ಕರ್ನಾಟಕದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈದಿನ.ಕಾಮ್ Scientific random sampling ಮೂಲಕ ರಾಜ್ಯಾದ್ಯಂತ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಿದೆ.
ಕೃತಕವಾಗಿ ಜನಾಭಿಪ್ರಾಯ ಉತ್ಪಾದಿಸುವ ಕೆಲಸ ನಡೆಯುವಾಗ ಬಲಾಢ್ಯರು, ಪಟ್ಟಭದ್ರ ಹಿತಾಸಕ್ತಿ ಉಳ್ಳವರ ಅನಿಸಿಕೆಗಳೇ ಜನಾಭಿಪ್ರಾಯ ಎಂದು ಬಿಂಬಿತವಾಗುತ್ತವೆ. ಹಾಗಾಗಿ ಜನರ ನಿಜವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಜನರಿಗೇ ತಿಳಿಸುವ ಕೆಲಸ ಮಾಡುವುದು ಮಾಧ್ಯಮದ ಕರ್ತವ್ಯ ಎಂದು ಈದಿನ.ಕಾಮ್ ಬಲವಾಗಿ ನಂಬುತ್ತದೆ.
ಅದೇ ಉದ್ದೇಶದಿಂದ ಈ ಚುನಾವಣಾಪೂರ್ವ ಸಮೀಕ್ಷೆಯನ್ನು ಈದಿನ.ಕಾಮ್ ನಡೆಸಿದೆ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬುದಕ್ಕಿಂತ ಜನರ ಸಮಸ್ಯೆಗಳು, ಯಾವ ಜಾತಿ ಸಮುದಾಯಗಳು/ಆರ್ಥಿಕ ಸ್ತರಗಳವರು ಏನು ಯೋಚಿಸುತ್ತಾರೆ ಎಂಬುದನ್ನು ಪರಿಶೀಲಿಸುವುದಕ್ಕೆ ನಾವು ಒತ್ತು ಕೊಟ್ಟಿದ್ದೆವು. ಹಾಗೆ ನೋಡಿದರೆ ಯಾರು ಮುಖ್ಯಮಂತ್ರಿ ಮುಖ ಎಂಬ ಪ್ರಶ್ನೆಯೇ ನಮ್ಮಲ್ಲಿ ಇರಲಿಲ್ಲ.
ಈಗ ನಾವು ಪ್ರಕಟಿಸಿದ ಸರ್ವೇ ಫಲಿತಾಂಶದ ಕುರಿತು ಭಿನ್ನ ಅಭಿಪ್ರಾಯಗಳು, ಟೀಕೆ, ವಿಮರ್ಶೆಗಳು ಹಾಗೂ ಮೆಚ್ಚುಗೆಗಳು ಬಂದಿವೆ. ಸಮೀಕ್ಷೆ ನಡೆಸಿರುವ ವಿಧಾನ ವೈಜ್ಞಾನಿಕವಾಗಿದೆ ಎಂದು ಹಲವರು ಹೇಳಿದ್ದಾರೆ. ಅವನ್ನು ನಾವು ಗೌರವಿಸಿ, ಸ್ವಾಗತಿಸುತ್ತೇವೆ; ಅಗತ್ಯವಿದ್ದರೆ ತಿದ್ದಿಕೊಳ್ಳುತ್ತೇವೆ.
ಇದೆಲ್ಲದರ ನಡುವೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ‘ಇದು ಕೃತಕವಾಗಿ ತಯಾರಿಸಲಾದ (Cooked up) ಸಮೀಕ್ಷೆ’ಯೆಂದು ಹೇಳಿದ್ದಾರೆ. ಅವರ ಟೀಕೆ ನಿರಾಧಾರವಾದುದು. ಹಾಗಾಗಿ, ಅವರು ನಮ್ಮ ಸರ್ವೇ ವಿಧಾನ, ಡೇಟಾವನ್ನು ಖುದ್ದಾಗಿ ಪರಿಶೀಲಿಸಲು ನಮ್ಮ ಕಚೇರಿಗೆ ಬರಬೇಕೆಂದೂ, ಈ ಕುರಿತಂತೆ ಮುಕ್ತ, ಪಾರದರ್ಶಕ ಚರ್ಚೆಯನ್ನು ನಡೆಸಬೇಕೆಂದು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.
ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ, ವಿಜ್ಞಾನವಾಗಿ ಬೆಳೆಯುತ್ತಿರುವ ‘ಜನಾಭಿಪ್ರಾಯ ಸಂಗ್ರಹ’ದ (Psephology) ತಿಳಿವಳಿಕೆಯನ್ನು ಎಲ್ಲರೂ ಸೇರಿ ಇನ್ನಷ್ಟು ಬೆಳೆಸೋಣ. ಪೂರ್ವಗ್ರಹಗಳಿಂದ ಮುಕ್ತರಾಗಿ ಮುಕ್ತ ಚರ್ಚೆಯಲ್ಲಿ ಭಾಗಿಯಾಗೋಣ.
ಬಿ.ಎಲ್.ಸಂತೋಷ್ ಅವರ ಆಗಮನವನ್ನು ಎದುರು ನೋಡುತ್ತಿದ್ದೇವೆ…
ಸಂಪಾದಕರು,
ಈದಿನ.ಕಾಮ್ ಪರವಾಗಿ.