ಬೆಂಗಳೂರು ಉತ್ತರ | ಕಾಂಗ್ರೆಸ್ – ಬಿಜೆಪಿ ನೇರ ಹಣಾಹಣಿ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪೈಪೋಟಿ

Date:

Advertisements

ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 2018ರ ಚುನಾವಣೆಯಲ್ಲಿ ಐದು ಕಾಂಗ್ರೆಸ್, ಎರಡು ಜೆಡಿಎಸ್ ಹಾಗೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ತೆಕ್ಕೆಯಲ್ಲಿದ್ದ ಕೆ ಆರ್‌ ಪುರ, ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್‌ನ ಶಾಸಕರು, ಆಪರೇಷನ್‌ ಕಮಲದಿಂದಾಗಿ ಬಿಜೆಪಿಗೆ ಜಿಗಿದ ಕಾರಣ ಮೂರು ಕ್ಷೇತ್ರಗಳು ಕಮಲ ಪಕ್ಷದ ಪಾಲಾಗಿದ್ದವು. 2023ರ ಚುನಾವಣೆಯಲ್ಲಿ ಯಶವಂತಪುರ ಹಾಗೂ ದಾಸರಹಳ್ಳಿ ಕ್ಷೇತ್ರಗಳಲ್ಲಿ ಜೆಡಿಎಸ್ ಪೈಪೋಟಿ ಇದ್ದರೆ, ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆಯಿದೆ.

ಕೆ ಆರ್‌ ಪುರ : ಬೈರತಿ ಮುಂದೆ, ಕಾಂಗ್ರೆಸ್ ಹಿಂದೆ

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತರುವ, ಐಟಿ ಕಂಪನಿಗಳಿರುವ ಕ್ಷೇತ್ರ ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರವನ್ನು ವರ್ತೂರು, ಹೊಸಕೋಟೆ ಮತ್ತು ಯಲಹಂಕ ಕ್ಷೇತ್ರಗಳ ಕೆಲವು ಭಾಗಗಳನ್ನು ಸೇರಿಸಿ 2008ರಲ್ಲಿ ರಚಿಸಲಾಯಿತು. ಇದರೊಂದಿಗೆ ಮಹದೇವಪುರ ನಗರಸಭೆ ವ್ಯಾಪ್ತಿಯಲ್ಲಿದ್ದ ಒಂದಿಷ್ಟು ಪ್ರದೇಶ ಮತ್ತು ಸುತ್ತಮುತ್ತಲಿನ ಕೆಲವು ಹಳ್ಳಿಗಳನ್ನು ಕೆ ಆರ್ ಪುರ ಒಳಗೊಂಡಿದೆ.

ಪ್ರಸ್ತುತ ಚುನಾವಣೆಯಲ್ಲಿ ಕೆ ಆರ್‌ ಪುರ ಮಹತ್ವ ಗಳಿಸಿದ್ದು, ಆಪರೇಷನ್‌ ಕಮಲದಿಂದ ಕಾಂಗ್ರೆಸಿನಿಂದ ಬಿಜೆಪಿ ಜಿಗಿದು ಉಪಚುನಾವಣೆಯಲ್ಲಿ ಪುನಾರಾಯ್ಕೆಯಾದ ಬೈರತಿ ಬಸವರಾಜು ಮತ್ತೆ ಕಮಲದ ಅಭ್ಯರ್ಥಿ. 2013ರಿಂದಲೂ ಮೂರು ಬಾರಿ ಜಯ ಗಳಿಸಿರುವುದರಿಂದ ಈ ಬಾರಿಯು ಗೆಲ್ಲುವ ಭರವಸೆಯಲ್ಲಿದ್ದಾರೆ.

Advertisements
KR pura

ಕಾಂಗ್ರೆಸಿನಿಂದ ಮಾಜಿ ಸಚಿವ ಎ ಕೃಷ್ಣಪ್ಪ ಅವರ ಅಣ್ಣನ ಪುತ್ರ ಹಾಗೂ ಕೆ ಆರ್‌ ಪುರ ಪುರಸಭೆಯ ಮಾಜಿ ಅಧ್ಯಕ್ಷರಾದ ಡಿ ಕೆ ಮೋಹನ್‌ ಸ್ಪರ್ಧಿಸಿದ್ದಾರೆ. ಪಕ್ಷಾಂತರ, ಕ್ಷೇತ್ರದಲ್ಲಿ ತಾಂಡವವಾಡುತ್ತಿರುವ ವಿಪರೀತ ಭ್ರಷ್ಟಾಚಾರದ ವಿರುದ್ಧ ಮತದಾರರು ತಮಗೆ ಬೆಂಬಲಿಸಬಹುದು ಎನ್ನುತ್ತಾರೆ ಡಿ ಕೆ ಮೋಹನ್.    

