- ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಕ್ರಮ ಆರೋಪ
- ಎನ್ ಪಿಎಸ್ ಅಡಿಯಲ್ಲಿ ನೇಮಕಗೊಂಡ ಸಿಬ್ಬಂದಿ ಹಳೆ ಪಿಂಚಣಿ ಮಂಜೂರಾತಿಯಲ್ಲಿ ನಡೆದಿರುವ ಬಹುಕೋಟಿ ಅಕ್ರಮ
ಬೀದರನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಎನ್ ಪಿಎಸ್ ಅಡಿಯಲ್ಲಿ ನೇಮಕಗೊಂಡ ಸಿಬ್ಬಂದಿಯ ಹಳೆ ಪಿಂಚಣಿ ಮಂಜೂರಾತಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೆಳಿಬಂದಿದೆ. ಈ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕುಲಪತಿಗಳಾದ ಕೆ.ಸಿ.ವೀರಣ್ಣ ಮತ್ತು ಕುಲಸಚಿವ ಎಸ್. ಶಿವಶಂಕರ್ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಕಮಲಾಕರ್ ಹೆಗಡೆ ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದವು.
ಈ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
“ಬೀದರ್ ನಗರದ ಹೊರವಲಯದ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 2006 ರ ಎಪ್ರಿಲ್ 1ರ ನಂತರ ಎನ್ ಪಿಎಸ್ ಅಡಿಯಲ್ಲಿ ನೇರ ನೇಮಕಾತಿಗೊಂಡ ಸಿಬ್ಬಂದಿಯ ಹಳೆ ಪಿಂಚಣಿ ಮಂಜೂರಾತಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಇತರರು ಬಹುಕೋಟಿ ಹಗರಣ ನಡೆಸಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಹಣದ ಹಿತದೃಷ್ಟಿಯಿಂದ ಬಹುಕೋಟಿ ಅಕ್ರಮ ಎಸಗಿದ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ. ವೀರಣ್ಣ ಮತ್ತು ಕುಲಸಚಿವ ಎಸ್. ಶಿವಶಂಕರ್ ಮತ್ತು ಇತರರಿಗೆ ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆ ನಡೆಸುವಂತೆ 2023 ಸೆಪ್ಟೆಂಬರ್ 22 ರಂದು ಮನವಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ದೂರಿದರು.
ವಿಶ್ವವಿದ್ಯಾಲಯದಲ್ಲಿ 1.4.2006 ರಿಂದ ಹಳೆ ಪಿಂಚಣಿ ಮಂಜೂರಾತಿಯಲ್ಲಿ ನಡೆದಿರುವ ಬಹುಕೋಟಿ ಅಕ್ರಮದ ಬಗ್ಗೆ ಸದರಿ ಅಧಿಕಾರಿಗಳು ಮತ್ತು ಇತರ ನೌಕರರ ವಿರುದ್ಧ ವಿಚಾರಣೆಗೆ ಲೋಕಾಯುಕ್ತ ಸಂಸ್ಥೆ ಮತ್ತು ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಅಕ್ಟೋಬರ್ ವಾರದೊಳಗೆ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದರು.
“ಈ ಬಹುಕೋಟಿ ಹಗರಣ ತನಿಖೆಗೆ ಲೋಕಾಯುಕ್ತ ಸಂಸ್ಥೆ ಮತ್ತು ನಿವೃತ್ತ ನ್ಯಾಯಾಧೀಶರನ್ನು ನೇಮಿಸದಿದ್ದರೆ, ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಹಣದ ಹಿತದೃಷ್ಟಿಯಿಂದ ಅಕ್ಟೊಬರ್ 10 ರಂದು ನಡೆಯುವ ವಿಶ್ವವಿದ್ಯಾಲಯದ ಘಟಿಕೋತ್ಸವ ದಿನದಂದು ವಿಶ್ವವಿದ್ಯಾಲಯದ ಮುಂಭಾಗ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಧರಣಿ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿವಿಧ ಬೇಡಿಕೆ ಈಡೇರಿಕೆಗೆ ಸಿಪಿಐ ಒತ್ತಾಯ
ಈ ಸಂದರ್ಭದಲ್ಲಿ ಕ.ರ.ವೇ. ಜಿಲ್ಲಾಧ್ಯಕ್ಷ ರಾಜಕುಮಾರ ಟಿಳ್ಳೆಕರ್, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಭವಾನಿ, ರಾಜಕುಮಾರ ಶಾಹಪೂರಕರ್, ಉದಯ ಭಾವಿದೊಡ್ಡಿ ಇದ್ದರು.