ದೆಹಲಿ SIR | ಮತದಾನಕ್ಕೂ ಮುನ್ನವೇ ಮತದಾರರೇ ಕಣ್ಮರೆ: 70ರಲ್ಲಿ 68 ಕ್ಷೇತ್ರಗಳಲ್ಲಿ ಭಾರೀ ಡಿಲೀಟ್‌

Date:

ಚುನಾವಣೆಯಲ್ಲಿ ಯಾರು ಗೆದ್ದರು, ಯಾರು ಸೋತರು ಎಂಬುದನ್ನು ಮತದಾನದ ಬಳಿಕ ಎಣಿಕೆಯ ಯಂತ್ರ ನಿರ್ಧರಿಸುತ್ತದೆ. ಆದರೆ, ಮತದಾನಕ್ಕೂ ಮುನ್ನವೇ ಲಕ್ಷಾಂತರ ನಾಗರಿಕರ ಹೆಸರು ಮತಪಟ್ಟಿಯಿಂದ ಹೊರಗುಳಿದಿದ್ದರೆ, ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದೆ, ಫಲಿತಾಂಶ ಮತದಾರರ ನಿರ್ಧಾರದಂತೆ ಬಂದಿದೆ ಎನ್ನಲು ಸಾಧ್ಯವೇ? ಆದರೆ, ಅದನ್ನು ಸಾಧ್ಯವಾಗಿಲು ಹೊರಟಿದೆ ಚುನಾವಣಾ ಆಯೋಗ. ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕೇವಲ ಪರಿಶೀಲನೆ ಮಾತ್ರವಲ್ಲ, ಪ್ರಜಾತಂತ್ರವನ್ನೇ ಬುಡಮೇಲು ಮಾಡುವ ಪ್ರಕ್ರಿಯೆ ಎಂಬುದನ್ನು ಈಗ ದೆಹಲಿಯ ಅಂಕಿಅಂಶಗಳು ತೆರೆದಿಟ್ಟಿವೆ.

- Advertisement -

‘ವೋಟರ್ ಅಧಿಕಾರ ಮಂಚ್’ ಬಿಡುಗಡೆ ಮಾಡಿರುವ ಅಧ್ಯಯನ ವರದಿ ಪ್ರಕಾರ, ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ, ಬರೋಬ್ಬರಿ 68 ಕ್ಷೇತ್ರಗಳಲ್ಲಿ 2025ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಸಂಖ್ಯೆಯ ಮತದಾರರನ್ನು SIR ಪ್ರಕ್ರಿಯೆಯಲ್ಲಿ ಅಳಿಸಿಹಾಕಲಾಗಿದೆ. ಅಂದರೆ, ದೆಹಲಿಯ ಬಹುತೇಕ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣಾ ಫಲಿತಾಂಶವನ್ನು ತೀರ್ಮಾನಿಸಿದ ಮತಗಳ ಅಂತರಕ್ಕಿಂತ ಹೆಚ್ಚಿನ ಜನರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಭಾರತ ಚುನಾವಣಾ ಆಯೋಗ ಮತ್ತು ದೆಹಲಿ ಮುಖ್ಯ ಚುನಾವಣಾಧಿಕಾರಿ ಪ್ರಕಟಿಸಿದ ದಾಖಲೆಗಳು ಮತ್ತು ಸಬರ್ ಇನ್‌ಸ್ಟಿಟ್ಯೂಟ್‌ನ ದತ್ತಾಂಶಗಳನ್ನು ಆಧರಿಸಿ ‘ವೋಟರ್ ಅಧಿಕಾರ ಮಂಚ್’ ಈ ಅಧ್ಯಯನ ನಡೆಸಿದೆ. ಅದರ ಪ್ರಕಾರ, 2025ರ ಜನವರಿ 31ರ ವೇಳೆಗೆ (ದೆಹಲಿ ವಿಧಾನಸಭೆ ಚುನಾವಣೆ ನಡೆದ ಸಂದರ್ಭ) ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯಲ್ಲಿ 1,56,14,000 ಮಂದಿ ಇದ್ದರು. ಮಾತ್ರವಲ್ಲದೆ, 2025ರ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ ದೆಹಲಿಯ ಎಲ್ಲ 70 ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಸಂಖ್ಯೆಯಲ್ಲಿ 1,00,613ರಷ್ಟು ಏರಿಕೆಯಾಗಿತ್ತು. ಆದರೆ, 2026ರ ಜೂನ್ 30ರಂದು SIR ಪ್ರಾರಂಭವಾಗುವ ವೇಳೆಗೆ ಈ ಸಂಖ್ಯೆ 1,45,10,299ಕ್ಕೆ ಕುಸಿದಿತ್ತು. ಅಂದರೆ, SIR ಆರಂಭವಾಗುವುದಕ್ಕೂ ಮುನ್ನವೇ 11,70,885 ಹೆಸರುಗಳು ಪಟ್ಟಿಯಿಂದ ಕಣ್ಮರೆಯಾಗಿದ್ದವು ಎಂಬುದನ್ನು ವರದಿ ಕಂಡುಹಿಡಿದಿದೆ.

