ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಾಸನ ಜಿಲ್ಲೆಗೆ ಸಾಮಾನ್ಯ ಹಾಗೂ ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗ ನಿಯೋಜಿಸಿದೆ. ಅವರೆಲ್ಲರೂ ಜಿಲ್ಲೆಯಲ್ಲಿ ಉನ್ನತ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಹಲವು ಸಮಿತಿಗಳ ಜೊತೆ ಸಭೆ ನಡೆಸಿದ್ದು, ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸುವಂತೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆದಿದೆ. “ಯಾವುದೇ ಲೋಪ ಇಲ್ಲದಂತೆ ಅಧಿಕಾರಿಗಳು ಪರಸ್ಪರ ಸಹಕಾರ, ಸಮನ್ವಯತೆಯಿಂದ ಕೆಲಸ ಮಾಡಬೇಕು. ಮತಗಟ್ಟೆ ಹಂತದಲ್ಲಿ ಯಾವುದೇ ಸಮಸ್ಯೆಗಳು ಇಲ್ಲದಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು” ಎಂದು ಚುನಾವಣಾ ವೀಕ್ಷಕರು ಸೂಚಿಸಿದ್ದಾರೆ.
“ಮತಯಂತ್ರಗಳ ಸಾಗಾಟಕ್ಕೆ ವ್ಯವಸ್ಥಿತ ಯೋಜನೆ ರೂಪಿಸಿ, ತಂಡಗಳು ದಿನದ 24 ಗಂಟೆಯೂ ಕೆಲಸ ಮಾಡಬೇಕಾಗಿದೆ. ಎಲ್ಲ ತಂಡಗಳಿಗೆ ಸೂಕ್ತ ಗುಣಾತ್ಮಕ ತರಬೇತಿ ನೀಡಿ, ಅಗತ್ಯ ಸೌಲಭ್ಯ ಒದಗಿಸಬೇಕು. ಸ್ವೀಪ್ ಚಟುವಟಿಕೆಗಳನ್ನು ಹೆಚ್ಚಿಸಿ, ಮತದಾರರಲ್ಲಿ ಜಾಗೃತಿ ಮೂಡಿಸಬೇಕು” ಎಂದು ತಿಳಿಸಿದರು.
“ಸಾರ್ವಜನಿಕರು, ರಾಜಕೀಯ ಪಕ್ಷಗಳು, ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳು ತಮ್ಮ ಚುನಾವಣಾ ವೀಕ್ಷಕರನ್ನು ಭೇಟಿ ಮಾಡಿ ದೂರು, ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ವ್ಯಾಪಕ ಪ್ರಚಾರ ನೀಡಿ, ಏನಾದರೂ ದೂರುಗಳಿದ್ದರೆ ಅವುಗಳನ್ನು ಸಲ್ಲಿಸುವಂತೆ ಜಾಗೃತಿ ಮೂಡಿಸಿ” ಎಂದು ವೀಕ್ಷಕರು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕಾಂಗ್ರೆಸ್ ತೊರೆದ ಮದ್ದೂರು ಗುರುಚರಣ್; ಡಿಕೆ ಸಹೋದರರ ವಿರುದ್ಧ ವಾಗ್ದಾಳಿ
ಸಭೆಯಲ್ಲಿ ಚುನಾವಣಾ ವೀಕ್ಷಕರುಗಳಾದ ಸಂಜೀವ್ ಕುಮಾರ್, ಅಶೋಕ್ ಕುಮಾರ್, ಮನೀತ್ ಗೋಯಲ್, ಬಾಲಾಜಿ ದಿಗಂಬ ಮಂಜುಲೆ, ಪೊಲೀಸ್ ವೀಕ್ಷಕ ಬೀಮಲ್ ಗುಪ್ತ, ಚುನಾವಣಾ ವೆಚ್ಚ ವೀಕ್ಷಕರು ಐಆರ್‌ಎಸ್ ಡಾ.ನಿಖಿಲ್ ಕುಮಾರ್ ಸಿಂಗ್, ಐಆರ್‌ಎಸ್ ಡಾ. ಕಾರ್ತಿಕೇಯನ್ ಪಾಂಡ್ಯ, ಐಆರ್‌ಎಸ್ ಮದನ್ ಮೋಹನ್ ಮೀನಾ, ಐಆರ್‌ಎಸ್ ಎಂ.ವಿ ಸಿಂಗ್, ಜಿಲ್ಲಾ ನೋಡಲ್ ಅಧಿಕಾರಿಯಾದ ಆದಾಯ ತೆರಿಗೆ ಇಲಾಖೆಯ ಎಡಿಐಟಿ ಚರುಮಾಮಿಲ ವಿನಯ್ ಕೆ.ಚೌದರಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.