ಜಾತಿ ಗಣತಿ | ವರದಿ ಬಿಡುಗಡೆಯಾದರೆ ಸಮಾಜ ಒಡೆದು ಹೋಗುತ್ತದೆ ಎನ್ನುವುದು ರಾಜಕೀಯ ಷಡ್ಯಂತ್ರದ ಹೇಳಿಕೆ

Date:

Advertisements
ಬ್ರಿಟಿಷರು ಜಾತಿಗಣತಿ ಮಾಡಿದ್ದರು ಎಂದರೆ ಅವರು ಜಾತಿ ಆಧಾರದಲ್ಲಿ ಜನರನ್ನು ಒಡೆಯಲು ಮಾಡಿದ್ದು ಎಂದು ಹೇಳುವ ಒಂದು ವರ್ಗ ತಯಾರಾಗಿದೆ. ಆದರೆ, ಇಂದಿನ ಸಮಸ್ಯೆಗೆ ಸೂಕ್ತ ಪರಿಹಾರ ಅಂದರೆ ಜಾತಿ ಗಣತಿ ಎನ್ನುವ ಸಾಮಾನ್ಯ ವಿಷಯ ಅಧಿಕಾರದಲ್ಲಿರುವವರಿಗೆ ಅರ್ಥವಾಗದೇ ಇರುವುದು ದುರಂತವೇ ಸರಿ.

 

ಭಾರತ ದೇಶ ಹಲವು ಧರ್ಮ, ಸಾವಿರಾರು ಜಾತಿಗಳನ್ನು ಒಳಗೊಂಡಿರುವ ರಾಷ್ಟ್ರ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಲ್ಲದೇ ನಮ್ಮ ದೇಶದಲ್ಲಿ ಜಾತಿ ಎನ್ನುವುದು ಅಲಿಖಿತವಾಗಿ ಜನರನ್ನು ಒಂದುಗೂಡಿಸುತ್ತ ಬಂದಿರುವುದು ಅಲ್ಲಗಳೆಯುವಂತಿಲ್ಲ. ಜನರ ಬದುಕು ಧರ್ಮ, ಜಾತಿ, ಪ್ರದೇಶದೊಂದಿಗೆ ವಿಭಿನ್ನವಾಗಿದೆ. ಅಂತರ ಜಾತಿ ವಿವಾಹ, ಅಂತರ ಧರ್ಮ ವಿವಾಹ ಅಪರೂಪವಾಗಿದೆ. ಅದನ್ನು ಸಮಾಜ ಸರಳವಾಗಿ ಒಪ್ಪಲು ತಯಾರಿಲ್ಲ. ಅಂತಹ ಮದುವೆಗಳಿಂದಾಗಿಯೇ ಕೊಲೆಗಳಾಗಿವೆ (ಅದನ್ನು ಮರ್ಯಾದೆ ಹತ್ಯೆ ಎಂದು ಕರೆಯಲಾಗಿದೆ). ಅಂದರೆ ಜನರ ಬದುಕಿನಲ್ಲಿ ಜಾತಿ, ಧರ್ಮ ಎನ್ನುವುದು ಹಾಸು ಹೊಕ್ಕಾಗಿದೆ. ದೇಶ ಇದರ ಹೊರತಾಗಿ ಮುಂದುವರೆಯಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬೆಸೆದುಹೋಗಿದೆ.

