- ಅಂಗಡಿಗಳ ಮುಂದೆ ಧೂಮಪಾನಿಗಳ ಕಂಡರೆ ಮಾಲೀಕರಿಗೆ ದಂಡ
- ಧೂಮಪಾನ ವ್ಯಸನಿಗಳಾಗುತ್ತಿರುವ 24 ವರ್ಷದೊಳಗಿನ ಯುವಕರು
‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ’ ಜಾರಿಯಾಗಿ ಇಲ್ಲಿಗೆ ಇಪ್ಪತ್ತು ವರ್ಷಗಳಾಗಿದೆ. ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ‘ಸ್ಟಾಪ್ ಟ್ಯುಬಾಕೊ’ ಅಪ್ಲಿಕೇಶನ್ ಜಾರಿ ಮಾಡಿ ಹರಸಾಹಸ ಮಾಡಿದರೂ ಕರ್ನಾಟಕದಲ್ಲಿ ಪ್ರಕರಣಗಳು ವರ್ಷಕ್ಕೆ 1.4 ಲಕ್ಷದಂತೆ ವರದಿಯಾಗುತ್ತಿವೆ ಎಂದು ರಾಜ್ಯ ತಂಬಾಕು ನಿಯಂತ್ರಣ ಕೋಶ ಹೇಳಿದೆ.
ಇತ್ತೀಚೆಗೆ ಧೂಮಪಾನಿಗಳಿಗೆ ವಯಸ್ಸಿನ ಮಿತಿ ಇಲ್ಲದಂತಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಿದರೂ ಮಾರಾಟ ಮಳಿಗೆಗಳಲ್ಲಿ ಎಗ್ಗಿಲ್ಲದೆ ವಯಸ್ಸಿನ ಮಿತಿ ಗಮನಿಸದೆ ಯುವಜನತೆಗೆ ತಂಬಾಕು ಮಾರಾಟ ಮಾಡಲಾಗುತ್ತಿದೆ. ಹೆಚ್ಚಾಗಿ 24 ವರ್ಷದೊಳಗಿನ ಯುವಕರು ಧೂಮಪಾನ ವ್ಯಸನಿಗಳಾಗುತ್ತಿದ್ದಾರೆ ಎಂದು ರಾಜ್ಯ ತಂಬಾಕು ನಿಯಂತ್ರಣ ಕೋಶ (ಎಸ್‌ಟಿಸಿಸಿ) ಆತಂಕ ವ್ಯಕ್ತಪಡಿಸಿದೆ.
2003ರಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (ಕೋಟ್ಪಾ) ಅಡಿ ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಯಿತು. ಈ ಕಾನೂನನ್ನು 2013ರಲ್ಲಿ ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ವರದಿಯಾದ ಪ್ರಕರಣಗಳು ಎಷ್ಟು?

2013ರಲ್ಲಿ ಪೋಲಿಸ್ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿ, 46,935 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಪ್ರಕರಣಗಳನ್ನು ದಾಖಲಿಸಿದ್ದರು. 2014ರಲ್ಲಿ ಈ ಸಂಖ್ಯೆ 1.4 ಲಕ್ಷಕ್ಕೆ ಏರಿಕೆಯಾಯಿತು. ಅಂದಿನಿಂದ ಇಲ್ಲಿಯವರೆಗೂ ಪ್ರಕರಣಗಳು ವಾರ್ಷಿಕವಾಗಿ ಏರಿಕೆಯಾಗುತ್ತಲೇ ಇವೆ ಎಂದು ತಂಬಾಕು ನಿಯಂತ್ರಣ ಕೋಶ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಗರಿಷ್ಠ 40 ಡಿಗ್ರಿ ತಾಪಮಾನ; ಪಶ್ಚಿಮ ಬಂಗಾಳ ಶಾಲಾ ಕಾಲೇಜುಗಳಿಗೆ ವಾರದ ರಜೆ ಘೋಷಣೆ
2019 ಮತ್ತು 2020ರಲ್ಲಿ 1.8 ಲಕ್ಷ ಪ್ರಕರಣಗಳು ದಾಖಲಾಗಿವೆ. 1.4 ಲಕ್ಷ ಪ್ರಕರಣಗಳು 2021 ಮತ್ತು 2022ರಲ್ಲಿ ದಾಖಲಾಗಿವೆ. ಕೊರೊನಾ ಸೋಂಕು ಉಲ್ಬಣಗೊಂಡಿದ್ದರಿಂದ ಈ ವೇಳೆ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಗಿತ್ತು. ಹೀಗಾಗಿ ಈ 2021 ಮತ್ತು 2022ರಲ್ಲಿ ಪ್ರಕರಣಗಳು ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿವೆ.
ಅಂಗಡಿ ಮಾಲೀಕರಿಗೂ ದಂಡ
“ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರನ್ನು ಪತ್ತೆ ಹಚ್ಚಿ ಅವರಿಗೆ ಸಿಒಟಿಪಿಎ ಅಡಿಯಲ್ಲಿ ₹200 ದಂಡ ವಿಧಿಸಲಾಗುತ್ತಿತ್ತು. ಇದು ಕಡಿಮೆ ಮೊತ್ತದ ದಂಡ ಮತ್ತು ಈ ಬಗ್ಗೆ ಧೂಮಪಾನಿಗಳು ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಕ್ರಮೇಣವಾಗಿ ನಿಯ್ರಂತಿಸಲು ಅಂಗಡಿ ಮಾಲೀಕರಿಗೂ ದಂಡ ವಿಧಿಸಲು ಚಿಂತಿಸಲಾಗುತ್ತಿದೆ” ಎಸ್‌ಟಿಸಿಸಿಯ ಅಧಿಕಾರಿ ಪ್ರಭಾಕರ್ ಹೇಳಿದ್ದಾರೆ.