- ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಡಿಕೆಶಿ ಸಿದ್ದರಾಮಯ್ಯ
- ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬೇಡಿಕೊಂಡ ನಾಯಕದ್ವಯರು
ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ದಿನ ಮೊದಲೇ ಕಾಂಗ್ರೆಸ್ ಭರವಸೆಯ ʼಹಸ್ತʼ ಮೇಲೆತ್ತಿದೆ.
ಅಧಿಕಾರಕ್ಕೇರಿದ ಮರುಕ್ಷಣದಲ್ಲೇ ಪಕ್ಷ ಘೋಷಿತ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಮತ್ತೊಮ್ಮೆ ಮಾತು ನೀಡಿದೆ.
ಹೌದು, ರಾಜ್ಯ ಕಾಂಗ್ರೆಸ್‌ನ ಜೋಡೆತ್ತುಗಳೆಂದೇ ಕರೆಯಿಸಿಕೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಿಂತು ನಾಡಿನ ಜನರಿಗೆ ವಾಗ್ದಾನ ನೀಡಿದ್ದಾರೆ.
ಇಂದು (ಮೇ9)ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿದ ಸಿದ್ದರಾಮಯ್ಯ, ಹಾಗೂ ಡಿ ಕೆ ಶಿವಕುಮಾರ್ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಿ ಅರ್ಚನೆಯ ತಟ್ಟೆಯಲ್ಲಿ ಪಕ್ಷದ ಪ್ರಣಾಳಿಕೆ ಪ್ರತಿಯನ್ನಿಟ್ಟು ಪೂಜೆ ಮಾಡಿಸಿದ ನಾಯಕದ್ವಯರು, ಅದನ್ನು ಜಾರಿ ತರುವ ಶಕ್ತಿ ನೀಡಿ ಜನಸೇವೆಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.
ಪೂಜೆ ಬಳಿಕ ದೇಗುಲದ ಆವರಣದಲ್ಲಿ ನಿಂತು ಪರಸ್ಪರ ಕೈ ಎತ್ತಿ ಹಿಡಿದ ನಾಯಕರಿಬ್ಬರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಪಕ್ಷ ಘೋಷಿಸಿರುವ ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಪ್ರಮಾಣ ಮಾಡಿದರು.
ಈ ಸುದ್ದಿ ಓದಿದ್ದೀರಾ?:ಬಹಿರಂಗ ಪ್ರಚಾರಕ್ಕೆ ತೆರೆ | ದೇವಸ್ಥಾನ ಭೇಟಿ ಆರಂಭಿಸಿದ ರಾಜಕೀಯ ನಾಯಕರು
ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ವಿಶೇಷ ಪೂಜೆ ಸಂದರ್ಭದಲ್ಲಿ ಮಾಜಿ ಸಚಿವ ಕೆ ಜೆ ಜಾರ್ಜ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಉಪಸ್ಥಿತರಿದ್ದರು.
ಇಬ್ಬರೂ ನಾಯಕರ ಈ ಆಣೆ ಪ್ರಮಾಣವೀಗ ಬದಲಾಗುವ ರಾಜಕೀಯ ಸನ್ನಿವೇಶ ಭರವಸೆಯ ಗುರುತಿನ ಸಂಕೇತ ಎಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ.