ನೀಗೊನಿ | ದೊಡ್ಡೀರಿಗೆ ಒಂಚಣ ಅನ್ನುಸ್ತು… ‘ಇವ್ನೇ ಯಾಕೆ ಗಂಡ ಆಗಬಾರ್ದು?’

Date:

ಪೊಗಡುಸ್ತಾದ ಹೋರಿ ತರ ಇದ್ದ ಕೋಡಿನ ನೋಡಿ ಹಟ್ಯಾದ ಹಟ್ಟೆರೆಲ್ಲಾ ದಂಗಾಗೋಗಿದ್ರು. ತೋಳಲ್ಲಿ ಬಿಗಿಮಣಿಕಟ್ನಂತೆ ಎಳ್ದು ಬಿಗೆದ್ಸಿರುವ ಮಣಿಸರ. ಹಣೆಮ್ಯಾಲೆ ಆ ಕಡೆ ಈ ಕಡೆ ಉದ್ವಾಗಿ ಮಲ್ಗಿರೋ ಗೆರ್ಗಳು. ಕಣ್ರೆಪ್ಪೆ ಮೇಲೆ ದಪ್ಪುಕ್ಕೆ ದಟ್ಟವಾದ ಕೂದ್ಲು...

…ಹತ್ರತ್ರ ಬರ್ತಾ ಬರ್ತಾ ಕಿಡಿ ಒಂದು ಮೂರಾಗೋದು, ಮೂರು ಒಂದಾಗೋದು ಆಗ್ತಾನೇ ಇತ್ತು. ಸೊಲ್ಪ ಸೊಲ್ಪವೇ ದನಿ ಕೇಳುಸ್ತು. ಆ ಕಿಡಿಗಳೊಳ್ಗಿಂದ ಮಾತಾಡೋ ದನಿಯೂ ಕೇಳಿಸಂಗಾಯ್ತು.

“ಏನೋ ಇಟೊಂದು ತಡ್ವಾಯ್ತು… ಏನಂತರೋ ಏನೋ?”

“ಐ… ಎಲ್ಲ ನಿನ್ನಿಂದ್ಲೇ ಆಗಿದ್ದು. ಸರ್ಸರನೇ ಹೋಗನ ನಡಿ ಅಂದ್ರೇ, ಅದೇನ್ ತಡಿಯೋ ಸಳಿ ಐತೆ ಸ್ವಲ್ಪ ಈಚ್ಲಮ್ಮನ ಬಿಟ್ಕಳನ ಅಂತ ಕೂಕಂಡು ಘಟೆನೇ ಇಳ್ಸಕ್ಬಿಟ್ಟು ಇಟೊತ್ತು ಮಾಡಿರಿ…”

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಳಿ ಅಲ್ವೇನೋ… ಅದಲ್ದೇ ಮಳೆ ಬೇರೆ, ಏಟು ದೂರ ನಡೀಬೇಕು! ಬೆಳಿಗ್ಗಿಂದ ಗೌಡ್ರ ಮನೆ ಕಾಪ್ರ ಮಾಡಿ ಮಾಡಿ ಮೈಬಾರ ಆಗೋಗಿತ್ತು, ಅದುಕ್ಸೊಲ್ಪ ಕುಡುದ್ರೇ ಮೈಬಾರನೂ ಕಡ್ಮಿ ಆಗುತ್ತೇ ಜತ್ಗೆ ನಡೆಯೋದು ಗೊತ್ತಾಗಲ್ಲ… ಅಂತ…”

“ಆತು ನಡ್ಯಪ್ಪ… ಅವ್ರು ಊರ್ ಬಿಡೋದ್ಕೆ ಮೊದ್ಲೇನೇ ಹೋಗೋನ… ಅಂಗೇನಾದ್ರೂ ಅವ್ರು ಹೊಂಟೋಗಿದ್ರೇ…?”