ಅಡ್ಡಾದಿಡ್ಡಿ ಬೆಳೆದ ಬಡಾವಣೆಗಳು, ಮೂಲಸೌಕರ್ಯಗಳ ಕೊರತೆ, ಅತ್ಯಂತ ಕಲುಷಿತಗೊಂಡ ಕೆರೆಗಳು, ವಿಪರೀತ ಸಂಚಾರ ದಟ್ಟಣೆಯಂಥ ಸಮಸ್ಯೆಗಳಿಂದ ಕೆ ಆರ್ ಪುರ ನಲುಗುತ್ತಿದೆ. ಇವು ಕೂಡ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅನುಕೂಲವಾಗಬಹುದು.

ಜೆಡಿಎಸ್‌ನಿಂದ ಕೋಲಾರ ಮೂಲದ ಸಿ ವೆಂಕಟಾಚಲಪತಿ ಸ್ಪರ್ಧಿಸಿದ್ದು, ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಭರವಸೆಯೊಂದಿಗೆ ಕಣಕ್ಕಿಳಿದಿದ್ದಾರೆ. ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಬಿಟ್ಟು ತಮ್ಮನ್ನು ಚುನಾಯಿಸುತ್ತಾರೆ ಎನ್ನುತ್ತಾರೆ ವೆಂಕಟಾಚಲಪತಿ.

ಈ ಸುದ್ದಿ ಓದಿದ್ದೀರಾ: ಯಶವಂತಪುರ ಕ್ಷೇತ್ರ | ತೆನೆ ಪಕ್ಷದ ಅನುಕಂಪದ ಅಲೆಯಲ್ಲಿ ಕೊಚ್ಚಿ ಹೋಗುವುದೇ ಕಮಲ!

ಮಲ್ಲೇಶ್ವರಂ: ಕಾಂಗ್ರೆಸ್ ಗೆಲುವು ಸಾಧ್ಯವೇ?

ನಗರದ ಹೃದಯ ಭಾಗದಲ್ಲಿರುವ ಹಾಗೂ ಮೂಲ ಬೆಂಗಳೂರು ಎಂದೇ ಕರೆಯಲ್ಪಡುವ ಪ್ರದೇಶಗಳಲ್ಲಿ ಮಲ್ಲೇಶ್ವರವೂ ಒಂದು. ಇದು ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾಗಿದೆ. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಎಚ್ ವಿ ನಂಜುಂಡಯ್ಯ ಅವರು ಸ್ಥಾಪಿಸಿದ ಬಡಾವಣೆ ಇದು. ಮಧ್ಯಮ ಹಾಗೂ ಉನ್ನತ ಮಧ್ಯಮ ವರ್ಗದವರು ಹೆಚ್ಚಾಗಿರುವ ಈ ಪ್ರದೇಶವು ಆರು ವಾರ್ಡ್‌ಗಳನ್ನು ಒಳಗೊಂಡಿದೆ.

ಎಂ ಎಸ್ ಕೃಷ್ಣನ್, ಎಂ ರಘುಪತಿ, ಅನಂತನಾಗ್, ಜೀವರಾಜ್ ಆಳ್ವ ಮುಂತಾದ ಘಟಾನುಘಟಿಗಳು ಸ್ಪರ್ಧಿಸಿದ್ದ ಕ್ಷೇತ್ರ ಮಲ್ಲೇಶ್ವರ. ಪಕ್ಷೇತರ, ಸಿಪಿಐ, ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಿಗೂ ಇಲ್ಲಿನ ಮತದಾರರು ಮಣೆ ಹಾಕಿದ್ದಾರೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಇದು ಸಾಮಾನ್ಯ ಕ್ಷೇತ್ರವಾಗಿಯೇ ಉಳಿಯಿತು. 2004ರಲ್ಲಿ ಕಾಂಗ್ರೆಸ್‌ನ ಸೀತಾರಾಂ ವಿರುದ್ಧ ಸೋತಿದ್ದ ಬಿಜೆಪಿಯ ಅಶ್ವತ್ಥನಾರಾಯಣ 2008ರಲ್ಲಿ ಸೀತಾರಾಂ ಅವರನ್ನು ಮಣಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈಗ 2013 ಹಾಗೂ 2018ರಲ್ಲಿ ಜಯಗಳಿಸಿ ಮೂರನೇ ಬಾರಿಗೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರಿಗೆ ನಾಲ್ಕನೇ ಬಾರಿಯೂ ಟಿಕೆಟ್ ನೀಡಲಾಗಿದೆ.

