ಕನ್ನಡ ರಾಜ್ಯೋತ್ಸವ ವಿರುದ್ಧವಾಗಿ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ಗಡಿ ಪ್ರವೇಶಿಸಲು ಯತ್ನಿಸಿದ್ದ ಶಿವಸೇನೆ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕೊಗನೊಳ್ಳಿ ಹೊರವಲಯದಲ್ಲಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ಘೋಷಣೆ ಕೂಗಿದ್ದಾರೆ.
ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಮಹಾರಾಷ್ಟ್ರದ ಗಡಿಯಲ್ಲೇ, ಪೊಲೀಸರು ಪಡೆದಿದ್ದಾರೆ. ವಶಕ್ಕೆ ಪಡೆದು ಕಾಗಲ್‌ಗೆ ಕರೆದೊಯ್ದಿದ್ದಾರೆ.
ಉದ್ಧವ್ ಠಾಕ್ರೆ ಶಿವಸೇನೆ ಬಣ ಇಂದು (ನ.01) ಬೆಳಗಾವಿ ಚಲೋಗೆ ಕರೆ ನೀಡಿತ್ತು. ಮಹಾರಾಷ್ಟ್ರದ ನಾಯಕರಿಗೆ ಬೆಳಗಾವಿ ಜಿಲ್ಲೆಗೆ ಪ್ರವೇಶವಿಲ್ಲವೆಂದು ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಅದಾಗ್ಯೂ, ಬೆಳಗಾವಿಯ ಮರಾಠಾ ಭವನ ಬಳಿ ಎಂಇಎಸ್ ಕಾರ್ಯಕರ್ತರು ಕರಾಳ ದಿನ ಆಚರಣೆಗೆ ಸಿದ್ಧತೆ ನಡೆಸಿದ್ದರು.
ಆ ಕಾರ್ಯಕ್ರಮಕ್ಕೆ ಭಾಗಿಯಾಗಲು ಮಹಾರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ಬೆಳಗಾವಿ ಪ್ರವೇಶಿಸಲು ಮುಂದಾಗಿದ್ದರು. ಅವರೆಲ್ಲರನ್ನೂ ಕೊಗನೊಳ್ಳಿ ಟೋಲ್‌ಗೇಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.