ಅಂಚಿಗೆ ಸರಿದ ಗಾಂಧಿ ; ಕ್ಷಯಪೀಡಿತ ಗ್ರಾಮ ಭಾರತ : ಕೆ ಪಿ ಸುರೇಶ್ ಬರೆಹ

Date:

ಗಾಂಧಿಗೆ ನಮ್ಮ ಗ್ರಾಮಗಳು ಸ್ವಾವಲಂಬಿ ಗ್ರಾಮಗಳಾಗಿ ನಗರಗಳ ಕೈಗಾರಿಕಾ ಉತ್ಪಾದನೆಯ ಗ್ರಾಹಕರಾಗುವ ಅಪಾಯ ತಡೆಯಬಹುದು ಎಂಬ ಆಶಯ ಇತ್ತು. ಆದರೆ ಇದು ಆಶಯದಿಂದಾಚೆ ವಾಸ್ತವವಾಗುವ ಯಾವ ಡಿಸೈನೂ ಕೂಡಾ ಇರಲಿಲ್ಲ. ಸ್ವಾವಲಂಬೀ ಗ್ರಾಮವೆಂಬುದು ಜಾತಿ ಪಾಳೆಯಗಾರಿಕೆಯನ್ನು ಭೂಮಿಯ ಒಡೆತನದ ಹೆಚ್ಚುಗಾರಿಕೆಯನ್ನು ಪೋಷಿಸುವ ಸಾಧನಗಳೂ ಆಗುವ ಅಪಾಯದ ಬಗ್ಗೆ ಬಹುತೇಕ ಗಾಂಧಿವಾದಿಗಳು ಮಾತಾಡಲೇ ಇಲ್ಲ

”ನಮ್ಮ ನಗರಗಳು ಭಾರತವಲ್ಲ. ಭಾರತ ತನ್ನ ಏಳೂವರೆ ಲಕ್ಷ ಹಳ್ಳಿಗಳಲ್ಲಿ ಬದುಕಿದೆ. ನಗರಗಳು ಈ ಹಳ್ಳಿಗಳ ಮೇಲೆ ಬದುಕಿದೆ” ಎಂದು ಗಾಂಧಿ ಹೇಳಿ ಶತಮಾನವಾಯಿತು.

ಪ್ರಾಯಶಃ ಗಾಂಧಿ ಮುಖ್ಯ ವೇದಿಕೆಗೆ ಬರುವವರೆಗೆ ಭಾರತವೆಂದರೆ ಕೋಟೆ ಕೊತ್ತಲುಗಳು, ವೈಭವೀಕೃತ ನಗರಗಳೇ ಆಗಿದ್ದವು. ಗಾಂಧಿ ನಗರಗಳನ್ನು ಹಳ್ಳಿಗಳನ್ನು ಹೀರಿ ಬದುಕುವ ಪರಾವಲಂಬಿ ಜೀವಿಗಳು ಎಂಬಷ್ಟರ ಮಟ್ಟಿಗೆ ಟೀಕಿಸಿದರು.

