ಬುಧವಾರ ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ಮನೆ ಗೋಡೆ ಕುಸಿದು 8 ವರ್ಷದ ಬಾಲಕಿಯೊಬ್ಬಳು ಸ್ಥಳದಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಜೋಳಗಾ ಗ್ರಾಮದಲ್ಲಿ ಗುರುವಾರ ನಡೆದಿದೆ.
ಸಂಧ್ಯಾರಾಣಿ (8 ವರ್ಷ) ಸಂಜುಕುಮಾರ ಮೃತ ಬಾಲಕಿ, ಎರಡನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಇಂದು (ಗುರುವಾರ) ಈದ್ ಮಿಲಾದ್ ರಜೆ ಕಾರಣ ಮನೆಯಲ್ಲಿದ್ದಳು. ಪೋಷಕರು ಮಗಳಿಗೆ ಮನೆಯಲ್ಲಿಯೇ ಬಿಟ್ಟು ಕೂಲಿಗೆ ತೆರಳಿದರು, ಬಾಲಕಿ ಆಟ ಆಡುವಾಗ ವೇಳೆ ಪಕ್ಕದ ಮನೆಯವರ ಗೋಡೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಮೃತ ಬಾಲಕಿಯ ಪೋಷಕರು ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಟ್ಟು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಮದಕಟ್ಟಿ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.