Malleshawra

ಕಾಂಗ್ರೆಸಿನಿಂದ ಅನೂಪ್‌ ಅಯ್ಯಂಗಾರ್‌ ಸ್ಪರ್ಧಿಸಿದ್ದಾರೆ. ಅನೂಪ್ ಅವರು ಈ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಲು ಶ್ರಮ ಹಾಕಿದ್ದ ಪ್ರಕಾಶ್ ಅಯ್ಯಂಗಾರ್‌ ಅವರ ಹತ್ತಿರದ ಸಂಬಂಧಿ. ಮೂಲ ಬಿಜೆಪಿಯವರಾದ ಕಾರಣ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಸಂಚಾರ ದಟ್ಟಣೆ, ಕಳಪೆ ಮೂಲಸೌಕರ್ಯಗಳು ಆಡಳಿತ ವಿರೋಧಿಯಾಗಿ ಕೈ ಪಕ್ಷಕ್ಕೆ ಮತ ಪರಿವರ್ತನೆಯಾಗಬಹುದು. ಜೆಡಿಎಸ್‌ನಿಂದ ಸ್ಥಳೀಯ ಯುವ ಮುಖಂಡ ಎ ಉತ್ಕರ್ಷ ಅವರಿಗೆ ಟಿಕೆಟ್ ನೀಡಲಾಗಿದೆ. ಸಾಂಪ್ರದಾಯಿಕ ಮತಗಳನ್ನು ಹೊರತುಪಡಿಸಿದರೆ ಇತ್ತೀಚಿನ ವರ್ಷಗಳಲ್ಲಿ ಮಲ್ಲೇಶ್ವರ ಕ್ಷೇತ್ರದಲ್ಲಿ ಜೆಡಿಎಸ್ ಅಷ್ಟೇನು ಪ್ರಬಲವಾಗಿಲ್ಲ. ಹಾಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೆಚ್ಚು ಸ್ಪರ್ಧೆ ನಡೆಯಲಿದೆ.

ಈ ಸುದ್ದಿ ಓದಿದ್ದೀರಾ? ದಾಸರಹಳ್ಳಿ ಕ್ಷೇತ್ರ | ಜೆಡಿಎಸ್‌, ಬಿಜೆಪಿಯ ಗಟ್ಟಿನೆಲೆಯಲ್ಲಿ ಕಾಂಗ್ರೆಸಿಗೆ ಭರವಸೆ!

ಹೆಬ್ಬಾಳ: ಸುರೇಶ್ ಸೋಲಿಸುವುದು ಕಷ್ಟ

ಬಹುಮಹಡಿ ಕಟ್ಟಡಗಳು, ಟೆಕ್ ಪಾರ್ಕ್‌ಗಳು, ಉದ್ಯಾನವನಗಳು, ಗಗನಚುಂಬಿ ಕಟ್ಟಡಗಳು, ಫ್ಲೈಓವರ್‌ಗಳು ಇರುವ ಕ್ಷೇತ್ರ ಹೆಬ್ಬಾಳ ವಿಧಾನಸಭಾ ಕ್ಷೇತ್ರ. 1970ರ ದಶಕದಲ್ಲಿ ಸ್ಥಾಪನೆಯಾದ ಎಲ್ ಆ್ಯಂಡ್ ಟಿ ಕಾರ್ಖಾನೆಯೂ ಹೆಬ್ಬಾಳಕ್ಕೆ ಸಮೀಪದಲ್ಲಿದೆ. ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ಕೂಡ ಇದೇ ಕ್ಷೇತ್ರದಲ್ಲಿದೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ಬೇರೆ ಬೇರೆ ಭಾಷಿಕರು, ಸರ್ವ ಧರ್ಮದವರೂ ವಾಸಿಸುತ್ತಿದ್ದಾರೆ.

