- 2023ರ ಜನವರಿ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್ ತನ್ನ ವರದಿ ನೀಡಿದಾಗ ಕಾಂಗ್ರೆಸ್ ವಿರೋಧಿಸಿತ್ತು
- ಮ್ಯಾಜಿಸ್ಟ್ರೇಟ್ ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದು ಸರಿಯಾದ ಕ್ರಮ: ಬೊಮ್ಮಾಯಿ
ರಾಜ್ಯಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿದ್ದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ.
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಗಲಭೆ ಉಂಟಾಗಿತ್ತು. ಈ ಗಲಭೆಯಲ್ಲಿ ಗೊಲೀಬಾರ್ ನಡೆದು, ಮೂವರು ಬಲಿಯಾಗಿದ್ದರು.
ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ನಡೆದಿದ್ದ ದಾಳಿ ಬಳಿಕ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಕಿಡಿಗೇಡಿಗಳು ಮುಂದಾಗಿದ್ದರು. ಗುಂಪು ನಿಯಂತ್ರಣಕ್ಕೆ ಪೊಲೀಸರು ಮಾಡಿದ ಗೋಲಿಬಾರ್‌ನಲ್ಲಿ ಮೂವರು ಸಾವನ್ನಪ್ಪಿದ್ದರು. ಪೊಲೀಸ್ ಗುಂಡು ಹಾರಿಸಿದ ಪರಿಣಾಮ ಯಾಸಿನ್ ಪಾಷಾ, ವಾಜಿದ್ ಖಾನ್, ಶೇಕ್ ಸಿದ್ದಿಕ್ ಮೃತಪಟ್ಟಿದ್ದರು.
ಅಂದು ಕಾಂಗ್ರೆಸ್ ಕಿಡಿ
ಗಲಭೆ ನಿಯಂತ್ರಣ ಮಾಡಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಆರೋಪ ಮಾಡಿತ್ತು. ಅಲ್ಲದೆ, ಒಂದು ಸಮುದಾಯವನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗಲಭೆ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಬಿಜೆಪಿ ಸರ್ಕಾರ ವಹಿಸಿತ್ತು.
ಪೊಲೀಸರ ಗೋಲಿಬಾರ್ ಕ್ರಮ ಸರಿಯಿದೆ ಎಂದ ವರದಿ
ಘಟನೆಯ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸಿ 2023ರ ಜನವರಿ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್ ತನ್ನ ವರದಿ ನೀಡಿತ್ತು. ಈ ವರದಿಯಲ್ಲಿ ಪೊಲೀಸರ ಗೋಲಿಬಾರ್ ಕ್ರಮ ಸರಿಯಿದೆ ಎಂದು ಹೇಳಲಾಗುತ್ತು. ಅಂದು ಪೋಲಿಸರು ಗೋಲಿಬಾರ್ ಮಾಡಿರದಿದ್ದರೆ ಇಡೀ ಠಾಣೆಗೆ ಬೆಂಕಿ ಹಚ್ಚುತ್ತಿದ್ದರು. ಸ್ವಯಂ ರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿ ಕಾಪಾಡಲು ಗೋಲಿಬಾರ್ ನಡೆದಿದೆ ಎಂದು ರಿಪೋರ್ಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ಆದರೆ, ಈ ವರದಿಯನ್ನು ಕಾಂಗ್ರೆಸ್ ಆಗ ಒಪ್ಪಿರಲಿಲ್ಲ. ಚುನಾವಣಾ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಡಲಾಗಿದೆ ಎಂದು ಟೀಕಿಸಿತ್ತು. ಆದರೆ ಇದೀಗ ಅಧಿಕಾರಕ್ಕೆ ಬಂದ ಬಳಿಕ ಇದೇ ವರದಿಯನ್ನು ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿದೆ.
ಸರ್ಕಾರದ ಕ್ರಮ ಸರಿಯಾಗಿದೆ: ಬೊಮ್ಮಾಯಿ
“ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಸಂದರ್ಭದಲ್ಲಿ ಹಿಂದಿನ ಸರ್ಕಾರ ನೇಮಿಸಿದ್ದ ಮ್ಯಾಜಿಸ್ಟ್ರೇಟ್ ಪೊಲೀಸರು ತೆಗೆದುಕೊಂಡ ಕ್ರಮ ಸರಿಯಾಗಿದೆ ಎಂದು ನೀಡಿದ್ದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಒಪ್ಪಿಕೊಂಡಿದ್ದು ಸರಿಯಾದ ಕ್ರಮವಾಗಿದ್ದು, ತಮ್ಮ ಸರ್ಕಾರದ ತೀರ್ಮಾನ ಸರಿಯಾಗಿತ್ತು” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಡಿಜೆ ಹಳ್ಳಿ ಹಳ್ಳಿ ಗಲಭೆ ವಿಚಾರದಲ್ಲಿ ನೇಮಿಸಿದ್ದ ಅಧಿಕಾರಿಯ ರಿಪೋರ್ಟ್ ಬಂದಿದೆ. ರಾಜ್ಯ ಸರ್ಕಾರ ಯಥಾವತ್ತಾಗಿ ವರದಿ ಒಪ್ಪಿಕೊಂಡಿದೆ. ಇದು ಸರಿಯಾದ ಕ್ರಮ. ಹಿಂಸೆ, ಪೊಲೀಸರ ಮೇಲೆ ದಾಳಿ, ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಂಡ ಕ್ರಮವಾಗಿದೆ” ಎಂದಿದ್ದಾರೆ.
ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿದ್ದರು ಎಂದು ಕಾಂಗ್ರೆಸ್‌ನವರು ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ “ಎಲ್ಲ ವಿಚಾರಗಳು ಮಾಧ್ಯಮದಲ್ಲಿ ಲೈವ್ ಆಗಿ ನೋಡಿದ್ದಾರೆ. ಯಾವುದೇ ಸಮುದಾಯ ಟಾರ್ಗೆಟ್ ಮಾಡುವ ಕೆಲಸ ಮಾಡಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ರೆಕಾರ್ಡ್ಸ್ ಸುಟ್ಟು ಹಾಕುವ ಕೆಲಸ ಮಾಡಿದ್ದರು. ಅವರದ್ದೇ ಪಕ್ಷದ ಶಾಸಕನ ರಕ್ಷಣೆಗೆ ಬರಲಿಲ್ಲ” ಎಂದರು.