ಕಾಂಗ್ರೆಸ್ ಗೆಲುವಿನಲ್ಲಿದೆ ಮಲ್ಲಿಕಾರ್ಜುನ ಖರ್ಗೆ ಅಪ್ರತಿಮ ಪಾತ್ರ

Date:

Advertisements
'ನನ್ನನ್ನು ನನ್ನ ಜಾತಿಯಿಂದಲ್ಲ, ಹಿರಿತನದ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ಪರಿಗಣಿಸಬೇಕು. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ದಲಿತ ನಾಯಕನಾಗಿ ಗುರುತಿಸಿಕೊಂಡಿಲ್ಲ, ಬದಲಿಗೆ ಕಾಂಗ್ರೆಸ್ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ' ಎಂದಿದ್ದರು ಮಲ್ಲಿಕಾರ್ಜುನ ಖರ್ಗೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಸದ್ಯ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಕೈ ಪಡೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಇತ್ತ ಸಿದ್ದರಾಮಯ್ಯ, ಅತ್ತ ಡಿ.ಕೆ ಶಿವಕುಮಾರ್ ತಮಗೇ ಮುಖ್ಯಮಂತ್ರಿ ಹುದ್ದೆ ಬೇಕೆಂದು ಹೇಳುತ್ತಿದ್ದಾರೆ. ಈ ಇಬ್ಬರೂ ನಾಯಕರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ, ಹೈಕಮಾಂಡ್‌ ಯಾರಿಗೆ ಅವಕಾಶ ನೀಡುತ್ತದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ. ಆದರೆ, ರಾಜ್ಯ ಚುನಾವಣೆಯಲ್ಲಿ ಇವರಬ್ಬರ ನಡುವೆ ಮತ್ತೊಂಬ ನಾಯಕನ ಅಪ್ರತಿಮ ಪಾತ್ರವಿಲ್ಲದೆ ಹೋಗಿದ್ದರೆ ಈ ಪ್ರಮಾಣದ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಅವರೇ ಮಲ್ಲಿಕಾರ್ಜುನ ಖರ್ಗೆ.

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ, 82 ವರ್ಷದ ಖರ್ಗೆ, ತಮ್ಮ ತವರು ರಾಜ್ಯದಲ್ಲಿ ಯಾವುದೇ ಅವಕಾಶವನ್ನೂ ಬದಿಗೊತ್ತದೆ ದುಡಿದರು. ತಳಮಟ್ಟದ ಪ್ರಚಾರದಿಂದ ತಂತ್ರಗಾರಿಕೆಯವರೆಗೆ ಎಲ್ಲಡೆ ಸಕ್ರಿಯರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಖರ್ಗೆಯವರ ಉಪಸ್ಥಿತಿಯು ದಲಿತ ಮತದಾರರು ಕಾಂಗ್ರೆಸ್‌ನತ್ತ ಒಲವು ಹೊಂದಲು ಮತ್ತು ಪಕ್ಷವನ್ನು ಒಗ್ಗೂಡಿಸುವಲ್ಲಿ ಸಫಲವಾಯಿತು.

ಕಾಂಗ್ರೆಸ್‌ನ ಎಸ್‌ಸಿ ಸ್ಥಾನಗಳಲ್ಲಿ ಗಣನೀಯ ಏರಿಕೆ

Advertisements

ರಾಜ್ಯದಲ್ಲಿ 36 ಎಸ್‌ಸಿ (ಪರಿಶಿಷ್ಟ ಜಾತಿ) ಮತ್ತು 15 ಎಸ್‌ಟಿ (ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರಗಳಿವೆ. ಈ ಪೈಕಿ,  2018ರಲ್ಲಿ ಕ್ರಮವಾಗಿ 12 ಮತ್ತು 8 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿತ್ತು. ಈ ಬಾರಿ, ಒಟ್ಟು 15 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ; ಅಂದರೆ, ಕ್ರಮವಾಗಿ 21 ಮತ್ತು 14 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆದ್ದುಬೀಗಿದೆ.