“ಹೇ… ಹೋಗಲ್ಲ ಬಿಡು. ಈಪಾಟಿ ಮಳೆ ಐತೆ,” ಅಂಬೋ ಮಾತ್ಗಳು ಕೋಡಿ ಕಿವ್ಗೆ ಬಿದ್ವು. ಆ ದನಿಲ್ಲಿ ಮಾತುರನ ದನಿಯಿರೋದ್ ಕೋಡಿಗೆ ಗೊತ್ತಾಯ್ತು. ಧೈರ್ಯ ಬಂದು ಜೋರಾಗಿ ಕೂಗಾಕ್ದ… “ಹೇ ಮಾತೂರ… ಇದ್ಯಾಕೋ ಇಟೊತ್ನಾಗ?” ಎಂದಿದ್ದೇ ತಡ. ಆ ಮೂರಾಕೃತಿಗಳಲ್ಲಿ ಉತ್ಸಾಹ ಹೆಗ್ಲೇರಿ ಓಡ್ಬಂದ್ವು. ಹತ್ರುಕ್ಕೆ ಬಂದಾಗ ಕೋಡಿ ಎತ್ಗುಳ್ನ ಮಪ್ಪುರ್ದು ಗಾಡೀನ ನಿಲ್ಲುಸ್ದ. ಗಾಡಿ ನಿಂತುದ್ದು ನರಸಿಗ್ಯಾನಕ್ಕೆ ಅಡ್ಗಾಲಾದಂಗಾಯ್ತು “ಏನಾಯ್ತೋ… ಯಾಕೋ ಗಾಡಿ ನಿಲ್ಲುಸ್ದೆ?” ಅಂದ್ರು ಅಯ್ಯ. “ಅಯ್ಯ, ತೀತುದ ಕಡೆಯಿಂದ ಮಾತೂರ ಮತ್ತವ್ರ ಕಡೇರೂ ಬತ್ತಾವ್ರೇ. ಏನ್ಕತೆ ಕೇಳಣ ಅಂತ…” “ಹೌದಾ…! ಯಾಕಿರಬೌದು? ಯಾರ ಅದು ಇಲ್ಬರ್ರಾ…” ಎಂದು ತಮ್ಮಿಂದೆ ಇರೋ ಈಚ್ಲುಸಾಪೆ ಎತ್ತಿರು.

ಕೊಪ್ಪೆಯಿಂದ ಮುಚ್ಚೊಗಿದ್ದ ಮೂರು ಆಕೃತಿಗಳು ಕೊಪ್ಪೆಯಿಂದ್ಲೇ, “ನಾವ್ ಅಯ್ಯ… ತೀತುದ ಮಾತೂರ, ನಾಗ್ರ, ಹನ್ಮ. ನಿಮ್ಮನ್ನೇ ನೋಡಕಂತ್ಲೇ ಗೌಡ್ರು ಹೇಳ್ಕಳುಸುದ್ರು…”

“ಔವ್ದೇನೋ… ಏನೋ ಇಷ್ಯ?”

“ಅದೇ ಅಯ್ಯ, ಬೆಳ್ಗೆ ಆಳ್ ಕಳ್ಸಿದ್ರಲ್ಲ ಚಾವ್ಡಿನ್ಯಾಯ ಅಮ್ತಾ. ಆ ಆಳ್ ಬಂದ್ಮೇಲೆ ಊರ್ನಾಗೆ ಸಿಕ್ಕಾಪಟ್ಟೆ ಮಳೆ ಸುರ್ದುಬಿಟ್ತು. ಈಗ್ಲು ಸುರಿತಾನೇ ಇದೆ. ಅದ್ಕೆ ಚಾವ್ಡಿನ್ಯಾಯ ವತ್ತಾರೆನೇ ಇಟ್ಕಳೋದು. ಹೇಳ್ಬರ್ರೋ ಅಂತ ನಮ್ಮುನ್ನ ಅಟ್ಟವ್ರೇ,” ಅಂದ.

“ಅದುನ್ನ ವತ್ತಿಗ್ಮಂಚೆನೆ ಬಂದು ಹೇಳದಲ್ವೇನ್ರೋ… ಈಟು ತಡ್ವಾಗ ಬರೋದು!”

“…ಬೇಗ್ನೇ ಹೊರಟ್ವಿ ಐಯ್ಯ… ಅದು… ಅದು…”

