2018ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‘ಕೊಲೆ ಆರೋಪಿ’ ಎಂದು ಕರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಿಂದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.
ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಶುಭಂ ವರ್ಮಾ ಅವರು ಈ ತೀರ್ಪು ಪ್ರಕಟಿಸಿದ್ದು, ತೀರ್ಪು ಹೊರಬೀಳುವ ವೇಳೆ ರಾಹುಲ್ ಗಾಂಧಿ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಿದ್ದರು. ರಾಹುಲ್ ಅವರು ಮಾಡಿದ್ದ ಟೀಕೆಯು ಮಾನನಷ್ಟ ಉಂಟುಮಾಡುವ ಸ್ವರೂಪವನ್ನು ಹೊಂದಿಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ಬಿಜೆಪಿ ಅಧ್ಯಕ್ಷರೊಬ್ಬರು ಕೊಲೆ ಆರೋಪಿ ಎಂಬುದನ್ನು ಭಾರತದ ಜನರು ಮರೆತಿದ್ದಾರೆ. ಇದು ಸತ್ಯ. ಪ್ರಾಮಾಣಿಕತೆ ಮತ್ತು ಸಭ್ಯತೆಯ ಬಗ್ಗೆ ಮಾತನಾಡುವ ಪಕ್ಷವು, ಕೊಲೆ ಆರೋಪ ಹೊತ್ತಿರುವ ವ್ಯಕ್ತಿಯನ್ನು ತನ್ನ ಅಧ್ಯಕ್ಷರನ್ನಾಗಿ ಮಾಡಿಕೊಂಡಿದೆ” ಎಂದು ಟೀಕಿಸಿದ್ದರು. ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣವನ್ನು ಉಲ್ಲೇಖಿಸಿ ರಾಹುಲ್ ಈ ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಆಕ್ಷೇಪಿಸಿ ಬಿಜೆಪಿ ಮುಖಂಡ ವಿನಯ್ ಮಿಶ್ರಾ ಎಂಬುವವರು 2018ರಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಪರವಾಗಿ ಹಿರಿಯ ವಕೀಲ ಆರ್.ಎಸ್. ಚೀಮಾ ಹಾಗೂ ವಕೀಲರಾದ ಕಾಶಿ ಶುಕ್ಲಾ, ತರನ್ನುಮ್ ಚೀಮಾ, ಪ್ರಸನ್ನ ಎಸ್. ಮತ್ತು ಆಕಾಶ್ ಸಿಂಗ್ ವಾದ ಮಂಡಿಸಿದ್ದರು.
2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದಿದ್ದ ಚುನಾವಣಾ ರ್ಯಾಲಿಯಲ್ಲಿ “ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮವೇಕೆ ಇರುತ್ತದೆ” ಎಂದು ಹೇಳಿಕೆ ನೀಡಿದ್ದಕ್ಕಾಗಿ 2023ರಲ್ಲಿ ಗುಜರಾತ್ ನ್ಯಾಯಾಲಯವೊಂದು ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯ ಬೆನ್ನಲ್ಲೇ ವಯನಾಡು ಸಂಸದರಾಗಿದ್ದ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಈ ಶಿಕ್ಷೆಗೆ ತಡೆಯಾಜ್ಞೆ ನೀಡಿದ ಪರಿಣಾಮವಾಗಿ ಅವರ ಸಂಸತ್ ಸದಸ್ಯತ್ವ ಮರುಸ್ಥಾಪನೆಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.