ಜಾತಿ ವಿನಾಶದ ಬಗ್ಗೆ ಎಷ್ಟೇ ಮಾತನಾಡಿದರೂ ಸಹ ಆಳವಾಗಿ ಬೇರೂರಿರುವ ಈ ಜಾತಿ ವ್ಯವಸ್ಥೆಯನ್ನು ಬಿಟ್ಟು ಮುಂದೆ ಹೋಗಲು ಸಾಧ್ಯವಿಲ್ಲದ ಸ್ಥಿತಿ ನಮ್ಮ ದೇಶದಲ್ಲಿ ಇದೆ. ಎಷ್ಟೇ ದೊಡ್ಡ ರಾಜಕೀಯ ನಾಯಕರಾದರೂ, ಅಧಿಕಾರಿಯಾದರೂ, ಶ್ರೀಮಂತರಾದರೂ, ನ್ಯಾಯಾಧೀಶರಾದರೂ, ವ್ಯಾಪಾರಸ್ಥರಾದರೂ ಜಾತಿಯನ್ನು ಮೀರಿ ಅವರ ಬದುಕು ಸಾಧ್ಯವೇ ಇಲ್ಲ ಎನ್ನುವುದು ಸತ್ಯ. ಇಂದಿನ ಯುಗದಲ್ಲಿ ಜಾತಿಯಿಂದಲೇ ನೌಕರಿ, ರಾಜಕೀಯ ಅಧಿಕಾರ, ಸ್ಥಾನಮಾನ ದೊರೆಯುವ ಸ್ಥಿತಿಯಿದೆ. ಇಷ್ಟಿದ್ದರೂ ದೇಶದಲ್ಲಿ ಜಾತಿ ಗಣತಿ ಮಾಡದೇ ಇರಲು ಕಾರಣವೇನು ಎಂದು ಹುಡುಕುತ್ತ ಹೋದರೆ ಅಧಿಕಾರ, ಸ್ಥಾನಮಾನ ಮಾತ್ರ ಕಾಣುತ್ತದೆ.

ಬಲಾಢ್ಯ ಸಮುದಾಯದಿಂದ ಬಂದವರು ಜನಸಂಖ್ಯೆ ಆಧಾರಿತವಾಗಿ ಅಧಿಕಾರ ಮತ್ತು ಸೌಲಭ್ಯ ನೀಡಲು ಬಯಸುವುದಿಲ್ಲ. ಇಷ್ಟು ಸತ್ಯ ಗೊತ್ತಿದ್ದ ಮೇಲೂ ಅದನ್ನು ದಾಟಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವ ಒಂದು ವರ್ಗ ದೇಶದಲ್ಲಿ ಇದೆ. ಅದು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಬಂದಿದೆ. ಅದರಿಂದಾಗಿ ಕಳೆದ ಎಪ್ಪತ್ತೈದು ವರ್ಷಗಳ ಸ್ವತಂತ್ರ ಭಾರತದಲ್ಲಿ ಸ್ವಲ್ಪಮಟ್ಟಿಗೆ ಜಾತಿ, ಧರ್ಮ ಮೀರಿ ಬದುಕು ಕಟ್ಟಿಕೊಂಡವರು ಕಾಣುತ್ತಾರೆ. ಬ್ರಿಟಿಷರ ಆಡಳಿತದಲ್ಲಿ ಜಾತಿ ಗಣತಿ ಮಾಡಲಾಗಿತ್ತು. ಅದರ ಅನುಪಾತದ ಆಧಾರದಲ್ಲಿಯೇ ಇಂದಿಗೂ ಜಾತಿವಾರು ಲೆಕ್ಕ ಹಾಕಲಾಗುತ್ತದೆ. 1881ರಿಂದ 1931ರವರೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ಜೊತೆಗೆ ಜಾತಿ ಜನಗಣತಿ ಮಾಡಲಾಗಿದೆ. ಅದರ ನಂತರ ಜಾತಿ ಗಣತಿ ಮಾಡಲು ಸಾಧ್ಯವಾಗಿಲ್ಲ. ಬ್ರಿಟಿಷರು ಜಾತಿಗಣತಿ ಮಾಡಿದ್ದರು ಎಂದರೆ ಅವರು ಜಾತಿ ಆಧಾರದಲ್ಲಿ ಜನರನ್ನು ಒಡೆಯಲು ಮಾಡಿದ್ದು ಎಂದು ಹೇಳುವ ಒಂದು ವರ್ಗ ತಯಾರಾಗಿದೆ. ಆದರೆ, ಇಂದಿನ ಸಮಸ್ಯೆಗೆ ಸೂಕ್ತ ಪರಿಹಾರ ಅಂದರೆ ಜಾತಿ ಗಣತಿ ಮಾಡುವುದು ಎನ್ನುವ ಸಾಮಾನ್ಯ ವಿಷಯ ಅಧಿಕಾರದಲ್ಲಿ ಇರುವವರಿಗೆ ಅರ್ಥವಾಗದೇ ಇರುವುದು ದುರಂತವೇ ಸರಿ.

