- ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ
- ಶೋಭಾಕ್ಕ ನಾವು 40% ಭ್ರಷ್ಟಾಚಾರ ಮಾಡಿಲ್ಲ ಎಂದ ಡಿಕೆಶಿ
ಮುಖ್ಯಮಂತ್ರಿ ಕಚೇರಿಯಿಂದ ರಾಜ್ಯದ ನಾನಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ದೂರವಾಣಿ ಕರೆ ಹೋಗುತ್ತಿದೆ. ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗದಂತೆ ಅಧಿಕಾರ ದುರ್ಬಳಕೆ ಮಾಡಲಾಗುತ್ತಿದೆ ಎಂದು ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಡಿ ಕೆ ಶಿವಕುಮಾರ್, ಅಧಿಕಾರ ದುರುಪಯೋಗದ ಕುರಿತು ಆರೋಪಿಸಿದರು.
“ಸವದತ್ತಿ ಕ್ಷೇತ್ರದಂತಹ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳ ನಾಮಪತ್ರಗಳಲ್ಲಿ ತೊಡಕಿವೆ. ಆದ್ದರಿಂದ ಖುದ್ದು ಸಿಎಂ ಕಚೇರಿ ಚುನಾವಣಾಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ. ನಾಮಪತ್ರದಲ್ಲಿ ಏನೇ ದೋಷವಿದ್ದರೂ ಅವರಿಗೆ ಅವಕಾಶ ಮಾಡಿಕೊಡುವಂತೆ ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಚುನಾವಣಾಧಿಕಾರಿಗಳು ಸರ್ಕಾರದ ಯಾವುದೇ ಒತ್ತಡಕ್ಕೆ ಮಣಿಬಾರದು. ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಸಿಎಂ ಕಚೇರಿಯ ಕರೆ ವಿವರದ ಬಗ್ಗೆ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
“ನನ್ನ ನಾಮಪತ್ರ ತಿರಸ್ಕೃತಕ್ಕೆ ಬಿಜೆಪಿ ಪಿತೂರಿ ನಡೆಸಿತ್ತು. 10 ಬಾರಿ ನಾಮಪತ್ರ ಸಲ್ಲಿಸಿರುವ ನನಗೆ ಈ ತರಹ ಮಾಡ್ತಾರೆ. ಇನ್ನು ಸಾಮಾನ್ಯರ ಗತಿ ಏನು” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಹು-ಧಾ ಪಾಲಿಕೆ ಸದಸ್ಯ, ರೌಡಿಶೀಟರ್ ಚೇತನ್ ಹಿರೇಕೆರೂರು ಬಂಧನ; ಕುಟುಂಬಸ್ಥರನ್ನು ಭೇಟಿಯಾದ ಜಗದೀಶ್ ಶೆಟ್ಟರ್
ನಾವು 40% ಭ್ರಷ್ಟಾಚಾರ ಮಾಡಿಲ್ಲ
ಕಾಂಗ್ರೆಸ್ ನಾಯಕರು ಹಣ ಪಡೆದು ಟಿಕೆಟ್ ಹಂಚಿಕೆ ಮಾಡಿದ್ದಾರೆ ಎನ್ನುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, 40% ಭ್ರಷ್ಟಾಚಾರದ ವಿಷಯ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಹಣ ಪಡೆದು ಬಿ ಫಾರಂ ವಿತರಣೆ ಮಾಡಲಾಗಿದೆ ಎಂದು ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗ ದೂರು ನೀಡಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, “ಶೋಭಾಕ್ಕ ನಾವು 40% ಭ್ರಷ್ಟಾಚಾರ ಮಾಡಿಲ್ಲ. ನಿಮ್ಮ ಸರ್ಕಾರದ ಭ್ರಷ್ಟಾಚಾರದ ಕುರಿತು, ಬಸನಗೌಡ ಯತ್ನಾಳ್ ಸೇರಿದಂತೆ ಅನೇಕ ನಾಯಕರು ಸಾಕ್ಷಿ ಒದಗಿಸಿದ್ದಾರೆ” ಎಂದು ಕುಟುಕಿದರು.
“ಕೆ ಎಸ್ ಈಶ್ವರಪ್ಪ ಅವರು 40% ಕಮಿಷನ್ ತೆಗೆದುಕೊಂಡಿದ್ದಾರೆ ಎನ್ನುವ ಕಾರಣಕ್ಕೆ ನೀವು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದಿರಿ. ಈಗ ಅವರಿಗೆ ಟಿಕೆಟ್ ಸಹ ನೀಡಿಲ್ಲ” ಎಂದು ವ್ಯಂಗ್ಯವಾಡಿದರು.
ಬಿಜೆಪಿ ತೊರೆದು ‘ಕೈ’ ಹಿಡಿದ ಮಾಜಿ ಶಾಸಕ
ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಪಕ್ಷಾಂತರ ಪರ್ವ ಜೋರಾಗಿದೆ. ಚಿತ್ತಾಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ್ ಪಾಟೀಲ್ ಮತ್ತು ಅವರ ಬೆಂಬಲಿಗರು ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ವಿಶ್ವನಾಥ್ ಪಾಟೀಲ್ ಜೊತೆಗೆ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಅರವಿಂದ್ ಚವ್ಹಾಣ್ ಅವರು ಸಹ ಕಾಂಗ್ರೆಸ್ ಸೇರಿದ್ದಾರೆ.