- ಬಿಜೆಪಿಯಿಂದ ನೋವುಂಟಾಗಿದೆ ಎಂದ ರಾಣಿ ಸಂಯುಕ್ತಾ
- ಕಮಲ ಪಾಳಯ ತೊರೆದು ಕಾಂಗ್ರೆಸ್ ಸೇರಿದ 18 ಮಂದಿ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರು ಸೇರಿದಂತೆ ಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಆರೋಪಿಸಿದರು.
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ, ಸಚಿವ ಆನಂದ್ ಸಿಂಗ್ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಸೇರಿದಂತೆ ಬಿಜೆಪಿಯ 18 ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಬಿ ಕೆ ಹರಿಪ್ರಸಾದ್ ಮತ್ತು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಬಿಜೆಪಿ ನಾಯಕರನ್ನು ಬರಮಾಡಿಕೊಂಡರು.
ಜಗದೀಶ್ ಶೆಟ್ಟರ್ ಅವರ ಮೇಲೆ ನಿಗಾ ಇರಿಸಲಾಗಿರುವ ಕುರಿತು ಮಾತನಾಡಿದ ಬಿ ಕೆ ಹರಿಪ್ರಸಾದ್, “ಕೇವಲ ಅವರು ಮಾತ್ರವಲ್ಲ, ನಮ್ಮೆಲ್ಲರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
ಸಿಎಂ ಕಚೇರಿಯ ದುರ್ಬಳಕೆ ಕುರಿತು ಮಾತನಾಡಿ, “ಕೇವಲ ಮುಖ್ಯಮಂತ್ರಿ ಕಚೇರಿ ಮಾತ್ರವಲ್ಲ, ಎಲ್ಲ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ. ಇಡಿಯನ್ನು ಜಾರಿ ನಿರ್ದೇಶನಾಲಯ ಎನ್ನುವುದಕ್ಕಿಂತ ಬಿಜೆಪಿಯ ಚುನಾವಣಾ ವಿಭಾಗ ಎಂದು ಹೇಳಬಹುದು” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಸೂಡಾನ್‌ನಲ್ಲಿ ಕನ್ನಡಿಗರ ರಕ್ಷಣೆಗೆ ಯಾರಿದ್ದಾರೆ, `ವಿಶ್ವಗುರು’ ಏನು ಮಾಡುತ್ತಿದ್ದಾರೆ: ಸಿದ್ದರಾಮಯ್ಯ ಕಿಡಿ
ಜಗದೀಶ್ ಶೆಟ್ಟರ್ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಯತ್ನಾಳ್ ಅವರು ಹೇಳಿದ ಪ್ರಕಾರ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ಕೊಡಬೇಕು. ಈ ಮೊತ್ತವನ್ನು ಬಿಜೆಪಿಯಲ್ಲಿ ಯಾರು ನೀಡಲಿದ್ದಾರೆ” ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ರಾಣಿ ಸಂಯುಕ್ತಾ, “ನಾನಿಂದು ಬಿಜೆಪಿ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದು, ಬಿಜೆಪಿಯಲ್ಲಿ ನಮಗೆ ಸಾಕಷ್ಟು ನೋವಾಗಿದೆ” ಎಂದು ತಿಳಿಸಿದರು.
“ಬರೀ ಟಿಕೆಟ್ ಹಂಚಿಕೆ ವಿಚಾರ ಮಾತ್ರವಲ್ಲ. ಬಿಜೆಪಿಯಲ್ಲಿ ಎಲ್ಲರಿಗೂ ನೋವುಂಟಾಗಿದೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುತ್ತೇವೆ” ಎಂದು ಹೇಳಿದರು.