Advertisements

ಅದಾಗ್ಯೂ ಆಳುವ ಪಕ್ಷಗಳು, ಸ್ವಾರ್ಥ ರಾಜಕೀಯ ವ್ಯವಸ್ಥೆ ದೇಶದಲ್ಲಿ ಬದುಕುತ್ತಿರುವ ಜನರ ಜಾತಿಗನುಗುಣವಾಗಿ ಸಂಖ್ಯೆಯನ್ನು ಸಮೀಕ್ಷೆ ಮಾಡಲು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವೇನು ಎನ್ನುವುದು ಮೊದಲಿಗೆ ನೋಡಬೇಕು. ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಎಪ್ಪತ್ತೈದು ವರ್ಷಗಳ ನಂತರವೂ ರಾಜಕೀಯ ಅಧಿಕಾರ ಬಲಾಢ್ಯ ಜಾತಿಗಳನ್ನು ಮೀರಿ ಹೊರಗೆ ಬಂದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ದೇಶದಲ್ಲಿ ಜಾತಿಗಣತಿ ಮಾಡಿದಲ್ಲಿ ಜಾತಿವಾರು ಜನ ಒಗ್ಗೂಡುತ್ತಾರೆ, ಇದರಿಂದ ಸಮಾಜ ಒಡೆಯುತ್ತದೆ ಎಂದು ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಜಾತಿ ಗಣತಿ ಇಲ್ಲದಿದ್ದರೂ ಜನ ಜಾತಿ ಮೂಲಕವೇ ಒಂದುಗೂಡಿ ಬದುಕುತ್ತಿದ್ದಾರೆ. ಜಾತಿವಾರು ಜನಗಣತಿ ಮಾಡಿದಲ್ಲಿ ಸಮಾಜ ಒಡೆದು ಹೋಗುತ್ತದೆ ಎನ್ನುವುದು ರಾಜಕೀಯ ಷಡ್ಯಂತ್ರ ಬಿಟ್ಟರೆ ಬೇರೇನೂ ಅಲ್ಲ.

ದೇಶವನ್ನು ಆಳಿರುವ ಬಹುತೇಕ ರಾಜಕೀಯ ನಾಯಕರು ಬಲಾಢ್ಯ ಜಾತಿಯಿಂದಲೇ ಬಂದವರು ಎನ್ನುವುದು ಸ್ವಾತಂತ್ರ್ಯ ಭಾರತದ ಇತಿಹಾಸ ನೋಡಿದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಲ್ಲಿ ಇಲ್ಲಿ ಕೆಲವು ಪ್ರಮುಖ ಹಿಂದುಳಿದ ಜಾತಿಗಳ ಜನರಿಗೆ ಅಧಿಕಾರ ಕೊಡಲಾಗಿದೆ. ಅವರನ್ನು ಎತ್ತರಕ್ಕೆ ಬೆಳೆಯಲು ಪ್ರಬಲ ಜಾತಿ ವ್ಯವಸ್ಥೆ ಬಿಟ್ಟಿಲ್ಲ. ಯಾವ ಜಾತಿಯ ಜನಸಂಖ್ಯೆ ಎಷ್ಟು ಎಂದು ತಿಳಿದುಕೊಳ್ಳಲು ಇರುವ ತೊಂದರೆ ಹುಸಿ ಭಯ ಬಿಟ್ಟರೆ ಮತ್ತೇನು ಎಂದು ಯಾರೂ ಹೇಳಲು ತಯಾರಿಲ್ಲ.