ಆದಾಗ್ಯೂ, 2026ರ ಜನವರಿಯಿಂದ ಜೂನ್‌ವರೆಗಿನ ಕೇವಲ ಆರು ತಿಂಗಳಲ್ಲಿ ಈ 11.7 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳು ಯಾಕಾಗಿ ಡಿಲೀಟ್ ಆದವು ಎಂಬುದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಚುನಾವಣಾ ಆಯೋಗ ಮಾಹಿತಿಯನ್ನೂ ನೀಡಿಲ್ಲ.

2026ರ ಏಪ್ರಿಲ್ ತಿಂಗಳೊಂದರಲ್ಲೇ 3,39,509 ಮತದಾರರ ಹೆಸರುಗಳನ್ನು ಅಳಿಸಲಾಗಿತ್ತು ಎಂದು ಅಧ್ಯಯನ ಹೇಳುತ್ತದೆ. ಅಷ್ಟೇ ಅಲ್ಲ, 2025ರ ಜುಲೈಯಿಂದ ಡಿಸೆಂಬರ್‌ವರೆಗೆ ಒಟ್ಟಾರೆ ನಡೆದ ಅಳಿಸಿಕೆಗಿಂತಲೂ 2026ರ ಏಪ್ರಿಲ್‌ – ಒಂದೇ ತಿಂಗಳಲ್ಲಿನ ಅಳಿಸಿಕೆ ಮೂರು ಪಟ್ಟು ಹೆಚ್ಚಾಗಿದೆ. ಹೀಗಿರುವಾಗ SIR ಆರಂಭದ ಎರಡು-ಮೂರು ತಿಂಗಳ ಮೊದಲು ನಡೆದಿರುವ ಈ ‘ಡಿಲೀಷನ್‌’ಗೆ ಸಮಗ್ರ ವಿವರಣೆ ಅಗತ್ಯವೆಂದು ವರದಿ ಒತ್ತಾಯಿಸುತ್ತದೆ.

SIR ಆರಂಭವಾದ ನಂತರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಆಯೋಗವು 47,27,762 ಮತದಾರರನ್ನು ‘Absent, Shifted, Dead or Duplicate’ (ASDD)  ಎಂಬ ವರ್ಗದಲ್ಲಿ ಗುರುತಿಸಿದೆ. ಅಂದರೆ, ಒಟ್ಟು ಮತದಾರರಲ್ಲಿ ಬರೋಬ್ಬರಿ 32.8% ಅರ್ಥಾಥ್ ಪ್ರತಿ ಮೂವರಲ್ಲಿ ಒಬ್ಬರನ್ನು ಎಎಸ್‌ಡಿಡಿ ಅಡಿಯಲ್ಲಿ ನೇರವಾಗಿ ಡಿಲೀಟ್ ಮಾಡಲು ಪಟ್ಟಿ ಮಾಡಲಾಗಿದೆ.

