ಪ್ರೀತಿ ಇಲ್ಲದ ಮೇಲೆ ಸಂಶಯದ ಗಡಿಗಳುದ್ದಕ್ಕೂ ಸಿಡಿಗುಂಡುಗಳ ಕದನ ನಿಂತೀತು ಹೇಗೆ ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ ನರಳುವ ಪಾಡು ತಪ್ಪೀತು ಹೇಗೆ ? ಎಂಬ ಜಿ ಎಸ್ ಎಸ್ ಕವಿತೆಯ ಸಾಲುಗಳು ವಾಸ್ತವದ ಕೈಗನ್ನಡಿ. ದ್ವೇಷ ,ಕ್ರೋಧ , ಮತ್ಸರದ ಹಿಂದೆ ಬಿದ್ದ ಮನುಜ ಪೀಳಿಗೆಯ ಯುದ್ಧವೆಂಬ ರೋಗಕ್ಕೆ ಮದ್ದು ಪ್ರೀತಿಯೊಂದೆ.
ಜಗತ್ತು ಅನ್ನವನ್ನು ಯುದ್ದದ ಅಸ್ತ್ರವಾಗಿಸುವುದಿಲ್ಲ ಎಂದು ವಚನ ನೀಡಿದ್ದೇನೋ ನಿಜ. ಆದರೆ ಅಂದಿನಿಂದ ಇಂದಿನವರೆಗೂ ಹಸಿವು ಯುದ್ದಮೋಹಿ ರಾಷ್ಟ್ರಗಳ ಯುದ್ದಾಸ್ತ್ರ. ಗಾಜಾ, ಉಕ್ರೇನ್ ಅಥವಾ ಸುಡಾನ್ ಸಂಘರ್ಷ ಚೆಂಡಾಡಿದ್ದು ಬಡಪಾಯಿ ಹೊಟ್ಟೆಗಳ ಹಸಿವಿನ ಜೊತೆಗೆ. ಹಸಿವನ್ನು ಅಸ್ತ್ರವನ್ನಾಗಿ ಬಳಸುವುದನ್ನು ‘ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ’ (ICC) ‘ಯುದ್ಧಾಪರಾಧ’ ಎಂದು ಪರಿಗಣಿಸಿದೆ. ಆದರೆ, ಈ ನಿಯಮವನ್ನು ಯುದ್ಧದ ಮದ ಏರಿದ ರಾಷ್ಟ್ರಗಳು ಗಾಳಿಗೆ ತೂರಿವೆ.
ಯುದ್ಧಗಳು ಸೃಷ್ಟಿಸುವ ಸಮಸ್ಯೆಗಳಲ್ಲಿ ಆಹಾರ ಅಭದ್ರತೆ ಅತ್ಯಂತ ಸಂಕೀರ್ಣ ಹಾಗೂ ಜಟಿಲವಾದದ್ದು. ಜಾಗತಿಕ ವಲಯದಲ್ಲಿ ಆಹಾರ ಬಿಕ್ಕಟ್ಟು ಸೃಷ್ಟಿಸಿ ಹಸಿವಿನ ಪ್ರಮಾಣ ಇನ್ನಿಲ್ಲದಂತೆ ಏರಿಕೆಯಾಗಲು ಜಾಗತಿಕ ಸಂಘರ್ಷಗಳು ಕಾರಣ. ವಿಶ್ವಾದಂತ್ಯ ಸುಮಾರು 300 ಮಿಲಿಯನ್ ಜನರು ಯುದ್ದ ತಂದ ಕ್ಷಾಮದಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ಹಸಿವಿನಿಂದ ಸಾಯುತ್ತಿರುವವರ ಸಂಖ್ಯೆ 20 ರಿಂದ 30 ಲಕ್ಷ. ಸುಡಾನ್, ಗಾಜಾ, ಯಮನ್ ದೇಶಗಳು ಈ ಕ್ರೌರ್ಯಕ್ಕೆ ಸಿಕ್ಕಿ ನೆಲಕಚ್ಚಿದ ಪ್ರಮುಖ ದೇಶಗಳು.
