- ನಿನ್ನೆ ರಾಜೀನಾಮೆ ನೀಡಿ ಇಂದು ನಾಮಪತ್ರ ಸಲ್ಲಿಸಿ ಅಖಂಡ
- ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡ ಪುಲಿಕೇಶಿ ನಗರದ ಹಾಲಿ ಶಾಸಕ
ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದಾರೆ.
ತಮಗೆ ಟಿಕೆಟ್ ನೀಡುವಲ್ಲಿ ಇನ್ನೂ ವಿಳಂಬ ನೀತಿ ಅನುಸರಿಸುತ್ತಿರುವ ಪಕ್ಷದ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಏಪ್ರಿಲ್ 17ರಂದು ತಮ್ಮ ಬೆಂಬಲಿಗರ ಸಭೆ ನಡೆಸಿದ ಶ್ರೀನಿವಾಸಮೂರ್ತಿ ಅವರ ಸಲಹೆ ಮೇರೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಇದಕ್ಕೂ ಮುನ್ನ (ಏಪ್ರಿಲ್ 16ರಂದು) ಶಿರಸಿಗೆ ತೆರಳಿದ್ದ ಅವರು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ರಾಜೀನಾಮೆ ಪತ್ರ ನೀಡಿದ್ದರು. ಇಂದು ಪ್ರೇಜರ್ ಟೌನ್ನಲ್ಲಿರುವ ಸರ್ಕಾರಿ ಕಾಲೇಜಿಗೆ ಕುಟುಂಬ ಸಮೇತರಾಗಿ ಬಂದ ಶ್ರೀನಿವಾಸಮೂರ್ತಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಮೂರು ಪಟ್ಟಿ ಬಿಡುಗಡೆ ಮಾಡಿದ್ದರೂ ನನಗೆ ಟಿಕೆಟ್ ನೀಡಿಲ್ಲ. ಇದರಿಂದ ಸಾಕಷ್ಟು ನೊಂದಿದ್ದೇನೆ, ಬೇಸತ್ತಿದ್ದೇನೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.
ಇಲ್ಲಿಯವರೆಗೂ ಪಕ್ಷ ನನಗೆ ಟಿಕೆಟ್ ನೀಡಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನನ್ನ ಕ್ಷೇತ್ರದ ಜನರು ದಿನವೂ ನನ್ನನ್ನು ಯಾಕೆ ಟಿಕೆಟ್ ಸಿಕ್ಕಿಲ್ಲ ಎಂದು ಕೇಳುತ್ತಾರೆ.
ನನ್ನ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಒಗ್ಗಟ್ಟಾಗಿದ್ದೇವೆ ಹೀಗಿದ್ದರೂ ಇನ್ನೂ ಟಿಕೆಟ್ ಏಕಿಲ್ಲ ಎಂದು ಅಖಂಡ ಪಕ್ಷ ಪ್ರಮುಖರನ್ನು ಪ್ರಶ್ನಿಸಿದರು.
ಹಿರಿಯ ನಾಯಕರು ಕೆಲವರು ನನಗೆ ಟಿಕೆಟ್ ಕೊಡಬಾರದು ಎಂದು ರಾಜಕೀಯ ಮಾಡಿದ್ರು. ನನಗೆ ಅನ್ಯಾಯವಾಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಇದೇ ವೇಳೆ ಪಕ್ಷಾಂತರದ ಸಾಧ್ಯತೆಯ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಖಂಡ ಬೇರೆ ಪಕ್ಷದವರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? :ಕಾರವಾರ | ಬಿಜೆಪಿ ನಾಯಕರು ನನ್ನಿಂದ ಹಣ ಪಡೆದು ಟಿಕೆಟ್ ತಪ್ಪಿಸಿದ್ದಾರೆ : ಗಂಗಾಧರ ಭಟ್ ಕಣಕ್ಕೆ
ಅಖಂಡಗೆ ಟಿಕೆಟ್ ಯಾಕಿಲ್ಲ?
ಮೂಲಗಳ ಮಾಹಿತಿ ಪ್ರಕಾರ ಅಖಂಡ ಅವರಿಗೆ ಕ್ಷೇತ್ರದ ಮೇಲೆ ಹಿಂದಿದ್ದ ಹಿಡಿತ ಇಲ್ಲ ಎನ್ನುವುದು ಟಿಕೆಟ್ ತಪ್ಪಲು ಕಾರಣ ಎನ್ನುವುದು ಹಲವರ ಮಾತು.
ಇದರ ಜೊತೆಗೆ 2020ರ ಆಗಸ್ಟ್ 11 ಅಖಂಡ ಶ್ರೀನಿವಾಸಮೂರ್ತಿ ಸೋದರ ಸಂಬಂಧಿ ನವೀನ್ ಫೇಸ್ಬುಕ್‌ನಲ್ಲಿ ಹಾಕಿದ್ದ ಪೋಸ್ಟ್ ಒಂದು ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣೆಗಳಿಗೆ ಬೆಂಕಿ ಹಚ್ಚಿ ಗಲೆಭೆ ಸೃಷ್ಟಿಸಲು ಕಾರಣವಾಗಿತ್ತು.
ಇದಾದ ಕೆಲ ದಿನಗಳ ಬಳಿಕ ಪೋಸ್ಟ್ ಘಟನೆಯಿಂದ ನೊಂದಿದ್ದ ಗುಂಪೊಂದು ಕಾವಲ್ ಭೈರಸಂದ್ರದಲ್ಲಿದ್ದ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟು ಭಾರಿ ಹಾನಿ ಮಾಡಿದ್ದರು.
ಈ ಘಟನೆಗಳ ಬಗ್ಗೆ ಚರ್ಚೆ ನಡೆಸಿದ್ದ ಕಾಂಗ್ರೆಸ್ ಪ್ರಮುಖರು ಪಕ್ಷದ ಇಮೇಜ್ ಮತ್ತು ಎದುರಾಳಿಗಳಿಗೆ ಈ ಘಟನೆಯನ್ನು ದಾಳವಾಗಿಸಿಕೊಳ್ಳುವ ಅವಕಾಶ ತಪ್ಪಿಸಲು, ಪಕ್ಷದ ಮುಜುಗರಕ್ಕೆ ಅವಕಾಶ ಮಾಡಿಕೊಡದಿರಲು ಟಿಕೆಟ್ ನಿರಾಕರಿಸಿದ್ದರೆನ್ನಲಾಗುತ್ತಿದೆ.