ಇವರಲ್ಲಿ 31,59,223 ಮಂದಿಯನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. 11,73,552 ಮಂದಿ ಗೈರುಹಾಜರಾದವರು, 2,82,412 ಮಂದಿ ಮೃತಪಟ್ಟವರು ಹಾಗೂ 1,41,535 ಮಂದಿ ನಕಲಿ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿರುವವರು ಎಂದು ವರ್ಗೀಕರಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಮತದಾರರನ್ನು ಒಂದೇ ಪ್ರಕ್ರಿಯೆಯಲ್ಲಿ ‘ಸಂದೇಹಾಸ್ಪದ’ ಅಥವಾ ‘ಹೊರಗುಳಿಯುವ’ ವರ್ಗ ಸೇರಿಸಿ, ಡಿಲೀಟ್‌ ಮಾಡಲಾಗುತ್ತಿದೆ. ಆದರೆ, ಗೈರಾದವರು ಮತ್ತು ಸ್ಥಳಾಂತರಗೊಂಡವರು ಎಲ್ಲಿದ್ದಾರೆ, ಅವರು ಮತ್ತೊಂದೆಡೆ ನೋಂದಣಿಯಾಗಿದ್ದಾರೆ ಎಂಬುದನ್ನೂ ಆಯೋಗ ಪರಿಶೀಲಿಸಿಲ್ಲ. ಬದಲಾಗಿ, ಎಲ್ಲರನ್ನೂ ಡಿಲೀಟ್ ಮಾಡಲು ಪಟ್ಟಿ ಮಾಡಿದೆ.

ಕ್ಷೇತ್ರವಾರು ಅಂಕಿಅಂಶಗಳು ಇನ್ನಷ್ಟು ಆತಂಕಕಾರಿಯಾಗಿವೆ. ಹತ್ತುಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮತಪಟ್ಟಿಯಿಂದ ಹೊರಹಾಕಲಾಗಿರುವ ಮತದಾರರ ಪ್ರಮಾಣ 40% ಮೀರಿದೆ. ತುಘಲಕಾಬಾದ್‌ನಲ್ಲಿ 47.83% ಮತದಾರರು ಹೊರಗುಳಿದಿದ್ದು, ಇದು ದೆಹಲಿಯಲ್ಲೇ ಅತಿ ಹೆಚ್ಚು ಮತದಾರರು ಡಿಲೀಟ್‌ ಆಗಿರುವ ಕ್ಷೇತ್ರ. ಓಖ್ಲಾದಲ್ಲಿ 45.16% ಮತ್ತು ಆರ್.ಕೆ. ಪುರಂನಲ್ಲಿ 44.36%ರಷ್ಟು ಮತದಾರರನ್ನು ಹೊರಹಾಕಲಾಗಿದೆ. ನಂತರದಲ್ಲಿ, ಕಸ್ತೂರಬಾ ನಗರ ಮತ್ತು ಕಲ್ಕಾಜಿ ಕೂಡ ಹೆಚ್ಚು ಮತದಾರರನ್ನು ಹೊರಹಾಕಲ್ಪಟ್ಟ ಕ್ಷೇತ್ರಗಳಾಗಿವೆ.

ಇನ್ನೂ ಗಂಭೀರವಾದ ಮತ್ತೊಂದು ಅಂಶ; ಲಿಂಗತ್ವ ಅಲ್ಪಸಂಖ್ಯಾತರದ್ದು. 2025ರ ಫೆಬ್ರವರಿ ಚುನಾವಣೆಗೆ ಬಳಸಿದ ಮತಪಟ್ಟಿಯಲ್ಲಿ 1,267 ಮಂದಿ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದರು. ಇವರಲ್ಲಿ 577 ಮಂದಿಯ ಹೆಸರುಗಳನ್ನು ಈಗ ಅಳಿಸಲಾಗಿದೆ ಎಂದು ವರದಿ ಹೇಳುತ್ತದೆ. ಅಂದರೆ 45.5%ರಷ್ಟು ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಪಟ್ಟಿಯಿಂದ ಹೊರಗಿದ್ದಾರೆ.

