ಸಂಸ್ಕೃತಿ ರಕ್ಷಣೆ ಎನ್ನುವ ಬಿಜೆಪಿಯವರು ಪಿಂಪ್ ಆರೋಪ ಹೊತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ಹೊಗಳುತ್ತಿರುವುದು ಏತಕ್ಕೆ? ಯಾವುದು ಬಿಜೆಪಿಯವರ ಸಂಸ್ಕೃತಿ? ಭರತ್ ಶೆಟ್ಟಿ ಅವರ ಜೊತೆಯಲ್ಲಿ ಪುನೀತ್ ಕೆರೆಹಳ್ಳಿ ಮಾತನಾಡಿದ್ದು ಸುಳ್ಳೇ?
ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದು ತಲೆಹಿಡುಕ (ಪಿಂಪ್) ಎಂಬ ಆರೋಪವನ್ನು ಹೊತ್ತಿದ್ದ ಪುನೀತ್ ಕೆರೆಹಳ್ಳಿ ನಂತರದಲ್ಲಿ ಹಿಂದುತ್ವ ಕಾರ್ಯಕರ್ತನಾಗಿ ಮುಂಚೂಣಿಗೆ ಬಂದಿದ್ದು ಹೇಗೆ ಎಂಬುದೇ ಒಂದು ರೋಚಕ ಕಥೆ.
ಮುಚ್ಚಿ ಹೋಗಿದ್ದ ಪ್ರಕರಣ ರೀ ಓಪನ್ ಆಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದ್ದಂತೆ ವಿಚಲಿತನಾಗಿರುವ ಪುನೀತ್ ಕೆರೆಹಳ್ಳಿ, “ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದೆ ಎಂಬುದಕ್ಕೆ ನನ್ನ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲ, ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ” ಎಂದು ಹೇಳಿಕೊಳ್ಳುತ್ತಿದ್ದಾನೆ.
ವೇಶ್ಯಾವಾಟಿಕೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಈ ಪ್ರಕರಣದಿಂದ ಖುಲಾಸೆಯಾಗಲು ಪೊಲೀಸರ ಕೆಲವು ನಿರ್ಲಕ್ಷ್ಯವೇ ಕಾರಣ ಎಂಬುದು ತಡವಾಗಿ ಬೆಳಕಿಗೆ ಬರುತ್ತಿದೆ. ಜೊತೆಗೆ ತಾನು ಇಂತಹದೊಂದು ಪ್ರಕರಣದಲ್ಲಿ ಸಿಲುಕಿದ್ದೆ ಎಂದು ಪುನೀತ್ ಕೆರೆಹಳ್ಳಿಯೇ ಹೇಳಿಕೊಂಡಿರುವುದು ಚರ್ಚೆಯ ವಿಷಯವಾಗಿದೆ. ಹಿಂದುತ್ವ ಸಂಘಟನೆಯ ಮತ್ತೊಬ್ಬ ಮುಖಂಡ ಭರತ್ ಶೆಟ್ಟಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಪುನೀತ್ ಕೆರೆಹಳ್ಳಿ ತನ್ನ ಕುರಿತ ಆರೋಪವನ್ನು ಒಪ್ಪಿಕೊಂಡಿದ್ದ. ಆ ಕುರಿತ ಆಡಿಯೊ ಕೂಡ ಈ ಹಿಂದೆ ಭಾರೀ ವೈರಲ್ ಆಗಿತ್ತು.
ವೈರಲ್ ಆದ ಆಡಿಯೊದಲ್ಲಿ ಏನಿದೆ?
