ಉತ್ತರ ಕರ್ನಾಟಕದ ಭಾಗದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಬೇಗೆ ತಾಳಲಾಗದೆ ಜನರು ತತ್ತರಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ನಿನ್ನೆ ಅಲ್ಪ ಸ್ವಲ್ಪ ಮಳೆಯಾದರೂ ಮತ್ತೆ ಇಂದು ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಮೂರು ಜಿಲ್ಲೆಗಳಲ್ಲೂ 40 ಡಿಗ್ರಿ ಆಸುಪಾಸಿನಲ್ಲಿ ತಾಪಮಾನ ದಾಖಲಾಗಿದೆ.
ಆಲಿಕಲ್ಲು ಮಳೆ ಸಾಧ್ಯತೆ: ಮುಂದಿನ ಕೆಲವು ದಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕೆಲವು ಕಡೆ ಆಲಿಕಲ್ಲು ಸಹಿತ ಮಳೆಯಾಗುವ ನಿರೀಕ್ಷೆ ಇದೆ ಎಂದೂ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಭಾರಿ ಬಿಸಿಲಿನಿಂದ ಅಂಜನಾದ್ರಿ ದರ್ಶನ ಸಮಯ ಬದಲು: ಬಿಸಿಲಿನ ಧಗೆ ಅಂಜನಾದ್ರಿ ಭಕ್ತರಿಗೂ ತಟ್ಟಿದೆ. ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್, ಅಂಜನಾದ್ರಿ ದರ್ಶನ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮೇ ತಿಂಗಳಾಂತ್ಯದವರೆಗೂ ಬೆಳಗ್ಗೆ 6ರಿಂದ 11ರವರೆಗೆ ಹಾಗೂ ಸಂಜೆ 4ರಿಂದ 6ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಸಮಯದಲ್ಲಿ ಟೆಂಪಲ್ ಬಂದ್ ಆಗಿರುತ್ತೆ ಅಂತಲೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೆಂಡದಂತಾದ ಬೇಸಿಗೆ | ʼಎಲ್ ನಿನೋʼ ಸದ್ದಿಲ್ಲದೆ ಜೀವ ಕಸಿಯುವ ಮುನ್ನ ಎಚ್ಚೆತ್ತುಕೊಳ್ಳಿ!
ವಿಜಯನಗರ ಮತ್ತು ಬಳ್ಳಾರಿಯಲ್ಲೂ ಬಿರುಬಿಸಿಲು ವಿಜಯನಗರ ಮತ್ತು ಬಳ್ಳಾರಿಯಲ್ಲೂ ಬಿಸಿಲಿನ ಝಳ ಮಿತಿ ಮೀರಿದ್ದು, ಜನರನ್ನು ಕಂಗಾಲಾಗಿಸಿದೆ. ವಿಶ್ವವಿಖ್ಯಾತ ಹಂಪಿಗೆ ಬರುವ ಪ್ರವಾಸಿಗರು ಬಿಸಿಲು ಕಂಡು ಶಾಕ್ ಆಗಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೆಕೆಯಿಂದ ಬೇಸತ್ತಿದ್ದಾರೆ. ಸೂರ್ಯನ ಆರ್ಭಟಕ್ಕೆ ರೋಸಿ ಹೋಗಿರುವ ರೈತರು, ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.