ಅಂಕಿಅಂಶಗಳಿಗಿಂತಲೂ ಹೆಚ್ಚು ಗಂಭೀರವಾದ ಸಂಗತಿ ಮಂಗೋಲ್ಪುರಿಯ Y ಬ್ಲಾಕ್‌ನಲ್ಲಿ ನಡೆದ ಮನೆಮನೆ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ 1,516 ಮನೆಗಳ ಪೈಕಿ 1,448 ಮನೆಗಳನ್ನು ಸುಮಾರು 40 ಸ್ವಯಂಸೇವಕರು ಪರಿಶೀಲಿಸಿದ್ದರು. ಆ ಪರಿಶೀಲನೆಯಲ್ಲಿ ತಮ್ಮ ವಿಳಾಸದಲ್ಲೇ ವಾಸವಾಗಿದ್ದ 450ಕ್ಕೂ ಹೆಚ್ಚು ಮತದಾರರನ್ನು ASDD ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬುದು ಕಂಡುಬಂದಿದೆ. ಅಲ್ಲದೆ, 500ಕ್ಕೂ ಹೆಚ್ಚು ಮತದಾರರು ಅದೇ ವಿಳಾಸದಲ್ಲಿ ವಾಸವಾಗಿದ್ದರೂ, ಅವರ ಹೆಸರುಗಳು ಕರಡು ಮತಪಟ್ಟಿಯಲ್ಲಾಗಲೀ, ASDD ಪಟ್ಟಿಯಲ್ಲಾಗಲಿ ಇಲ್ಲವೇ ಇಲ್ಲ ಎಂದು ವರದಿ ಹೇಳುತ್ತದೆ. ಅಂದರೆ, ಅವರು ಮತಪಟ್ಟಿಯಿಂದ ಯಾವ ಹಂತದಲ್ಲಿ, ಯಾವ ಕಾರಣಕ್ಕೆ ಹೊರಬಿದ್ದರು ಎಂಬುದಕ್ಕೆ ಸ್ಪಷ್ಟತೆಯೇ ಇಲ್ಲ.

ಈ ಹಿನ್ನೆಲೆಯಲ್ಲೇ, ಚಿಂತಕ ಯೋಗೇಂದ್ರ ಯಾದವ್ ಅವರು ದೆಹಲಿಯಲ್ಲಿ ನಡೆದ ಸಾರ್ವಜನಿಕ ವಿಚಾರಣೆ ವೇಳೆ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದೇಶಾದ್ಯಂತ ಮತಪಟ್ಟಿಯಲ್ಲಿ ಇರಬೇಕಾದ ಸುಮಾರು 15 ಕೋಟಿ ಅರ್ಹ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ಸುಮಾರು 99 ಕೋಟಿ ವಯಸ್ಕರು ಮತ್ತು 98 ಕೋಟಿ ಮತದಾರರು ಇದ್ದರು; ಆದರೆ SIR ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ 103 ಕೋಟಿ ವಯಸ್ಕರಲ್ಲಿ ಕೇವಲ 88 ಕೋಟಿ ಮತದಾರರು ಉಳಿದಿದ್ದಾರೆ ಎಂಬ ವಿಶ್ಲೇಷಣಾ ಅಂಕಿಅಂಶಗಳನ್ನು ಮುಂದಿಟ್ಟಿದ್ದಾರೆ.

“ಇದು ಸಹಜವಾಗಿ ಸಂಭವಿಸುವ ಸಂಗತಿ ಅಲ್ಲ; ಯೋಜಿತ ಕ್ರಮವಿಲ್ಲದೆ ಇಷ್ಟು ದೊಡ್ಡ ಪ್ರಮಾಣದ ಅಳಿಕೆ ಸಾಧ್ಯವಿಲ್ಲ. SIR ಪ್ರಕ್ರಿಯೆ ಪ್ರಜಾಪ್ರಭುತ್ವದ ಮೇಲೆ ವಂಚನೆ ಮತ್ತು ಮತದಾನದ ಹಕ್ಕಿನಿಂದ ಜನರನ್ನು ವಂಚಿಸುವ ವ್ಯವಸ್ಥೆಯಾಗಿದೆ. ವಿಶೇಷವಾಗಿ, SIR ಆರಂಭಕ್ಕೂ ಮೊದಲೇ ಸಂಭವಿಸಿದ ಬೃಹತ್ ಅಳಿಸುವಿಕೆಯನ್ನು ಕ್ರಿ’ಮಿನಲ್ ಸಂಚು’ ಆಯಾಮದಲ್ಲಿ ತನಿಖೆಯಾಗಬೇಕು” ಎಂದು ಯೋಗೇಂದ್ರ ಯಾದವ್ ಒತ್ತಾಯಿಸಿದ್ದಾರೆ.

