ಮತದಾರರು ಮತ ಮಾರಿಕೊಳ್ಳುವ ಬಗ್ಗೆ ಆಗಾಗ್ಗೆ ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ. ಆದರೆ, ಇವೆಲ್ಲವನ್ನೂ ಮೀರಿ ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ನಿರ್ಣಾಯಕ ಸಂದರ್ಭಗಳಲ್ಲಿ ಮತದಾರರು ಪ್ರಬುದ್ಧತೆಯನ್ನು ಮೆರೆದು, ಜನವಿರೋಧಿ ಆಡಳಿತಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ ನಿದರ್ಶನಗಳು ಸಾಕಷ್ಟಿವೆ. ಈ ಚುನಾವಣೆಯಲ್ಲೂ ಅಂಥದ್ದೇ ಫಲಿತಾಂಶ ಬಂದಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದತ್ತ ಸಾಗುತ್ತಿದೆ. 133 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಗೆಲುವಿನ ನಾಗಾಲೋಟ ಮುಂದುವರೆಸುತ್ತಿದೆ. ಬಿಜೆಪಿ 67 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಜೆಡಿಎಸ್ 20 ಕ್ಷೇತ್ರಗಳಲ್ಲಷ್ಟೇ ಮುನ್ನಡೆಯಲ್ಲಿದೆ. ಈ ಚುನಾವಣಾ ಫಲಿತಾಂಶದ ಬಹು ಮುಖ್ಯ ಅಂಶ ಎಂದರೆ, ಕಣದಲ್ಲಿದ್ದ ಘಟಾನುಘಟಿಗಳನ್ನೂ ಮತದಾರರು ಸೋಲಿಸಿ ಮನೆಗೆ ಕಳಿಸಿರುವುದು. ಅದರಲ್ಲೂ ಬಿಜೆಪಿಯ ಮಾಜಿ ಸಚಿವರು, ಪ್ರತಿಷ್ಠಿತರೆನ್ನಿಸಿಕೊಂಡವರು ಸೋತಿದ್ದಾರೆ.
ಹೊನ್ನಾಳಿಯ ರೇಣುಕಾಚಾರ್ಯ ಯಡಿಯೂರಪ್ಪರ ಕಟ್ಟಾ ಬೆಂಬಲಿಗರಾಗಿದ್ದರು. ತುಂಬಾ ಸೂಕ್ಷ್ಮವಾದ ಸಂಗತಿಗಳ ಬಗ್ಗೆಯೂ ಬಾಯಿಗೆ ಬಂದಂತೆ ಮಾತಾಡುತ್ತಾರೆ ಎನ್ನುವ ಆಪಾದನೆಗಳು ಅವರ ಬಗ್ಗೆ ಇದ್ದವು. ಇದೀಗ ಹೊನ್ನಾಳಿಯ ಮತದಾರರು ಇವರನ್ನು ಸೋಲಿಸಿ, ಶಾಂತನಗೌಡ ಅವರನ್ನು ಗೆಲ್ಲಿಸಿದ್ದಾರೆ.
ಇನ್ನು ಹೊಸಕೋಟೆಯ ಕೋಟ್ಯಧಿಪತಿ ಅಭ್ಯರ್ಥಿಯಾಗಿದ್ದ ಎಂ ಟಿ ಬಿ ನಾಗರಾಜ್ ಕೂಡ ತಮ್ಮ ಠೇಂಕಾರದ ಮಾತುಗಳಿಂದ ಪದೇ ಪದೆ ಸುದ್ದಿಯಾಗುತ್ತಿದ್ದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಂಟಿಬಿ, ತನಗೆ ಯಾರೂ ಯಾವುದೂ ಲೆಕ್ಕವಿಲ್ಲ ಎನ್ನುವಂತೆ ಆಡುತ್ತಾರೆ ಎನ್ನುವ ಆರೋಪಗಳಿದ್ದವು. ಕಳೆದ ಬಾರಿ ಆಪರೇಷನ್ ಕಮಲಕ್ಕೆ ಗುರಿಯಾಗಿದ್ದ ಅವರು ನಂತರ 2019ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜನರು ಆಗಲೇ ಅವರನ್ನು ಸೋಲಿಸಿ ಯುವ ಮುಂದಾಳು ಶರತ್ ಬಚ್ಚೇಗೌಡ ಅವರನ್ನು ಗೆಲ್ಲಿಸಿದ್ದರು. ಈ ಬಾರಿಯೂ ಮತದಾರರು ಶರತ್ ಬಚ್ಚೇಗೌಡ ಅವರನ್ನು ಗೆಲ್ಲಿಸುವ ಮೂಲಕ ಕೋಟ್ಯಧಿಪತಿ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಂತ ಆಘಾತ ನೀಡಿದ ಫಲಿತಾಂಶಗಳಲ್ಲಿ ಚಿಕ್ಕಬಳ್ಳಾಪುರದ್ದೂ ಒಂದು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ನಂತರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್, ಹಲವು ಆರೋಪಗಳಿಗೆ ಗುರಿಯಾಗಿದ್ದರು. ಅವರ ವಿರುದ್ಧ ಕೋವಿಡ್ ಉಪಕರಣಗಳ ಖರೀದಿ, 80% ಭ್ರಷ್ಟಾಚಾರ ಮುಂತಾದ ಆರೋಪಗಳು ಬಂದಿದ್ದವು. ಆದರೂ ಕ್ಷೇತ್ರದಲ್ಲಿ ತಾನೇ ಗೆಲ್ಲುವ ಅಭ್ಯರ್ಥಿ ಎಂದು ಓಡಾಡುತ್ತಿದ್ದ ಸುಧಾಕರ್, ಪ್ರದೀಪ್ ಈಶ್ವರ್ ಅವರ ಮಾತಿನ ಸುನಾಮಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಆರಂಭದಲ್ಲಿ ಪ್ರದೀಪ್ ಈಶ್ವರ್ ಅವರನ್ನು ಸುಧಾಕರ್ ಅವರ ಬೇನಾಮಿ ಎನ್ನುವಂತೆ ಬಿಂಬಿಸಿದ್ದರು. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದ ಪ್ರದೀಪ್ ಈಶ್ವರ್, ತಾನು ಬೇನಾಮಿಯಲ್ಲ, ಸುನಾಮಿ ಎಂದಿದ್ದರು. ಮೇ 13ರ ನಂತರ ಸುಧಾಕರ್ ಮಾಜಿ ಶಾಸಕರಾಗುವುದು ದಿಟ ಎಂದಿದ್ದರು. ಅವರು ಹೇಳಿದಂತೆಯೇ ಆಗಿದೆ. ಪ್ರದೀಪ್ ಈಶ್ವರ್ ಗೆಲ್ಲುವ ಮೂಲಕ ಸುಧಾಕರ್ ಮಾಜಿ ಶಾಸಕರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ: ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಚಿಕ್ಕಮಗಳೂರಿನ ಸಿ ಟಿ ರವಿಯವರ ಸೋಲು ಕೂಡ ಬಿಜೆಪಿಗೆ ಆಘಾತ ತಂದಿದೆ. ಧರ್ಮ, ಜಾತಿಗಳಿಗೆ ಸಂಬಂಧಿಸಿದ ತಮ್ಮ ವಿವಾದಾಸ್ಪದ ಮಾತುಗಳಿಂದಷ್ಟೇ ಗಮನ ಸೆಳೆಯುತ್ತಿದ್ದ ಸಿ ಟಿ ರವಿ, ಚಿಕ್ಕಮಗಳೂರು ಕ್ಷೇತ್ರವನ್ನು ಮರೆತೇ ಬಿಟ್ಟಿದ್ದರು. ಇತರೆ ಧರ್ಮದವರನ್ನು ಬಯ್ಯುವುದೇ ಶಾಸಕರ ಕೆಲಸ ಎನ್ನುವಂತೆ ಆಡುತ್ತಾರೆ ಎನ್ನುವ ಆರೋಪಗಳು ಅವರ ಬಗ್ಗೆ ಕೇಳಿಬಂದಿದ್ದವು. ಇದೀಗ ಅವರಿಗೂ ಮತದಾರರು ಮನೆಯ ಹಾದಿ ತೋರಿಸಿದ್ದು, ಅವರ ವಿರುದ್ಧ ಕಾಂಗ್ರೆಸ್‌ನ ಎಚ್ ಡಿ ತಮ್ಮಯ್ಯ ಅವರನ್ನು ಗೆಲ್ಲಿಸಿದ್ದಾರೆ.
ಹೀಗೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಹಲವು ಅಹಂಕಾರಿಗಳಿಗೆ ಅಂಕುಶ ಹಾಕಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.