ವಸಾಹತುಶಾಹಿಯನ್ನು ಅದರ ಪ್ರಭಾವವನ್ನು ನಗರಗಳಿಗೆ ಸಮೀಕರಿಸಿ ಗಾಂಧಿ ಭಾರತದ ಹೊಸ ಕಲ್ಪನೆಯನ್ನು ಮುಂದಿಟ್ಟರು. ಮೂಲತಃ ಈ ಹಳ್ಳಿಯ ಪರಿಕಲ್ಪನೆ ವಸಾಹತುಶಾಹಿ ಆಡಳಿತವನ್ನು ಎದುರಿಸಲು ಕಟ್ಟಿದ ಕಲ್ಪನೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಅದೆಷ್ಟು ಪ್ರಭಾವಿಯಾಗಿದೆಯೆಂದರೆ ರಾಜಕೀಯದಿಂದ ಹಿಡಿದು ಕಲೆವರೆಗೆ ಹಳ್ಳಿಗಳನ್ನು ವೈಭವೀಕರಿಸದೇ, ಅದನ್ನು ಭಾರತದ ‘ಆತ್ಮ’ವಾಗಿಸದೇ, ಸುಸಂಗತ ಮಾನ್ಯತೆ ಪಡೆಯಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗಾಂಧಿ ಮುಂದಿಟ್ಟ ಗ್ರಾಮ ಎಂಥಾದ್ದು? ಅದು ಗುಡಿ ಕೈಗಾರಿಕೆಗಳನ್ನು ಅವಲಂಬಿಸಿದೆ. ಅದು ತನಗರಿವಿಲ್ಲದೇ ಅಹಿಂಸೆಯನ್ನು ಆಧರಿಸಿದ ಒಂದು ಸಮಾಜವನ್ನು ಕಟ್ಟಿದೆ. ಅದೊಂದು ಗಣರಾಜ್ಯ.

ಟಾಗೋರ್‌ ಕೂಡಾ ಇಂಥಾದ್ದೇ ರಮ್ಯ ಗ್ರಾಮದ ಕಲ್ಪನೆಯನ್ನು ಮುಂದಿಟ್ಟಿದ್ದರು. ಟಾಗೋರ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಳ್ಳಿಗಳನ್ನು ಹೆಣ್ಣಿಗೆ ಹೋಲಿಸಿದರು. ‘ಹಳ್ಳಿಗಳು ಪ್ರಕೃತಿಗೆ ಸನಿಹ ಇವೆ. ಅವು ಜೀವಸೆಲೆಯ ಒಡನಾಟ ಹೊಂದಿವೆʼ ಎಂದು ಟಾಗೋರ್‌ ಬಣ್ಣಿಸಿದರು.

ಹಳ್ಳಿಗಳು ಅಷ್ಟೇನೂ ಸುಖವಾಗಿಲ್ಲ, ಅವು ನರಳುತ್ತಿವೆ ಎಂದು ಗಾಂಧಿ ಅರಿತಿದ್ದರು. ಆದರೆ ಅದು ಕೂಡಾ ವಸಾಹತುಶಾಹಿಯ ಕಾರಣಕ್ಕೆ, ಅದರಿಂದ ಮುಕ್ತವಾದರೆ ಹಳ್ಳಿಗಳನ್ನು ಗಣರಾಜ್ಯವಾಗಿ ಕಟ್ಟಬಹುದು ಎಂಬ ನಿಲುವು ತಳೆದಿದ್ದರು ‘ತನ್ನ ಅಗತ್ಯಗಳನ್ನೆಲ್ಲಾ ತಾನೇ ಪೂರೈಸುವ ಉತ್ಪಾದನಾ ವ್ಯವಸ್ಥೆ ಹೊಂದಿರುವ ಒಂದು ಸ್ವರಾಜ್‌ ಅದು. ಪ್ರತಿಯೊಬ್ಬ ಗ್ರಾಮಸ್ಥನೂ ತನಗೆ ಬೇಕಾದ್ದನ್ನು ಬೆಳೆಯಬೇಕು. ಶಿಕ್ಷಣ ಉಚಿತವಾಗಿರಬೇಕು ಅಲ್ಲಿ ಅಸ್ಪೃಶ್ಯತೆಯನ್ನು ಪೋಷಿಸುವ ಜಾತಿ ವ್ಯವಸ್ತೆ ಇರುವುದಿಲ್ಲ. ಗ್ರಾಮದ ಆಡಳಿತವನ್ನು ಗ್ರಾಮಸ್ಥರೇ ಸರ್ವಾನುಮತದಿಂದ ಆರಿಸಿದ ಪಂಚರು ನಡೆಸುತ್ತಾರೆʼ ಹೀಗೆ ಗಾಂದಿಯ ವಾದ ಸಾಗುತ್ತದೆ.