ಮೊದಲೇ ಕ್ಷಾಮದಿಂದ ತತ್ತರಿಸಿದ ಸುಡಾನ್, ಉಕ್ರೇನ್, ಗಾಜಾದಂತಹ ಪ್ರದೇಶಗಳಿಗೆ ಸಂಘರ್ಷಗಳು ತಂದೊಡ್ಡುವ ಸಮಸ್ಯೆಗಳು ಗಾಯದ ಮೇಲೆ ಉಪ್ಪು ಸವರಿದಂತೆ. ಕೃಷಿಭೂಮಿ, ಆಹಾರ ದಾಸ್ತಾನು ಘಟಕಗಳನ್ನು ನಾಶ ಪಡಿಸಿ, ಸರಕು ಸಾಗಿಸುವ ನೌಕೆಗಳ ಮೇಲೆ ದಾಳಿ ಮಾಡುವ ನೀರಿನ ಮೂಲವನ್ನು ವಿಷಮಯವಾಗಿಸುವ ಯುದ್ಧ ನಿರತ ರಾಷ್ಟ್ರಗಳು ಆಹಾರ ಸರಪಳಿಯ ಬುನಾದಿಗೆ ಕೊಡಲಿ ಹಾಕಿವೆ.
ಹಿಮ್ಮುಖ ಚಲನೆಯತ್ತ ಜಗತ್ತು?
ಬಾಂಬು ಗುಂಡಿನ ಸದ್ದುಗಳಲ್ಲಿ ಹಸಿವು ನೀರಾಡಿಕೆಯಿಂದ ಬಳಲುತ್ತಿರುವ ಮುಗ್ಧ ಜೀವಗಳ ಕೂಗು ಅರಣ್ಯರೋಧನವಾಗಿ ಉಳಿದಿದೆ. ಅನ್ನ ನೀರು ಕೊಡದೆ ಹಸಿಯಲು ಬಿಟ್ಟು ಕೊಲ್ಲುವ ನಿಷ್ಕಾರುಣ್ಯ ಯುದ್ಧ ನಡೆಗೆ ಶತಮಾನದ ಇತಿಹಾಸವಿದೆ. ʼನಾಜಿʼಗಳು ಎರಡನೇ ವಿಶ್ವ ಯುದ್ದದಲ್ಲಿ ಅನ್ನಾಹಾರವನ್ನು ಕಿತ್ತುಕೊಂಡು ಜನರನ್ನು ಮಣಿಸುವ ಅಮಾನುಷತೆ ಮೆರೆದಿದ್ದರು. ಅಮೆರಿಕ ʼ Operation Starvationʼ ಹೆಸರಿನಲ್ಲಿ ಜಪಾನನ್ನು ಹಸಿವಿನಿಂದ ನರಳುವಂತೆ ಮಾಡಿದ್ದು ಇತಿಹಾಸ.
ಇಪ್ಪತ್ತನೇ ಶತಮಾನಕ್ಕೂ ಮನಕುಲ ತಲೆತಗ್ಗಿಸುವ ದುರುಳತನ ಮೆರೆಯುತ್ತಿರುವ ಸೊಕ್ಕಿದ ರಾಷ್ಟ್ರಗಳು ಇಥಿಯೋಪಿಯಾ, ಗಾಜಾ, ಯಮನ್, ಸುಡಾನ್ ಹೀಗೆ ಹಲವು ಬಡ ದೇಶಗಳ ಕೂಳು ಕಸಿದು ಜನಾಂಗಗಳ ನಿರ್ನಾಮದ ಕೃತ್ಯದಲ್ಲಿ ತೊಡಗಿವೆ.
