ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ಗೆ ಒಂದು ಚಿಂತೆ; ಬಿಜೆಪಿಗೆ ಮತ್ತೊಂದು ಚಿಂತೆ; ಜೆಡಿಎಸ್‌ಗೆ ಮಗದೊಂದು ಚಿಂತೆ. ಇವರೆಲ್ಲರಿಗಿಂತ ದೊಡ್ಡ ಚಿಂತೆ ನಾಡಿನ ಪ್ರಜ್ಞಾವಂತರದ್ದು. ಕಳೆದ ಕೆಲವು ವರ್ಷಗಳಿಂದ ತಮ್ಮ ಬದುಕು ನರಕ ಮಾಡಿರುವ ಬೆಲೆ ಏರಿಕೆ, ಭ್ರಷ್ಟಾಚಾರ, ಕೋಮುವಾದದಿಂದ ಮುಕ್ತಿ ಸಿಗುವುದೋ ಇಲ್ಲವೋ ಎನ್ನುವ ಆತಂಕ ಜನರಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದೆ. ನಾಳೆ (ಶನಿವಾರ 13.05.2023) ರಂದು ಮತ ಎಣಿಕೆ ನಡೆದು ಫಲಿತಾಂಶ ಬರಲಿದೆ. ಅಭ್ಯಥಿಗಳು ಒಂದು ರೀತಿಯ ಕಾತರ, ನಿರೀಕ್ಷೆ, ಆತಂಕದಿಂದ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ವಿಶೇಷ ಅಂದರೆ, ಫಲಿತಾಂಶದ ಬಗ್ಗೆ ಅಭ್ಯರ್ಥಿಗಳಿಗಿಂತ ಹೆಚ್ಚಿನ ಆತಂಕ ನಾಡಿನ ಪ್ರಜ್ಞಾವಂತರಲ್ಲಿದೆ.
ಚುನಾವಣಾ ಫಲಿತಾಂಶಕ್ಕಾಗಿ ಕಾತರಿಸುತ್ತಿರುವ ಒಬ್ಬೊಬ್ಬ ಅಭ್ಯರ್ಥಿಯದ್ದು ಒಂದೊಂದು ಚಿಂತೆ; ಒಂದೊಂದು ಪಕ್ಷದ್ದು ಒಂದೊಂದು ರೀತಿಯ ಚಿಂತೆ. ಹಲವು ತಿಂಗಳ ಹಿಂದಿನಿಂದಲೇ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರಾಗಿ ನಿಂತವರು ಎಲ್ಲರೂ ಚುನಾವಣಾ ಸಿದ್ಧತೆ ನಡೆಸಿದ್ದರು. ಸದ್ಯದ ಸ್ಥಿತಿಯಲ್ಲಿ ಚುನಾವಣೆ ಎಂದರೆ, ಕೋಟ್ಯಂತರ ರೂಪಾಯಿಯ ಬಾಬತ್ತು. ಈ ಬಾರಿ 10 ಕೋಟಿಯಿಂದ ಐವತ್ತು ಕೋಟಿವರೆಗೆ ಖರ್ಚು ಮಾಡಿದ ಅಭ್ಯರ್ಥಿಗಳೂ ಇದ್ದಾರೆ. ಗೆದ್ದರೆ ಹಣ ವಾಪಸ್ ಗಳಿಸುವ ದಾರಿಗಳು ಅವರಿಗೆ ಗೊತ್ತಿವೆ. ಆದರೆ, ಸೋತರೇನು ಮಾಡುವುದು ಎನ್ನುವುದು ಬಹುತೇಕರ ಚಿಂತೆ.
ಕಾಂಗ್ರೆಸ್ ಪಕ್ಷದವರು ಸದ್ಯಕ್ಕಂತೂ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಂಬಿದ್ದು, ಬಹುತೇಕ ತಮ್ಮದೇ ಸರ್ಕಾರ ಎಂದು ನಂಬಿದ್ದಾರೆ. ಹಾಗಾಗಿ ಯಾರಿಗೆ ಮಂತ್ರಿ ಪದವಿ ಸಿಗುತ್ತೆ ಎನ್ನುವುದರಿಂದ ಹಿಡಿದು, ಯಾರಿಗೆ ಯಾವ ಖಾತೆ ಎನ್ನುವವರೆಗೆ ಹಲವರು ಹಲವು ಬಗೆಗಳಲ್ಲಿ ಯೋಚಿಸತೊಡಗಿದ್ದಾರೆ.
