- ಯಲಹಂಕ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ಪರ ಸಿಎಂ ರೋಡ್ ಶೋ
- ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಅತಿ ಹೆಚ್ಚು ಮತಗಳಿಂದ ಆರಿಸಿ ಬರುತ್ತದೆ: ಸಿಎಂ
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ದುರಾಡಳಿತ, ಪಕ್ಷಪಾತ, ಒಡೆದು ಆಳುವ ನೀತಿ, ಅನ್ಯಾಯ, ಅನೀತಿ, ಅಧರ್ಮ. ಆದ್ದರಿಂದ ಈ ನೆಲದಿಂದ ಕಾಂಗ್ರೆಸ್ ಅನ್ನು ಶಾಶ್ವತವಾಗಿ ಕಿತ್ತುಹಾಕಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಯಲಹಂಕ ಮತ್ತು ರಾಜಾನುಕುಂಟೆಯಲ್ಲಿ ಜಯವಾಹಿನಿ ಯಾತ್ರೆಯಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ಪರ ಚುನಾವಣಾ ಪ್ರಚಾರ ಮಾಡುತ್ತಾ ಮಾತನಾಡಿದರು.
“ಭಾರತೀಯ ಜನತಾ ಪಕ್ಷದ ಜಯವಾಹಿನಿ ಯಾತ್ರೆಯನ್ನು ಯಲಹಂಕದಿಂದ ಶುಭಾರಂಭ ಮಾಡಿದ್ದೇವೆ. ಯಲಹಂಕ ಕ್ಷೇತ್ರ ಅತಿ ಹೆಚ್ಚು ಮತಗಳಿಂದ ಆರಿಸಿ ಬರುವ ಬೆಂಗಳೂರಿನ ನಂಬರ್ ಒನ್ ಕ್ಷೇತ್ರ” ಎಂದರು.
ಸಿದ್ದರಾಮಯ್ಯ ಅವರದ್ದು ಹಗರಣಗಳ ಸರ್ಕಾರ
“2013-18ರ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲೀಸ್ ನೇಮಕಾತಿ ಹಗರಣ, ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ಶಿಕ್ಷಕ ನೇಮಕಾತಿ ಹಗರಣ, 8000 ಕೋಟಿ ಮೌಲ್ಯದ 843 ಎಕರೆ ರಿಡೂ ಹಗರಣ ಮಾಡಿ ಸಿದ್ದರಾಮಯ್ಯ ಅವರು ಬೆಂಗಳೂರನ್ನು ಲೂಟಿ ಮಾಡಿದ್ದಾರೆ. ಇಂತಹ ಕಾಂಗ್ರೆಸ್ ಅನ್ನು ಕಿತ್ತೊಗೆದರೆ ಭ್ರಷ್ಟಾಚಾರ ನಿರ್ಮೂಲನೆಗೊಳಿಸಿದಂತೆ” ಎಂದರು.
ಗ್ಯಾರಂಟಿ ಕಾರ್ಡ್ ಗಳಗಂಟಿ
“ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಜಾತಿ ಒಡೆಯುವ ಕೆಲಸ ಮಾಡಿದ್ದಾರೆ. ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅವರು ಕೊಟ್ಟಿರುವ ಗ್ಯಾರೆಂಟಿ ಕಾರ್ಡ್ ಜೀವ ಇಲ್ಲದ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅದರಲ್ಲಿ ಉಪ್ಪಿನಕಾಯಿ ಹಾಕೋದು ಬಿಟ್ರೆ ಬೇರೇನೂ ಮಾಡೋಕೆ ಆಗಲ್ಲ. ಚುನಾವಣೆವರೆಗೂ ಅದು ಗ್ಯಾರಂಟಿ. ಚುನಾವಣೆ ನಂತರ ಅದು ಗಳಗಂಟಿ. ಆದ್ದರಿಂದ ಕಾಂಗ್ರೆಸ್ ಕಿತ್ತೊಗೆಯಲು ಕೆಂಪೇಗೌಡರು ಮೆಟ್ಟಿದ ಗಂಡು ಭೂಮಿಯಿಂದ ನಾನು ಪ್ರಚಾರ ಮಾಡುತ್ತಿದ್ದೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-2: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ
ಪರಿವಾರದ ಪಕ್ಷಕ್ಕೆ ಅವಕಾಶ ಕೊಡಬೇಡಿ
“ಬೆಂಗಳೂರು ಮಹಾನಗರದಲ್ಲಿ ಸಿಗುವ ಎಲ್ಲ ಸೌಲಭ್ಯಗಳು ರಾಜಾನುಕುಂಟೆಯಲ್ಲಿ ಸಿಗುವಷ್ಟು ಅಭಿವೃದ್ಧಿ ಕೆಲಸ ಆಗಿದೆ. ಸ್ವಜನ ಪಕ್ಷಪಾತ ಮತ್ತು ಪರಿವಾರದ ಪಕ್ಷ ಜೆಡಿಎಸ್‌ಗೆ ಈ ಬಾರಿ ಅವರಿಗೆ ಅವಕಾಶ ಕೊಡಬಾರದು” ಎಂದರು.
1 ಲಕ್ಷ ಮತಗಳ ಲೀಡ್ ನಿಂದ ಗೆಲ್ಲಿಸಿ
“ನನಗೆ ಈಗ ಅತ್ಯಂತ ಆತ್ಮೀಯ ನೆಚ್ಚಿನ ಬಲಭೀಮ ಸ್ನೇಹಿತ. ಯಾಕೆಂದರೆ ನನ್ನ ತಂದೆಯ ಹೆಸರು ಎಸ್ ಆರ್ ಬೊಮ್ಮಾಯಿ, ನನ್ನ ಸ್ಮೇಹಿತನ ಹೆಸರು ಎಸ್ ಆರ್ ವಿಶ್ವನಾಥ್. ಇವರು ಯಾವಾಗ ಎದುರಿಗೆ ಬಂದಾಗ ನಮ್ಮ ತಂದೆ ನೆನಪಿಗೆ ಬರುತ್ತಾರೆ. ಬೆಂಗಳೂರಿನ ಭವ್ಯ ಭವಿಷ್ಯ ಬರೆಯಲು, ಜತೆಗೆ ಯಲಹಂಕಗೆ ಹೊಸ ಚಿಂತನೆ ಕೊಡಲು ಎಸ್ ಆರ್ ವಿಶ್ವನಾಥ ಅವರು 1 ಲಕ್ಷ ಮತಗಳ ಲೀಡ್ ನಿಂದ ಗೆಲ್ಲಿಸಿದರೆ ರಾಜ್ಯದಲ್ಲಿ ಬಿಜೆಪಿ 130 ಸ್ಥಾನ ಪಡೆದು ಮತ್ತೆ ಸರ್ಕಾರ ರಚಿಸಲಿದೆ” ಎಂದು ಬೊಮ್ಮಾಯಿ ಹೇಳಿದರು.