ಮತ್ತೊಂದೆಡೆ, 2018ರಲ್ಲಿ 16 ಎಸ್‌ಸಿ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ 12 ಸ್ಥಾನಗಳಿಗೆ ಕುಸಿದಿದೆ. ಅಲ್ಲದೆ, ಒಂದೇ ಒಂದು ಎಸ್‌ಟಿ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಮೀಸಲಾತಿ (ಎಸ್‌ಸಿ ಮೀಸಲಾತಿ 15ರಿಂದ 17%, ಎಸ್‌ಟಿ 3ರಿಂದ 5%) ವಿಚಾರದಲ್ಲಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ ಹೊರತಾಗಿಯೂ, ಕೇಸರಿ ಪಡೆ ಈ ಸಮುದಾಯಗಳ ಮತ ಪಡೆಯಲು ಸಾಧ್ಯವಾಗಲಿಲ್ಲ.

ಬಿಜೆಪಿಯ ಕಾರ್ಯತಂತ್ರದ ಲೋಪಗಳನ್ನು ಎತ್ತಿಹಿಡಿದು, ದಲಿತ ಮತಗಳನ್ನು ಕಾಂಗ್ರೆಸ್‌ನತ್ತ ತಿರುಗಿಸುವಲ್ಲಿ ಖರ್ಗೆ ಪ್ರಮುಖ ಪಾತ್ರಾರ ವಹಿಸಿದ್ದರು. ದಲಿತರ ಒಟ್ಟು ಮತಗಳಲ್ಲಿ ಶೇ.60ರಷ್ಟು ಮತಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಕಳೆದ ಚುನಾವಣೆಗೆ ಹೋಲಿಸಿದರೆ, ಶೇ.14ರಷ್ಟು ದಲಿತ ಮತಗಳನ್ನು ಪಕ್ಷ ಗಳಿಸಿದೆ.

ಈ ಸುದ್ದಿ ಓದಿದ್ದೀರಾ?: ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ದಿಗ್ವಿಜಯ; ನೆಲಕಚ್ಚಿದ ಬಿಜೆಪಿ

ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ದಲಿತ ನಾಯಕರಲ್ಲಿ ಒಬ್ಬರಾದ ಖರ್ಗೆ ಅವರು ದಲಿತ ಸಂಘರ್ಷ ಸಮಿತಿ (ದಸಂಸ) ಜೊತೆ ತೆರೆಯ ಹಿಂದೆ ಮಾತುಕತೆಗಳನ್ನು ನಡೆಸಿದ್ದರು. ಖರ್ಗೆ ಮತ್ತು ಅವರ ಪುತ್ರ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ದಸಂಸ ನಾಯಕರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ್ದರು. ತರುವಾಯ ದಸಂಸದ ಹಲವಾರು ಬಣಗಳು ಏಪ್ರಿಲ್‌ನಲ್ಲಿ ಪಕ್ಷಕ್ಕೆ ಬೆಂಬಲ ಘೋಷಿಸಿದವು. ಬಿಜೆಪಿ-ಆರ್‌ಎಸ್‌ಎಸ್‌ ಅನ್ನು ಮಣಿಸಲು ದಸಂಸದ ಎಲ್ಲ ಬಣಗಳು ಒಗ್ಗೂಡಿದ ಸಮಯ ಅದು.

ಅಲ್ಲದೆ, ಈ ಬಾರಿ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿಯೂ ಖರ್ಗೆ ಅವರು ಸಕ್ರಿಯವಾಗಿದ್ದರು. ಎಡಗೈ ದಲಿತರು ಮತ್ತು ಬಲಗೈ ದಲಿತರು – ಎರಡೂ ಸಮುದಾಯದಿಂದ ಗೆಲ್ಲಬಲ್ಲ, ಉತ್ತಮ ವ್ಯಕ್ತಿಗಳಿಗೆ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳುವಲ್ಲಿ ಅವರು ಪಾತ್ರ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

“ಅವರು ಯಾವಾಗಲೂ ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಬಾರಿ ಅವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಮಾತನಾಡಿದ್ದಾರೆ. ಅವರ ಮಾತಿಗೆ ಹೆಚ್ಚಿನ ಮಹತ್ವವಿದೆ” ಎಂದು ಕರ್ನಾಟಕ ಕಾಂಗ್ರೆಸ್ ಸದಸ್ಯರೊಬ್ಬರು ಹೇಳಿದ್ದಾರೆ.

