ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದ ನಡುವೆ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಇರಾನ್, ‘ಶತ್ರುಗಳಿಗೆ ಮತ್ತಷ್ಟು ಕಹಿ ಸೋಲುಗಳನ್ನು ಉಣಿಸಲು ನಮ್ಮ ನೌಕಾಪಡೆಯು ಸರ್ವಸನ್ನದ್ಧವಾಗಿದೆ’ ಎಂದು ಇರಾನ್ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸೇನೆಯು ಮುಚ್ಚಿದ ಬೆನ್ನಲ್ಲೇ ಈ ಕಠಿಣ ಎಚ್ಚರಿಕೆ ರವಾನೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಏಪ್ರಿಲ್ 18ರಂದು ಇರಾನ್ ಸೇನಾ ದಿನದ ಅಂಗವಾಗಿ ಸಂದೇಶ ರವಾನಿಸಿರುವ ಖಮೇನಿ, ಇರಾನ್ನ ಸೇನಾ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. “ನಮ್ಮ ಡ್ರೋನ್ಗಳು ಅಮೆರಿಕ ಮತ್ತು ಇಸ್ರೇಲ್ ಮೇಲೆ ಸಿಡಿಲಿನಂತೆ ಎರಗಿದ ರೀತಿಯಲ್ಲೇ, ನಮ್ಮ ಕೆಚ್ಚೆದೆಯ ನೌಕಾಪಡೆಯು ಶತ್ರುಗಳಿಗೆ ಹೊಸ ಕಹಿ ಸೋಲುಗಳನ್ನು ಉಣಿಸಲು ಸಿದ್ಧವಾಗಿದೆ” ಎಂದು ಅವರು ಗುಡುಗಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಲು ಮುಂದಾಗುತ್ತಿದ್ದಂತೆ, ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪಡೆಗಳು ಇರಾನ್ ಬಂದರುಗಳು ಮತ್ತು ಕರಾವಳಿ ಪ್ರದೇಶಗಳನ್ನು ಪ್ರವೇಶಿಸುವ ಹಾಗೂ ನಿರ್ಗಮಿಸುವ ಹಡಗುಗಳ ಮೇಲೆ ಕಟ್ಟುನಿಟ್ಟಿನ ಕಡಲ ದಿಗ್ಬಂಧನವನ್ನು ಹೇರಿವೆ. ಈ ಬಿಗುವಿನ ವಾತಾವರಣದ ನಡುವೆಯೇ, ಜಲಸಂಧಿಯಿಂದ 20 ನಾಟಿಕಲ್ ಮೈಲಿ ದೂರದಲ್ಲಿ ತೈಲ ಟ್ಯಾಂಕರ್ ಒಂದರ ಮೇಲೆ ಇರಾನ್ನ ಬಂದೂಕು ದೋಣಿಗಳು ಗುಂಡಿನ ದಾಳಿ ನಡೆಸಿವೆ ಎಂದು ಬ್ರಿಟನ್ನ ಕಡಲ ವ್ಯಾಪಾರ ಕಾರ್ಯಾಚರಣೆ ಸಂಸ್ಥೆ (UKMTO) ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಅಮೆರಿಕದ ವಿನಾಶಕ್ಕೆ ಸಿದ್ಧವಾಗಿರುವ ಡೊನಾಲ್ಡ್ ಟ್ರಂಪ್ ಎಂಬ ‘ವಿಧ್ವಂಸಕ’
ಈ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ, ವಿಶೇಷವಾಗಿ ತೈಲ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಜಲಸಂಧಿಯನ್ನು ಅಲ್ಪಾವಧಿಗೆ ತೆರೆಯಲಾಗಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ, ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್ಗೆ 120 ಡಾಲರ್ ಗರಿಷ್ಠ ಮಟ್ಟದಿಂದ 90.38 ಡಾಲರ್ಗೆ ಇಳಿಕೆಯಾಗಿ ಕೊಂಚ ನಿರಾಳತೆ ಮೂಡಿಸಿತ್ತು. ಆದರೆ, ಇರಾನ್ ಸೇನೆಯು ಜಲಸಂಧಿಯನ್ನು ಮತ್ತೆ ಮುಚ್ಚಿರುವುದಾಗಿ ಘೋಷಿಸಿದ ಕಾರಣ ಮತ್ತು ಅಮೆರಿಕದ ದಿಗ್ಬಂಧನ ಮುಂದುವರಿದಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಅನಿಶ್ಚಿತತೆ ಮನೆಮಾಡಿದೆ.
ಒಂದೆಡೆ ಲೆಬನಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ ಜಾರಿಯಲ್ಲಿದ್ದರೂ, ಇರಾನ್ನ ನೂತನ ಪರಮೋಚ್ಚ ನಾಯಕರಾಗಿರುವ ಮೊಜ್ತಬಾ ಖಮೇನಿ ಅವರ ಈ ಕಠಿಣ ನಿಲುವು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡವನ್ನು ಇನ್ನಷ್ಟು ದಟ್ಟವಾಗಿಸಿದೆ.





