ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಎಲ್ಲೆಲ್ಲಿ ಬರುತ್ತಾರೋ ಅಲ್ಲಿ ದೊಡ್ಡಮಟ್ಟದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಒಂದು ವೇಳೆ ಗೆಲ್ಲದಿದ್ದರೆ ನನ್ನ ಹೆಸರು ಬದಲಾಯಿಸಿಕೊಳ್ಳುತ್ತೇನೆ ಎಂದು ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸವಾಲು ಹಾಕಿದರು.
ಗದಗನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಬಿಜೆಪಿಗೆ ಗೆಲುವು ಎಂಬ ಲೇವಡಿ ವಿಚಾರವಾಗಿ ನರಗುಂದ ಶಾಸಕ ಸಿ ಸಿ ಪಾಟೀಲ್‌ಗೆ ತಿರುಗೇಟು ನೀಡಿದರು.
“ನಮ್ಮ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಶಕ್ತಿ. ಇದು ಸಚಿವ ಸಿ ಸಿ ಪಾಟೀಲ್ ಸಾಹೇಬರಿಗೆ ಗೊತ್ತಿಲ್ಲ ಅನಿಸುತ್ತದೆ. ನೂರಕ್ಕೆ ನೂರರಷ್ಟು ಈ ಬಾರಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ” ಎಂದರು.
ಯೂತ್ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸುವಲ್ಲಿ ನಲಪಾಡ್ ವಿಫಲ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, “ವಿನೋದ್ ಅಸೂಟಿಗೆ ನಮ್ಮ ಸರ್ಕಾರದಲ್ಲಿ ಚೇರ್ಮನ್ ಸೀಟ್ ಕೊಡುವ ಭರವಸೆ ನೀಡಲಾಗಿದೆ. ಬೇರೆ ಕಡೆ ಗೆಲ್ಲುವ ಅವಕಾಶ ಇದ್ದಲ್ಲಿ ಯುವಕರಿಗೆ ಟಿಕೆಟ್ ಕೊಡಲಾಗಿದೆ” ಎಂದು ಹೇಳಿದರು.
“ಜಗದೀಶ್ ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಿದೆ. 224 ಕ್ಷೇತ್ರಗಳಲ್ಲಿ ಒಬ್ಬ ಮುಸ್ಲಿಂರಿಗೂ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಬಿಜೆಪಿಯಲ್ಲಿ ಯಾರೂ ಮುಸಲ್ಮಾನರು ಇಲ್ವಾ ಅಂತ ಪ್ರಶ್ನೆ ಮಾಡಿದ್ದು, ಈ ಬಗ್ಗೆ ಕಮಲ ಪಾಳಯದಲ್ಲಿ ಯಾರೂ ಮಾತನಾಡೋದಿಲ್ಲ” ಎಂದು ಕಿಡಿಕಾರದರು.
“ರಾಹುಲ್ ಗಾಂಧಿ ಬಂದು ಹೋಗುವುದರಿಂದ ನಮ್ಮ ಬಲ ಹೆಚ್ಚುತ್ತದೆ. ನಮ್ಮ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಬಂದು ಹೋದ ಮೇಲೆ ಹಲವಾರು ಗೆಲುವು ಆಗಿವೆ. ಈ ರೀತಿ ಅಪಪ್ರಚಾರ ಮಾಡುತ್ತಿರುವ ಕೆಲವು ಶಕ್ತಿಗಳು ಇವೆ. ಆ ಶಕ್ತಿಗಳಿಗೆ ಮುಂದಿನ ದಿನಗಳಲ್ಲಿ ನಿರಾಶೆ ಉಂಟಾಗುತ್ತದೆ” ಎಂದು ಗದಗ ಕಾಂಗ್ರೆಸ್ ಅಭ್ಯರ್ಥಿ ಎಚ್ ಕೆ ಪಾಟೀಲ್ ತಿಳಿಸಿದರು.