ಯೋಗೇಂದ್ರ ಯಾದವ್ ಮತ್ತೊಂದು ಗಂಭೀರ ಪ್ರಶ್ನೆಯನ್ನೂ ಎತ್ತಿದ್ದಾರೆ. “ಸಾಮಾನ್ಯವಾಗಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬೇಕಾದರೆ ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡುವುದು, ಆಕ್ಷೇಪ ಅಥವಾ ಉತ್ತರಕ್ಕೆ ಅವಕಾಶ ನೀಡುವುದು, ವಿಚಾರಣೆ ನಡೆಸುವುದು ಹಾಗೂ ಲಿಖಿತ ಆದೇಶ ನೀಡುವುದು ಅಗತ್ಯ. ಹಾಗಿದ್ದರೆ SIR ಆರಂಭಕ್ಕೂ ಮೊದಲೇ ಅಳಿಸಲಾದ 11.7 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಅಳಿಸುವಾಗ ಈ ಕಾನೂನುಬದ್ಧ ಕ್ರಮಗಳನ್ನು ಪಾಲಿಸಲಾಗಿದೆಯೇ” ಎಂದು ಪ್ರಶ್ನಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಅಡಚಣೆಗಳ ನಡುವೆ ಉದ್ಯೋಗ ಸೃಷ್ಟಿಯೋ, ದಾಖಲೆಯ ನಿರುದ್ಯೋಗವೋ: ಮೋದಿ ಹೇಳಿಕೆಯ ಹಿಂದಿನ ನಿಜಾಂಶವೇನು?

ಇಲ್ಲಿ ಪ್ರಮುಖವಾದದ್ದು; ಹೊರಗುಳಿದ ಮತದಾರರ ಸಂಖ್ಯೆ ಮತ್ತು ಅಭ್ಯರ್ಥಿಯ ಗೆಲುವಿನ ಅಂತರ. 70ರಲ್ಲಿ 68 ಕ್ಷೇತ್ರಗಳಲ್ಲಿ ಹೊರಗುಳಿದವರ ಸಂಖ್ಯೆ ಗೆಲುವಿನ ಅಂತರಕ್ಕಿಂತ ಹೆಚ್ಚಿರುವುದು ಮತಪಟ್ಟಿಯ ನಿಖರತೆ ಮತ್ತು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಪರಿಶೀಲಿಸಬೇಕಾದ ಅಗತ್ಯವಿದೆ ಎಂಬುದನ್ನು ‘ವೋಟರ್ ಅಧಿಕಾರ ಮಂಚ್’ ವರದಿ ಒತ್ತಿ ಹೇಳುತ್ತದೆ.

ಈ ಹಿನ್ನೆಲೆಯಲ್ಲಿ, ವೋಟರ್ ಅಧಿಕಾರ ಮಂಚ್ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ತಪ್ಪಾಗಿ ಗೈರು, ಸ್ಥಳಾಂತರ, ಮೃತ ಹಾಗೂ ನಕಲು (duplicate) ಎಂದು ಗುರುತಿಸಲಾದ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು; ಹಕ್ಕು ಮತ್ತು ಆಕ್ಷೇಪ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು; ಯಾವುದೇ ಹೆಸರು ಅಳಿಸುವ ಮೊದಲು ವೈಯಕ್ತಿಕ ನೋಟಿಸ್ ಮತ್ತು ವಿಚಾರಣೆಯ ಅವಕಾಶ ಕಡ್ಡಾಯವಾಗಬೇಕು. ಮಾತ್ರವಲ್ಲದೆ, ಕ್ಷೇತ್ರವಾರು ASDD ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಬಡಾವಣೆಗಳು, ಜೋಪಡಿಪಟ್ಟಿಗಳು, ಪುನರ್ವಸತಿ ಕಾಲೋನಿಗಳು, ಅನಧಿಕೃತ ವಸತಿಪ್ರದೇಶಗಳು ಹಾಗೂ ಆಶ್ರಯ ಕೇಂದ್ರಗಳಲ್ಲಿ ಬೂತ್ ಮಟ್ಟದ ಅರ್ಜಿ ಶಿಬಿರಗಳನ್ನು ನಡೆಸಬೇಕು ಎಂದು ಆಗ್ರಹಿಸಿದೆ.