ಬಿಜೆಪಿ ಬಹಿರಂಗವಾಗಿ ತಮಗೇ ಬಹುಮತ ಎಂದು ಹೇಳಿಕೊಳ್ಳುತ್ತಿದ್ದರೂ ಆ ಪಕ್ಷದ ಮುಖಂಡರಿಗೆ ಈ ಬಾರಿ ತಮ್ಮ ಪಕ್ಷ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎನ್ನುವುದು ಗೊತ್ತಿದೆ. ಆದರೆ, ‘ಹೇಗಾದರೂ’ ಮಾಡಿ ತಮ್ಮ ವರಿಷ್ಠರು ಅಧಿಕಾರಕ್ಖೇರಲು ಸಹಾಯ ಮಾಡುತ್ತಾರೆ ಎನ್ನುವ ಭರವಸೆಯಲ್ಲಿದ್ದಾರೆ.
ಇನ್ನು ಜೆಡಿಎಸ್ ಅತಂತ್ರ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಎರಡೂ ಪಕ್ಷಗಳಿಗಿಂತ ಹೆಚ್ಚಿನ ಆಸೆ ಹೊಂದಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಮಗೆ ಬಹುಮತ ಬಾರದಿದ್ದರೆ ಹೇಗೆ ಎನ್ನುವ ಚಿಂತೆಯಾದರೆ, ಜೆಡಿಎಸ್‌ಗೆ ಅವರಿಗೆ ಬಹುಮತ ಬಂದುಬಿಟ್ಟರೆ ಏನು ಮಾಡುವುದು ಎನ್ನುವ ಚಿಂತೆ.
ಆದರೆ, ರಾಜ್ಯದ ಜನರ ಚಿಂತೆ ನಿಜಕ್ಕೂ ಇವರೆಲ್ಲರ ಚಿಂತೆಗಿಂತ ದೊಡ್ಡದು. ಕಳೆದ ಕೆಲವು ವರ್ಷಗಳಿಂದ ದಿನದಿಂದ ದಿನಕ್ಕೆ ಸಾಮಾನ್ಯರ ಬದುಕು ನರಕಸದೃಶವಾಗಿದೆ. ಉಪ್ಪಿನಿಂದ ಹಿಡಿದು ಎಣ್ಣೆವರೆಗೆ, ಬಟ್ಟೆಯಿಂದ ಹಿಡಿದು ಬ್ಯಾಂಕ್ ಬಡ್ಡಿವರೆಗೆ ತಾವು ಬಳಸುವ ಪ್ರತಿಯೊಂದು ವಸ್ತು, ಪದಾರ್ಥದ ಬೆಲೆ ಏರಿಕೆಯಾಗಿದ್ದು, ದಿನದೂಡುವುದೇ ಕಷ್ಟಕರವಾಗಿದೆ. ಬಡವರು ಬಡವರಾಗುತ್ತಲೇ ಸಾಗುತ್ತಿದ್ದರೆ, ದೇಶದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ.
ಒಂದು ಕಡೆ ಜಿಎಸ್‌ಟಿ ಹಂಚಿಕೆ, ಅನುದಾನ ನೀಡಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ; ಮತ್ತೊಂದೆಡೆ ಕೃಷಿ ಕಾಯ್ದೆಗಳ ತಿದ್ದುಪಡಿಯಂಥ ಅಪಾಯಕಾರಿ ನೀತಿಗಳ ಜಾರಿ; ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರದ ಪ್ರತಿ ಕೆಲಸದಲ್ಲೂ ಮೇರೆ ಮೀರಿದ ಭ್ರಷ್ಟಾಚಾರ; ಹಿಂದೆಂದೂ ಇಲ್ಲದ ರೀತಿಯಲ್ಲಿ ಗುತ್ತಿಗೆದಾರರೇ ಬೀದಿಗಿಳಿದು ಸರ್ಕಾರದ 40%, 80% ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆ ಮಾಡಿದರು; ಆತ್ಮಹತ್ಯೆ ಮಾಡಿಕೊಂಡರು. ಪ್ರಧಾನಿಗೆ ಪತ್ರ ಬರೆದರು. ಆದರೆ, ಯಾವುದಕ್ಕೂ ಫಲ ಸಿಗಲಿಲ್ಲ; ಪರಿಹಾರ ಕಾಣಲಿಲ್ಲ. ಆಗ ಎಲ್ಲರೂ ಬಯಸಿದ್ದು, ಮುಂದಿನ ಚುನಾವಣೆಯಲ್ಲಾದರೂ ಇದಕ್ಕೆ ಪರಿಹಾರ ಸಿಗಲಿ ಎಂದು.