ಗಾಂಧಿಯ ಗ್ರಾಮದ ಪರಿಕಲ್ಪನೆ ಏಕಕಾಲಕ್ಕೆ ವಾಸ್ತವಿಕವನ್ನೂ ಕಲ್ಪನೆಯನ್ನೂ ಬೆರೆಸಿ ಮಾತಾಡುವ ಕಾರಣ ಅದು ತಾರ್ಕಿಕ ಚರ್ಚೆಯಿಂದ ಸದಾ ತಪ್ಪಿಸಿಕೊಳ್ಳುತ್ತಲೇ ಬಂದಿದೆ.

ನೆಹರೂಗೆ ಗ್ರಾಮಗಳ ಬಗ್ಗೆ ಅಂಥಾ ಮೋಹವಿರಲಿಲ್ಲ. ಈ ಗ್ರಾಮಗಳನ್ನು ರೈತಾಪಿ ಸಮೂಹವಾಗಿ ನೆಹರೂ ನೋಡಿದರು. ಭೂಮಾಲೀಕರ ಶೋಷಣೆಯ ತಾಣವಾಗಿ ನೆಹರೂ ಗ್ರಾಮಗಳನ್ನು ನೋಡಿದರು. ಅದರೊಂದಿಗೇ ವಸಾಹತುಶಾಹಿ ಅಲ್ಲಿನ ಜೀವನೋಪಾಯಗಳನ್ನು ನಾಶ ಮಾಡಿದ್ದನ್ನೂ ನೆಹರೂ ಗಮನಿಸುತ್ತಾರೆ. ಗುಡಿ ಕೈಗಾರಿಕೆಗಳು ನಾಶವಾದ ಕಾರಣ ಜಮೀನೊಂದೇ ಆದಾಯ ಮೂಲವಾದ ವೈಪರೀತ್ಯವನ್ನು ನೆಹರೂ ಗಮನಿಸುತ್ತಾರೆ. ಅದರೊಂದಿಗೇ  ಪಶು ಸದೃಶ ವಿಧಿವಾದದಲ್ಲಿ ಎಲ್ಲಾ ಸಂಕಟ ಸಂಕಷ್ಟಗಳನ್ನೂ ಅನುಭವಿಸುವ ವರ್ಗ ಎಂದು ಅವರು ಗ್ರಾಮಗಳ ರೈತಾಪಿಯನ್ನು ಬಣ್ಣಿಸಿದರು.

ಇವರಿಬ್ಬರೂ ನಗರ ಮತ್ತು ಮೇಲ್ಜಾತಿ ಸಂಜಾತರಾಗಿದ್ದೂ ಈ ದೃಷ್ಟಿಕೋನಕ್ಕೆ ಕಾರಣವಾಗಿರಬಹುದು.

ಆದರೆ ಹಳ್ಳಿಗಳ ವಾಸ್ತವವನ್ನು ಕಣ್ಣಿಗೆ ಗಿಡಿವಂತೆ ಮುಂದಿಟ್ಟದ್ದು ಅಂಬೇಡ್ಕರ್.‌ ಹಳ್ಳಿಯ ವ್ಯವಸ್ಥೆ ಎಂಬುದು ಜಾತಿ ಯಜಮಾನಿಕೆಯ ಕೂಪ ಎಂದು ಅವರು ವಾದಿಸಿದರು. ಅಸ್ಪೃಶ್ಯರು ಈ ಹಿಂದೂ ಹಳ್ಳಿಯ ಪಾದದಡಿ ನರಳುತ್ತಿದ್ದಾರೆ ಎಂದರಲ್ಲದೇ, ಗ್ರಾಮ ಗಣರಾಜ್ಯವೆಂಬುದು ಭಾರತದ ಸರ್ವನಾಶದ ಕಾರಣವಾಗಿದೆ. ಅದೊಂದು ಅಜ್ಞಾನ, ಸಂಕುಚಿತ ಮನೋಭಾವ ಮತ್ತು ಜಾತಿ ಕೋಮುವಾದದ ಕೊಳೆತ ಬಾವಿ ಎಂದು ಅಂಬೇಡ್ಕರ್‌ ಹೇಳಿದರು.

