- ಕಾಂಗ್ರೆಸ್ಸಿನ ವಂಶ ಪಾರಂಪರ್ಯ ರಾಜಕಾರಣವನ್ನು ವಿರೋಧಿಸಿ ಇಕ್ಕಟ್ಟಿಗೆ ಸಿಲುಕಿದ ಮೋದಿ
- ಅಮಿತ್ ಶಾ ಮಗನಿಗೆ ಒಂದು ನ್ಯಾಯ, ನಮಗೊಂದು ನ್ಯಾಯವೇ ಎಂಬುದು ನಾಯಕರ ಪ್ರಶ್ನೆ
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳಿದೆ. ಕಾಂಗ್ರೆಸ್-ಜೆಡಿಎಸ್ ಒಂದು ಕಂತಿನ ಪಟ್ಟಿ ಬಿಡುಗಡೆ ಮಾಡಿ, ಎರಡು-ಮೂರು ಪಟ್ಟಿಗಳತ್ತ ನೋಡುತ್ತಿವೆ. ಆದರೆ ಆಡಳಿತಾರೂಢ ಬಿಜೆಪಿಗೆ, ಡಬಲ್ ಎಂಜಿನ್ ಸರ್ಕಾರಕ್ಕೆ ಮೊದಲ ಪಟ್ಟಿಯೇ ಕಗ್ಗಂಟಾಗಿ ಕೂತಿದೆ. ಅಥವಾ ಕಗ್ಗಂಟಾಗಿ ಮಾಡಲಾಗಿದೆ
ದೆಹಲಿಯ ಬಿಜೆಪಿ ವರಿಷ್ಠರಾದ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್‌ಗಳ ಮನೆ, ಕಚೇರಿಗಳನ್ನು ಎಡತಾಕುತ್ತಿರುವ ರಾಜ್ಯ ಬಿಜೆಪಿ ನಾಯಕರು, ಮೇಲಿಂದ ಮೇಲೆ ಸಭೆಗಳಲ್ಲಿ ಭಾಗಿಯಾಗಿ ಚರ್ಚಿಸಿದರೂ, ಟಿಕೆಟ್ ಹಂಚಿಕೆಯ ವಿಷಯದಲ್ಲಿ ಒಮ್ಮತಕ್ಕೆ ಬರುವುದು ಕಷ್ಟವಾಗುತ್ತಿದೆ. ಪ್ರಧಾನಿ ಮೋದಿಯವರು ವಂಶ ಪಾರಂಪರ್ಯ ರಾಜಕಾರಣ ಒಪ್ಪದೆ, ಪುತ್ರರಿಗೆ ಟಿಕೆಟ್ ಕೊಡುವುದನ್ನು ಉಗ್ರವಾಗಿ ವಿರೋಧಿಸುತ್ತಿದ್ದಾರೆ ಎಂಬ ಸಂದೇಶವನ್ನು ತೇಲಿಬಿಡಲಾಗಿದೆ. ಮಾರಿಕೊಂಡ ಮಾಧ್ಯಮಗಳು, ಕಗ್ಗಂಟಿನ ಕ್ರೆಡಿಟ್ಟನ್ನು ಕೂಡ ಮೋದಿಯ ತಲೆಗೇ ಕಟ್ಟಲು ಹವಣಿಸುತ್ತಿವೆ!
ಆಶ್ಚರ್ಯಕರ ಸಂಗತಿ ಎಂದರೆ, ಬಿಜೆಪಿಯಲ್ಲೂ ವಂಶ ಪಾರಂಪರ್ಯ ರಾಜಕಾರಣ ಹಾಸಿ ಹೊದ್ದು ಮಲಗಿದೆ. ಬಿಜೆಪಿ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲ ವಂಶ ಪಾರಂಪರ್ಯ ರಾಜಕಾರಣವಿದೆ. ಇದನ್ನು ಒಪ್ಪಿಕೊಂಡರೆ, ಕಾಂಗ್ರೆಸ್ಸಿಗಿಂತ ಭಿನ್ನವಿಲ್ಲ ಎಂದಾಗುತ್ತದೆ. ಒಪ್ಪದಿದ್ದರೆ, ಮೋದಿ ಬೂಟಾಟಿಕೆ ಬಯಲಾಗುತ್ತದೆ.