2018ರಲ್ಲಿ ವಿಶ್ವಸಂಸ್ಥೆಯ ರಕ್ಷಣಾ ಮಂಡಳಿ 2417 ನಿರ್ಣಯ ಮಂಡಿಸಿತು. ಈ ನಿರ್ಣಯದ ಅನ್ವಯದಂತೆ “ಯಾವ ಯುದ್ಧಗಳು ಆಹಾರ ಸರಪಳಿಯನ್ನು ನಾಶಗೊಳಿಸಬಾರದು. ಹಸಿವನ್ನು ಅಸ್ತ್ರವಾಗಿಸಿ ಸಂಘರ್ಷಕ್ಕೆ ಇಳಿಯಬಾರದು. ಯುದ್ಧ ನಿರತ ದೇಶಗಳಲ್ಲಿ ಆಹಾರದ ಅಭಾವ ಉಂಟಾದಾಗ ನಾಗರಿಕ ರಾಷ್ಟ್ರಗಳು ಆಹಾರ ಪೂರೈಕೆಗೆ ನೆರವಾಗಬೇಕು” ಎಂಬುದು ಈ ನಿರ್ಣಯದ ಪ್ರಮುಖಾಂಶ. ನಿರ್ಣಯಕ್ಕೆ ಸಹಿ ಹಾಕಿದ ರಷ್ಯಾ, ಚೀನಾ ಹಾಗೂ ಟ್ರಂಪ್ ನಾಯಕತ್ವದ ಅಮೆರಿಕ ಸದ್ಯ ಈ ನಿರ್ಣಯವನ್ನು ʼನೀರಿನಲ್ಲಿ ಹುಣಸೆ ತೊಳೆದಂತೆʼ ಜಾಡಿಸಿ ಬಿಟ್ಟಿವೆ.
ಆಹಾರ ಭದ್ರತೆಯನ್ನು ಸರಾಗವಿರಿಸಲು ಸಹಿ ಹಾಕಿದ ರಷ್ಯಾ ಸಿರಿಯಾ ದಂಗೆಯಲ್ಲಿ ಅಸ್ಸಾದ್ ಅನುಸರಿಸಿದ ಕ್ರೂರತೆಯನ್ನು ಮೌನವಾಗಿದ್ದು ಪ್ರೇರೇಪಿಸಿತು. ಇತ್ತ ಸೌದಿ ಅರೆಬಿಯಾ ಯಮನ್ ದೇಶವನ್ನು ಹಸಿವಿನ ದವಡೆಗೆ ತಳ್ಳಿದ್ದನ್ನು ಅಮೆರಿಕ ಬೆಂಬಲಿಸಿತ್ತು.
ಇಲ್ಲಿಗೆ ಆಹಾರ ಅಭದ್ರತೆಗೆ ನಾಗರಿಕರನ್ನು ಬಲಿಕೊಡುವುದು, ಖಾಲಿ ಹೊಟ್ಟೆಯಲ್ಲಿರಿಸಿ ಕೊಲ್ಲುವುದು ಯುದ್ದಾಪರಾಧವೆಂದು ಪರಿಗಣಿಸುವ ನಿರ್ಣಯವನ್ನು ಸಂಪೂರ್ಣವಾಗಿ ಕೈಬಿಟ್ಟವು.