ಆದರೆ ಭಾರತದ ಎಲ್ಲಾ ಅಭಿವೃದ್ಧಿಯ ಧ್ಯಾನ ಕೇಂದ್ರವಾಗಿದ್ದು ಗಾಂಧಿ-ನೆಹರೂ ಕಲ್ಪನೆಯ ಗ್ರಾಮವೇ. ಸ್ವಾತಂತ್ರ್ಯ ಸಿಕ್ಕಾಗ ನಮ್ಮ ಕೃಷಿ ಸಂಪೂರ್ಣ ನಾಶವಾಗಿತ್ತು. ‘ವರ್ಷದ ಏಳೆಂಟು ತಿಂಗಳು ನಮ್ಮ ಕೆಲವು ಹಳ್ಳಿಗಳು ನಿರ್ಜನವಾಗಿರುತ್ತವೆ. ಆ ಹಳ್ಳಿಗರೆಲ್ಲಾ ನಗರಗಳಿಗೆ ಗುಳೆ ಹೋಗುತ್ತಾರೆʼ ಎಂದು ಗಾಂಧಿ 1927ರಲ್ಲೇ ಹೇಳಿದ್ದರು! ಈ ನಾಶದ ಹಿಂದೆ ವಸಾಹತುಶಾಹಿ ನೀತಿ ಇತ್ತು ಎಂಬುದನ್ನು ಬಹುತೇಕ ಅಧ್ಯಯನಕಾರರು ಗುರುತಿಸಿದ್ದರು.

ಖಾಯಂ ಭೂಮಿ ಒಡೆತನವನ್ನು ಬ್ರಿಟೀಷರು ನೀಡಿದ ಬಳಿಕ ಭೂ ಒಡೆತನದ ಆಟ ಹೆಚ್ಚಿ ಬಹುತೇಕ ಬಡ ರೈತರ ಜಮೀನು, ಸಾಲ ತೀರುವಳಿಗೆ ಜಮೀನ್ದಾರರ ವಶವಾಯಿತು, ಇದರ ಮುಂದುವರಿಕೆಯಾಗಿ ಕೃಷಿಯಲ್ಲಿ ಉತ್ಪಾದನೆಯಾಗಲೀ ಆವಿಷ್ಕಾರವಾಗಲೀ ಹೆಚ್ಚಲೇ ಇಲ್ಲ.

ಆದರೆ ಪಾರಂಪರಿಕ ಜಾತಿ ಯಜಮಾನಿಕೆ ಇನ್ನಷ್ಟು ಸದೃಢವಾಯಿತು. ಇದರ ಹೊಡೆತ ದಲಿತರ ಮೇಲೆ ಬಿತ್ತು. ಹುಟ್ಟಿನ ವೃತ್ತಿಯ ಗಾಣಕ್ಕೆ ಸಿಕ್ಕಿದ್ದ ಎಲ್ಲಾ ಜಾತಿಗಳೂ ಜಮೀನ್ದಾರರ ಸೇವೆ ಸಲ್ಲಿಸುವ ಹಂಗಿಗೆ ಬಿದ್ದರು. ಜೊತೆಗೆ ಪಶ್ಚಿಮದ ಕೈಗಾರಿಕೀಕರಣದ ಕಾರಣಕ್ಕೆ ಕುಶಲ ವೃತ್ತಿಗಳೆಲ್ಲಾ ಅಂಚಿಗೆ ಸರಿದು ಈ ಕುಶಲಿಗಳೆಲ್ಲಾ ಕೃಷಿ ಲೋಕದೊಳಗೇ ಬದುಕು ಸವೆಸಲು ಕೂಲಿಕಾರರಾಗಿಯೋ ಗೇಣಿದಾರರಾಗಿಯೋ ದುಡಿಯಬೇಕಾಯಿತು.