“ಮಾದುಗ್ ನನ್ಮಕ್ಕಳು ಎಲ್ಲೋ ಕುಡಿತ ಕೂಕಂಡು ತಡ ಮಾಡವ್ರೇ… ಇಲ್ದೇದ್ರೇ ಚಂಚಿಗೆ ಮುಂಚೆನೇ ಬರಬೌದಿತ್ತು. ಹೋಗ್ಲಿ… ಮನೆಲ್ಲಿಯೇ ಇರ್ವಾಗ ಬಂದಿದ್ರೇ ಇವ್ಳು ಹೊರುಕ್ಕೆ ಬಿಟ್ತಿರಲಿಲ್ಲ. ಹ್ಯಾಂಗೋ ಮನೆ ಬಿಟ್ಟು ದೂರನೇ ಬಂದ್ಬಿಟ್ಟಿದೀವಿ,” ಅಂದ್ಕಂತಿದ್ರು. ಎತ್ಗುಳ್ನು, ಗಾಡೀನು, ಅದ್ನ ಹಿಡ್ದಿದ್ದ ಹಗ್ಗನ ಕೋಡಿ ಹಿಡ್ದಿದ್ದ. ಗಾಡಿನ ಹಿಂದಕ್ಕೆ ತಿರುಗುಸ್ಲೋ, ಇಲ್ಲ ಮುಂದಕ್ಕೋ… ಕಾಯ್ತಿದ್ದ. ಮೂರು ಜನವು ಮಳೆ ಬೀಳ್ತಿದ್ರೂ ಮಳೆಹನಿಗೋ, ಘಟದೊಳ್ಗಿನ ರಸಕ್ಕೋ ನಿಲ್ಲಕಾಗ್ದೆ ತೂರಾಡ್ತಿದ್ರು. ಅಯ್ಯುನ ಮಾತ್ಗಾಗಿ ಕಾಯ್ತಿದ್ರು. ವಾಪಸ್ಸು ಮನೆಗೋಗದಾ, ಇಲ್ಲ ಮುಂದಕ್ಕೋಗೋದಾ? ವಾಪಸ್ಸು ಹ್ವಾದ್ರು ಮತ್ತೆ ವತ್ತಾರೆನೆ ಎದ್ದು ಹೊರಡ್ಬೇಕು. ಅದ್ರೂ ಬದ್ಲು ಈಗ್ಲೇ ಹ್ವಾದ್ರೇ ನರ್ಸಿ ಮನೆಲಿ ಉಳ್ಕಬೋದು… ಎಂದೆಲ್ಲಾ ಅಂದ್ಕಂಡು, “ಕೋಡಿ… ಹೊಡ್ಯೋ ಗಾಡಿನ, ಅದ್ಯಾಕೆ ನಿಂತ್ಕಂಡೆ?”

“ಅಯ್ಯ, ಊರ್ ಕಡಿಕಾ?”

“ಹೆ… ಅಲ್ವಲೇ, ತೀತುದ್ ಕಡಿಕೆ. ಯೀಗ ಹಿಂದುಕ್ಕೆ ಮನ್ಗೋದ್ರೆ ವತ್ತಾರೆ ಎದ್ದು ಬರಕ್ಕಾಗಲ್ಲ. ಈಗ್ಲೇ ಹೋಗನ ನಡಿ. ಆಗ್ಲೇ ಕತ್ಲು ಜಾಸ್ತಿ ಆಗದೆ,” ಎಂದ್ರು. ಕೋಡಿ ನಕ್ಕು ಗಾಡಿನ ಮುಂದುಕ್ಕೊಡ್ದ. ಅವ್ನು ನಗ್ವಾಗೇನಾದ್ರೂ ಮಿಂಚು ಬಂದಿದ್ರೆ ಕೋಡಿ ಮನ್ಸಿಂದು ಅಯ್ಯರ್‍ರಗೆ ಗೊತ್ತಾಗ್ಬಿಡ್ತಿತ್ತು. ಗೊತ್ತಾದ್ರೂ ಅಯ್ಯ ಅಂಥ ಕ್ರೂರವಾದ ತೀರ್ಪೇನೂ ಕೊಡ್ತಿರ್ಲಿಲ್ಲ. ಹೆಂಡ್ತಿನ ಮೆಚ್ಚಿರೋದ್ಕಿಂತ ನರ್ಸಿನ ಹೆಚ್ಚು ಮೆಚ್ಚಿರೋ ಇಚಾರ ಕೋಡಿಗೆ ಗೊತ್ತಿರೋದು ಅಯ್ಯಂಗೂ ಗೊತ್ತಿತ್ತು. ಅದಷ್ಟೇ ಅಲ್ದೆ, ಅಲ್ಲಿದ್ದ ಮಾತೂರ, ನಾಗ್ರ, ಹನ್ಮರ ಬಾಯಿಗೆ ನರ್ಸಿ-ಅಯ್ಯರ ಇಚಾರ ಅಂದ್ರೆ ಕೆಂಪು ಕೆಂಪಾಗೋ ಎಲಡಿಕೆ.