2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆಯಾದ ನಂತರದಿಂದ 2016ರವರೆಗೂ ಬಿಜೆಪಿ ತೆಕ್ಕೆಯಲ್ಲಿದ್ದ ಹೆಬ್ಬಾಳ ಕ್ಷೇತ್ರ ಸದ್ಯ ಕಾಂಗ್ರೆಸಿನ ವಶದಲ್ಲಿದೆ. ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಬೈರತಿ ಸುರೇಶ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2012ರಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಮೂಲಕ ರಾಜಕಾರಣ ಪ್ರವೇಶಿಸಿದ್ದವರು ಭೈರತಿ ಸುರೇಶ್. 2018ರ ಚುನಾವಣೆಯಲ್ಲಿ ಈ ಕ್ಷೇತ್ರಕ್ಕೆ ಭೈರತಿ ಸುರೇಶ್ ಕಾಲಿಟ್ಟರು.

Hebbala

ಕೊಳಗೇರಿ ಪ್ರದೇಶದ ಜನರಿಗೆ ಸಹಾಯ, ಕೋವಿಡ್ ಆಸ್ಪತ್ರೆ, ಉಚಿತ ಡಯಾಲಿಸಿಸ್ ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಸುರೇಶ್‌ ಅವರು ಸದ್ಯ ಕ್ಷೇತ್ರದಲ್ಲಿ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ. ಇವುಗಳ ಜೊತೆಗೆ ಆಡಳಿತ ವಿರೋಧಿ ಮತಗಳು ಸೇರಿದರೆ ಮತ್ತೊಮ್ಮೆ ಆಯ್ಕೆಯಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶ್, ಶಾಸಕರಾಗಿದ್ದ ಅವಧಿಯಲ್ಲಿ ತಂದೆ ಮಾಡಿದ್ದ ಕಾರ್ಯಗಳೆ ತಮಗೆ ವರದಾನ ಎಂದು ಕಣಕ್ಕೆ ಇಳಿದಿದ್ದಾರೆ. ಆದರೆ ಸ್ಥಳೀಯ ಪ್ರಬಲ ನಾಯಕನ ಎದುರು ಚುನಾವಣೆಯಲ್ಲಿ ಪೈಪೋಟಿ ನಡಸಲೇ ಬೇಕಿದೆ.

ಜೆಡಿಎಸ್‌ನಿಂದ ಸಯ್ಯದ್ ಮೊಹಿದ್ ಅಲ್ತಾಫ್ ಸ್ಪರ್ಧಿಸಿದ್ದು, ತಮಗೂ ಪೂರ್ಣಾವಧಿ ಅಧಿಕಾರ ನಡೆಸಲು ಒಮ್ಮೆ ಅವಕಾಶ ನೀಡುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇವರಿಗೆ ಒಂದಿಷ್ಟು ಅನುಕೂಲವಾಗುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ? ಬ್ಯಾಟರಾಯನಪುರ ಕ್ಷೇತ್ರ | ಕಾಂಗ್ರೆಸ್‌ನ ಭರವಸೆ ನಾಯಕ ಕೃಷ್ಣ ಬೈರೇಗೌಡ ಗೆಲುವಿಗೆ ನೀರೆರೆದ ಬಿಜೆಪಿ ಬಂಡಾಯ

ಪುಲಿಕೇಶಿ ನಗರ: ಬಿಎಸ್ಪಿ-ಕಾಂಗ್ರೆಸ್ ನಡುವಿನ ಜಟಾಪಟಿ

ಕೆಲವು ದಶಕಗಳ ಹಿಂದೆ ಚರ್ಮೋದ್ಯೋಮಕ್ಕೆ ಹೆಸರಾಗಿದ್ದ ಕ್ಷೇತ್ರ ಪುಲಿಕೇಶಿ ನಗರ. ಈ ಕ್ಷೇತ್ರದಲ್ಲಿ ಐವತ್ತಕ್ಕೂ ಹೆಚ್ಚು ಸ್ಲಂಗಳಿದ್ದು, ಶೇ. 65ಕ್ಕೂ ಅಧಿಕ ಪ್ರದೇಶ ಕೊಳಚೆ ಪ್ರದೇಶಗಳಿಂದ ತುಂಬಿದೆ. ಕನ್ನಡಿಗರಿಗಿಂತ ಹೆಚ್ಚಾಗಿ ಅನ್ಯ ಭಾಷಿಕರೆ ಹೆಚ್ಚಾಗಿ ವಾಸಿಸುತ್ತಾರೆ. 2008ರ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರವನ್ನು ವಿಂಗಡಿಸಿ ಪುಲಿಕೇಶಿ ನಗರ ಕ್ಷೇತ್ರ ರಚಿಸಲಾಯಿತು. ಇದು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ.

