- ಚಾಮರಾಜನಗರದಲ್ಲಿ ವಿ ಸೋಮಣ್ಣ ವಿರುದ್ಧ ಸಿಡಿದ ಆಕ್ರೋಶ
- ಜಿಲ್ಲಾ ಚುನಾವಣಾ ಉಸ್ತುವಾರಿ ಕೊಡದಂತೆ ಪಕ್ಷಕ್ಕೆ ಮನವಿ
ಕಾಂಗ್ರೆಸ್ ಪಕ್ಷ ಸೇರಲು ಹೊರಟಿರುವ ಸಚಿವ ವಿ ಸೋಮಣ್ಣ ಅವರಿಗೆ ಚಾಮರಾಜನಗರ ಜಿಲ್ಲೆಯ ಚುನಾವಣಾ ಉಸ್ತುವಾರಿ ನೀಡಬಾರದು ಎಂದು ಚಾಮರಾಜನಗರ ಜಿಲ್ಲಾ ಬಿಜೆಪಿ ವಲಯ ಒತ್ತಾಯಿಸಿದೆ.
ಮಂಗಳವಾರ ಈ ಕುರಿತಂತೆ ಚಾಮರಾಜನಗರದಲ್ಲಿ ಸ್ಥಳೀಯ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರುಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮುಖಂಡ ಅಯ್ಯನಪುರ ಶಿವಕುಮಾರ್ ಸೋಮಣ್ಣ ವಿರುದ್ಧ ಆಕ್ರೋಶ ಹೊರಹಾಕಿದರು.
ಸೋಮಣ್ಣ ಕಾಂಗ್ರೆಸ್ ಸೇರುವ ಊಹಾಪೋಹವಿದೆ. ಚಾಮರಾಜನಗರ ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಅವರು ಅಭ್ಯರ್ಥಿಯಾಗಬಾರದು. ಕಳೆದ ಚುನಾವಣೆಯಲ್ಲಿ ಸೋಮಣ್ಣ ನಮ್ಮ ಪಕ್ಷದ ಪರ ಕೆಲಸ ಮಾಡಿಲ್ಲ. ನಮ್ಮವರನ್ನು ಸೋಲಿಸಿದ ಅಭ್ಯರ್ಥಿಗೆ ಮನೆ ಗಿಫ್ಟ್ ಕೊಟ್ಟಿದ್ದಾರೆ. ಹಾಗೆಯೇ ಲೋಕಸಭಾ ಚುನಾವಣೆಯಲ್ಲೂ ಅವರು ಪಕ್ಷದ ಪರ ಕೆಲಸ ಮಾಡಿಲ್ಲ. ಹೀಗಾಗಿ ಅವರಿಗೆ ಇಲ್ಲಿಂದ ಸ್ಪರ್ಧಿಸಲು ಟಿಕೆಟ್ ಕೊಡಬಾರದು ಜೊತೆಗೆ ಚುನಾವಣಾ ಉಸ್ತುವಾರಿಯನ್ನೂ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ತನಗೆ ಚಾಮರಾಜನಗರ ಚುನಾವಣಾ ಉಸ್ತುವಾರಿ ಮತ್ತು ಟಿಕೆಟ್ ನೀಡಬೇಕು. ಇಲ್ಲವಾದರೆ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತೇನೆ ಎಂದು ಅವರು ದೆಹಲಿ ನಾಯಕರಿಗೆ ಹೇಳಿದ್ದಾರಂತೆ, ಈ ವಿಚಾರದ ಬಗ್ಗೆ ನಾನು ಸಮಾಜಕ್ಕೆ ಮಾಹಿತಿ ನೀಡುತ್ತೇನೆ ಎನ್ನುವ ವಿಚಾರ ತಿಳಿಸಿ ತಕ್ಷಣವೇ ನನಗೆ ಸುದ್ದಿಗೋಷ್ಠಿ ಮಾಡದಂತೆ ಬ್ಲಾಕ್‌ಮೇಲ್ ಮಾಡಿದ್ದಾರೆ. ಫೋನ್ ಮಾಡಿ ಎಚ್ಚರಿಕೆ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಸೋಮಣ್ಣ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿಲ್ಲ. ಜನ ಸಂಕಲ್ಪ ರಥಯಾತ್ರೆಯಲ್ಲೂ ಪಾಲ್ಗೊಳ್ಳಲಿಲ್ಲ. ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುವ ರೀತಿ ನಡೆದುಕೊಂಡಿದ್ದಾರೆ.
ಜಿಲ್ಲೆಗೆ ಸೋಮಣ್ಣ ಬೇಕು ಎನ್ನುವವರು ಅವರ ಕೆಲವು ಬೆಂಬಲಿಗರು ಮಾತ್ರ. ಪಕ್ಷಕ್ಕಾಗಿ ಇರುವವರು ಸೋಮಣ್ಣ ಬೇಡ ಎನ್ನುತ್ತಾರೆ. ಹೀಗಾಗಿ ಸೋಮಣ್ಣಗೆ ನಮ್ಮ ಜಿಲ್ಲೆಯ ಯಾವ ಜವಾಬ್ದಾರಿಯನ್ನೂ ಹೊರಿಸಬಾರದು, ಪಕ್ಷವೂ ಯಾವುದೇ ಹೊಣೆಗಾರಿಕೆ ಕೊಡಬಾರದು ಎಂದು ಶಿವಕುಮಾರ್ ಆಗ್ರಹಿಸಿದರು.
ಒಂದು ವೇಳೆ ಇದನ್ನೂ ಮೀರಿ ಪಕ್ಷ ನಿರ್ಧಾರ ಕೈಗೊಂಡರೆ ಅವರ ವಿರುದ್ಧ ಗೋ ಬ್ಯಾಕ್ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಅಯ್ಯನಪುರ ಶಿವಕುಮಾರ್ ಎಚ್ಚರಿಕೆ ನೀಡಿದರು.