2021 ಇಥಿಯೋಪಿಯಾ ದಂಗೆ : ಇಥಿಯೋಪಿಯಾ ಈಶಾನ್ಯ ಆಫ್ರಿಕಾದ ಪುಟ್ಟ ರಾಷ್ಟ್ರ. ಮೂರು ಮಿಲಿಯನ್ ವರ್ಷಗಳ ಹಿಂದಿನ ಮನುಷ್ಯ ಜೀವಿತದ ಕುರುಹುಗಳು ದೊರೆತಿರುವ. ಆಳವಾದ ಐತಿಹಾಸಿಕ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ರಾಷ್ಟ್ರ ಕೊನೆಯಿರದ ದಂಗೆಗಳಿಂದ ನಿತ್ಯ ನರಕ ಅನುಭವಿಸುತ್ತಿದೆ. 2021ರಲ್ಲಿ ಟಿಗ್ರೆಯ್ Tigray ಪೀಪಲ್ ಲಿಬರೇಶನ್ ಫ್ರಂಟ್ ಸಂಘಟನೆ ಇಥಿಯೋಪಿಯಾ ಸರ್ಕಾರದ ನಡುವೆ ಸಿವಿಲ್ ವಾರ್ ಶುರುವಾಗುತ್ತದೆ. ಈ ದಂಗೆಯ ಸಮಯದಲ್ಲಿ ಟಿಗ್ರೇಯ್ ಪ್ರಾಂತ್ಯಕ್ಕೆ ಆಹಾರ, ಔಷಧ ಮತ್ತು ಇಂಧನದ ಸರಬರಾಜನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಯಿತು. ಇದನ್ನು ಅಂತಾರಾಷ್ಟ್ರೀಯ ಸಮುದಾಯವು “ಮಾನವ ನಿರ್ಮಿತ ಕ್ಷಾಮ” ಎಂದು ಕರೆದಿದೆ. ಸುಮಾರು 6 ಲಕ್ಷದಿಂದ 8 ಲಕ್ಷ ಜನರು ಹಸಿವು ಮತ್ತು ಚಿಕಿತ್ಸೆಯ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ>ಸುಡಾನ್ ನರಮೇಧ | ನೈಲ್ ನದಿಯ ನಾಡಿನ ಅಂತರ್ಯುದ್ಧದಲ್ಲಿ ಅಸ್ತ್ರವಾದಳೇ ಹೆಣ್ಣು?
2025 ಸುಡಾನ್ ಸಂಘರ್ಷ: ಸುಡಾನ್ ಸತತ 4 ವರ್ಷಗಳಿಂದ ಸಂಘರ್ಷದ ಭೀಕರತೆ ಎದುರಿಸುತ್ತಿದೆ. ಬರಗಾಲದಿಂದ ತತ್ತರಿಸಿರುವ ಪ್ರಾಂತ್ಯಕ್ಕೆ ವಿಶ್ವಸಂಸ್ಥೆ 2025ರಲ್ಲಿ ಆಹಾರ ಸರಬರಾಜು ಮಾಡಲು ಮುಂದಾಯಿತು. ಧಾನ್ಯ ಹೊತ್ತೊಯ್ಯುತ್ತಿದ್ದ ಟ್ರಕ್ ಮೇಲೆರೆಗಿದ ದಂಗೆಕೋರರು ಹಸಿದವರ ಬಟ್ಟಲು ಸೇರಬೇಕಿದ್ದ ಆಹಾರ ಧಾನ್ಯಗಳನ್ನು ಸುಟ್ಟರು.
ಇಲ್ಲಿಯವರೆಗಿನ ಸಂಘರ್ಷದಲ್ಲಿ ಸುಡಾನ್ನ 21ಮಿಲಿಯನ್ ಜನರು ದಿನನಿತ್ಯ ಆಹಾರ ಸಿಗದೆ ಹಸಿವಿನಿಂದ ಬಳಲುತ್ತಿದ್ದಾರೆ. 4.2 ಮಿಲಿಯನ್ ಮಕ್ಕಳು ಅಪೌಷ್ಟಿಕತೆಗೆ ಗುರಿಯಾಗಿದ್ದಾರೆ. ಮೂಳೆಗಂಟಿದ ಚರ್ಮ ಅಸ್ಥಿ ಬಿಟ್ಟ ದೇಹ ಅಪೌಷ್ಟಿಕತೆಯಿಂದ ಉಬ್ಬಿದ ಹೊಟ್ಟೆ. ತಲೆಯ ಭಾರ ಹೊರಲಾಗದ ಬಾಗಿದ ಕಾಲ್ಗಳು ಇದು ಸುಡಾನಿನ ಕಂದಮ್ಮಗಳ ದೇಹ ಸ್ಥಿತಿ.