2008ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದವರು ಬಿ ಪ್ರಸನ್ನಕುಮಾರ್. ಇವರು ಹಿರಿಯ ರಾಜಕಾರಣಿ, ಬೂಸಾ ಚಳವಳಿ ಮೂಲಕ ದಲಿತ ಪರ ಚಿಂತನೆ ಮತ್ತು ಹೋರಾಟಕ್ಕೆ ಹೊಸ ದಿಕ್ಕು ನೀಡಿದ ಬಿ ಬಸವಲಿಂಗಪ್ಪರ ಮಗ. ಪ್ರಸನ್ನಕುಮಾರ್, 2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಯಲಹಂಕ ಸಾಮಾನ್ಯ ಮೀಸಲು ಕ್ಷೇತ್ರವಾದ ನಂತರ ಪರಿಶಿಷ್ಟ ಮೀಸಲು ಕ್ಷೇತ್ರವಾದ ಪುಲಿಕೇಶಿ ನಗರಕ್ಕೆ ಬಂದರು. ಹಾಗೆ ಬಂದವರು ಮೊದಲ ಚುನಾವಣೆಯಲ್ಲಿಯೇ ಜೆಡಿಎಸ್‌ನ ಅಖಂಡ ಶ್ರೀನಿವಾಸಮೂರ್ತಿಯವರನ್ನು ಸೋಲಿಸಿ ಶಾಸಕರೂ ಆದರು.

Pulikeshi nagar

ಪುನಃ ಜೆಡಿಎಸ್‌ನಿಂದ 2013 ಹಾಗೂ 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಸನ್ನಕುಮಾರ್ ಅವರನ್ನು ಸೋಲಿಸಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ 2020ರಲ್ಲಿ ಉಂಟಾದ ಕೆ ಜಿ ಹಳ್ಳಿ ಹಾಗೂ ಡಿಜಿ ಹಳ್ಳಿ ಗಲಭೆಯಿಂದ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದಾರೆ.

ಸ್ಥಳೀಯ ನಾಯಕ ಎ ಸಿ ಶ್ರೀನಿವಾಸ್‌ ಎಂಬುವವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದು, ಪುಲಿಕೇಶಿ ನಗರದಲ್ಲಿ ಕೈ ಕಟ್ಟಾಳು ಆಗಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತನ್ನ ಪ್ರಾಬಲ್ಯ ಸ್ಥಾಪಿಸಲು ಹೊರಟಿದೆ. ಈ ಕಾರಣದಿಂದ ತಮಿಳು ಮತಗಳ ಮೇಲೆ ಕಣ್ಣಿಟ್ಟಿರುವ ಕಮಲ ಪಕ್ಷ, ಇಲ್ಲಿ ತಮಿಳುನಾಡಿನ ಪಕ್ಷ ಎಐಎಡಿಎಂಕೆ ಬೆಂಬಲವನ್ನು ಪಡೆದಿದೆ. ಎ ಮುರುಳಿ ಎಂಬುವವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಆದರೆ ಪುಲಿಕೇಶಿ ನಗರದಲ್ಲಿ ಈ ಬಾರಿ ಸ್ಪರ್ಧೆ ನಡೆಯುವುದು ಕಾಂಗ್ರೆಸ್‌ ಮತ್ತು ಬಿಎಸ್‌ಪಿ ನಡುವೆ ಮಾತ್ರ.

ಜೆಡಿಎಸ್‌ ಅನುರಾಧಾ ಎಂಬ ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದು ಅವರು ನೆಪ ಮಾತ್ರಕ್ಕೆ ಸ್ಪರ್ಧಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಈ ಸುದ್ದಿ ಓದಿದ್ದೀರಾ? ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ | ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಬಲಕ್ಕೆ ಹೆಚ್ಚು ಮಣೆ

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X