ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಕೊಂಡಿದೆ. ಆದರೆ, ಈಗ ಸಿಎಂ ಕುರ್ಚಿಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಕುದರೆ ರೇಸ್ ನಂತೆ ಪೈಪೋಟಿ ಹೆಚ್ಚಾಗಿರುವ ಕಾರಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಎಐಸಿಸಿ) ಮೂವರು ವೀಕ್ಷಕರನ್ನು ನೇಮಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣು ಗೋಪಾಲ್ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಮೇ 14ರಂದು ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮೂವರು ವೀಕ್ಷಕರು ಸಹ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ವೀಕ್ಷಕರಾಗಿ ಆಯ್ಕೆಯಾಗಿರುವ ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್ ಹಾಗೂ ದೀಪಕ್ ಬಬಾರಿಯಾ ಆಯ್ಕೆಯಾಗಿದ್ದಾರೆ. ಸಂಜೆ ನಡೆಯಲಿರುವ ಸಭೆಯಲ್ಲಿ, ಇವರ ಸಮ್ಮುಖದಲ್ಲೇ ಕಾಂಗ್ರೆಸ್ ಶಾಸಕಾಂಗ ನಾಯಕನ ಆಯ್ಕೆ ನಡೆಯಲಿದೆ
ಮುಖ್ಯಮಂತ್ರಿ ಸೀಟ್‌ಗಾಗಿ ಇಬ್ಬರು ಘಟಾನುಘಟಿಗಳ ನಡುವೆ ಜಾಟಾಪಟಿ ನಡೆಯುತ್ತಿರುವ ಕಾರಣ ಮುಂದಿನ ಐದು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾರಾಗಬೇಕು ಎಂದು ತೀರ್ಮಾನಿಸುವುದೇ ಹೈಕಮಾಂಡ್‌ಗೆ ಸವಾಲಾಗಿ ಪರಿಣಮಿಸಿದೆ.
ಈಗಾಗಲೇ ಸಿದ್ದರಾಮಯ್ಯ ಅವರ ಬೆಂಬಲಿಗರು ಸಭೆ ನಡೆಸಿ, ಅವರೇ ಮುಂದಿನ ಮುಖ್ಯಮಂತ್ರಿಯಾಗಲು ಪ್ರೇರೆಪಿಸುತ್ತಾ ಪಟ್ಟು ಹಿಡಿದಿದ್ದರೆ. ಇನ್ನೊಂದೆಡೆ ಡಿ ಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಒಕ್ಕಲಿಗ ನಾಯಕರು ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಇವರಿಬ್ಬರ ಮಧ್ಯೆ ಡಾ. ಜಿ ಪರಮೇಶ್ವರ್ ಅವರ ಹೆಸರು ತೇಲಿ ಬಂದಿದೆ. ಪರಮೇಶ್ವರ್ ಪರವಾಗಿ ದಲಿತ ನಾಯಕರು ಸಹ ಸಭೆ ಮಾಡುವ ಮೂಲಕ ಸಂದೇಶ ರವಾನಿಸಿದ್ದಾರೆ.
ಒಟ್ಟಿನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ಹೆಚ್ಚಾಗಿದೆ. ಮುಂದಿನ ಐದು ವರ್ಷಗಳ ಕಾಲ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲ ಜನ ಸಾಮನ್ಯರಲ್ಲಿ ಮತ್ತು ರಾಜಕೀಯ ನಾಯಕರಲ್ಲಿ ಮನೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್‌ಗೆ ಕಾಂಗ್ರೆಸ್ ಬುಲಾವ್