ಬಿಜೆಪಿ ಟಿಕೆಟ್ ಹಂಚಿಕೆ ಕಗ್ಗಂಟು: ಯಡಿಯೂರಪ್ಪರನ್ನು ಹೊರಗಿಟ್ಟು ಸಭೆ; ಬೇಸರದಿಂದ ಬೆಂಗಳೂರಿಗೆ ವಾಪಾಸು

Date:

  • ನಡೆಯದ ಸಭೆ, ಬೇಸರದಿಂದ ಬೆಂಗಳೂರಿನತ್ತ ಯಡಿಯೂರಪ್ಪ
  • ಐದು ನಿಮಿಷದ ಅಮಿತ್‌ ಶಾ ಭೇಟಿ, ಮಾತು ಕೇಳದ ನಡ್ಡಾ

ಬಿಜೆಪಿಯ ಅಗ್ರನಾಯಕ, ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ದೆಹಲಿಯ ವರಿಷ್ಠರೊಂದಿಗೆ ನಡೆದ ಮೂರು ಸಭೆಗಳಿಂದಲೂ ಹೊರಗಿಟ್ಟ ಸುದ್ದಿ ಹೊರಬಿದ್ದಿದೆ.

ದೆಹಲಿ ನಾಯಕರ ಈ ವರ್ತನೆಗೆ ಬೇಸತ್ತ ಕರ್ನಾಟಕದ ಅಗ್ರನಾಯಕ ಯಡಿಯೂರಪ್ಪನವರು, ಬಂದ ದಾರಿಗೆ ಸುಂಕವಿಲ್ಲವೆಂದು ಭಾವಿಸಿ, ಬೇಸರದಿಂದಲೇ ಸಂಜೆ 5ರ ಬೆಂಗಳೂರಿನ ವಿಮಾನವೇರಿದ ಸುದ್ದಿ ಹಬ್ಬಿದೆ.

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್- ಎರಡೂ ಪಕ್ಷಗಳೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೆ, ಆಡಳಿತಾರೂಢ ಬಿಜೆಪಿ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡದೆ, ಮೀನ ಮೇಷ ಎಣಿಸುತ್ತಿದೆ. ದೆಹಲಿಯಲ್ಲಿ ಸಭೆಗಳ ಮೇಲೆ ಸಭೆಗಳನ್ನು ನಡೆಸಿ ಕಗ್ಗಂಟು ಮಾಡಿಕೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜ್ಯದ ನಾಯಕರಾದ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಪ್ರಲ್ಹಾದ್ ಜೋಷಿ, ಸಿಟಿ ರವಿ ಅವರುಗಳು ಶನಿವಾರವೇ ದೆಹಲಿ ತಲುಪಿ, ಶನಿವಾರ ಬೆಳಗ್ಗೆ 11ರಿಂದ ರಾತ್ರಿ 12ರ ತನಕ ನಡೆದ ಸಭೆಗಳಲ್ಲಿ ಪಾಲ್ಗೊಂಡು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಶನಿವಾರದ ಸಭೆಗಳ ನಂತರ, ಸೋಮವಾರ ಬೆಳಗ್ಗೆ ಮತ್ತೆ ಆರಂಭವಾದ ಸಭೆಗಳಿಗೆ ರಾಜ್ಯ ನಾಯಕರು ಪಾಲ್ಗೊಂಡು ಪಟ್ಟಿ ಅಂತಿಮಗೊಳಿಸಬೇಕಾಗಿತ್ತು. ಅದರಂತೆ, ಸಂಸದ ರಾಘವೇಂದ್ರ ಅವರ ಮನೆಯಲ್ಲಿ ಬೆಳಗ್ಗೆ ತಿಂಡಿ ತಿಂದು ಹೊರಟ ಯಡಿಯೂರಪ್ಪನವರು, ಮೊದಲು ಧರ್ಮೇಂದ್ರ ಪ್ರಧಾನ್ ಅವರ ಮನೆಯಲ್ಲಿ ನಿಗದಿಯಾಗಿದ್ದ ಸಮಯಕ್ಕೆ ಸಭೆಗೆ ಹೊರಟರು.

ಧರ್ಮೇಂದ್ರ ಪ್ರಧಾನ್ ಮನೆಯಲ್ಲಿ ಆಗಲೇ ರಾಜ್ಯ ನಾಯಕರಾದ ನಳಿನ್, ಬೊಮ್ಮಾಯಿ, ಪ್ರಲ್ಹಾದ್ ಜೋಷಿಗಳಿರುವ ಸುದ್ದಿಯನ್ನು ದಾರಿ ಮಧ್ಯೆದಲ್ಲಿಯೇ ತಿಳಿದ ಯಡಿಯೂರಪ್ಪನವರು, ಅವರ ಮನೆಗೆ ಹೋಗದೇ ವಾಪಾಸು ಬಂದರೆಂಬ ಸುದ್ದಿಯನ್ನು ಬಿಜೆಪಿಯ ಮೂಲಗಳು ತಿಳಿಸಿವೆ.

ಇದಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನೆಯಲ್ಲಿ ನಡೆಯಲಿದ್ದ ಸಭೆಯಲ್ಲಿ ಯಡಿಯೂರಪ್ಪನವರು ಪಾಲ್ಗೊಳ್ಳಬೇಕಾಗಿತ್ತು. ಆದರೆ ಆ ಸಭೆಗೂ ಮುಂಚೆಯೇ, ಅಮಿತ್ ಶಾ ಮನೆಯಲ್ಲಿ ಸಿಟಿ ರವಿ ಇರುವ ವಿಚಾರ ಯಡಿಯೂರಪ್ಪನವರಿಗೆ ತಿಳಿದು ಬಂತು. ಆದರೂ, ಅಮಿತ್ ಶಾರನ್ನು ಕಾಣಲು ಹೋದರೆ, ಕೇವಲ ಐದೇ ನಿಮಿಷಗಳ ಅವಧಿಯಲ್ಲಿ ಭೇಟಿ ಮುಗಿದು, ಶಾ ಅರುಣಾಚಲ ಪ್ರದೇಶಕ್ಕೆ ತೆರಳಬೇಕಾಗಿದ್ದರಿಂದ ಕೊನೇ ಕ್ಷಣದಲ್ಲಿ ಆ ಸಭೆಯೂ ರದ್ದಾಯಿತು. ಹಾಗಾಗಿ ಯಡಿಯೂರಪ್ಪನವರು ಅಮಿತ್ ಶಾರನ್ನು ಭೇಟಿ ಮಾಡಿ, ಟಿಕೆಟ್ ಹಂಚಿಕೆಯ ಬಗ್ಗೆ ಮಾತನಾಡಲಾಗಲೇ ಇಲ್ಲ. ಅಲ್ಲೂ ಅವರಿಗೆ ನಿರಾಶೆಯೇ ಕಾದಿತ್ತು.

ಧರ್ಮೇಂದ್ರ ಪ್ರಧಾನ್ ಮತ್ತು ಅಮಿತ್ ಶಾ ಮನೆಗಳಲ್ಲಿನ ಸಭೆಗಳ ಕತೆ ಹೀಗಾದರೆ, ಮೂರನೆಯ ಸಭೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮನೆಯಲ್ಲಿ ಸಮಾವೇಶಗೊಳ್ಳಬೇಕಾಗಿತ್ತು. ಆ ಸಭೆಯಲ್ಲಿ ಯಡಿಯೂರಪ್ಪನವರ ಭಾಗಿಯಾಗಿ ಟಿಕೆಟ್ ಹಂಚಿಕೆಯ ಬಗ್ಗೆ ಚರ್ಚಿಸಬೇಕಾಗಿತ್ತು. ಪಟ್ಟಿಯನ್ನು ಫೈನಲೈಸ್ ಮಾಡಬೇಕಿತ್ತು. ಆದರೆ ಅಲ್ಲಿ ಆಗಲೇ ಬಸವರಾಜ ಬೊಮ್ಮಾಯಿ, ಪ್ರಲ್ಹಾದ್ ಜೋಷಿ, ನಳಿನ್ ಕುಮಾರ್ ಕಟೀಲ್ ಗಳಿದ್ದು ಒಂದು ಸುತ್ತಿನ ಮಾತುಕತೆ ಮುಗಿದಿತ್ತು.

ಮತ್ತೊಂದು ಸುತ್ತಿನ ಮಾತುಕತೆಗಾಗಿ ಸ್ವಲ್ಪ ವಿರಾಮ ತೆಗೆದುಕೊಳ್ಳಲಾಗಿತ್ತು. ಆ ವಿರಾಮದ ಸಮಯದಲ್ಲಿ ಯಡಿಯೂರಪ್ಪನವರು ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ಕೇವಲ 5 ನಿಮಿಷಗಳ ಅವಧಿಯಲ್ಲಿಯೇ ಹೊರಬಂದದ್ದು ಈಗ ಬಿಜೆಪಿ ವಲಯದಲ್ಲಿ ಭಾರೀ ಕೋಲಾಹಲವನ್ನು ಎಬ್ಬಿಸಿದೆ. ಹಲವು ಅನುಮಾನಗಳಿಗೆ ಕಾರಣವಾಗಿದೆ. ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ಸಾರುತ್ತಿದೆ.