“ಬೇಡ ಪುನೀತ್, ನಿಮ್ಮ ವಿರುದ್ಧ ಸಾಕ್ಷಿಗಳಿವೆ. ದುಡುಕಬೇಡಿ. ಹೆಸರು ಹಾಳು ಮಾಡಿಕೊಳ್ಳಬೇಡಿ” ಎನ್ನುತ್ತಾರೆ ಭರತ್ ಶೆಟ್ಟಿ. ಅದಕ್ಕೆ ಪುನೀತ್ ಕೆರೆಹಳ್ಳಿ, “ಸಾಕ್ಷಿನೇ ಇರಲಿ ಅಣ್ಣ, ಅದು 2013ರ ಪ್ರಕರಣ. ನಾನು ಸಂಘಟನೆಗೆ ಬಂದಿದ್ದು 2016ರಲ್ಲಿ. ನಿಮಗೆ ಮೊದಲೇ ಈ ಪ್ರಕರಣದ ಕುರಿತು ಹೇಳಿದ್ದೇ” ಎನ್ನುತ್ತಾನೆ. ಆಗ ಭರತ್ ಶೆಟ್ಟಿಯವರು, “ದೇವ್ರಾಣೆ ನನಗೆ ಗೊತ್ತಿರಲಿಲ್ಲ. ನೀವು ನನಗೆ ಮೊದಲೇ ಹೇಳಿಲ್ಲ” ಎಂದು ಪ್ರತಿಕ್ರಿಯಿಸುತ್ತಾರೆ. ಅದಕ್ಕೆ ಕೆರೆಹಳ್ಳಿ, “ನನ್ನ ಜೊತೆ ಜಾಸ್ತಿ ಮೂವ್ ಇದ್ದ ಎಲ್ಲರಿಗೂ ಹೇಳಿದ್ದೇನೆ. ಯಾಕೆಂದರೆ ಮುಚ್ಚಿಟ್ಟುಕೊಂಡು ನಾಳೆ ದಿನ ಆಚೆ ಬಂದಾಗ ಯಾರಿಗೂ ಮುಖಭಂಗ ಆಗಬಾರದು ಅಂತ” ಎನ್ನುತ್ತಾನೆ.
ವೇಶ್ಯಾವಾಟಿಕೆಯಲ್ಲಿ ಇದ್ದೆ ಎಂದು ಪುನೀತ್ ಕೆರೆಹಳ್ಳಿಯೇ ಒಪ್ಪಿಕೊಂಡಿರುವುದು ದಾಖಲಾಗಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಬಚಾವಾಗಿರುವುದು ಸ್ಪಷ್ಟವಾಗುತ್ತಿದೆ. ಜೊತೆಗೆ ಅದೇ ಪುನೀತ್ ಕೆರೆಹಳ್ಳಿ ಇಂದು ಗಾಂಧಿವಾದಿಯಂತೆ ಪೋಸು ಕೊಟ್ಟರೂ ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುತ್ತಿರುವ ಅಶ್ಲೀಲ ಪದಗಳಿಗಂತೂ ಯಾವುದೇ ಸೆನ್ಸಾರ್ ಇಲ್ಲವಾಗಿದೆ. ಸಂಸ್ಕೃತಿ ರಕ್ಷಣೆ ಮಾಡುವವನ ಭಾಷೆಯನ್ನು ನೋಡಿದರೆ- ಇವನ್ಯಾವ ಸಂಸ್ಕೃತಿ ರಕ್ಷಕ ಎಂಬ ಪ್ರಶ್ನೆಮೂಡುತ್ತದೆ. ಕನ್ನಡಪರ ಹೋರಾಟಗಾರ ಹರೀಶ್ ಭೈರಪ್ಪ ಮತ್ತು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜು ಅವರ ಬಗ್ಗೆ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಹಾಕುತ್ತಿರುವ ಪೋಸ್ಟ್‌ಗಳು ಈತನ ವ್ಯಕ್ತಿತ್ವವನ್ನು ಬಿಚ್ಚಿಡುತ್ತಿವೆ.
ತನ್ನನ್ನು ಪ್ರಶ್ನಿಸುವ ಹೋರಾಟಗಾರರ ವಿರುದ್ಧ, ವೇಶ್ಯಾವಾಟಿಕೆ ಪ್ರಕರಣದಲ್ಲಿ ಭಾಗಿರುವ ಈತನ ಪ್ರಕರಣದಲ್ಲಿ ಆಗಿರುವ ಲೋಪಗಳನ್ನು ಎತ್ತಿ ಹಿಡಿಯುತ್ತಿರುವವರ ಕುರಿತು ಕೆರೆಹಳ್ಳಿ ತುಂಬಾ ವಿಚಲಿತನಾಗಿರುವಂತಿದೆ. ಹೀಗಾಗಿ ನನ್ನ ವಿರುದ್ಧ ಯಾವುದೇ ಸಾಕ್ಷಿ ಇಲ್ಲ ಎನ್ನುತ್ತಾ, ಕೆಟ್ಟ ಭಾಷೆಯನ್ನು ಬಳಸಲು ಶುರು ಮಾಡಿದ್ದಾನೆ. ಜೊತೆಗೆ ಆ ಆಡಿಯೊವೇ ಸುಳ್ಳು ಎನ್ನುತ್ತಿದ್ದಾನೆ. ತನ್ನ ವಿರುದ್ಧ ಪೊಲೀಸರು ಯಾವುದೇ ಆರೋಪಗಳನ್ನು ಮಾಡಿಲ್ಲ ಎಂದು ಸಮಜಾಯಿಸಿ ಕೊಡುತ್ತಿದ್ದಾನೆ. ಆದರೆ ಆತನ ವಿರುದ್ಧ ಪೊಲೀಸ್ ಇನ್ಸ್‌ಪೆಕ್ಟರ್ ಕೋರ್ಟ್ ಮುಂದೆ ನೀಡಿರುವ ಹೇಳಿಕೆಯನ್ನು ಈಗಾಗಲೇ ಈದಿನ.ಕಾಂ ವರದಿ ಮಾಡಿದೆ.