ಈ ರೀತಿಯಲ್ಲಿ ಬೃಹತ್ ಸಂಖ್ಯೆಯ ಮತದಾರರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೊರಹಾಕಿರುವುದ ದೆಹಲಿ ಮಾತ್ರ ಸೀಮಿತವಾಗಿಲ್ಲ. ಮೂರನೇ ಹಂತದ SIR ಪ್ರಕ್ರಿಯೆ ನಡೆದ ರಾಜ್ಯಗಳ ಪೈಕಿ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ದೆಹಲಿ ಹಾಗೂ ಆಂಧ್ರಪ್ರದೇಶದಲ್ಲಿಯೂ ಅತ್ಯಧಿಕ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಈ ಎಲ್ಲ ರಾಜ್ಯಗಳಲ್ಲೂ ಕಳೆದ ಮೂರು ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿವೆ. ಇದು ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳು ಎಸ್‌ಐಆರ್‌ ಪ್ರಕ್ರಿಯೆಯಲ್ಲಿನ ಹೆಚ್ಚಿನ ಪಾರದರ್ಶಕತೆ ಕೇಳಲು ಕಾರಣವೂ ಆಗಿದೆ.

ದೆಹಲಿ ಅಂಕಿಅಂಶಗಳು ಕೇಳುತ್ತಿರುವ ಪ್ರಶ್ನೆ ಸರಳವಾಗಿದೆ: ಚುನಾವಣಾ ಆಯೋಗದ 2025ರ ಮತಪಟ್ಟಿ ಸರಿಯಾಗಿದ್ದರೆ, ಒಂದೇ ವರ್ಷದಲ್ಲಿ ಇಷ್ಟೊಂದು ಮಂದಿ ಹೇಗೆ ಅನುಮಾನಾಸ್ಪದರಾದರು? ಈಗಿನ SIR ಪರಿಶೀಲನೆಯೇ ಸರಿಯಾಗಿದ್ದರೆ, 2025ರ ಚುನಾವಣೆಗೆ ಬಳಸಿದ ಪಟ್ಟಿಯಲ್ಲಿ ಇಷ್ಟೊಂದು ತಪ್ಪುಗಳು ಹೇಗೆ ಉಳಿದವು? ಎರಡೂ ಪಟ್ಟಿಗಳು ಒಂದೇ ಸಮಯದಲ್ಲಿ ಸಂಪೂರ್ಣವಾಗಿ ಸರಿಯಾಗಿರಲು ಸಾಧ್ಯವಿಲ್ಲ.

ಆದ್ದರಿಂದ ಪ್ರಶ್ನೆ SIR ಬೇಕೋ ಬೇಡವೋ ಎಂಬುದಷ್ಟೇ ಅಲ್ಲ. ಮತಪಟ್ಟಿಯ ಪ್ರತಿಯೊಂದು ಅಳಿಸುವಿಕೆಗೆ ದಾಖಲೆ ಇದೆಯೇ, ಸಂಬಂಧಪಟ್ಟ ಮತದಾರರಿಗೆ ನೋಟಿಸ್ ನೀಡಲಾಗಿದೆಯೇ, ವಿಚಾರಣೆಗೆ ಅವಕಾಶ ದೊರೆತಿದೆಯೇ, ಕ್ಷೇತ್ರವಾರು ಮತ್ತು ಬೂತ್‌ವಾರು ಮಾಹಿತಿ ಸಾರ್ವಜನಿಕವಾಗಿದೆಯೇ ಹಾಗೂ ತಪ್ಪಾಗಿ ಹೊರಗುಳಿದ ನಾಗರಿಕರಿಗೆ ತಮ್ಮ ಮತಹಕ್ಕನ್ನು ಮರಳಿ ಪಡೆಯಲು ಪರಿಣಾಮಕಾರಿ ವ್ಯವಸ್ಥೆ ಇದೆಯೇ ಎಂಬ ಹಲವು ಪ್ರಶ್ನೆಗಳನ್ನು ‘ವೋಟರ್ ಅಧಿಕಾರ ಮಂಚ್’ ಎತ್ತಿದೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...