ಬಿಜೆಪಿಯ ಹಿರಿಯ ನಾಯಕರೆನಿಸಿಕೊಂಡವರು ತಮ್ಮ ಮಕ್ಕಳಿಗೆ ಟಿಕೆಟ್ ಕೇಳುತ್ತಿದ್ದಾರೆ. ಅದು ಇವತ್ತಿನ ರಾಜಕಾರಣದಲ್ಲಿ ಸಹಜ ಪ್ರಕ್ರಿಯೆ ಎನಿಸಿಕೊಂಡಿದೆ. ಆ ಕಾರಣದಿಂದಾಗಿಯೇ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಗ ವಿಜಯೇಂದ್ರಗಾಗಿ ಶಿಕಾರಿಪುರ; ಸಚಿವ ಗೋವಿಂದ ಕಾರಜೋಳ ಮಗ ಗೋಪಾಲ ಕಾರಜೋಳಗಾಗಿ ಮುಧೋಳ; ಮಾಜಿ ಮಂತ್ರಿ ಕೆ.ಎಸ್.ಈಶ್ವರಪ್ಪ ಮಗ ಕಾಂತೇಶಗಾಗಿ ಶಿವಮೊಗ್ಗ ನಗರ; ಸಚಿವ ವಿ.ಸೋಮಣ್ಣ ಮಗ ಅರುಣ್ ಸೋಮಣ್ಣಗಾಗಿ ಗುಬ್ಬಿ; ಮಂತ್ರಿ ಎಂಟಿಬಿ ನಾಗರಾಜ್ ಮಗ ನಿತೇಶ್ ನಾಗರಾಜ್‌ಗಾಗಿ ಹೊಸಕೋಟೆ; ತುಮಕೂರು ಸಂಸದ ಜಿ.ಎಸ್. ಬಸವರಾಜು ಮಗ ಜ್ಯೋತಿ ಗಣೇಶ್‌ಗಾಗಿ ತುಮಕೂರು; ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಮಗ ಜಿ.ಎಸ್. ಅನಿತ್‌ಗಾಗಿ ದಾವಣಗೆರೆ ಉತ್ತರ ಅಥವಾ ಚಿತ್ರದುರ್ಗ; ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಮಗ ನಿಖಿಲ್‌ಗಾಗಿ ಹುಕ್ಕೇರಿ; ಶಾಸಕ ತಿಪ್ಪಾರೆಡ್ಡಿ ಮಗ ಸಿದ್ದಾರ್ಥ್ ಗಾಗಿ ಚಿತ್ರದುರ್ಗ; ಸಚಿವ ಆನಂದ್ ಸಿಂಗ್ ಮಗ ಸಿದ್ದಾರ್ಥ್ ಸಿಂಗ್‌ಗಾಗಿ ವಿಜಯನಗರ; ದಿವಂಗತ ಆನಂದ್ ಮಾಮನಿ ಪುತ್ರನಿಗಾಗಿ, ಅವರ ಅಭಿಮಾನಿಗಳು ಸವದತ್ತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡುವಂತೆ ಮನವಿ, ಬೇಡಿಕೆ, ಶಿಫಾರಸ್ಸು, ಬ್ಲ್ಯಾಕ್ ಮೇಲ್ ತಂತ್ರದ ಮೊರೆ ಹೋಗಿದ್ದಾರೆ.
ಆದರೆ, ಪ್ರಧಾನಿ ನರೇಂದ್ರ ಮೋದಿಯವರು, ಬಾಯ್ಬಿಟ್ಟರೆ ಸಾಕು, `ದೇಶ ಹಾಳಾಗಿಹೋಗಿರುವುದೇ ಈ ವಂಶ ಪಾರಂಪರ್ಯ ರಾಜಕಾರಣದಿಂದ, ಆಳ್ವಿಕೆಯಿಂದ. ಇದು ಸ್ವಜನಪಕ್ಷಪಾತಕ್ಕೆ, ಭ್ರಷ್ಟಾಚಾರಕ್ಕೆ ಈಡುಮಾಡುತ್ತದೆ, ದೇಶದ ಅಭಿವೃದ್ಧಿಗೆ ಕಂಟಕವಾಗುತ್ತದೆ’ ಎಂದು ವೇದಿಕೆ ಸಿಕ್ಕಾಗಲೆಲ್ಲ ಉಗ್ರವಾಗಿ ಭಾಷಣ ಬಿಗಿದಿದ್ದಾರೆ. ಅವರ ನೇರ ದಾಳಿ ಇರುವುದು ಕಾಂಗ್ರೆಸ್ಸಿನ ವಂಶಾಡಳಿತದ ವಿರುದ್ಧ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಿರುದ್ಧ. ಕಾಂಗ್ರೆಸ್ಸಿನ ವಂಶಾಡಳಿತವನ್ನು ದೇಶದಿಂದ ಬೇರು ಸಮೇತ ಕಿತ್ತೊಗೆಯುವುದೇ ಮೋದಿಯವರ ಪರಮೋಚ್ಛ ಆದ್ಯತೆ ಎಂಬಂತೆ ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿ ದೇಶದಾದ್ಯಂತ ಪ್ರಚಾರ ಮಾಡುತ್ತಿದೆ.
ಜೊತೆಗೆ, ಪ್ರಧಾನಿ ಮೋದಿಯಿಂದ ಉದುರಿದ ಈ ಅಣಿಮುತ್ತುಗಳಿಗಾಗಿಯೇ ಕಾದು ಕುಳಿತಿರುವ ಗೋದಿ ಮೀಡಿಯಾ, ಮೋದಿಯವರ ವಂಶ ಪಾರಂಪರ್ಯದ ವಿರುದ್ಧದ ಮಾತುಗಳಿಗೆ ಹೆಚ್ಚಿನ ಪ್ರಚಾರ ನೀಡಿ, ಮೋದಿಯನ್ನು ಮೆರೆಸಿವೆ. ಮೆರೆಸುವ ಮೂಲಕ ಮೋದಿ ಅಂದರೆ ವಂಶ ಪಾರಂಪರ್ಯ ರಾಜಕಾರಣದ ವಿರುದ್ಧ ಎಂದು ಬ್ರಾಂಡ್ ಮಾಡಿವೆ. ಅದಕ್ಕೆ ಅವರ ಒಂಟಿ ಜೀವನವನ್ನು, ದೇಶಕ್ಕಾಗಿ ಮಾಡುತ್ತಿರುವ ತ್ಯಾಗಕ್ಕೆ ಹೋಲಿಕೆ ಮಾಡಿ ಹಾಡಿ ಹೊಗಳುತ್ತಿವೆ. ಈಗ ಯಡಿಯೂರಪ್ಪನವರ ಬೇಡಿಕೆಗೆ ಒಪ್ಪಿದರೆ, ಮೋದಿಯ ವಂಶ ಪಾರಂಪರ್ಯದ ಬಗೆಗಿನ ವಿರೋಧ ನಾಟಕ ಎನಿಸಿಕೊಳ್ಳುತ್ತದೆ. ಹಾಗಾಗಿ ಗೋದಿ ಮೀಡಿಯಾ, ಇಲ್ಲೂ ಮೋದಿಗೆ ಕಳಂಕ ಅಂಟಿಕೊಳ್ಳದಿರಲು, `ವಂಶ ಪಾರಂಪರ್ಯ ರಾಜಕಾರಣಕ್ಕೆ ಮೋದಿ ವಿರೋಧ, ಅದಕ್ಕಾಗಿ ಟಿಕೆಟ್ ಕಗ್ಗಂಟು’ ಎನ್ನುವ ಸುದ್ದಿ ಬಿತ್ತನೆಯಲ್ಲಿ ತೊಡಗಿದೆ.
