬೇಡ. ನಿಮ್ಮ ಒಂದು ತೆಂಗಿನ ಚಿಪ್ಪ ಬೇಡ’ ಅನ್ನುತ್ತಾ ಹೊರಟೇಬಿಟ್ಟ, ಕೊನೆಗೆ ಹೆಂಗೆಂಗೆ ಸಮಾಧಾನ ಆದನೋ ದೇವರೇ ಬಲ್ಲ. ಹೀಗೆ ಈ ಜಯದೇವ ಪಟೇಲ, ನಮ್ಮ ತಮ್ಮ, ಅಸಾಧ್ಯದವನು ಬಿಡಪ್ಪ.’
6
1963ರ ಕರ್ನಾಟಕ ಪ್ರವಾಸದಲ್ಲಿ ಲೋಹಿಯಾ ರಮಾಗೆ ಬರೆದ ಪತ್ರ:
‘ಏನೋ ಒಳ್ಳೆಯ ವಿಷಯ ಬರೆಯಬೇಕೆಂದಿದ್ದೆ. ವಿಶೇಷವಾಗಿ ಬಣ್ಣದ ವಿಷಯ. ನನಗೆ ನೀಲಿ ಬಣ್ಣ, ಬಿಳಿ ಬಣ್ಣ ತುಂಬಾ ಹಿತವೆನಿಸುತ್ತವೆ; ಬಹುಶಃ ಆಕಾಶ ಬಿಳಿಯಾಗಿರುವುದರಿಂದ ಇರಬೇಕು. ಆಕಾಶದಲ್ಲಿ ಈ ಎರಡು ಬಣ್ಣಗಳೇ ವಿಶೇಷ. ಒಂದು ಪ್ರದರ್ಶನದಲ್ಲಿ ಹೂವುಗಳನ್ನು ಕಂಡು ಅದ್ಭುತವೆನಿಸಿತು. ಇದು ನಮ್ಮ ದೇಶದ ತೀರಾ ಸಾಧಾರಣ ಹೂವು: ಎಲ್ಲಾ ಕಡೆಯಲ್ಲಿ ತುಂಬಾ ಅರಳುತ್ತದೆ. ಅಬ್ಬಾ ಬಣ್ಣದ ಮಹಿಮೆಯೇ! ಬಣ್ಣ ಬೆಂಕಿಯಂತೆ ಎಲ್ಲೆಡೆಗೂ ಹರಡಿಕೊಳ್ಳುತ್ತದೆ. ವಾಸನೆಯೂ ಪರವಾಗಿಲ್ಲ. ರೂಪ, ಬಣ್ಣ ಮತ್ತು ವಾಸನೆಗಳನ್ನು ಬೇರೆ ಬೇರೆಯಾಗಿ ಹುಡುಕಿದರೆ ಇದಕ್ಕಿಂತ ಒಳ್ಳೆಯ ಹೂಗಳು ಸಿಕ್ಕರೂ ಸಿಕ್ಕಬಹುದು; ಆದರೆ ಇಷ್ಟೊಂದು ಹೂಗಳು ಒಟ್ಟಿಗೆ ಸಿಕ್ಕುತ್ತವೆಯೆ? ತುಂಬಾ ಸಿಕ್ಕುವ ವಸ್ತುವಿನ ಮಾನ್ಯತೆಯೂ ತಾನಾಗೇ ಕಡಿಮೆಯಾಗುತ್ತದೆಂದು ನನಗನ್ನಿಸುತ್ತದೆ. ಜೋಗ್ ಜಲಪಾತದಲ್ಲಿ ಪ್ರಾಯಶಃ ದಿನವಿಡೀ ಕಾಮನಬಿಲ್ಲಿನ ಬಣ್ಣ ಕಾಣಸಿಗುತ್ತದೆ. ಬೃಂದಾವನದ ಹೂದೋಟದಲ್ಲಿ ಬಣ್ಣಗಳ ಬಾಲಲೀಲೆ ಇದೆ. ತುಂಬು ಬಣ್ಣ, ತುಂಬು ಕಾಂತಿ.
ನಾನು ಬಯಸಿದ್ದು ಸಿಕ್ಕಲಿಲ್ಲ. ಕರ್ನಾಟಕ ನಮ್ಮ ದೇಶದ ಎಲ್ಲ ನಾಡುಗಳಿಗಿಂತ ಹೆಚ್ಚು ಸುಂದರ ಪ್ರದೇಶ ಎಂದು ಇಲ್ಲಿಗೆ ಹಲವು ಸಲ ಬಂದ ಮೇಲೆ ನನಗನ್ನಿಸಿದೆ. ಇದನ್ನು ಪುರಾವೆ ಸಹಿತ ತೋರಿಸಲು ಮುಂದಾದಾಗ ಸೌಂದರ್ಯ ಕೈಯಿಂದ ಜಾರಿ ಹೋಯಿತು.’
