- ಹಾಸನ ಟಿಕೆಟ್ ವಿಚಾರ ಉಲ್ಲೇಖಿಸಿ ಕುಹಕ
- ‘ಬಿಜೆಪಿಯದು ಹಲಾಲುಟೋಪಿ ರಾಜಕಾರಣ’
ಬಿಜೆಪಿಯ ಮೂರನೇ ಪಟ್ಟಿಯಲ್ಲಿಯೂ ಸಹ ಕುಟುಂಬದವರಿಗೆ ಟಿಕೆಟ್ ನೀಡಿರುವ ಕುರಿತು ಜೆಡಿಎಸ್ ವ್ಯಂಗ್ಯವಾಡಿದೆ.
ಈ ಹಿಂದೆ ಬಿಜೆಪಿ ಸದಾ ಕುಟುಂಬ ರಾಜಕಾರಣದ ಕುರಿತು ಕುಟುಕಿತ್ತು. ಆದರೆ, ಈ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಸ್ಥಾನಗಳನ್ನು ರಾಜಕಾರಣದ ಹಿನ್ನೆಲೆಯ ಕುಟುಂಬದವರಿಗೆ ನೀಡಿದ್ದು, ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬಿಜೆಪಿಯ ಮೂರನೇ ಪಟ್ಟಿ ಉಲ್ಲೇಖಿಸಿರುವ ಜೆಡಿಎಸ್ ಸರಣಿ ಟ್ವೀಟ್ ಮಾಡಿ ಕಮಲ ಪಡೆ ವಿರುದ್ಧ ವ್ಯಂಗ್ಯವಾಡಿದೆ.
“ಗೋಸುಂಬೆ ರಾಜಕಾರಣದ ಶಿಖರಕ್ಕೇರಿ, ಜನತೆಗೆ ಮಂಕುಬೂದಿ ಎರಚುವ ಬಿಜೆಪಿ ಬರೀ ಅಪಪ್ರಚಾರ ಮಾಡುವುದರಲ್ಲಿ ಸೈ ಎನಿಸಿಕೊಳ್ಳುತ್ತದೆ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
“ಕುಟುಂಬ ರಾಜಕಾರಣ ಅಂತೆಲ್ಲ ಕತೆ ಹೇಳುತ್ತಾ, ತಾನು ಮಾತ್ರ ಕುಟುಂಬ ಸದಸ್ಯರಿಗೆ ಟಿಕೆಟ್ ಘೋಷಣೆ ಮಾಡಿ ಠೇಂಕರಿಸುತ್ತದೆ. ಇಂತಹ ನಾಚಿಕೆಗೆಟ್ಟ ರಾಜಕಾರಣ ಹೇಸಿಗೆ ತರಿಸುವಂತದ್ದು” ಎಂದು ಹೇಳಿದೆ.
ಹಾಸನ ಟಿಕೆಟ್ ವಿಚಾರವನ್ನು ಪ್ರಸ್ತಾಪಿಸಿದ ಜೆಡಿಎಸ್, “ನಾವು ಮಾತು ಕೊಟ್ಟಂತೆ ಹಾಸನದ ಟಿಕೆಟ್ ಅನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಸ್ವರೂಪ್ ಅವರಿಗೆ ನೀಡಿದೆ. ಮಾತು ತಪ್ಪದೇ ಬದ್ಧತೆ ತೋರುವುದು ನಮ್ಮಿಂದ ಮಾತ್ರ ಸಾಧ್ಯ” ಎಂದು ಕುಟುಕಿದೆ.
“ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ್‌ಗೆ ಟಿಕೆಟ್ ಘೋಷಿಸಿರುವ ಬಿಜೆಪಿಗೆ ಕುಟುಂಬ ರಾಜಕಾರಣ ಎಂದು ಮಾತನಾಡಲು ಯಾವ ನೈತಿಕತೆ ಇದೆ?” ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಸುದದಿ ಓದಿದ್ದೀರಾ? ತುಮಕೂರಿನಲ್ಲೂ ಬಿಜೆಪಿಗೆ ಬಂಡಾಯದ ಬಿಸಿ : ಸ್ವತಂತ್ರ ಅಭ್ಯರ್ಥಿಯಾದ ಸೊಗಡು ಶಿವಣ್ಣ
“ನಿನ್ನೆ ಬಿಡುಗಡೆಯಾದ ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಸಂಸದ ಕರಡಿ ಸಂಗಣ್ಣನವರ ಹಿರಿ ಸೊಸೆ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿಯವರ ಪತ್ನಿಗೂ ಟಿಕೆಟ್ ನೀಡಲಾಗಿದೆ” ಎಂದು ಹೇಳಿದೆ.
“ಇವರೆಲ್ಲರ ನಡುವೆ ಮೋಸಗೊಂಡವರು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರು, ಪಾಪ! ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಹಲಾಲುಟೋಪಿ ರಾಜಕಾರಣ ಬಿಜೆಪಿಯದ್ದು!” ಎಂದು ಬಿಜೆಪಿಯ ಕಾಲೆಳೆದಿದೆ.