1972 ರಿಂದ 2009ರವರೆಗೆ ಗುರುಮಠಕಲ್‌ನಿಂದ 37 ವರ್ಷಗಳ ಕಾಲ ಶಾಸಕರಾಗಿ ಮತ್ತು 2009 ರಿಂದ 2019ರವರೆಗೆ ಗುಲ್ಬರ್ಗಾದಿಂದ ಸಂಸದರಾಗಿದ್ದ ಖರ್ಗೆ ಅವರಿಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ. ಇದಕ್ಕೆ ಅವರ ದಲಿತ ಹಿನ್ನೆಲೆ ಕಾರಣವೆಂದು ಅನೇಕರು ಹೇಳುತ್ತಾರೆ ಮತ್ತು ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಿಲ್ಲವೆಂದು ಕಾಂಗ್ರೆಸ್‌ ಅನ್ನು ಟೀಕಿಸುತ್ತಾರೆ. ಆದರೆ, ತಾನೊಬ್ಬ ದಲಿತ ನಾಯಕನೆಂದು ಗುರುಸಿಕೊಳ್ಳುವ ಗೋಜಿನಿಂದ ಖರ್ಗೆ ದೂರ ಉಳಿದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಹಳೆ ಮೈಸೂರು, ಬೆಂಗಳೂರು ಭಾಗದಲ್ಲಿ ಕಾಂಗ್ರೆಸ್‌ ಅಬ್ಬರ; ಜೆಡಿಎಸ್‌ ತತ್ತರ

2018ರ ಚುನಾವಣೆ ಸಮಯದಲ್ಲಿ ಖರ್ಗೆ ಅವರನ್ನು ಕಾಂಗ್ರೆಸ್‌ ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಇತ್ತು. ‘ದಲಿತರನ್ನು ಮುಖ್ಯಮಂತ್ರಿ ಮಾಡುವುದರಿಂದ ನನಗೆ ಯಾವುದೇ ತೊಂದರೆ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಖರ್ಗೆ, “ನನ್ನನ್ನು ನನ್ನ ಜಾತಿಯಿಂದಲ್ಲ, ಹಿರಿತನದ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ಪರಿಗಣಿಸಬೇಕು. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ದಲಿತ ನಾಯಕನಾಗಿ ಗುರುತಿಸಿಕೊಂಡಿಲ್ಲ, ಬದಲಿಗೆ ಕಾಂಗ್ರೆಸ್ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ” ಎಂದು ಹೇಳಿದ್ದರು.

ಜಗಜೀವನ್ ರಾಮ್ ನಂತರ ಪಕ್ಷದ ಇತಿಹಾಸದಲ್ಲಿ ಎರಡನೇ ದಲಿತ ರಾಷ್ಟ್ರೀಯ ಅಧ್ಯಕ್ಷರಾಗಿರುವ ಖರ್ಗೆ, ತಳಮಟ್ಟದಿಂದ ಪಕ್ಷವನ್ನು ಮೇಲೊಯ್ಯಲು ಸರಿಯಾದ ಹಾದಿಯಲ್ಲಿ ಉಳಿದ ನಾಯಕರನ್ನು ಕೊಂಡೊಯ್ದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಿದ್ದಾರೆ.

ವಯಸ್ಸಿನ ಹಂಗಿಲ್ಲದೆ ನಡೆದ ನಿರಂತರ ರ್‍ಯಾಲಿಗಳು

82ನೇ ವಯಸ್ಸಿನಲ್ಲಿ, ಖರ್ಗೆ ಅವರು ಚುನಾವಣೆಗೆ ಮುಂಚಿತವಾಗಿ ಕರ್ನಾಟಕದಾದ್ಯಂತ 40 ಕ್ಕೂ ಹೆಚ್ಚು ರ್‍ಯಾಲಿಗಳನ್ನು ನಡೆಸಿದ್ದಾರೆ. ಕಾಂಗ್ರೆಸ್‌ನ ಜಿಲ್ಲಾ ಮುಖಂಡರನ್ನು ಭೇಟಿಯಾಗುವುದರಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸಲು ಅವಿರತವಾಗಿ ದುಡಿದಿದ್ದಾರೆ. ಪಕ್ಷದ ಪ್ರಚಾರದಲ್ಲಿ ಎಲ್ಲೆಡೆ ಅವರು ಗೋಚರಿಸುತ್ತಿದ್ದರು.