ಲೋಹಿಯಾ ಕರ್ನಾಟಕ ಪ್ರವಾಸ ಮುಗಿಸಿ ಹೈದರಾಬಾದ್ಗೆ ಹೋಗುವ ದಾರಿಯಲ್ಲಿ ರಮಾಗೆ ಬರೆದ ಪತ್ರ;
ಪ್ರಿಯ ಇಲ್ಟೂ ರಮಲಿ,
ನಮ್ಮ ಪಕ್ಷವೂ ಅದ್ಭುತವೇ. ಮಂಗಳೂರಿನಲ್ಲಿ ಮೂವರು ನಾಯಕರಿದ್ದಾರೆ: (ಅಮ್ಮೆಂಬಳ) ಬಾಳಪ್ಪ ಕುಂಬಾರರು. ಮುನಿರಾಮ್ ರಾಜು ಚಮ್ಮಾರರು. ಮಲ್ಲಯ್ಯ ಕ್ಷೌರಿಕರು. ಜನರು ಸಾಮಾನ್ಯವಾಗಿ ‘ವಿದ್ಯಾವಂತರು’ ಅನ್ನುತ್ತಾರಲ್ಲ, ಆ ಥರದಲ್ಲಿ ಇವರೆಲ್ಲ ವಿದ್ಯಾವಂತರಲ್ಲ. ಬಾಳಪ್ಪ ಮೆಟ್ರಿಕ್ವರೆಗೆ ಓದಿರಬಹುದು. ಆದರೆ ಅವರು ಹತ್ತು ‘ಚೌಖಂಭಾ’ ಪತ್ರಿಕೆಗಳನ್ನು ತರಿಸಿಕೊಳ್ಳುತ್ತಾರೆ, ಪ್ರೀತಿಯಿಂದ ಓದುತ್ತಾರೆ; ಇತರರಿಗೆ ಓದಿಸುತ್ತಾರೆ. ಇಂಡಿಯಾದ ಅದೃಷ್ಟ ನೆಟ್ಟಗಿಲ್ಲ- ಯಾಕೆಂದರೆ ಇಂಥ ಜನರ ಪ್ರಭಾವ ಬೆಳೆಯುವುದು ತೀರಾ ನಿಧಾನವಾಗತೊಡಗಿದೆ… ಮುಂಬಯಿಯಲ್ಲಿ ಕಾರ್ಮಿಕ ಚಳುವಳಿ ಜೋರಾಗಿದೆ. ಅದಕ್ಕೆ ಮುಖ್ಯ ಕಾರಣ ಮಂಗಳೂರು. ಮುಂಬೈನಲ್ಲಿ ಮಂಗಳೂರಿನವರು ತುಂಬಾ ಇದ್ದಾರೆ. ಇತರ ಜಿಲ್ಲೆಗಳ ಕನ್ನಡಿಗರೂ ಇದ್ದಾರೆ. ಅವರು ಬೇಕಾದರೆ ನೂರಿನ್ನೂರು ರೂಪಾಯಿ ಸಂಗ್ರಹಿಸಿ ತಮ್ಮ ಮಂಗಳೂರಿನ ಪಾರ್ಟಿಗೆ ಕಳಿಸಬಲ್ಲರು. ಪಾರ್ಟಿ ಮುಂದೆ ಹೇಗೆ ಸಾಗಬೇಕು ಎಂದು ಹಾದಿ ಕೂಡ ತೋರಿಸಬಲ್ಲರು…
…ಜೀವನ ನಿಜಕ್ಕೂ ವಿಚಿತ್ರ, ಐವತ್ತೆರಡು ವರ್ಷವೋ, ಐವತ್ತೆರಡು ಗಂಟೆಯೋ… ಎಲ್ಲಾ ಒಂದೇ.
ನಿನ್ನ
ರಾಮ್ ಮನೋಹರ್
ಕುತೂಹಲಕರ ಸಂಗತಿಯೆಂದರೆ, ಈ ಕರ್ನಾಟಕ ಪ್ರವಾಸಕ್ಕಾಗಿ 6 ಮಾರ್ಚ್ 1963ರಂದು ಬೆಂಗಳೂರಿನತ್ತ ಪಯಣ ಬೆಳೆಸಿದ್ದ ಲೋಹಿಯಾಗೆ ಅದೇ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ತಮ್ಮ ರಾಜಕೀಯ ಜೀವನದ ಹೊಸ ತಿರುವಿಗೆ ಕಾರಣವಾಗಲಿದ್ದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರ ಬಗ್ಗೆ ಊಹೆಯೂ ಇದ್ದಂತಿರಲಿಲ್ಲ. ಲೋಹಿಯಾ ಬೆಂಗಳೂರು ಬಿಡುವಾಗ ರಮಾಗೆ ಬರೆದ ಪತ್ರದಲ್ಲಿ ಕೂಡ ಆ ಬೆಳವಣಿಗೆಗಳ ಸುದ್ದಿ ಅವರಿಗೆ ತಲುಪಿದ ಸೂಚನೆಗಳಿದ್ದಂತಿಲ್ಲ!
(ಕೃತಿ: ಡಾಕ್ಟರ್ ಸಾಹೇಬ್, ಲೇ: ನಟರಾಜ್ ಹುಳಿಯಾರ್, ಪ್ರ: ಪಲ್ಲವ, ಬೆಲೆ: 450, ಸಂಪರ್ಕ: 88800 87235)





