- ʼಮೋದಿ ಬಗ್ಗೆ ಖರ್ಗೆ ಹೇಳಿದ್ದು ಸರಿ ಅಂದರೆ ಕಾಂಗ್ರೆಸ್‌ಗೆ ಓಟು ಕೊಡಿʼ
- ʼರಾಮಸ್ವಾಮಿ ಬಿಜೆಪಿಗೆ ಬಂದಿದ್ದು ನಮ್ಮೆಲ್ಲರಿಗೂ ಭೀಮ ಬಲ ಬಂದಂತಾಗಿದೆʼ
ದೇವೇಗೌಡರ ಕುಟುಂಬದ ಬಗ್ಗೆ ಎಷ್ಟೇ ಹೇಳಿದರೂ ತಪ್ಪೆ. ಅವರ ಕುಟುಂಬವನ್ನು ವಂಶ ಪಾರಂಪರ್ಯ ಸರ್ಕಾರ, ಒಂದೇ ಕುಟುಂಬದ ಸರ್ಕಾರ ಎನ್ನದೆ ಮತ್ತೆ ಏನಂತ ಕರೀಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಟೀಕಿಸಿದರು.
ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿ ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, “ದೇವೇಗೌಡ ಅವರ ಕುಟುಂಬದ ಮಧ್ಯೆ ಮುಖ ತೋರ್ಸೋಕೆ ಇಬ್ರಾಹಿಂನನ್ನು ಇಟ್ಟುಕೊಂಡಿದ್ದಾರೆ. ಇದಲ್ಲಾ ವ್ಯವಸ್ಥೆ” ಎಂದು ಲೇವಡಿ ಮಾಡಿದರು.
“ಒಂದೇ ಕುಟುಂಬದ ಕೈಯಲ್ಲಿ ಒಂದು ಪಕ್ಷ ಇರಬೇಕಾದರೆ, ಅಂತಹ ಕುಟುಂಬವನ್ನು ಬೆಂಬಲಿಸಬೇಕಾ. ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್ ಅವರು ಜಾತಿ ನೋಡಿಲ್ಲ. ಅವರು ಪಕ್ಷಕ್ಕಾಗಿ ದುಡಿದ ಒಬ್ಬ ʼರಾಷ್ಟ್ರಭಕ್ತʼ. ಎಲ್ಲರೂ ಸೈನಿಕರ ರೀತಿ ಕೆಲಸ ಮಾಡುವ ಮೂಲಕ ರಮೇಶ್ ಅವರನ್ನು ಗೆಲ್ಲಿಸಬೇಕು” ಎಂದು ಕರೆ ನೀಡಿದರು.
“ರಾಮಸ್ವಾಮಿ ಅವರನ್ನು 1989ರಲ್ಲಿ ವಿಧಾನಸಭೆಗೆ ಬಂದಾಗಿನಿಂದ ಇಲ್ಲಿಯವರೆಗೂ ನೋಡುತ್ತಾ ಬಂದಿದ್ದೀನಿ. ಅವರು ಮಾತನಾಡುವಾಗ ‘ಸರಿಯಾದ ವ್ಯಕ್ತಿ, ಸರಿಯಾದ ಪಕ್ಷದಲ್ಲಿ ಇಲ್ವಲ್ಲಾ’ ಅನ್ನಿಸುತ್ತಿತ್ತು. ಸರಿಯಾದ ವ್ಯಕ್ತಿ ಬಿಜೆಪಿಗೆ ಬಂದಿದ್ದು ನಮ್ಮೆಲ್ಲರಿಗೂ ಭೀಮ ಬಲ ಬಂದಂತಾಗಿದೆ” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಅರಸೀಕೆರೆ ಕ್ಷೇತ್ರ | ಶಿವಲಿಂಗೇಗೌಡ-ಸಂತೋಷ್ ನಡುವೆ ನೇರ ಕದನ
ಮೋದಿಯನ್ನು ವಿಷಸರ್ಪ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, “ನಾವು ನಿಮಗೆಲ್ಲಾ ಗೌರವ ಕೊಡುತ್ತಿದ್ದೆವು. ನಿಮ್ಮ ಬಾಯಲ್ಲಿ ಇಂತಹ ಮಾತು ಬಂದ ಮೇಲೆ, ನೀವು ರಾಜಕೀಯ ನಿವೃತ್ತಿ ಪಡೆಯೋದೇ ಒಳ್ಳೆಯದು. ಖರ್ಗೆ ಹೇಳಿದ್ದು ತಪ್ಪೋ, ಸರಿಯೋ ಅನ್ನೋದನ್ನು ಜನರ ನಿರ್ಧಾರಕ್ಕೇ ಬಿಡುವೆವು” ಎಂದರು.
“ಮೋದಿ ಬಗ್ಗೆ ಖರ್ಗೆ ಹೇಳಿದ್ದು ಸರಿ ಅಂದರೆ ಕಾಂಗ್ರೆಸ್‌ಗೆ ಓಟು ಕೊಡಿ, ಅಯೋಗ್ಯದ ಮಾತು ಅನ್ನಿಸಿದರೆ ಬಿಜೆಪಿ ಬೆಂಬಲಿಸಿ” ಎಂದು ಮನವಿ ಮಾಡಿದರು.