ನಡ್ಡಾ ಮನೆಯಿಂದ ಹೊರಬಂದ ಯಡಿಯೂರಪ್ಪನವರ ಮನಸ್ಥಿತಿ ಸರಿ ಇರಲಿಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಮತ್ತೆ ಸಭೆ, ಚರ್ಚೆ, ಮಾತುಕತೆ ಯಾವುದಕ್ಕೂ ಆಸಕ್ತಿ ತೋರದ ಯಡಿಯೂರಪ್ಪನವರು ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ, ಸಂಜೆ 5ರ ಬೆಂಗಳೂರು ವಿಮಾನ ಏರಿದರು ಎಂದು ಬಿಜೆಪಿಯ ನಾಯಕರೊಬ್ಬರು ಹಂಚಿಕೊಂಡಿದ್ದಾರೆ.

ಬಿಜೆಪಿಯ ಮೂಲಗಳು ಹೇಳುವ ಪ್ರಕಾರ, ಶನಿವಾರ ನಡೆದ ಸಭೆಗಳಲ್ಲಿ ಯಡಿಯೂರಪ್ಪನವರು ಭಾಗಿಯಾಗಿದ್ದು, ತಮ್ಮದೇ ಆದ ಪಟ್ಟಿಯನ್ನು ದೆಹಲಿ ವರಿಷ್ಠರಿಗೆ ಕೊಟ್ಟಿದ್ದರಂತೆ. ಆ ಪಟ್ಟಿಯನ್ನು ಪರಿಗಣಿಸುವ ನಿಟ್ಟಿನಲ್ಲಿ ನಡೆದ ಸೋಮವಾರದ ಮೂರು ಸಭೆಗಳಲ್ಲಿ ಯಡಿಯೂರಪ್ಪನವರನ್ನು ಪ್ರಜ್ಞಾಪೂರ್ವಕವಾಗಿಯೇ ಹೊರಗಿಡಲಾಗಿತ್ತಂತೆ.

ಈ ಸುಳಿವು ಅರಿತ ಯಡಿಯೂರಪ್ಪನವರು ಸಿಡಿಸಿಡಿ ಅಂತಲೇ ಸುದ್ದಿ ಮಾಧ್ಯಮಗಳ ಕಣ್ಣಿಗೂ ಬೀಳದೆ, ನೇರವಾಗಿ ಬೆಂಗಳೂರಿನ ವಿಮಾನ ಹತ್ತಿದ್ದಾರೆಂಬ ಸುದ್ದಿ ಈಗ ದೆಹಲಿಯಿಂದ ಹೊರಬೀಳುತ್ತಿದೆ.

ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಬಂದಾಗ, ಯಡಿಯೂರಪ್ಪನವರನ್ನು ಹಾಡಿ ಹೊಗಳಿದ್ದರು. ಬೆಂಗಳೂರಿಗೆ ಅಮಿತ್ ಶಾ ಬಂದಾಗ ವಿಜಯೇಂದ್ರನ ಬೆನ್ನು ತಟ್ಟಿ ಶಹಬ್ಬಾಶ್ ಎಂದಿದ್ದರು. ಅವರ ಮನೆಯಲ್ಲಿಯೇ ಬೆಳಗಿನ ಉಪಾಹಾರ ಸೇವಿಸಿ, ಯಡಿಯೂರಪ್ಪನವರು ಪಕ್ಷಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ಅವರ ನಡೆ-ನುಡಿಯಲ್ಲಿಯೇ ಬಹಿರಂಗಪಡಿಸಿದ್ದರು.

ಆದರೆ, ಅದೇ ಯಡಿಯೂರಪ್ಪನವರು ದೆಹಲಿಗೆ ಹೋದಾಗ, ನಾಯಕರು ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾರೆ. ಭೇಟಿಗೆ ನಿರಾಕರಿಸಿ ಅವಮಾನ ಮಾಡಿದ್ದಾರೆ. ತಾವು ಕೊಟ್ಟ ಪಟ್ಟಿಯನ್ನು ಪುರಸ್ಕರಿಸದೆ ತಿರಸ್ಕರಿಸಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ...

ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ...

ಛತ್ತೀಸ್‌ಗಢ ಮತ ಎಣಿಕೆ: ಕ್ಷಣದಿಂದ ಕ್ಷಣಕ್ಕೆ ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕುತೂಹಲದಿಂದ ಕೂಡಿದ್ದು ಕಾಂಗ್ರೆಸ್ ಹಾಗೂ...