ಆದರೆ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರಂತೆ ಖರ್ಗೆ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿಲ್ಲ. “ಖರ್ಗೆ ಪಕ್ಷದ ಅಧ್ಯಕ್ಷರಾದಾಗಿನಿಂದ ಕರ್ನಾಟಕದಾದ್ಯಂತ ಅವರ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಗಮನಿಸಿದೆ. ಅವರು ರಾಷ್ಟ್ರೀಯ ನಾಯಕರಾಗಿದ್ದರೂ, ಈ ವರ್ಷ ರಾಜ್ಯದಲ್ಲಿ ಎಲ್ಲ ತಳಮಟ್ಟದ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರನ್ನು ಕೇಳಲಾಗಿತ್ತು” ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಮೇ 6ರಂದು ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಖರ್ಗೆ ಜಂಟಿಯಾಗಿ ‘ಮೆಗಾ ರ್‍ಯಾಲಿ’ ನಡೆಸಿದರು. ಆದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ತಮ್ಮ ತಮ್ಮ ಪ್ರಚಾರದ ಹಾದಿಯಲ್ಲಿದ್ದು, ಆ ‘ಮೆಗಾ ರ್‍ಯಾಲಿ’ಯಿಂದ ದೂರವಿದ್ದರು. ಕರ್ನಾಟಕ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಸೋನಿಯಾ ಗಾಂಧಿ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಷ್ಟೇ ಪ್ರಚಾರ ನಡೆಸಿದರು. ಅವರ ಪ್ರಚಾರ ರ್‍ಯಾಲಿಗಳಲ್ಲಿ ಖರ್ಗೆ ಸಾಥ್ ನೀಡಿದ್ದರು.

ಒಗ್ಗಟ್ಟಿನಲ್ಲಿ ಕೊಂಡೊಯ್ದ ನಾಯಕ

ರಾಜ್ಯ ಚುನಾವಣೆಯಲ್ಲಿ ಖರ್ಗೆಯವರ ಉಪಸ್ಥಿತಿಯು ಕಾಂಗ್ರೆಸ್ ಆಂತರಿಕ ಕದನವನ್ನು ಹದುಮಿಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ – ಇಬ್ಬರೂ ಮುಖ್ಯಮಂತ್ರಿ ಆಕಾಂಕ್ಷಿಗಳೆಂದುಕೊಂಡೇ ಪ್ರಚಾರದಲ್ಲಿ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಸಮಯದಲ್ಲಿ, ಖರ್ಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದರು ಮತ್ತು ಇಬ್ಬರೂ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಮಾಡಿದರು ಎಂದು ಹೇಳಲಾಗಿದೆ.

“ಅವರು ಕೇವಲ ಹಿರಿಯ ನಾಯಕರಾಗಿ ಮಾತ್ರವಲ್ಲದೆ, ರಾಷ್ಟ್ರ ನಾಯಕರಾಗಿಯೂ ಅಧಿಕಾರ ಹೊಂದಿದ್ದಾರೆ. ಅವರು ಸಣ್ಣ ವಿವಾದಕ್ಕೂ ಆಸ್ಪದ ಕೊಡದಂತೆ ರಾಜ್ಯದ ಚುನಾವಣೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲರನ್ನೂ ಒಗ್ಗಟ್ಟಿನಿಂದ ಮುನ್ನಡೆಸಿ, ಚುನಾವಣೆ ಗೆಲ್ಲಲು ಕೆಲಸ ಮಾಡಿದ್ದಾರೆ” ಎಂದು ಕರ್ನಾಟಕ ಕಾಂಗ್ರೆಸ್‌ನ ಇನ್ನೊಬ್ಬ ಮುಖಂಡರು ಹೇಳಿದ್ದಾರೆ.

ಮಾಹಿತಿ ಮೂಲ: ದಿ ಕ್ವಿಂಟ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X