ಅರ್ಥಾತ್‌ ಗ್ರಾಮ/ಕೃಷಿ ಭಾರತವು ತನ್ನ ಚೈತನ್ಯವನ್ನೂ, ಕ್ರಿಯಾಶೀಲತೆಯನ್ನೂ ಕಳೆದುಕೊಂಡದ್ದು ಗಾಂಧಿ ಮತ್ತು ತರುವಾಯದ ನೆಹರೂ ನಾಯಕತ್ವದ ಸ್ವತಂತ್ರ ಭಾರತದ ಆಡಳಿತಗಾರರ ಕಣ್ಣಿಗೂ ಕಂಡಿತ್ತು.

ಆದರೆ ಜಾತಿ ಮತ್ತು ಭೂ ಹಿಡುವಳಿಯ ಜಂಟಿ ಅಡಕತ್ತರಿಯ ವಿಕೃತ ಗ್ರಾಮ ಭಾರತದ ಸ್ವರೂಪಕ್ಕೇನೂ ಹೊಡೆತ ಬಿದ್ದಿರಲಿಲ್ಲವಷ್ಟೇ. ಗ್ರಾಮಗಳ ಗ್ರಹಿಕೆಯಲ್ಲಿ ಗ್ರಾಮದ ಒಳ ಸಿಕ್ಕುಗಳ ಈ ಸಂಕೀರ್ಣತೆಗಳ ಗ್ರಹಿಕೆ ಅಂಬೇಡ್ಕರ್‌ ಹೊರತುಪಡಿಸಿ ಇನ್ಯಾವ ನಾಯಕನಿಗೂ ದಕ್ಕಲಿಲ್ಲ.

ಆದರೆ ಗಾಂಧಿಪ್ರಣೀತ ಈ ಗ್ರಾಮಗಳೆಲ್ಲಾ ಪ್ರತ್ಯೇಕ ಅಸ್ತಿತ್ವ ಹೊಂದಿದ್ದ ‘ಗಣರಾಜ್ಯ’ಗಳಾಗಿದ್ದವು ಎಂಬ ತಪ್ಪು ಗ್ರಹಿಕೆ ಎಷ್ಟು ಪ್ರಭಾವಿಯಾಗಿತ್ತೆಂದರೆ, ವಿಕೇಂದ್ರೀಕರಣದ ಪಂಚಾಯತ್‌ ರಾಜ್‌ ತಿದ್ದುಪಡಿಯೂ ಆಯಿತು. ಅಲ್ಲೂ ಸದ್ಯ ಮೀಸಲಾತಿ ತಂದ ಕಾರಣ ಈ ಗ್ರಾಮಗಳ ಜಾತಿ ಯಜಮಾನಿಕೆಗೆ ಅಷ್ಟರ ಮಟ್ಟಿಗೆ ಕಡಿವಾಣ ಬಿದ್ದಿತು.

ಅಬ್ದುಲ್‌ ನಜೀರ್‌ ಸಾಬ್‌ ಇದನ್ನು ವಿರೋಧಗಳ ಮೂಲಕ ಸೃಷ್ಟಿಸಿದ ಸಮತೋಲನ(Equilibrium in opposition)  ಎಂದು ಬಣ್ಣಿಸಿದ್ದರು. ಅಡ್ಡಡ್ಡ ಅಧಿಕಾರದ ಪದರಗಳ ಬದಲು ನೇರಾ ಸೀಳಿದ ಅಧಿಕಾರದ ವಿನ್ಯಾಸ ಇದು.