2013ರ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಪುನೀತ್ ಕೆರೆಹಳ್ಳಿ ನಂತರದಲ್ಲಿ ಹಿಂದುತ್ವ ಕಾರ್ಯಕರ್ತನಾಗಿ ಸಕ್ರಿಯನಾಗುತ್ತಾನೆ. ತನ್ನ ವಿರುದ್ಧದ ಪ್ರಕರಣ ಹೊರಬಿದ್ದರೆ ಕಷ್ಟವಾಗುತ್ತದೆ ಎಂದು ಕೆಲವರ ಬಳಿ ಈ ಕುರಿತು ಮೊದಲೇ ಹೇಳಿಕೊಂಡಿರುವುದು ಆತನ ಆಡಿಯೊದಿಂದ ತಿಳಿದು ಬರುತ್ತದೆ. ಧರ್ಮ ರಕ್ಷಣೆಯ ಹೆಸರಲ್ಲಿ ಗೂಗಲ್ ಪೇ, ಪೋನ್ ಪೇ ಮೂಲಕ ಜನರಿಂದ ಹಣ ಸಂಗ್ರಹ ಮಾಡಿಕೊಳ್ಳುತ್ತಾನೆ. ಇದನ್ನೇ ಉದ್ಯೋಗ ಮಾಡಿಕೊಂಡು ಎಲ್ಲರೂ ಹುಬ್ಬೇರಿಸುವಷ್ಟು ಗಮನ ಸೆಳೆಯುತ್ತಾನೆ.
ಬಿಜೆಪಿ ಅವಧಿಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಾಕ್ಷಾಧಾರಗಳನ್ನು ಸಲ್ಲಿಸುವಲ್ಲಿ ಪೊಲೀಸರು ನಿರ್ಲಕ್ಷ ವಹಿಸಿದ್ದೂ ಇದೇ ಬಿಜೆಪಿಯ ಅವಧಿಯಲ್ಲಿ ಎಂಬುದು ವಿಪರ್ಯಾಸ. ಪಿಂಪ್ ಆಗಿ ಸಿಕ್ಕಿಬಿದ್ದಿದ್ದ ಪುನೀತ್ ಕೇಸರಿ ಕಾರ್ಯಕರ್ತನಾಗಿ ಹೊಮ್ಮಿದ್ದು ತನ್ನನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹಿಂದುತ್ವದ ಹೆಸರಲ್ಲಿ ರಕ್ಷಣೆ ಪಡೆಲಾರಂಭಿಸಿದ ಪುನೀತ್ ಕೆರೆಹಳ್ಳಿ ಧರ್ಮ ರಕ್ಷಕನ ಪೋಷಾಕು ಧರಿಸಿ, ಕೆಟ್ಟ ಕೆಟ್ಟ ಭಾಷೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಸುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಾನೆ. ಬಿಜೆಪಿ ನಾಯಕರ ಗಮನವನ್ನೂ ಸೆಳೆಯುತ್ತಾನೆ. ಗೋರಕ್ಷಣೆಯ ಹೆಸರಲ್ಲಿ ಗ್ಯಾಂಗ್ ಕಟ್ಟಿಕೊಂಡು ಹಿಂಸಾಚಾರಕ್ಕೂ ಇಳಿದ ಪುನೀತ್ ಕೆರೆಹಳ್ಳಿ, ನಟೋರಿಯಸ್ ಮೋನು ಮಾನೇಸರ್‌ನ ಕರ್ನಾಟಕದ ಅಪರಾವತಾರ ಎಂಬಂತೆ ವರ್ತಿಸತೊಡಗುತ್ತಾನೆ. ಮೋನು ಮಾನೇಸರ್ ನಿಮಗೆಲ್ಲ ಗೊತ್ತಿರಬಹುದು- ರಾಜಸ್ಥಾನದ ಗಡಿಯಲ್ಲಿ ಇಬ್ಬರು ಅಮಾಯಕ ಮುಸ್ಲಿಮರನ್ನು ಕೊಂದು ಕಾರಿನಲ್ಲಿ ಸುಟ್ಟು ಹಾಕಿದ ಪ್ರಕರಣದ ಪ್ರಮುಖ ಆರೋಪಿ ಮತ್ತು ಬಜರಂಗದಳದ ರಾಷ್ಟ್ರೀಯ ಮಟ್ಟದ ನಾಯಕ ಆತ. ಮಾನೇಸರ್‌ನಂತೆ ಗೋವಿನ ರಕ್ಷಣೆಗೆಂದು ಇಳಿದು ಸಾಮಾನ್ಯ ಜನರನ್ನು ಹಿಂಸಿಸಲು ಆರಂಭಿಸಿದ ಪುನೀತ್, ಇದ್ರೀಸ್ ಪಾಶಾ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗುತ್ತಾನೆ.