ಎಸ್ ಆರ್ ಎಫ್ ಹಾಗೂ ಎಸ್ ಎ ಎಫ್ ಎರಡೂ ಬಣಗಳು ಹಸಿವನ್ನು ಕಲಹದ ಅಸ್ತ್ರವಾಗಿಸಿವೆ. ಅಧಿಕಾರದ ಪೊರೆ ಅಡ್ಡ ಬಂದ ಇವರ ಕಣ್ಣಿಗೆ ಹಸಿವು, ಸಾವು, ಎಳೆಯ ಜೀವಗಳ ನಿಟ್ಟುಸಿರು ಕಿಂಚಿತ್ತೂ ಕರುಣೆ ಹುಟ್ಟಿಸಲಿಲ್ಲ. ಈಗಲೂ ದಂಗೆ ಮುಂದುವರೆಯತ್ತಲೇ ಇದೆ. ನಿಲ್ಲದ ಹಸಿವಿನ ಕೂಗಿಗೆ ವಿಶ್ವವೇ ಕಿವುಡಾಗಿದೆ. ಒಂದೆಡೆ ತಿನ್ನಲು ಅನ್ನವಿಲ್ಲ, ಕುಡಿಯಲು ಶುದ್ಧ ನೀರು ದೊರೆಯದ ಪ್ರಾಂತ್ಯದಲ್ಲಿ ಕಾಲರ, ಮಲೇರಿಯಾ ತಾಂಡವವಾಡುತ್ತಿದೆ. ಚಿಕಿತ್ಸೆಗೆ ಬೇಕಾದ ನೆರವು ಸಿಗದೆ ನಿತ್ಯ ಸಾವಿರಾರು ಮಕ್ಕಳು ಅಸುನೀಗುತ್ತಿದ್ದಾರೆ.

ಗಾಜಾ ಸಂಘರ್ಷ: ಇಸ್ರೇಲ್ ಗಾಜಾದಲ್ಲಿ ನಡೆಸುತ್ತಿರುವ ನರಬಲಿ ಅತ್ಯಂತ ಕ್ರೂರ, ಮನುಷ್ಯ ವಿರೋಧಿ ಎಂದು ವಿಶ್ವಸಂಸ್ಥೆ ಹೇಳಿಕೆ ನೀಡಿದೆ. ಇತ್ತೀಚೆಗೆ ವಿಶ್ವಂಸ್ಥೆಯದು ಹೇಳಿಕೆ ನೀಡುವ. ದತ್ತಾಂಶ ಸಂಗ್ರಹಿಸುವ ಕೆಲಸಕ್ಕೆ ಮಾತ್ರ ಸೀಮಿತವಾಗಿರುವುದು ಎಲ್ಲರೂ ಬಲ್ಲ ಸತ್ಯ. 2023ರಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಒಂದಂಕಿಯಲ್ಲಿದ್ದ ಗಾಜಾದಲ್ಲಿ 2024ರ ವೇಳೆಗೆ 49, 2025ರಲ್ಲಿ 422 ಜನ ಆಹಾರ ಸಿಗದೆ ಪ್ರಾಣ ಬಿಟ್ಟಿದ್ದಾರೆ.
ಇಸ್ರೇಲ್ ಅನ್ನ, ನೀರು ಕಸಿಯುವುದನ್ನು ಪ್ಯಾಲೆಸ್ತೇನಿಯರ ಮೇಲಿನ ಆಕ್ರಮಣದ ಅಸ್ತ್ರವಾಗಿ ಬಳಕೆ ಮಾಡುತ್ತಿದೆ. ಇಸ್ರೇಲ್ ಪ್ಯಾಲೆಸ್ತೀನ್ ಯುದ್ಧಕ್ಕೂ ಮುನ್ನ ಪ್ರತಿದಿನ ದವಸ ಧಾನ್ಯ ಹೊತ್ತ 500 ಟ್ರಕ್ಗಳು ಗಾಜಾದತ್ತ ಪ್ರಯಾಣಿಸುತ್ತಿದ್ದವು. ಸಂಘರ್ಷ ಶುರುವಾದ ನಂತರ ಕೇವಲ 19 ಟ್ರಕ್ಗಳು ಆಹಾರ ಪೂರೈಕೆ ಮಾಡುತ್ತಿವೆ. ಅಂದರೆ ಸುಮಾರು 96% ಆಹಾರ ಇಸ್ರೇಲ್ ಕಸಿದಿದೆ.