ಸ್ವತಃ ಗಾಂಧಿಗೆ ನಮ್ಮ ಗ್ರಾಮಗಳು ಸ್ವಾವಲಂಬಿ ಗ್ರಾಮಗಳಾಗಿ ನಗರಗಳ ಕೈಗಾರಿಕಾ ಉತ್ಪಾದನೆಯ ಗ್ರಾಹಕರಾಗುವ ಅಪಾಯ ತಡೆಯಬಹುದು ಎಂಬ ಆಶಯ ಇತ್ತು. ಆದರೆ ಇದು ಆಶಯದಿಂದಾಚೆ ವಾಸ್ತವವಾಗುವ ಯಾವ ಡಿಸೈನೂ ಕೂಡಾ ಇರಲಿಲ್ಲ. ಸ್ವಾವಲಂಬೀ ಗ್ರಾಮವೆಂಬುದು ಜಾತಿ ಪಾಳೆಯಗಾರಿಕೆಯನ್ನು ಭೂಮಿಯ ಒಡೆತನದ ಹೆಚ್ಚುಗಾರಿಕೆಯನ್ನು ಪೋಷಿಸುವ ಸಾಧನಗಳೂ ಆಗುವ ಅಪಾಯದ ಬಗ್ಗೆ ಬಹುತೇಕ ಗಾಂಧಿವಾದಿಗಳು ಮಾತಾಡಲೇ ಇಲ್ಲ.

ತಾತ್ವಿಕವಾಗಿ ಬಹುತೇಕ ಮೇಲ್ಜಾತಿಗಳ ನಾಯಕತ್ವದ ರಾಜಕೀಯ ನಾಯಕತ್ವ ಗ್ರಾಮಗಳ ಜಾತಿ ಪಾಳೇಗಾರಿಕೆಯನ್ನು ಮುರಿಯುವ ಸೈದ್ಧಾಂತಿಕ ದಾರ್ಶನಿಕತ್ವವನ್ನೇ ಹೊಂದಿರಲಿಲ್ಲ. ತಾಂತ್ರಿಕವಾಗಿ ಆಹಾರೋತ್ಪಾದನೆಯ ಸಾಧನವಾಗಿ ಬಂದ ಹಸಿರು ಕ್ರಾಂತಿ ಈ ಭೂ ಹಿಡುವಳಿ, ಸಂಪನ್ಮೂಲ ಆಧಾರಿತ ಯಜಮಾನಿಕೆಯನ್ನು ಇನ್ನಷ್ಟು ಸಶಕ್ತಗೊಳಿಸಿತು. ಅರ್ಥಾತ್‌ ಗ್ರಾಮಗಳು ಭಾರತದ ಆತ್ಮವಾಗಿದ್ದು ತನ್ನ ಕರಾಳತೆಯಲ್ಲಿ ಮಾತ್ರ.

ಇಂತಿಪ್ಪ ಗ್ರಾಮಗಳು ಮತ್ತೆ ಜಾಗತೀಕರಣದ ಕೈಗೆ ಬಿದ್ದ ಮೇಲೆ ಏನಾಗಿವೆ?

ಜಾತಿ ಪಾಳೆಯಗಾರಿಕೆ, ಭೂಮಿಯ ಒಡೆತನದ ಹುಂಬ ಯಜಮಾನಿಕೆಯ ಬಿಗಿ ಹಿಡಿತ ಕಡಿಮೆಯಾಗಿದೆ, ಕೃಷಿಯ ಲಾಭ ಎಂಬುದು ಕಳೆದ 25 ವರ್ಷಗಳಲ್ಲಿ ಮರೀಚಿಕೆಯಾಗಿದೆ. ಸುಸ್ಥಿರ ಕೃಷಿ ಎಂಬ ಸಾಧ್ಯತೆಯೂ ರಾಸಾಯನಿಕ ಬಳಕೆ ಮತ್ತು ನೀರಿನ ಲೂಟಿಯಿಂದಾಗಿ ಕ್ಷೀಣ ಸಾಧ್ಯತೆಯಾಗಿದೆ. ವಿಕೇಂದ್ರೀಕರಣದ ಮಾದರಿಗಳಾಗಬೇಕಿದ್ದ ಪಂಚಾಯತುಗಳು ಕೇಂದ್ರ, ರಾಜ್ಯ ಸರಕಾರಗಳ ಯೋಜನೆ, ಕಾರ್ಯಕ್ರಮಗಳನ್ನು ತಳಮಟ್ಟಕ್ಕೆ ತಲುಪಿಸುವ ಅಂಚೆ ಪೇದೆಗಳಾಗಿವೆ. ಅಲ್ಲಿ ಅಷ್ಟಿಷ್ಟು ಶಾಖಾಯ ಲವಣಾಯ ಸಂಪಾದನೆಯೂ ಇರುವ ಕಾರಣ ಅಧಿಕಾರವಿಲ್ಲದ ಸ್ಥಿತಿ ಬಗ್ಗೆ ದೊಡ್ಡ ಆಕ್ಷೇಪವೂ ಇದ್ದಂತಿಲ್ಲ.