ಚುನಾವಣೆ ಮುಗಿದಿದೆ. ಆದರೆ, ಜನರ ಆತಂಕ ಕೊನೆಯಾಗಿಲ್ಲ. ಬಿಜೆಪಿಗೆ ಕಡಿಮೆ ಸ್ಥಾನಗಳು ಬರಬಹುದು ಎಂದು ಸಮೀಕ್ಷೆಗಳು ಹೇಳುತ್ತಿದ್ದರೂ, ಜನ ಇನ್ನೂ ಭಯದಲ್ಲಿದ್ದಾರೆ. ಅಧಿಕಾರಕ್ಕಾಗಿ ಈ ಹಿಂದೆ ಆಪರೇಷನ್ ಕಮಲದಂಥ ಅನೀತಿಯ, ಅಕ್ರಮದ ಮಾರ್ಗ ಅನುಸರಿಸಿದ್ದ ಬಿಜೆಪಿ, ಅಧಿಕಾರಕ್ಕಾಗಿ ತಾನು ಏನು ಮಾಡಬಲ್ಲೆ ಎಂಬುದನ್ನು ಸಾಬೀತುಪಡಿಸಿದೆ. ಈ ಬಾರಿಯೂ ಅದೇ ಪುನರಾವರ್ತನೆಯಾಗಬಹುದು ಎನ್ನುವ ಆತಂಕ; ಮತ್ತೆ ಶಾಸಕರನ್ನು ರೆಸಾರ್ಟ್‌ಗಳಿಗೆ ಕರೆದೊಯ್ಯುವುದು, ಮುಂಬೈಗೆ ಕರೆದೊಯ್ಯುವುದು, ಈ ಮೂಲಕ ಇಡೀ ದೇಶದ ಕಣ್ಣಲ್ಲಿ ಕರ್ನಾಟಕವನ್ನು ಮತ್ತಷ್ಟು ಕೀಳಾಗಿಸುವುದು ಇವೆಲ್ಲ ಎಲ್ಲಿ ನಡೆಯುತ್ತವೋ ಎನ್ನುವ ಆತಂಕ.
ಬಿಜೆಪಿಯ ಆದ್ಯತೆ ಏನು ಅನ್ನುವುದನ್ನು ಚುನಾವಣಾ ರ್‍ಯಾಲಿಗಳಲ್ಲಿ ಮೋದಿ ಮತ್ತೊಮ್ಮೆ ಹೇಳಿದ್ದಾರೆ; ಬಜರಂಗ ಬಲಿ, ದಿ ಕೇರಳ ಸ್ಟೋರಿ ಇವೆಲ್ಲ ಅವರಿಗೆ ಮುಖ್ಯ; ರಾಜ್ಯದ ಜನರ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ಇವ್ಯಾವುದರ ಬಗ್ಗೆಯೂ ಚಕಾರ ಎತ್ತದೇ ಜನರಿಂದ ಜೈ ಬಜರಂಗ ಬಲಿ ಎಂದು ಕೂಗಿಸಿ ಹೋಗಿದ್ದಾರೆ. ಜೈ ಬಜರಂಗ ಬಲಿ ಎಂದು ಕೂಗಿದರೆ ಜನರ ಹೊಟ್ಟೆ ತುಂಬುವುದಿಲ್ಲ. ದಿನಬೆಳಗಾದರೆ, ಮಕ್ಕಳಿಗೆ ಹಾಲು ಬೇಕು; ವೃದ್ಧರಿಗೆ ಔಷಧಿ ಬೇಕು. ಹೊಟ್ಟೆಗೆ ಅನ್ನ ಬೇಕು. ಇವೆಲ್ಲ ಪೂರೈಸಬೇಕೆಂದರೆ, ದುಡಿಯಲು ಕೆಲಸ ಬೇಕು. ಇವು ಯಾವುವೂ ಬಿಜೆಪಿಯ ಆದ್ಯತೆಗಳಲ್ಲ. ಕೊಂಚವಾದರೂ ಅವನ್ನು ಆದ್ಯತೆಯಾಗಿ ಉಳ್ಳ ಪಕ್ಷಗಳು ಅಧಿಕಾರಕ್ಕೆ ಬರಲಿ ಎನ್ನುವುದು ಪ್ರಜ್ಞಾವಂತರ ಆಶಯ. ಜನರ ಸಂಕಷ್ಟಗಳು, ಸಂಕಟಗಳು ಮುಂದಿನ ದಿನಗಳಲ್ಲಾದರೂ ಕಡಿಮೆ ಆಗುತ್ತವೆಯೋ ಇಲ್ಲವೋ ಎನ್ನುವುದಕ್ಕೆ ನಾಳೆ ಉತ್ತರ ಸಿಗಲಿದೆ.
Correct report