ಕುಡಿವ ನೀರಿಗೂ ಗಾಜಾ ಹಾಹಾಕಾರ
ಇಸ್ರೇಲ್ ಗಾಜಾ ಪಟ್ಟಿಗೆ ಹರಿಸುತ್ತಿದ್ದ ನೀರಿನ ಪ್ರಮಾಣ ತಗ್ಗಿಸಿ ಕೀಳುಮಟ್ಟದ ಯುದ್ಧ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕದನ ವಿರಾಮ ಘೋಷಣೆಯಾಗಿ 100 ದಿನಗಳು ಕಳೆದವು. ಇನ್ನೂ ಆಹಾರ ಮತ್ತು ನೀರಿನ ಮೇಲಿನ ನಿರ್ಬಂಧವನ್ನು ಇಸ್ರೇಲ್ ಹಿಂಪಡೆಯದೆ ಹಗೆ ಸಾಧಿಸುತ್ತಿದೆ. ನಿತ್ಯವೂ ಒಬ್ಬ ವ್ಯಕ್ತಿಗೆ 84 ಲೀಟರ್ ನೀರು ಬಳಕೆಗೆ ಲಭ್ಯವಾಗುತ್ತಿದ್ದ ಗಾಜಾದಲ್ಲಿ ಈಗ ಒಬ್ಬ ವ್ಯಕ್ತಿಗೆ ಕೇವಲ ಮೂರು ಲೀಟರ್ ನೀರು ಪೂರೈಕೆಯಾಗುತ್ತಿದೆ. ಕೆಲವೊಮ್ಮೆ ಹನಿ ನೀರಿಗೂ ಪರದಾಟ ನಡೆಸಬೇಕಾದ ಸ್ಥಿತಿಯಿಂದ ಇಲ್ಲಿನ ಮಕ್ಕಳು, ಮಹಿಳೆಯರು, ವೃದ್ಧರು ಪರದಾಡುತ್ತಿದ್ದಾರೆ.
2025ರಲ್ಲಿ ಇಸ್ರೇಲ್ ಗಾಜಾದ 90% ಕೃಷಿ ಭೂಮಿಯನ್ನು ದ್ವಂಸವಾಗಿಸಿತ್ತು. 2500 ಕೋಳಿ ಫಾರ್ಮ್ಗಳನ್ನು ದಾಳಿಯ ಗುರಿಯಾಗಿಸಿತ್ತು. ಒಟ್ಟು 2 ಮಿಲಿಯನ್ ಜನರ ಆಹಾರ ವಿನಾಶಗೊಳಿಸಿತ್ತು ಇಸ್ರೇಲ್. ಕಾರಣ ಮತ್ತದೇ ಜನಾಂಗೀಯ ದ್ವೇಷ.
ಸದ್ಯಕ್ಕಂತೂ ಬಹಳವೇ ಯಾಂತ್ರಿಕವಾಗಿ ಇಸ್ರೇಲ್ ಕದನ ವಿರಾಮ ಘೋಷಿಸಿದೆ. ಆದರೆ ಪ್ಯಾಲೆಸ್ತೇನಿಯರ ಮೇಲೆ ನಡೆದ ಆಕ್ರಮಣದ ಕಲೆಗಳು ಮಾಸುವಂಥದ್ದಲ್ಲ. ಅಪೌಷ್ಟಿಕತೆಯಿಂದ ಪೀಳಿಗೆಗೆ ಪೀಳಿಗೆಯೇ ಆರೋಗ್ಯ ಸಮಸ್ಯೆಗೆ, ಮಾನಸಿಕ ದೈಹಿಕ ದೌರ್ಬಲ್ಯಕ್ಕೆ ತುತ್ತಾಗಲಿದೆ.
