ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪ
ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ಸಲ್ಲಿಕೆ
ʼಆಪರೇಶನ್ ಅಲಮೇಲಮ್ಮʼ ಖ್ಯಾತಿಯ ನಟ ರಿಷಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼರಾಮನ ಅವತಾರʼ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ʼಹಿಂದು ಜನಜಾಗೃತಿ ಸಮಿತಿʼ ಹೆಸರಿನ ಸಂಘಟನೆ ಪಟ್ಟು ಹಿಡಿದಿದೆ. ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತಹ ಅಂಶಗಳಿವೆ ಎಂದು ಆರೋಪಿಸಿ ಹಿಂದುಪರ ಎಂದು ಹೇಳಿಕೊಳ್ಳುವ ಈ ಸಂಘಟನೆಯ ಮುಖಂಡರು ಸೆನ್ಸಾರ್ ಮಂಡಳಿಗೆ ದೂರು ನೀಡಿದ್ದಾರೆ.
ʼರಾಮನ ಅವತಾರʼ ಚಿತ್ರದ ಟೀಸರ್ ಏಪ್ರಿಲ್ 10ರಂದು ಬಿಡುಗಡೆಯಾಗಿತ್ತು. ಹಾಸ್ಯಮಯ ಕಥಾಹಂದರವುಳ್ಳ ಈ ಚಿತ್ರದಲ್ಲಿ ರಿಷಿ ನಿರ್ವಹಿಸುತ್ತಿರುವ ಪಾತ್ರಕ್ಕೆ ರಾಮನ ಹೆಸರಿಡಲಾಗಿದೆ. ಟೀಸರ್‌ನ ಕೆಲ ದೃಶ್ಯಗಳಲ್ಲಿ ರಿಷಿ, ರಾಮನ ವೇಷ ಧರಿಸಿದ್ದಾರೆ. ಸಿನಿ ರಸಿಕರಿಂದ ಭಾರೀ ಮೆಚ್ಚುಗೆ ಗಳಿಸಿದ್ದ ಇದೇ ಟೀಸರ್‌ನಲ್ಲಿ “ಹಿಂದುಗಳು ಪೂಜಿಸುವ ರಾಮನಿಗೆ ಅವಮಾನ ಮಾಡಲಾಗಿದೆ. ರಾಮನ ವೇಷಧಾರಿಯನ್ನು ಪೊಲೀಸರು ಅಟ್ಟಾಡಿಸುವಂತೆ ಚಿತ್ರಿಸಲಾಗಿದೆ. ರಾಮಾಯಣ ಮತ್ತು ಮಹಾಭಾರತದ ಕುರಿತು ಅಪಹಾಸ್ಯ ಮಾಡಲಾಗಿದೆ ಎಂದು ʼಹಿಂದು ಜನಜಾಗೃತಿ ಸಮಿತಿʼ ಆರೋಪಿಸಿದೆ.
ಚಿತ್ರದ ಟೀಸರ್‌ನಲ್ಲಿನ ದೃಶ್ಯಗಳಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ಆಕ್ಷೇಪಾರ್ಹ ದೃಶ್ಯಗಳನ್ನು ಕೂಡಲೇ ಚಿತ್ರದಿಂದ ತೆಗೆದು ಹಾಕಬೇಕು ಮತ್ತು ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರವನ್ನು ನೀಡಬಾರದು ಎಂದು ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ಮಂಗಳವಾರ ಚಲನಚಿತ್ರ ವಾಣಿಜ್ಯ ಮಂಡಳಿಗೂ ಭೇಟಿ ನೀಡಿರುವ ಈ ಸಂಘಟನೆಯ ಮುಖಂಡರು ಚಿತ್ರತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್ ಅವರ ಬಳಿ ಮನವಿ ಮಾಡಿದ್ದಾರೆ.
ಪ್ರೇಮ ಕಥೆ ಮತ್ತು ತೆಳು ಹಾಸ್ಯವನ್ನು ಒಳಗೊಂಡಿರುವ ʼರಾಮನ ಅವತಾರʼ ಚಿತ್ರ ಯುವ ನಿರ್ದೇಶಕ ವಿಕಾಸ್ ಪಂಪಾಪತಿ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ಪ್ರಣಿತಾ ಸುಭಾಷ್ ಮತ್ತು ಶುಭ್ರ ಅಯ್ಯಪ್ಪ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅರುಣ್ ಸಾಗರ್, ಅನಿರುದ್ಧ್ ಆಚಾರ್ಯ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಮ್ರೇಜ್ ಸೂರ್ಯವಂಶಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆಯ ಹೊಣೆ ಹೊತ್ತುಕೊಂಡಿದ್ದಾರೆ.