ತಮಿಳುನಾಡಿನ ತಿರುನೆಲ್ವೇಲಿಯಲ್ಲಿ 16 ವರ್ಷದ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೋಕ್ಸೋ (POCSO) ವಿಶೇಷ ನ್ಯಾಯಾಲಯವು ಕಠಿಣ ತೀರ್ಪು ನೀಡಿದೆ. ಮೂವರು ಆರೋಪಿಗಳಲ್ಲಿ ಪ್ರಮುಖ ಆರೋಪಿಗೆ ಮರಣದಂಡನೆ ಮತ್ತು ಉಳಿದ ಇಬ್ಬರಿಗೆ ಕ್ರಮವಾಗಿ 20 ವರ್ಷ ಮತ್ತು 13 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
2022ರಲ್ಲಿ ತಿರುನೆಲ್ವೇಲಿಯ ಒಂದು ಕಾಲೇಜಿಗೆ ಸುಣ್ಣ ಬಣ್ಣದ ಕೆಲಸಕ್ಕೆಂದು ಬಂದಿದ್ದ ತೂತುಕುಡಿ ಜಿಲ್ಲೆಯ ವಿಳಾತ್ತಿಕುಳಂನ ಪೇಂಟರ್ ಮುನೀಸ್ವರನ್, 16 ವರ್ಷದ ವಿದ್ಯಾರ್ಥಿನಿಯೊಂದಿಗೆ ಪರಿಚಯ ಮಾಡಿಕೊಂಡು, ಪ್ರೀತಿ ಪ್ರೇಮದ ಹೆಸರಿನಲ್ಲಿ ಆತ್ಮೀಯತೆ ಬೆಳೆಸಿಕೊಂಡಿದ್ದ. 2 ವಾರಗಳ ಕಾಲ ಫೋನ್ ಸಂಭಾಷಣೆಯ ಮೂಲಕ ಬಾಲಕಿಗೆ ಹತ್ತಿರವಾಗಿದ್ದ ಆರೋಪಿ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಒಂದು ದಿನ ಅಪ್ರಾಪ್ತೆಯನ್ನು ಪುಸಲಾಯಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದ ದುರುಳ ಮುನೀಸ್ವರನ್, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದೇ ವೇಳೆ ಅಲ್ಲಿಗೆ ಬಂದ ಕೊಕ್ಕಿರಗುಳಂ ಪ್ರದೇಶದ ಚಿನ್ನಕುಟ್ಟಿ ಮತ್ತು ಮುರುಗೇಸನ್ ಅವರೂ ವಿದ್ಯಾರ್ಥಿನಿಯನ್ನು ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಈ ಘಟನೆ ತಮಿಳುನಾಡಿನಲ್ಲಿ ದೊಡ್ಡ ಆಘಾತವನ್ನುಂಟುಮಾಡಿತ್ತು. ವಿದ್ಯಾರ್ಥಿನಿಯ ಪರವಾಗಿ ನೀಡಲಾದ ದೂರಿನ ಆಧಾರದಲ್ಲಿ ಪಾಳಯಂಕೋಟ್ಟೈ ಆಲ್ ವುಮೆನ್ ಪೊಲೀಸ್ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗಿ ಮೂವರನ್ನೂ ಬಂಧಿಸಲಾಗಿತ್ತು. ಪ್ರಕರಣವನ್ನು ತಿರುನೆಲ್ವೇಲಿ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ಸಾಕ್ಷ್ಯಗಳು ಮತ್ತು ಪುರಾವೆಗಳ ಆಧಾರದಲ್ಲಿ ಮೂವರನ್ನೂ ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಧೀಶ ಸುರೇಶ್ ಕುಮಾರ್, ಚಿನ್ನಕುಟ್ಟಿಗೆ ಮರಣದಂಡನೆ, ಮುರುಗೇಸನ್‌ಗೆ 20 ವರ್ಷ, ಮುನೀಸ್ವರನ್‌ಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಮರಣದಂಡನೆ ವಿಧಿಸಲಾದ ಚಿನ್ನಕುಟ್ಟಿ ವಿರುದ್ಧ ಈಗಾಗಲೇ ಕೊಲೆ, ಕೊಲೆ ಪ್ರಯತ್ನ ಸೇರಿದಂತೆ ಹಲವು ಪ್ರಕರಣಗಳು ವಿವಿಧ ಪೊಲೀಸ್ ಸ್ಟೇಷನ್‌ಗಳಲ್ಲಿ ಬಾಕಿ ಇವೆ ಎಂದು ತಿಳಿದುಬಂದಿದೆ. ಪ್ರಸ್ತುತ ವರ್ಷದಲ್ಲಿ ಪೋಕ್ಸೋ ಪ್ರಕರಣಗಳಲ್ಲಿ ನಾಲ್ಕು ಜನರಿಗೆ ಮರಣದಂಡನೆ ವಿಧಿಸಲಾಗಿದ್ದು, ತಿರುನೆಲ್ವೇಲಿ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಕುಮಾರ್ ಇಲ್ಲಿಯವರೆಗೆ 10 ಜನ ಆರೋಪಿಗಳಿಗೆ ಮರಣದಂಡನೆ ವಿಧಿಸಿದ್ದಾರೆ ಎಂಬುದು ಗಮನಾರ್ಹ.