ಗ್ರಾಮಗಳಲ್ಲಿ ಯಾವ ಉಪವೃತ್ತಿಗಳೂ ಏಳಿಗೆ ಕಂಡಿಲ್ಲ, ಕಮ್ಮಾರಿಕೆ, ಕುಂಬಾರಿಕೆಯಿಂದ ಹಿಡಿದು ಬಹುತೇಕ (ಕ್ಷೌರಿಕ ವೃತ್ತಿ ಬಿಟ್ಟು) ಉಳಿದೆಲ್ಲಾ ವೃತ್ತಿಗಳು ಸತ್ತು ದಶಕಗಳೇ ಸಂದಿವೆ. ಪೆಟ್ಟಿ ಅಂಗಡಿಗಳೇ ಗ್ರಾಮಗಳ ಉಪವೃತ್ತಿಗಳಾಗಿವೆ. ಅವು ನಗರಗಳ ಕೈಗಾರಿಕೋತ್ಪನ್ನಗಳ ಮಾರಾಟದ ಏಜೆಂಟುಗಳಾಗಿ ಕೂತಿವೆ.

ಪಾಳೇಗಾರಿಕೆಯ ಹಂಗಿನಲ್ಲಿದ್ದ ದಲಿತರೂ ಭೂಹೀನರೂ ಈ ವ್ಯಾಪಕ ಸ್ಥಿತ್ಯಂತರದಲ್ಲಿ ಒಂದಷ್ಟು ಚಲನಶೀಲತೆ ಪಡೆದುಕೊಂಡು ವಲಸೆ ಮೂಲಕವೋ, ಹತ್ತಿರದ ಪಟ್ಟಣಗಳಲ್ಲೋ ಕೆಲಸ ಪಡೆಯುತ್ತಿದ್ದಾರೆ. ಆದರೆ ಈ ಎಲ್ಲಾ ಬದಲಾವಣೆ, ಆಯ್ಕೆಗಳು ಯಾವುವೂ ಕನಿಷ್ಠ ಘನತೆ, ಸುಖದ ಜೀವನದ ಮಾದರಿಯಾಗಿವೆ ಎಂದು ಯಾರೂ ಹೇಳಲಾರರು.

ಗ್ರಾಮಗಳನ್ನು ಸಮಾನತೆ, ಸಮಾನ ಅವಕಾಶ ಪರಸ್ಪರ ಘನತೆಯ ಅವಲಂಬನೆಯ ಬುನಾದಿಯಲ್ಲಿ ಕಟ್ಟಬಹುದಾದ ಯಾವ ಮಾದರಿಯನ್ನೂ ಯಾರೂ ಮುಂದಿಡಲಿಲ್ಲ. ಖಾದಿ ಮತ್ತು ಗುಡಿ ಕೈಗಾರಿಕೆಗಳ ಸಾಧ್ಯತೆ ಬಗ್ಗೆ ಗಾಂಧಿ ಧ್ಯಾನಿಸಿದರೆ, ಪ್ರಭುತ್ವದ ದೊಡ್ಡ ಪ್ರಮಾಣದ ಸಹಾಯದ ಮೂಲಕ ನೀರು, ಬೆಳಕು ನೀಡುವ ವಿನ್ಯಾಸವನ್ನು ನೆಹರೂ ಮುಂದಿಟ್ಟರು.