ಇದನ್ನೂ ಓದಿ>ಗಾಜಾಪಟ್ಟಿಯಲ್ಲಿ ಮುಗ್ಧ ಮಕ್ಕಳ ಮಾರಣಹೋಮ: ದೇವರು ಎಲ್ಲಿದ್ದಾನೆ?

ಆಧುನಿಕ ಜಗತ್ತು ತಂತ್ರಜ್ಞಾನ ಮತ್ತು ನಾಗರಿಕತೆಯಲ್ಲಿ ಎಷ್ಟೇ ಮುಂದುವರಿದಿದ್ದರೂ, ಹಸಿವನ್ನು ಯುದ್ಧದ ಅಸ್ತ್ರವನ್ನಾಗಿ ಬಳಸುತ್ತಿರುವುದು ಮನುಕುಲದ ಅತಿದೊಡ್ಡ ಸೋಲಾಗಿದೆ. ಅಧಿಕಾರದ ಹಪಾಹಪಿಗೆ ಮುಗ್ಧ ಮಕ್ಕಳು ಮತ್ತು ಮಹಿಳೆಯರ ಅನ್ನ-ನೀರನ್ನು ಕಸಿದುಕೊಳ್ಳುವ ಈ ಕ್ರೌರ್ಯವು ಕೇವಲ ಒಂದು ದೇಶದ ಸಮಸ್ಯೆಯಲ್ಲ, ಇದು ಇಡೀ ಜಗತ್ತಿನ ಸಾಕ್ಷಿಪ್ರಜ್ಞೆಗೆ ಎದುರಾಗಿರುವ ಸವಾಲು. ವಿಶ್ವಸಂಸ್ಥೆಯ ನಿರ್ಣಯಗಳು ಕೇವಲ ಕಾಗದದ ಮೇಲಿನ ಅಕ್ಷರಗಳಾಗದೆ, ಅಂತಾರಾಷ್ಟ್ರೀಯ ಸಮುದಾಯವು ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಮಾನವೀಯತೆಗೆ ಮೊದಲ ಆದ್ಯತೆ ನೀಡಬೇಕಿದೆ. ಹಸಿವಿನಿಂದ ಮುಕ್ತವಾದ ಜಗತ್ತನ್ನು ನಿರ್ಮಿಸುವುದು ಕೇವಲ ಆಶಯವಾಗದೆ, ಅದು ಪ್ರತಿ ರಾಷ್ಟ್ರದ ಅನಿವಾರ್ಯ ಕರ್ತವ್ಯವಾಗಬೇಕಿದೆ. ಇಲ್ಲದಿದ್ದರೆ, ಇತಿಹಾಸವು ನಮ್ಮನ್ನು ಕ್ರೂರಿಗಳೆಂದು ಮಾತ್ರವಲ್ಲದೆ, ಹಸಿವಿನ ಆರ್ತನಾದಕ್ಕೆ ಕಿವುಡಾದ ಅಸಹಾಯಕ ನಾಗರಿಕರೆಂದು ಗುರುತಿಸುವುದು ಖಚಿತ.
ಪಂಪ ಭಾರತದ ʼಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ʼ ಎಂಬ ಸಾಲಿನಂತೆ ನಾಳೆ ನಮ್ಮ ಸರದಿಯೂ ಬರಬಹುದು. ಆಗ ಹೀಗೆಯೇ ಪರ ವಿರೋಧದ ಬಣ ಕಟ್ಟಿ ಯುದ್ಧವನ್ನು ವಿಜೃಂಭಿಸುತ್ತೇವೆಯೇ?