                           8

ಎಲಡಿಕೆ ಅಗಿತಾ ಅಗಿತಾ ಚಿಕ್ಕಯ್ಯ ಮಗ್ಳು ದೊಡ್ಡಿರಿಯ ಬದ್ಕನ್ನು ಒನ್ಸಾರಿ ಪಕಕ್ಕೆ ವರುಳ್ಸಕಂಡ. ಕೊನೆಮ ಗ್ಳು ದೊಡ್ಡೀರಿನ ಕಾಣದೂರಿನ ಕೋಡಿಗೆ ಕೊಡೋದು ಅಂದ್ರೇ ಚಿಕ್ಕಯ್ಯಂಗೆ ಎಲ್ಲಿಲ್ದ ಸಂಕ್ಟ ಸುರುವಾಗಿತ್ತು. ಇದೇ ಹಟ್ಯಾಗೆ ಏಟು ಜನ ಅವ್ಳನ ಮದ್ವೆ ಮಾಡಿ ಮನೆದುಂಬುಸ್ಕಳಕ್ಕೆ ಕಾಯ್ತ ಇದ್ರು. ಮೊದ್ಲೆರಡು ಹೆಣ್ಮಕ್ಕಳಲ್ಲಿ ನಿಂಗಿನ ಇದೇ ಹಟ್ಟಿಯ ಮೋಟ್ರಂಗಂಗೆ ಕೊಟ್ಟು ಮದ್ವೆ ಮಾಡಿದ್ದ. ಇನ್ನೊಬ್ಳು ಹನ್ಮಿನ ಎರಡು ಪರ್ಲಾಗ್ ದೂರ್ದ ಪಾತ್ನಳ್ಳಿಯ ಕದ್ರನಿಗೆ ಕೊಟ್ಟು ಕೈ ತೊಳ್ಕಂಡಿದ್ದ. ಕೊನೆ ಮಗ್ಳು ದೊಡ್ಡೀರಿ ಮೇಲೆ ಚಿಕ್ಕಯ್ಯಂಗೆ ಅಕ್ರೆ ಜಾಸ್ತಿ. ಅವ್ಳನ್ನ ಆಟು ದೂರ ಕೊಡಕ್ಕೆ ಮನ್ಸು ಒಪ್ತಾನೇ ಇಲ್ಲ. ಆ ಪರ್ದೇಸಿನ ನನ್ಮಗಳು ಯಾಕೆ ಒಪ್ಪುದ್ಲೋ. ಕೋಡಿ ನೋಡಕ್ಕೆ ನಮ್ಮಟ್ಟೀರಿಗಿಂತ ಕಲ್ಗುಂಡು ಇದ್ದಂಗವ್ನೇ. ಬೆಟ್ಟಾನೇ ಕಡ್ದು ಸಿಗ್ದಾಕೋ ಅಂಗೇ ಅವ್ನೇ. ಬೆಟ್ಟದ್ಮೇಲೆ ಬಿಟ್ರು ಜೀವ್ನ ಮಾಡ್ತಾನೆ. ದೊಡ್ಡೋರಿ ತರ ಕಾಣ್ತಾನೆ. ದೊಡ್ಡೀರಿಗೆ ಸರಿಯಾದ್ ಜೋಡಿನೇ. ಈಡುಜೋಡು ಸರೋಯ್ತತೆ. ನಿಜ.

ದೊಡ್ಡೀರಿ ಹುಟ್ದಾಗ ಗಂಡುಡುಗ್ನಂತೆ ಕಾಣ್ವ ಮಗೂನ ನೋಡಿ ಚಿಕ್ಕಯ್ಯ ಗಂಡ್ಮಗಿನಂತೆ ಸಾಕಿದ್ದ. ಗಂಡ್ಮಕ್ಕಳಿಲ್ಲುದ್ಕೂ ದೊಡ್ಡಿರಿನೇ ಗಂಡ್ಮಗಳಾಗಿದ್ಲು. ಬೆಳಿತ ಬೆಳಿತ ಗಂಡ್ಸಿನ ಎಲ್ಲ ಲಕ್ಶುಣಗ್ಳು ದೊಡ್ಡೀರಿ ಜತೆ ಬೆಳಿತ ಹ್ವಾದ್ವು. ಮರ ಹತ್ತೋದು, ಈಜಾಡೋದು, ಗಂಡುಸ್ರು ಜತೆ ಕೆಲ್ಸಕ್ಕೆ ಹ್ವಾಗೋದು, ಯಾವ ಭಯಗೀಯ ಇಲ್ದೆ ಓಡಾಡೋದು ನೋಡಿ ಚಿಕ್ಕಯ್ಯ ಹಿರಿ-ಹಿರಿ ಹಿಗ್ತಿದ್ದ. ದೊಡ್ಡೀರಿ ಬೆಳ್ಯೋ ಚೆಂದ್ಯಕ್ಕೆ ಹಟ್ಟಿನೋರೆಲ್ಲ, “ಇಂಥ ಗಂಡ್ಗಿತ್ತಿಗೆ ಗಂಡಾಳು ಎಲ್ಹೊಂಚುತ್ತಿ ಚಿಕ್ಕೋ?” ಎಂದಾಗ, “ಮಾರಮ್ಮವ್ಳೇ ಬಿಡ್ರಪ್ಪಾ…” ಎಂದು ನಗ್ತತ್ತಿದ್ದ.

