ಬಿಜೆಪಿ ಅಭ್ಯರ್ಥಿಗಳ ಪರ ಜಗ್ಗೇಶ್ ಪ್ರಚಾರ
ಸಿನಿಮಾ ಪ್ರದರ್ಶನಕ್ಕೆ ಸ್ಥಳೀಯರ ಆಕ್ಷೇಪ
ಸ್ಯಾಂಡಲ್‌ವುಡ್‌ನ ಹಿರಿಯ ನಟ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ʼರಾಘವೇಂದ್ರ ಸ್ಟೋರ್ಸ್ʼ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ, ಸದ್ಯ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಜಗ್ಗೇಶ್ ನಟಿಸಿರುವ ಈ ಚಿತ್ರವನ್ನು ಪ್ರದರ್ಶನ ಮಾಡದಂತೆ ದಾವಣಗೆರೆಯ ʼಗೀತಾಂಜಲಿʼ ಥಿಯೇಟರ್ ಮಾಲೀಕರಿಗೆ ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ.
ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼರಾಘವೇಂದ್ರ ಸ್ಟೋರ್ಸ್ʼ ಚಿತ್ರದ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಅಧಿಕಾರಿಗಳು ಬುಧವಾರ ಬೆಳಗ್ಗೆ ʼಗೀತಾಂಜಲಿʼ ಥಿಯೇಟರ್‌ಗೆ ಭೇಟಿ ನೀಡಿ ಜಗ್ಗೇಶ್ ಅವರ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಮಾಲೀಕರಿಗೆ ಸೂಚಿಸಿದ್ದಾರೆ. ಜೊತೆಗೆ ಥಿಯೇಟರ್ ಮುಂಭಾಗದಲ್ಲಿ ಅಂಟಿಸಲಾಗಿದ್ದ ʼರಾಘವೇಂದ್ರ ಸ್ಟೋರ್ಸ್ʼ ಚಿತ್ರದ ಪೋಸ್ಟರ್‌ನಲ್ಲಿ ಜಗ್ಗೇಶ್ ಅವರ ಮುಖ ಕಾಣದಂತೆ ಬಿಳಿ ಪಟ್ಟಿಯನ್ನು ಕೂಡ ಅಂಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಭಿವೃದ್ಧಿ ಹೆಸರಲ್ಲಿ ಕೆರೆ ನಾಶ : ಬಿಬಿಎಂಪಿ ವಿರುದ್ಧ ಕಿಶೋರ್ ಆಕ್ರೋಶ
ಆದರೆ, ಥಿಯೇಟರ್ ಮಾಲೀಕರು ಚುನಾವಣಾ ಅಧಿಕಾರಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗ್ಗೇಶ್ ಚುನಾವಣೆಗೆ ಸ್ಪರ್ಧಿಸಿಲ್ಲ, ಬದಲಿಗೆ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಅವರಂತೆ ಕನ್ನಡದ ಹಲವು ನಟರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ʼರಾಘವೇಂದ್ರ ಸ್ಟೋರ್ಸ್ʼ ಸಿನಿಮಾ ಪ್ರದರ್ಶನದಿಂದ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ನಂತರ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿರುವ ಅಧಿಕಾರಿಗಳು, ಥಿಯೇಟರ್ ಮುಂಭಾಗದಲ್ಲಿರುವ ಸಿನಿಮಾ ಪೋಸ್ಟರ್‌ನಲ್ಲಿ ಜಗ್ಗೇಶ್ ಅವರ ಮುಖ ಕಾಣದಂತೆ ಮುಚ್ಚಿದ್ದಾರೆ.