- ರಾಣೆಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ ಪರವಾಗಿ ಸಿಎಂ ರೋಡ್ ಶೋ
- ಚುನಾವಣೆ ಸಂದರ್ಭದಲ್ಲಿ ಜನರಿಗೆ ಮೋಸ ಮಾಡುವ ತಂತ್ರ ಕಾಂಗ್ರೆಸ್ನದ್ದು: ಸಿಎಂ ಬೊಮ್ಮಾಯಿ
ಮೋಸ ಮಾಡುವ ಕಾಂಗ್ರೆಸ್ ಈಗ ಮತ್ತೆ ಗ್ಯಾರಂಟಿ ಕಾರ್ಡ್ ಜೊತೆ ಬಂದಿದೆ. ಅವರ ಮೇಲೆ ಜನರಿಗೆ ವಿಶ್ವಾಸ ಹೋಗಿದೆ. ಅದು ಬೋಗಸ್ ಕಾರ್ಡ್ ಆಗಿದ್ದು, ಚುನಾವಣೆವರೆಗೂ ಮಾತ್ರ ಗ್ಯಾರಂಟಿ, ಆಮೇಲೆ ಗಳಗಂಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಸೋಮವಾರ ರಾಣೆಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದ ಅವರು, “ಕಾಂಗ್ರೆಸ್ ಅವರು ಈಗ 10 ಕೆಜಿ ಅಕ್ಕಿ ಕೊಡುವುದಾಗಿ ಚುನಾವಣೆ ಸಂದರ್ಭದಲ್ಲಿ ಹೇಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಮೋಸ ಮಾಡುವ ತಂತ್ರ ಕಾಂಗ್ರೆಸ್ನದ್ದು” ಎಂದರು.
“ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಬೇಡಿಕೆ ಇದ್ದರೂ ಕಾಂಗ್ರೆಸ್ ಅವರು ಮಾಡಲಿಲ್ಲ. ನಾನು ಮೀಸಲಾತಿ ಹೆಚ್ಚಳ ಮಾಡಲು ಮುಂದಾದಾಗ ಜೇನುಗೂಡಿಗೆ ಕೈ ಹಾಕಬೇಡಿ ಅಂದರು. ನಾನು ಜೇನು ಕಡಿಸಿಕೊಂಡು ಜೇನು ತುಪ್ಪ ನೀಡಿದ್ದೇನೆ. ಆಂತರಿಕ ಮೀಸಲಾತಿ ಹೆಚ್ಚಳ ಮಾಡಿ ಎಲ್ಲ ಸಮುದಾಯಕ್ಕೆ ನ್ಯಾಯ ಕೊಡಿಸುತ್ತಿದ್ದೇವೆ” ಎಂದು ಸಿಎಂ ತಿಳಿಸಿದರು.
“ಜಯವಾಹಿನಿ ಎಲ್ಲೇ ಹೋದರೂ ಜನರಿಂದ ಅಭೂತಪೂರ್ವ ಜನಬೆಂಬಲ ಸಿಗ್ತಿದೆ. ಕಳೆದ 3 ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. 2023ರ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಬೇಕು. ಅರುಣ್ ಕುಮಾರ್ ಅವರನ್ನು ಗೆಲ್ಲಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-4: ಭ್ರಷ್ಟಾಚಾರವೇ ಚುನಾವಣೆಯ ಪ್ರಧಾನ ಸಂಗತಿ
“ಈ ಭಾಗದಲ್ಲಿ ನೇಕಾರ ಸಮುದಾಯ ದೊಡ್ಡ ಪ್ರಮಾಣದಲ್ಲಿದೆ. ಅವರಿಗಾಗಿ ಜವಳಿ ಪಾರ್ಕ್ ಮಾಡುವುದಾಗಿ ಹೇಳಿದ್ದೆವು. ಈಗಾಗಲೇ ಜವಳಿ ಪಾರ್ಕ್ ಮಂಜೂರಾತಿ ಆಗಿ ಕೆಲಸ ಪ್ರಾರಂಭ ಆಗ್ತಿದೆ. ಟೆಂಡರ್ ಆಗಿದೆ, ಚುನಾವಣೆ ಮುಗಿದ ನಂತರ ಕಾಮಗಾರಿ ಆರಂಭವಾಗಲಿದೆ. ಸ್ಲಂಬೋರ್ಡ್ ನಿಂದ ಬಡವರಿಗೆ 1500 ಮನೆಗಳನ್ನು ನಿರ್ಮಾಣ ಮಾಡಲಾಗಿದೆ” ಎಂದರು.
“ಎಲ್ಲ ಸಮುದಾಯಗಳಿಗೂ ನಾವು ಸಾಮಾಜಿಕ ನ್ಯಾಯ ಕೊಡುವ ಪ್ರಯತ್ನ ಮಾಡಿದ್ದೇವೆ. ಅಧಿಕಾರವನ್ನು ದೀನ ದಲಿತರ ಪರವಾಗಿ ಬಳಕೆ ಮಾಡಿ ಅವರಿಗೆ ರಕ್ಷಣೆ ಕೊಟ್ಟು ಮೀಸಲಾತಿ ನೀಡದರೆ ಅದೇ ಸಾಮಾಜಿಕ ನ್ಯಾಯ. ನಿಜವಾದ ಸಾಮಾಜಿಕ ನ್ಯಾಯ ನೀಡ್ತಿರೋದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ” ಎಂದು ಬೊಮ್ಮಾಯಿ ಹೇಳಿದರು.