ಕೆಲವು ದಿನ ತಲೆಮರೆಸಿಕೊಂಡು, ನಂತರ ಪೊಲೀಸರ ಬಂಧನಕ್ಕೊಳಗಾದ ಪುನೀತ್ ಕೆರೆಹಳ್ಳಿ ಗ್ಯಾಂಗ್ ಈ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದು ಹೇಗೆ ಎಂಬುದು ಎಂದಿಗೂ ಚರ್ಚೆಯ ವಿಷಯ. ಅದೇನೇ ಇರಲಿ ವೇಶ್ಯಾವಾಟಿಕೆ ದಂಧೆಯಲ್ಲಿದ್ದ ಪಿಂಪ್ ಪುನೀತ್ ಕೆರೆಹಳ್ಳಿ, ಧರ್ಮ ರಕ್ಷಕನ ಪೋಷಾಕು ಧರಿಸಿರುವುದು ನಿಧಾನಕ್ಕೆ ಬಯಲಾಗುತ್ತಿದೆ. ಇಂತಹ ವ್ಯಕ್ತಿಯನ್ನು ಬಿಜೆಪಿ ನಾಯಕರು ತಲೆಮೇಲೆ ಇಟ್ಟುಕೊಂಡು ಮೆರೆಸುತ್ತಿರುವುದಾದರೂ ಏತಕ್ಕೆ? ಸಂಸ್ಕೃತಿ ರಕ್ಷಣೆ ಎನ್ನುವ ಬಿಜೆಪಿಯವರು ಪಿಂಪ್ ಖ್ಯಾತಿಯ ಪುನೀತ್ ಕೆರೆಹಳ್ಳಿಯನ್ನು ಹೊಗಳುತ್ತಿರುವುದು ಏತಕ್ಕೆ? ಯಾವುದು ಬಿಜೆಪಿಯವರ ಸಂಸ್ಕೃತಿ?- ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಾಗಿದೆ.
ಇವುಗಳನ್ನೂ ಓದಿರಿ:
ʼಕ್ರಿಮಿನಲೈಸಿಂಗ್ʼ ಕಾಂಡೋಮ್ ಮತ್ತು ಪುನೀತ್ ಕೆರೆಹಳ್ಳಿ ʼತಲೆಹಿಡುಕತನʼ ಕೇಸಿನಲ್ಲಿ ಪೊಲೀಸರ ತಪ್ಪುಗಳು !
ಪುನೀತ್ ಕೆರೆಹಳ್ಳಿಗೆ ವೇಶ್ಯಾವೃತ್ತಿಯೇ ಹಣ ಗಳಿಕೆಯ ಮೂಲ ! ನ್ಯಾಯಾಲಯದ ಮುಂದೆ ಇನ್ಸ್‌ಪೆಕ್ಟರ್ ಹೇಳಿಕೆ
ವೇಶ್ಯಾವಾಟಿಕೆ ದಂಧೆ | ಪುನೀತ್ ಕೆರೆಹಳ್ಳಿ ಜೊತೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕ ಯುವತಿ ಹೇಳಿದ್ದೇನು ?

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.