ರಾಜ್ಯ ಬಿಜೆಪಿ ನಾಯಕರು ತಮ್ಮ ಪುತ್ರರಿಗೆ ಟಿಕೆಟ್ ಬೇಕೆಂದು ಬೇಡಿಕೆ ಇಡುವುದು, ಅದನ್ನು ಮೋದಿ ಮತ್ತವರ ತಂಡ ತಥಾಸ್ತು ಎನ್ನುವುದು- ಆಡುವುದು ಒಂದು, ಮಾಡುವುದು ಇನ್ನೊಂದು ಎಂದಾಗುವುದಿಲ್ಲವೇ? ಬಿಜೆಪಿಗರು ಸೋಗಲಾಡಿಗಳು ಎನ್ನುವುದಿಲ್ಲವೇ? ಎಂಬ ಜಿಜ್ಞಾಸೆಗೆ ಬಿದ್ದ ಬಿಜೆಪಿಗರು, ಇದಕ್ಕೆ ಮೋದಿ ವಿರೋಧವಿದೆ ಎಂದು ಹೇಳುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಯಡಿಯೂರಪ್ಪರನ್ನು ಹೊರಗಿಟ್ಟು ಸಭೆ; ಬೇಸರದಿಂದ ಬೆಂಗಳೂರಿಗೆ ವಾಪಾಸು
ಬಲಿಷ್ಠ ಮತ್ತು ಬಹುಸಂಖ್ಯಾತ ಲಿಂಗಾಯತ ಕೋಮಿನ ಅಗ್ರಗಣ್ಯ ನಾಯಕ ಯಡಿಯೂರಪ್ಪನವರ ಪುತ್ರ ವಿಜಯೇಂದ್ರರಿಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸಿ, ಗೆಲ್ಲಿಸಿ, ವಿಧಾನಸೌಧದ ಮೆಟ್ಟಿಲು ಹತ್ತಿಸುವುದು ಯಡಿಯೂರಪ್ಪನವರ ಅಂತಿಮ ಆಸೆ. ಯಡಿಯೂರಪ್ಪನವರ ಬೇಡಿಕೆಗೆ ದಿಲ್ಲಿ ನಾಯಕರು ಮಣಿದರೆ, `ಅವರಿಗೆ ಕೊಟ್ಟಿದ್ದೀರ, ನಮಗೂ ಕೊಡಿ’ ಎಂದು ಮತ್ತೊಂದಿಷ್ಟು ನಾಯಕರಿಂದ ಬೇಡಿಕೆ ಬರುತ್ತದೆ. ಅಕಸ್ಮಾತ್ ಯಡಿಯೂರಪ್ಪನವರ ಮನವಿಯನ್ನು ಪರಿಗಣಿಸದಿದ್ದರೆ, ಮಗನಿಗೆ ಟಿಕೆಟ್ ಕೊಡದಿದ್ದರೆ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯುತ್ತದೆ. ಜೊತೆಗೆ ಬಿಜೆಪಿ ವಿರುದ್ಧ ಭಿನ್ನಮತ-ಬಂಡಾಯ ಶುರುವಾಗುತ್ತದೆ. ಪಕ್ಷಕ್ಕೆ ಹಿನ್ನಡೆ ಉಂಟಾಗುತ್ತದೆ.