ದೊಡ್ಡೀರಿ ಬೆಳಿತ ಚಿಕ್ಕಯ್ಯನ ಹೆಗಲ್ಬಾರ ಕಮ್ಮಿ ಆಗ್ತಹೋದ್ವು. ಎಲ್ಲಾನ್ನೂ ದೊಡ್ಡೀರಿನೇ ನಿಭಾಯಿಸೋದ್ಕೆ ಶುರು ಮಾಡುದ್ಲು. ದೊಡ್ಡೀರಿ ಬೆಳಿತ ಇರೋದ್ನ ನೋಡಿ ಕುಸಿಪಡ್ತಿದ್ದ ಚಿಕ್ಕಯ್ಯಂಗೆ ಹಟ್ಟೇರು ಹೇಳ್ದನ್ಗೆ, ಇಂಥ ಮಗ್ಳಿಗೆ ಗಂಡು ಎಲ್ಲಂತ ಹುಡ್ಕೋದು ಎಂಬೋ ಸಿಂತೆ ಸುರುವಾತು. ನಮ್ಮಟ್ಟಿ ಹುಡುಗ್ರು ದೊಡ್ಡೀರಿ ಮ್ಯಾಲೆ ಕಣ್ಣಾಕಿರೋದು ಚಿಕ್ಕಯ್ಯಂಗೂ ಗೊತ್ತಿತ್ತು. ಆದ್ರೆ ಅವರ್ಯಾರು ದೊಡ್ಡೀರಿಯ ಎಡ್ಗಾಲ್ಗೂ ಸಮ ಇರ್ಲಿಲ್ಲ. ಎಲ್ಲ ಕುಡ್ದು-ಕುಡ್ದು ಗಂಡಸ್ತನನ್ನೇ ಕಳ್ಕೊಂಡ್ಬಿಟ್ಟಿದ್ರು. ಅಂಥವ್ರಿಗೆ ಮಗ್ಳನ್ನು ಕೊಡೋದು ಚಿಕ್ಕಯ್ಯಂಗೆ ಇಷ್ಟಇರ್ಲಿಲ್ಲ. ಮಾರಮ್ಮನೇ ಏನಾದ್ರೂ ಹಾದಿ ತೋರುಸ್ತಳೇ ಅಂತ ಕಾಯ್ತಿದ್ದ. ಆ ಹೊತ್ನಾಗೆ ಹಟ್ಟಿಗೆ ಬಂದಿಳಿದಿದ್ದ ಕೋಡಿ.

