ದನದ ಕೊಟ್ಟಿಗೆಗೆ ಬೆಂಕಿ ಬಿದ್ದು, ಆರು ಜಾನುವಾರುಗಳು ಜೀವಂತ ದಹನವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯಲ್ಲಪ್ಪ ಹುಡೆದ ಎಂಬುವರ ಹೊಲದಲ್ಲಿದ್ದ ಗುಡಿಸಲಿಗೆ (ದನದ ಕೊಟ್ಟಿಗೆ) ಮಂಗಳವಾರ ಸಂಜೆ ಬೆಂಕಿ ಬಿದ್ದಿದೆ. ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಜೀವಂತವಾಗಿ ಸುಟ್ಟುಹೋಗಿವೆ.
ಘಟನೆ ಬಗ್ಗೆ ಗ್ರಾಮದ ನಿವಾಸಿ ಎಸ್.ಎನ್ ಪಾಟೀಲ್ ಈದಿನ.ಕಾಮ್ ಜೊತೆ ಮಾತನಾಡಿದ್ದು, “ಬೆಂಕಿಬಿದ್ದ ಗುಡಿಸಲು ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಗುಡಿಸಲಿನ ಮಾಲೀಕ ಯಲ್ಲಪ್ಪ ಸೊಳ್ಳೆಗಳನ್ನು ಓಡಿಸಲು ಒಲೆ ಹಚ್ಚಿದ್ದಾರೆ. ಅವರು ಊರಿನೊಳಗಿದ್ದ ಮನೆಗೆ ತೆರಳಿದ ಬಳಿಕ, ಬೆಂಕಿ ಹೊತ್ತಿಕೊಂಡಿದೆ. ಕೊಟ್ಟಿಯಲ್ಲಿದ್ದ ಒಂದು ಜಾನುವಾರು ಅಪಾಯದಿಂದ ಪಾರಗಿದೆ” ಎಂದು ತಿಳಿಸಿದ್ದಾರೆ.
ಈದಿನ.ಕಾಮ್ ಜೊತೆಗೆ ನಿಂಗಮ್ಮ ಸವಣೂರ ಮಾತನಾಡಿ, “ಈಗಾಗಲೇ ಅವಘಡ ಸಂಭವಿಸಿದ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿ (ತಲಾಟಿ) ಭೆಟ್ಟಿನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟದಲ್ಲಿ ಸಿಲುಕಿರುವ ಯಲ್ಲಪ್ಪ ಹುಡೇದ ಅವರಿಗೆ ಅಧಿಕಾರಿಗಳು ನಷ್ಟಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಬಸವರಾಜ ಕಳಸೂರ ಮಾತನಾಡಿ, “ಹೊಲದಲ್ಲಿದ್ದ ದನದ ಕೊಟ್ಟಿಗೆ ಅಷ್ಟೇ ಅಲ್ಲದೆ ಪಕ್ಕದಲ್ಲಿರುವ ಹುಲ್ಲಿನ ಬಣವೆಯೂ ಸುಟ್ಟು ಹೋಗಿದೆ. ಎರಡು ಜರ್ಸಿ ಆಕಳು, ಎರಡು ಎತ್ತುಗಳು, ದನಗಳು ಎಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಸರ್ಕಾರವು ನಷ್ಟ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.