ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದ ಬುಡಕಟ್ಟು ಜನಾಂಗದರಿಗೆ ಪ್ರತ್ಯೇಕವಾಗಿ 40 ಸಾಂಪ್ರದಾಯಿಕ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮತ್ತು ಸಾಂಪ್ರದಾಯಿಕ ಮತಗಟ್ಟೆಗಳ ರಾಜ್ಯ ನೊಡೆಲ್ ಅಧಿಕಾರಿ ಕೆ ಆರ್ ರಾಜಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ರಾಜ್ಯದ 9 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದವರಾದ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ, ಜೇನುಕುರುಬ, ಕೊರಗ, ಮಲೈಕುಡಿ, ಸಿದ್ದಿ ಜನಾಂಗದ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಈ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ” ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆಯು 42,48,987 ರಷ್ಟಿದೆ. ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ, ಜೇನುಕುರುಬ, ಕೊರಗ, ಮಲೈಕುಡಿಯ, ಸಿದ್ದಿ ಇನ್ನು ಮುಂತಾದ ಆದಿವಾಸಿ ಜನಾಂಗದವರ ಜನಸಂಖ್ಯೆ ಸುಮಾರು 2 ಲಕ್ಷಕ್ಕೂ ಅಧಿಕವಾಗಿದೆ” ಎಂದು ತಿಳಿಸಿದ್ದಾರೆ.
ಈ ಸಮುದಾಯದವರು ಅರಣ್ಯವನ್ನು ಅವಲಂಬಿಸಿ, ಕಿರು ಅರಣ್ಯ ಉತ್ಪನ್ನಗಳಿಂದ ಜೀವನ ಸಾಗಿಸುತ್ತಿರುತ್ತಾರೆ. ಪ್ರಮುಖವಾಗಿ ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಹಾಸನ ಈ 9 ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ” ಎಂದು ವಿವರಿಸಿದ್ದಾರೆ.