ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪುಸ್ತಕಗಳು ಸಹಕಾರಿಯಾಗಿದ್ದು, ಇಂದಿನ ವಿದ್ಯಾರ್ಥಿಗಳು, ಯುವ ಜನಾಂಗ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗಪ್ಪ ಜಂಬಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿ ಬೀದರ್ ಸಹಯೋಗದಲ್ಲಿ ಬೀದರ್‌ನ ಹಿರಿಯ ಸಾಹಿತಿ ಎಸ್.ಬಿ. ಕುಚಬಾಳ ಅವರ ನಿಲಯದಲ್ಲಿ ಸೋಮವಾರ ಆಯೋಜಿಸಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಕಳೆದ ಮೂರ್ನಾಲ್ಕು ದಶಕಗಳ ಹಿಂದೆ ದೊಡ್ಡಾಟ, ಸಣ್ಣಾಟ, ರಾಮಾಯಣ, ಮಹಾಭಾರತ ಗ್ರಂಥಗಳು ಸಮಾಜದಲ್ಲಿ ಸಾಂಸ್ಕೃತಿಕ, ಬೌದ್ಧಿಕ ವಾತಾವರಣ ಬೆಳವಣಿಗೆಗೆ ಸಹಕಾರಿಯಾಗಿದ್ದವು. ಇಂದಿನ ಮೊಬೈಲ್ ಬಳಕೆಯ ಜಗತ್ತಿನಲ್ಲಿಯೂ ಪುಸ್ತಕ ಓದುವುದನ್ನು ಬಿಡಬಾರದು. ಲೇಖಕರ ಪುಸ್ತಕ ಪ್ರಕಟಣೆಗೆ ಸರ್ಕಾರ ಆರ್ಥಿಕ ನೆರವು ಒದಗಿಸಿದರೆ ಓದುಗರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುತ್ತದೆ” ಎಂದರು.
ಸಾಹಿತಿ ಶೈಲಜಾ ಹುಡಗೆ ವಿಶೇಷ ಉಪನ್ಯಾಸ ನೀಡಿ, “ಇಂದಿನ ಒತ್ತಡದ ಬದುಕಿನಲ್ಲಿ ಪುಸ್ತಕ, ಪತ್ರಿಕೆ ಓದುವ ಅಭಿರುಚಿ ಕಳೆದುಕೊಳ್ಳುತ್ತಿದ್ದೇವೆ. ಪುಸ್ತಕಗಳು ನಮ್ಮ ಜ್ಞಾನ ವೃದ್ಧಿಸುವ ಸ್ನೇಹಿತರಾಗಿವೆ. ಪ್ರತಿ ಮನೆಯಲ್ಲೂ ಪುಸ್ತಕ ಗ್ರಂಥಾಲಯವಿದ್ದರೆ ಸಾಹಿತ್ಯ, ಸಂಸ್ಕೃತಿಯ ವಾತಾವರಣ ನಿರ್ಮಾಣವಾಗುತ್ತದೆ. ಪುಸ್ತಕ ಪ್ರಕಟಣೆ ಜೊತೆಗೆ ಓದುಗರ ಸಂಖ್ಯೆ ಅಧಿಕವಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಸ್ಕೃತಿಯ ವಾತಾವರಣ ಬೆಳೆಸಬೇಕು” ಎಂದರು.
ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ ಪ್ರಾಸ್ತಾವಿಕ ಮಾತನಾಡಿ, “ಲೋಕದ ಪ್ರಜ್ಞೆ ಅರಿತುಕೊಳ್ಳಬೇಕಾದರೆ ಪುಸ್ತಕ ಓದು ಅಗತ್ಯ. ಪ್ರತಿ ಮನೆಯೂ ಜ್ಞಾನದ ಕೇಂದ್ರವಾಗಬೇಕಾದರೆ ಗ್ರಂಥಾಲಯಕ್ಕೆ ಜಾಗ ಮೀಸಲಿಡಬೇಕು. ಉತ್ತಮ ಓದುಗನಲ್ಲಿ ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯವಿದೆ. ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಮುಖಾಂತರ ಜಿಲ್ಲಾದ್ಯಂತ ಪುಸ್ತಕ ಓದುವ ಸಂಸ್ಕೃತಿ ಬಿತ್ತಲಾಗುತ್ತಿದೆ” ಎಂದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಮಾತನಾಡಿ, “ಮೊಬೈಲ್ ಹಾಗೂ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಕುಸಿಯುತ್ತಿದೆ. ಲೇಖಕರ ಪುಸ್ತಕ ಪ್ರಕಟಣೆಗೆ ಕೇಂದ್ರ ಹಾಗೂ ಸರ್ಕಾರಗಳು ಸಹಾಯಧನ ಒದಗಿಸುತ್ತಿದ್ದು, ಇದರ ಸದುಪಯೋಗಪಡಿದುಕೊಳ್ಳಬೇಕು. ಪ್ರತಿ ಮನೆಗಳಲ್ಲಿ ಪೋಷಕರು ಮಕ್ಕಳ ಕೈಗೆ ಪುಸ್ತಕ ಕೊಡಬೇಕು” ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್.ಬಿ. ಕುಚಬಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಸ್.ಬಿ. ಕುಚಬಾಳ ಅವರ ಮನೆಯಲ್ಲಿ ಸ್ಥಾಪಿಸಿದ ʼಭೀಮ ರತ್ನ” ನೂತನ ಗ್ರಂಥಾಲಯ ಕೋಣೆಯನ್ನು ಉದ್ಘಾಟಿಸಲಾಯಿತು.
ಇದನ್ನೂ ಓದಿ : ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು
ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಾಧ್ಯಾಪಕ ರಾಜಕುಮಾರ ಸಿಂಧೆ, ಲಕ್ಷ್ಮಣ ಮೇತ್ರೆ, ಗುಂಡಪ್ಪಾ ಹುಡಗೆ, ದೇವೇಂದ್ರ ಡಿಗ್ಗೆ, ಎಂ.ಡಿ.ರಶೀದ್, ಬಿಕ್ಕುಮಿಯ್ಯಾ, ದೇವೆಂದ್ರ ಅಣಕಲೆ, ಲಕ್ಷ್ಮಣ ಚಿಟ್ಟಾ, ನರಸಿಂಗ್, ಪ್ರಭಾಕರ ಸೋನೆ, ಈಶ್ವರ ಸೇರಿದಂತೆ ಬಡಾವಣೆ ನಿವಾಸಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.





