- ಖರ್ಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಮನವಿ
- ಮೋದಿಯನ್ನು ವಿಷದ ಹಾವಿಗೆ ಹೋಲಿಸಿದ್ದ ಕಾಂಗ್ರೆಸ್ ಅಧ್ಯಕ್ಷ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು “ಮೋದಿ ವಿಷದ ಹಾವಿದ್ದಂತೆ. ನೆಕ್ಕಿ ನೋಡಿದವರ ಸತ್ತೇ ಹೋಗುತ್ತಾರೆ” ಎಂದು ಹೇಳಿಕೆ ನೀಡಿದ್ದರು.
ಖರ್ಗೆ ಅವರ ಈ ಹೇಳಿಕೆ ರಾಜ್ಯಾದ್ಯಂತ ಚರ್ಚೆಗೀಡಾಗಿದೆ. ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಬಿಜೆಪಿ ಹಬ್ಬಿಸುತ್ತಿರುವ ಅರ್ಥದಲ್ಲಿ ನಾನು ಹೇಳಿಲ್ಲ ಸ್ಪಷ್ಟಪಡಿಸಿದ್ದಾರೆ.
ಆದರೆ, ಟೀಕೆಗಳ ಸುರಿಮಳೆಯ ಜೊತೆಗೆ ಬಿಜೆಪಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದೆ.
“ಮಲ್ಲಿಕಾರ್ಜುನ ಖರ್ಗೆ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ ಎನ್ನುವುದು ಅವರಿಗೆ ಗೊತ್ತಿದೆ. ಈ ನಡುವೆ ಅವರು ಪ್ರಧಾನಿ ಅವರನ್ನು ವಿಷದ ಹಾವಿಗೆ ಹೋಲಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದೆ.
“ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ಮತ್ತು ಚಾರಿತ್ರ್ಯವಧೆ ಮಾಡುವ ಉದ್ದೇಶದಿಂದ ಹೇಳಿಕೆ ಹೊರಬಂದಿದೆ. ಈ ಅಂಶವು ಕಾಂಗ್ರೆಸ್ ನಾಯಕರಿಗೆ ಈ ನೆಲದ ಕಾನೂನಿನ ಬಗ್ಗೆ ಗೌರವವಿಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಶೆಟ್ಟರ್-ಸವದಿ ಜೋಡಿ ಹಣಿಯುವ ಹೊಣೆ ಬಿಎಸ್‌ವೈ ಹೆಗಲಿಗೆ; ಫಲ ನೀಡಬಹುದೇ ಬಿಜೆಪಿ ತಂತ್ರ?
“ನರೇಂದ್ರ ಮೋದಿ ಅವರ ಮೇಲೆ ಖರ್ಗೆ ಅವರು ವೈಯಕ್ತಿಕ ದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಗುಜರಾತ್ ಚುನಾವಣೆಯ ಪ್ರಚಾರದಲ್ಲಿ ಖರ್ಗೆಯವರು ಮೋದಿಯನ್ನು 100 ತಲೆ ರಾವಣ ಎಂದು ಕರೆದಿದ್ದರು” ಎಂದು ಹೇಳಿದೆ.
“ಖರ್ಗೆ ಅವರ ಹೇಳಿಕೆಯಿಂದ ಇಡೀ ರಾಷ್ಟ್ರವೇ ತಲೆತಗ್ಗಿವಂತದ್ದು. ಖರ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಆದ್ದರಿಂದ ನೀವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಆಯೋಗದ ಆಯುಕ್ತರಿಗೆ ಬಿಜೆಪಿ ಮನವಿ ಮಾಡಿದೆ.