- ಬಿಜೆಪಿ ಅಭ್ಯರ್ಥಿ ಮಣಿಕಂಠ ವಿರುದ್ಧ 40 ಪ್ರಕರಣ
- ಮೇ 6ರಂದು ಚಿತ್ತಾಪುರದ ರಾವೂರದಲ್ಲಿ ಸಮಾವೇಶ
ಗಡಿಪಾರಾಗಿದ್ದ ರೌಡಿಶೀಟರ್, ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮೇ 6ರಂದು ಪ್ರಚಾರ ನಡೆಸಲಿದ್ದಾರೆ.
ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಹಣಿಯಲು ಬಿಜೆಪಿ ನಾನಾ ರಣತಂತ್ರಗಳನ್ನು ರೂಪಿಸಿದೆ. ಇದರ ಭಾಗವಾಗಿಯೇ ಅಕ್ಕಿ ಕಳ್ಳತನದ ಆರೋಪ ಹೊತ್ತಿರುವ ಮತ್ತು ಚಿತ್ತಾಪುರದಿಂದ ಗಡಿಪಾರಾಗಿದ್ದ ರೌಡಿಶೀಟರ್ ಮಣಿಕಂಠ ರಾಠೋಡ್‌ಗೆ ಟಿಕೆಟ್ ನೀಡಿದೆ.
ಕಮಲ ಪಾಳಯದ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ದೇಶದ ಪ್ರಧಾನ ಮಂತ್ರಿ ಮೋದಿ ಅವರೇ ಆತನ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, “ಪ್ರಧಾನಿ ಮೋದಿ ಅವರು ಮೇ 2ರಂದು ಕಲಬುರಗಿಯಲ್ಲಿ ರೋಡ್ ಶೋ ನಡೆಸಿ ವಾಪಸ್ ತೆರಳುತ್ತಾರೆ. ನಂತರ ಮೇ 6ರಂದು ಚಿತ್ತಾಪುರ ಕ್ಷೇತ್ರದ ರಾವೂರ ಸಮೀಪದ ಸಮಾವೇಶ ನಡೆಸುತ್ತಾರೆ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಪ್ರಚಾರಕ್ಕೆ ಬರುತ್ತಿರುವ ಬಿಜೆಪಿ ಅಭ್ಯರ್ಥಿಯ ಮೇಲೆ ರಾಜ್ಯದಲ್ಲಿ ಮಾತ್ರವಲ್ಲದೆ ತೆಲಂಗಾಣ ಮತ್ತು ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿವೆ.
ಈ ಸುದ್ದಿ ಓದಿದ್ದೀರಾ? ಗೋಕಾಕ್ | ಕಾಂಗ್ರೆಸ್ ಜೊತೆ ‘ಕೈ’ ಜೋಡಿಸಿದ ಜೆಡಿಎಸ್ ಅಭ್ಯರ್ಥಿ ಉಚ್ಚಾಟನೆ?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, “ಶಿಕ್ಷೆಗೆ ಒಳಗಾದ ಕಳ್ಳನ ಪರವಾಗಿ ಪ್ರಧಾನಿ ಮೋದಿ ಅವರು ಮತ ಕೇಳಲು ಬರುತ್ತಿದ್ದಾರೆ. ಅವರಲ್ಲಿ ಯಾವ ನೈತಿಕತೆಯಿದೆ?” ಎಂದು ಪ್ರಶ್ನಿಸಿದ್ದಾರೆ.
ಟ್ವೀಟ್ ಮಾಡಿ ಪ್ರಧಾನಿ ವಿರುದ್ಧ ಕುಟುಕಿರುವ ಕಾಂಗ್ರೆಸ್, “ಗಡಿಪಾರಾಗಿದ್ದ ರೌಡಿಶೀಟರ್ ಹಾಗೂ ಸರ್ಕಾರದ ಅಕ್ಕಿ ಕಳ್ಳತನದ ಆರೋಪಿಗೆ ಟಿಕೆಟ್ ನೀಡಿರುವುದು ಬಿಜೆಪಿಯ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿತ್ತು” ಎಂದು ಹೇಳಿದೆ.
“ಈಗ ಪ್ರಧಾನಿ ಮೋದಿ ಕಳ್ಳಕಾಕರ ಪರ ಮತ ಕೇಳಲು ಬರುವ ಮೂಲಕ ಈ ದೇಶಕ್ಕೆ ಕಳಂಕ ತರುತ್ತಿದ್ದಾರೆ. ರೌಡಿಗಳಿಗೆ ಕೈಮುಗಿಯುವ ಹಾಗೂ ಮತ ಕೇಳುವ ಮೂಲಕ ಪ್ರಧಾನಿ ಹುದ್ದೆಯ ಘನತೆ ಕಳೆದಿದ್ದಾರೆ” ಎಂದು ವ್ಯಂಗ್ಯವಾಡಿದೆ.