ಮದ್ಯ ಮಾರಾಟ ನಿಷೇಧಿಸಬೇಕು. ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮದ್ಯ ನಿಷೇಧ ಆಂದೋಲನ ಹಾಗೂ ಗ್ರಾಮೀಣ ಕೂಲಿಕಾರ ಸಂಘಟನೆಯ ಕಾರ್ಯಕರ್ತರು ರಾಯಚೂರಿನಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ರಾಜ್ಯ ಮಹಿಳಾ ಒಕ್ಕೂಟ ಸಹಯೋಗದಲ್ಲಿ ಪ್ರತಿಭಟನೆ ನಡೆದಿದೆ. “ಸರ್ಕಾರ ಮದ್ಯ ಮಾರಾಟ ಪರವಾನಗಿ ನೀಡುವ ನಿರ್ಧಾರವನ್ನು ಕರ್ನಾಟಕ ಪಂಚಾಯತ್ ಕಾನೂನಿನ್ವಯ ಗ್ರಾಮಸಭೆಗೆ ಪರಮಾಧಿಕಾರ ಕೊಡಬೇಕು. ಮಹಿಳೆಯರು ಕೆಳ ಮಟ್ಟದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಪರವಾನಗಿ ನೀಡಬಾರದು ಎಂದು ಗ್ರಾಮಸಭೆಯಲ್ಲಿ ನಿರ್ಧರಿಸಿದರೆ, ಸರ್ಕಾರ ಅದನ್ನು ಎತ್ತಿ ಹಿಡಿಯಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
“ರಾಜ್ಯ ಸರ್ಕಾರ ಹೊಸದಾಗಿ 1,000 ಮದ್ಯದಂಗಡಿಗಳಿಗೆ ಪರವಾನಿಗೆ ಹಾಗೂ ಸೂಪರ್ ಮಾರ್ಕೆಟ್, ಮಾಲ್‌ಗಳಲ್ಲಿ ಮಾರಾಟ ಮಾಡುವ ಪ್ರಸ್ತಾವನೆ ಕೂಡಲೇ ಹಿಂತೆಗೆದುಕೊಳ್ಳಬೇಕು. ಮಹಿಳೆಯರು ಮಾತ್ರವಲ್ಲ, ಸಮಾಜದ ನೆಮ್ಮದಿ, ಆರೋಗ್ಯ ಹಾಳು ಮಾಡುವ ವಿಚಾರಗಳನ್ನು ಬಿಟ್ಟು, ಮಹಾತ್ಮಾ ಗಾಂಧೀಜಿಯವರ ಆಶಯಗಳನ್ನು ಅನುಷ್ಠಾನಕ್ಕೆ ತರಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | 9 ವರ್ಷಗಳಿಂದ ಅಂಗನವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ
ಪ್ರತಿಭಟನೆಯಲ್ಲಿ ಗ್ರಾಕೂಸ್ ನ ಕಾರ್ಯಕರ್ತರಾದ ಮಾರೆಮ್ಮ ನೀರಮಾನ್ವಿ, ಮುಖಂಡ ಗುರುರಾಜ್ ರಾಯಚೂರು ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಇದ್ದರು.