ಕರ್ನಾಟಕ ರಾಜ್ಯದಲ್ಲಿ ಬಹುತೇಕ ಆಡಳಿತ ಮಾಡಿರುವುದು ಒಂದು ಲಿಂಗಾಯತ ಸಮುದಾಯ. ಇನ್ನೊಂದು ಒಕ್ಕಲಿಗ ಸಮುದಾಯ. ಇನ್ನುಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೇ ಆಡಳಿತ ಮಾಡಿದ್ದಾರೆ, ಜನಸಂಖ್ಯೆಯಲ್ಲಿ ಅವರಿಗಿಂತ ಹೆಚ್ಚಿರುವ ಹಲವು ಸಮುದಾಯಗಳಿದ್ದರೂ ಅವರ ಇರುವಿಕೆಯೇ ಇಲ್ಲದಂತಾಗಿ ಮಾಡುವುದರ ಮೂಲಕ ರಾಜಕೀಯ ಅಧಿಕಾರದಿಂದ ವಂಚಿತಗೊಳಿಸಿದ್ದಾರೆ. ಈಗಲೂ ಸಿದ್ದರಾಮಯ್ಯನವರ ನೇತೃತ್ವದ ಹಿಂದಿನ ಸರಕಾರ ನಡೆಸಿದ ಜಾತಿವಾರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯನ್ನು ಹತ್ತು ವರ್ಷಗಳಾದರೂ ಸರಕಾರ ಒಪ್ಪಿಕೊಳ್ಳಲು ಬಿಡದಿರುವಂತಹ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ.

ಕರ್ನಾಟಕದ ನಂತರ ಜಾತಿ ಗಣತಿ ಮಾಡಿಸಿದ ಮೊಟ್ಟಮೊದಲ ರಾಜ್ಯ ಬಿಹಾರ. ಆ ರಾಜ್ಯ ಸರಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ನಂತರ ರಾಜ್ಯದಲ್ಲಿಯೂ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ಕೂಗು ಜೋರಾಗಿ ಕೇಳಿ ಬರುತ್ತಿದೆಯಾದರೂ ಅಷ್ಟೇ ಜೋರಾಗಿ ಯಾವುದೇ ಕಾರಣಕ್ಕೂ ಸರಕಾರ ವರದಿ ಬಿಡುಗಡೆ ಮಾಡಬಾರದೆಂದು ರಾಜ್ಯದ ಎರಡು ಬಲಾಢ್ಯ ಸಮಾಜಗಳು ಒತ್ತಡ ಹಾಕುತ್ತಿವೆ. ಆದರೆ, ಸರಕಾರದ ಯೋಜನೆಗಳನ್ನು ರೂಪಿಸಲು, ಅನುದಾನ ಹಂಚಿಕೆ ಮಾಡಲು ಜಾತಿ ಜನಗಣತಿ ಬಹಳ ಅವಶ್ಯಕವಾಗಿದೆ. ಸೌಲಭ್ಯ ಪಡೆಯಲು ಅತೀ ಅವಶ್ಯಕವಾಗಿವೆ. ಅಷ್ಟೇ ಅಲ್ಲದೇ ದೇಶದ ಪ್ರಧಾನ ಮಂತ್ರಿ ಹಾಗೂ ಅವರ ಸಚಿವರೂ ಸಹ ಜಾತಿಗಣತಿ ವರದಿಯಿಂದ ದೇಶವನ್ನು ಜಾತಿ ಆಧಾರಿತವಾಗಿ ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿರುವುದು ಆಶ್ಚರ್ಯಕರವಾಗೇನೂ ಇಲ್ಲ. ಅವರು ಬಂದಿರುವ ಹಿನ್ನಲೆ ತಳ ಸಮುದಾಯಗಳನ್ನು ಮುನ್ನಲೆಗೆ ಬರಲಾರದಂತೆ ತಡೆಯುವುದೇ ಆಗಿದೆ.

ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ಮುಸ್ಲಿಂ ಸಮುದಾಯ ಶೇ 13.8 ರಷ್ಟಿದೆ. ಮುಸ್ಲಿಂ ಸಮಾಜದಲ್ಲಿಯೂ ಕುಲಕಸುಬು ಆಧಾರಿತ ಹಲವು ಜಾತಿಗಳಿವೆ. ಅದರಲ್ಲಿ ವಿಶೇಷವಾಗಿ ಗಣನೆಗೆ ಬರುವುದು ಪಿಂಜಾರ, ನದಾಫ, ಧರ್ವೇಶ, ಖುರೇಷಿ, ಖಸಾಬ್, ದೂದೇಕುಲ, ಫೂಲಮಾಲಿ, ಫೂಲ್ಹಾರಾ, ಚಪ್ಪರಬಂಧ, ಮನ್ಸೂರಿ ಇತ್ಯಾದಿ. ಅದಲ್ಲದೇ ಮನೆತನವಾಗಿ ಸೈಯದ್‌, ಶೇಖ್, ಫಠಾಣ ಇತ್ಯಾದಿ ಉಪನಾಮಗಳು ಅಸ್ತಿತ್ವದಲ್ಲಿವೆ. ಆದರೆ, ಇಲ್ಲಿಯವರೆಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಈ ಜಾತಿಗಳ ಜನಸಂಖ್ಯೆ ಎಷ್ಟಿದೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ.

ನ್ಯಾ.ಕಾಂತರಾಜ ವರದಿಯಲ್ಲಿ ಇದು ಉಲ್ಲೇಖವಾಗಿದ್ದರೆ ಖಂಡಿತವಾಗಿಯೂ ಕಸುಬು ಆಧಾರಿತವಾಗಿ ಸರಕಾರ ನೀಡುವ ಹತ್ತು ಹಲವು ಸೌಲಭ್ಯ ಪಡೆಯಲು ಮುಸ್ಲಿಂ ಸಮುದಾಯಕ್ಕೂ ಸಾಧ್ಯವಾಗುತ್ತದೆ. ಮುಸ್ಲಿಂ ಸಮಾಜದಲ್ಲಿ ಕಸುಬು ಆಧಾರಿತವಾಗಿ ಬದುಕು ಕಟ್ಟಿಕೊಂಡ ಬಹುದೊಡ್ಡ ಜನಸಂಖ್ಯೆ ಜೀವನ ಮಾಡುತ್ತಿದ್ದು, ಅಂತಹ ಅಸಂಘಟಿತ ವಲಯದಲ್ಲಿರುವ ಜನರಿಗೆ ಸರಕಾರದಿಂದ ಯಾವುದೇ ಸೌಲಭ್ಯವಿರುವುದಿಲ್ಲ. ಈ ವರದಿಯಿಂದ ಕನಿಷ್ಠ ಯಾರು ಎಷ್ಟು ಸಂಖ್ಯೆಯಲ್ಲಿ ಏನೆಲ್ಲ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನಾದರೂ ಸರಕಾರ ಗಮನಕ್ಕೆ ಬರುತ್ತದೆ.

ನ್ಯಾ.ಕಾಂತರಾಜ ಸಮಿತಿಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವರದಿ ಸರಕಾರ ಪಡೆದುಕೊಂಡು ರಾಜ್ಯದ ಪ್ರತಿಯೊಂದು ಧರ್ಮ, ಜಾತಿಯ ಜನಸಂಖ್ಯೆ ಸಾರ್ವಜನಿಕಗೊಳಿಸಬೇಕು. ಇದರಲ್ಲಿ ಯಾರೂ ರಾಜಕೀಯ ಬೆರೆಸಬಾರದೆನ್ನುವುದೇ ಬಹುತೇಕ ಹಿಂದುಳಿದ ಸಮಾಜಗಳ ಆಶಯವಾಗಿದೆ. ಸಿದ್ದರಾಮಯ್ಯನವರು ರಾಜ್ಯದ ಅತ್ಯಂತ ಪ್ರಬಲ ಹಿಂದುಳಿದ ವರ್ಗಗಳ ನಾಯಕರಾಗಿದ್ದು, ಅವರೇ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಸಹ ನ್ಯಾ.ಕಾಂತರಾಜ ವರದಿ ಬಿಡುಗಡೆಯಾಗಬಹುದೆಂದು ಬಲವಾದ ನಂಬಿಕೆ ಜನರಲ್ಲಿದೆ. ಆ ನಂಬಿಕೆ ಹುಸಿ ಮಾಡದಿರಲಿ ಎಂಬ ಆಶಯ ನಮ್ಮದು.

ರಜಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X