ಇಷ್ಟೆಲ್ಲ ಜನ್ರು ನಡ್ವೆ ಎತ್ರುದ ಪೊಗಡುಸ್ತಾದ ಹೋರಿ ತರ ಇದ್ದ ಕೋಡಿನ ನೋಡಿ ಹಟ್ಯಾದ ಹಟ್ಟೆರೆಲ್ಲಾ ದಂಗಾಗೋಗಿದ್ರು. ಕೆಳ್ಗಡೆ ಸೊಂಟುದ್ಸುತ್ತ ಅಡ್ಡಲಾಗಿ ಕಟ್ಕಂಡಿದ್ದ ಅರವೆ. ಅದ್ಕೆ ಹೊಂದ್ಕಂಡಂಗೆ ಚೂಪಾದ ಕುಡ್ಲು ನೇತಾಡ್ತಿತ್ತು. ಎಡ್ಗಾಲ್ಗೆ ಎಂತೆದ್ದೋ ಕಪ್ದಾರ. ಎಡಗೈಗೂ ಕರಿಕುರಿದಾರ. ತೋಳಲ್ಲಿ ಬಿಗಿಮಣಿಕಟ್ನಂತೆ ಎಳ್ದು ಬಿಗೆದ್ಸಿರುವ ಮಣಿಸರ. ಹಣೆಮ್ಯಾಲೆ ಆ ಕಡೆ ಈ ಕಡೆ ಉದ್ವಾಗಿ ಮಲ್ಗಿರೋ ಗೆರ್ಗಳು. ಕಣ್ರೆಪ್ಪೆ ಮೇಲೆ ದಪ್ಪುಕ್ಕೆ ದಟ್ಟವಾದ ಕೂದ್ಲು, ಎದುರಿಗಿರೋರ್ಗೆ ಹೆದ್ರುಸಂಗಿರೋ ಕೆಂಪು ಕಣ್ಣು. ಕೆನ್ನೆಲಿ ಒಂದೊಂದೆ ಕಾಣ್ತಿರೋ ಕೂದ್ಲು. ಮೂಗ್ನ ಕೆಳ್ಗಡೆ ಬರೋಕೆ ಹವಣ್ತಿದ್ವು. ತಲೆಮ್ಯಾಲೆ ಗಿಣಿವಸ್ತರ. ಕೈಯಾಗೆ ಒಂದ್ಕಡೆ ಪಿಳ್ಳಂಗೋವಿ. ಆ ಗಂಡುಸನ್ನು ನೋಡಿ ದೊಡ್ಡೀರಿಯೂ ಅವಕ್ಕಾದಳು. ಇವ್ನೇ ಯಾಕೆ ಗಂಡ ಆಗಬಾರ್ದು ಒಂಚಣ ಅನ್ನುಸ್ತು. ಅಲ್ಸೇರಿದ್ದ ಜನುರ್ನೆಲ್ಲ ಆ ಕಡೆ-ಈ ಕಡೆ ಕಳ್ಸಿ ಕೋಡಿಗೆ ಧೈರ್ಯ ತುಂಬಿ, ತನ್ನ ಗುಡ್ಲಿಗೆ ಕರ್ಕೊಂಡೋಗೋ ಧೈರ್ಯ ಮಾಡಿದ್ದು ದೊಡ್ಡೀರಿಯೇ. ಅದುಕ್ಕೆ ಕೋಡಿನೇ ಬೆರಗಾಗಿದ್ದ. ಅವ್ನಿಗೂ ಇಂಥೋಳು, ಈ ಗಟ್ಗಿತ್ತಿ ಜೀಮಾನ ಪೂರ್ತಿ ಜತ್ಗಿದ್ರೆ… ಅಂತನ್ನುಸ್ತು. ದೊಡ್ಡೀರಿಯಿಂದೆ ಹೋಗ್ವಾಗ ಅವ್ಳ ಕೆಚ್ಚು ಕೋಡಿಗೆ ಬಲು ಇಷ್ಟವಾತು. ಅದ್ಕೋ ಏನೋ ಅಂದೇ ನೀಗೊನಿಗೆ ಹೋಗ್ಬೇಕಾಗಿದ್ದೋನು ದಣಿವಿನ ಕುಂಟು ನೆಪ ಹೇಳಿ ಕರಿವಂಗಲದಲ್ಲಿಯೇ ಉಳ್ಳಕೊಂಡಿದ್ದ. ಅದೂ, ದೊಡ್ಡೀರಿಯ ಗುಡ್ಲಲಲ್ಲಿ…

ಹೆಚ್ಚಿನ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ: 
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ರವಿಕುಮಾರ್ ನೀಹ
ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯವರು. ಕನ್ನಡ ಮೇಷ್ಟ್ರು. ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಜೋಡಿಸಿದ ಗಮನಾರ್ಹ ವಿಮರ್ಶಕ. ಇತ್ತೀಚೆಗೆ ಬಿಡುಗಡೆಯಾದ 'ಅರಸು ಕುರನ್ಗರಾಯ' ಕೃತಿ ಇವರ ಸಂಶೋಧನಾ ಆಸಕ್ತಿಯನ್ನು ಮತ್ತು ನಿಜವಾದ ನೆಲಮೂಲದ ಸಂಶೋಧನೆಗಳು ಸಾಗಬೇಕಾದ ಹಾದಿಯನ್ನು ಸಾರುವ ಅಪೂರ್ವ ದಾಖಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...