ಸಂಕಷ್ಟಕ್ಕೆ ನಿಲುಕಿರುವ ಬಿಜೆಪಿ ಅಳೆದು ತೂಗಿ ಟಿಕೆಟ್ ಹಂಚಿಕೆಯ ವಿಷಯವನ್ನು ಮುಂದೂಡುತ್ತಲೇ ಇದೆ. ಅಷ್ಟಕ್ಕೂ ಆರೆಸ್ಸೆಸ್‌ನ ರಾಜಕೀಯ ರಂಗವಾದ ಬಿಜೆಪಿ, ಇಂದು ಬರೀ ಬ್ರಾಹ್ಮಣರ ಪಕ್ಷವಾಗಿ ಉಳಿದಿಲ್ಲ. ತತ್ವ-ಸಿದ್ಧಾಂತಗಳನ್ನು ಪಾಲಿಸುವ ಪವಿತ್ರ ಪಕ್ಷವೂ ಆಗಿಲ್ಲ. ವಂಶ ಪಾರಂಪರ್ಯ ರಾಜಕಾರಣ ಈ ಪಕ್ಷವನ್ನೂ ಬಿಟ್ಟಿಲ್ಲ. ಬಿಜೆಪಿಯಲ್ಲಿರುವ ಅರ್ಧಕ್ಕರ್ಧ ನಾಯಕರು ಬೇರೆ ಪಕ್ಷಗಳಿಂದ ವಲಸೆ ಬಂದವರು. ಸಂವಿಧಾನಕ್ಕೆ ವಿರುದ್ಧವಾಗಿ ಸರ್ಕಾರ ರಚಿಸುವಾಗ ಅಕ್ರಮ ಹಾದಿಯಲ್ಲಿ ಖರೀದಿಗೊಳಪಟ್ಟವರು. ಬಿಜೆಪಿಯಲ್ಲಿರುವ ಹೆಚ್ಚಿನವರು ಭ್ರಷ್ಟರು, ಕ್ರಿಮಿನಲ್‌ಗಳು. ಇವರ ವಿರುದ್ಧ ಕ್ರಮ ಕೈಗೊಳ್ಳುವ, ಮಾತನಾಡುವ ನೈತಿಕ ಹಕ್ಕನ್ನೇ ಬಿಜೆಪಿಯ ವರಿಷ್ಠರು ಕಳೆದುಕೊಂಡಿದ್ದಾರೆ. ಉದಾಹರಣೆಗೆ, ಗೃಹಸಚಿವ ಅಮಿತ್ ಶಾ ಮಗ ಜೈ ಶಾ ಬಿಸಿಸಿಐ ಕುರ್ಚಿಯಲ್ಲಿ ಕೂತಿದ್ದಾನೆ. ಜೈ ಶಾ ಏನು ಕ್ರಿಕೆಟ್ ಪಟುವೇ?
ಹಾಗಾಗಿ ಇಂದಿನ ಬಿಜೆಪಿ ದೇಶದ ಇತರೆ ರಾಜಕೀಯ ಪಕ್ಷಗಳಿಗಿಂತ ತೃಣಮಾತ್ರವೂ ಭಿನ್ನವಾಗಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಬಿಜೆಪಿಯಲ್ಲೂ ಇದೆ. ದೇಶವನ್ನೇ ಬೆಂಕಿಯಲ್ಲಿ ಬೇಯಿಸುವ ಕಿಡಿಗೇಡಿಗಳ ಗುಂಪೇ ಅಲ್ಲಿದೆ. ಇಂತಹ ಸ್ಥಿತಿಯಲ್ಲಿ, ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರ ಬೇಡಿಕೆಯನ್ನು ಮನ್ನಿಸದೆ, ನಿರ್ಲಕ್ಷಿಸುವುದು, ಅವರಿಗೆ ಅವಮಾನ ಮಾಡುವುದು, ಸಭೆಯಿಂದ ಹೊರಗಿಡುವುದು- ಬಿಜೆಪಿಯ ಭವಿಷ್ಯವನ್ನು ಬರಿದು ಮಾಡಲಿದೆ. ಅದು ಗೊತ್ತಿದ್ದೂ, ಇಂತಹ ಸಂದಿಗ್ಧ ಸಂದರ್ಭದಲ್ಲಿಯೂ `ಬದ್ಧತೆ’ಯ ಹೆಸರಲ್ಲಿ ನಾಟಕವಾಡುವುದು- ಮೋದಿ ಮಾತ್ರ!