ಅಂಬೇಡ್ಕರ್‌ ಮುಂದಿಟ್ಟ ರೋಗಪತ್ತೆಯ ದಾಖಲೆಯನ್ನೇ ಆಧರಿಸಿ ಅಭಿವೃದ್ಧಿ, ಸಮಾನತೆ, ಸಮಾನ ಅವಕಾಶಗಳ ಮಾದರಿಯನ್ನು ಗ್ರಾಮ ಭಾರತದೊಳಗೆ ಸೃಷ್ಟಿಸುವ ಅನುಷ್ಠಾನ ಯೋಗ್ಯ ಮಾದರಿಗಳೇ ನಾಪತ್ತೆಯಾಗಿದ್ದವು. ಗ್ರಾಮದೊಳಗೇ ಇದ್ದ ಸಾಮಾಜಿಕ ಜಾತಿ ಪಾಳೇಗಾರಿಕೆ- ಆರ್ಥಿಕ ಮತ್ತು ಸಂಪನ್ಮೂಲದ ನಿಯಂತ್ರಣದ ಬೇರುಗಳೆಂಬುದು ಗೊತ್ತಿದ್ದರೂ ಅದನ್ನು ಮುರಿದು ಕಟ್ಟುವ ಎದೆಗಾರಿಕೆಯನ್ನು ರಾಜಕೀಯ ನಾಯಕತ್ವ ತೋರಲೇ ಇಲ್ಲ.

ಇಂದೀಗ ಈ ಹಳ್ಳಿಗಳು ದೂರ ಸಂಪರ್ಕ, ದೂರದರ್ಶನ(ಅಂದರೆ ಟಿವಿ)ಗಳ ರಿಮೋಟ್‌ ನಿಯಂತ್ರಣದ ಸಮ್ಮೋಹನಕ್ಕೊಳಗಾಗಿವೆ. ಮೊಬೈಲ್‌ ಫೋನುಗಳು ಅಸದೃಶ ಅವಕಾಶಗಳನ್ನೂ ವೈಯುಕ್ತಿಕ ನೆಲೆಯ ಸ್ವಾತಂತ್ರ್ಯವನ್ನೂ ನೀಡಿವೆ; ನಿಜ. ಆದರೆ ಅವುಗಳಿಂದಾಚೆಯ ಭ್ರಮಾತ್ಮಕ ಮಾಹಿತಿಯ ಗ್ರಾಹಕ ರೋಗಕ್ಕೂ ಗ್ರಾಮ ಸಮುದಾಯ ತುತ್ತಾಗಿವೆ. ಹಾಗೇ ಭೂಹೀನ ಅವಕಾಶ ವಂಚಿತ, ದಲಿತ ವರ್ಗಕ್ಕೆ ಸಿಕ್ಕಿದ ಚಲನ ಶೀಲತೆಯೂ ಅರಾಜಕ ಚದುರುವಿಕೆಯ ಉದಾಹರಣೆಗಳಾಗಿವೆಯಷ್ಟೇ ಹೊರತು ಪ್ರಜ್ಞಾಪೂರ್ವಕ ಆಯ್ಕೆಗಳಾಗಿವೆ ಎಂದನ್ನಿಸಿಲ್ಲ.

ಆಯಾ ಕಾಲದ ತಂತ್ರಜ್ಞಾನ ತರುವ ಆತ್ಯಂತಿಕ ಬದಲಾವಣೆಗಳನ್ನು ಗಾಂಧೀ ಗ್ರಹಿಸಿರಲಾರರು. ಆದರೆ ಉದ್ಯೋಗದ ಅವಕಾಶ, ಸಮಾನತೆ ಮತ್ತು ಘನತೆಯ ಚೌಕಟ್ಟು ಈ ಗ್ರಾಮಭಾರತದೊಳಗೆ ತರಬಹುದಾದ ನೀಲನಕ್ಷೆಯೇ ಇಲ್ಲದಾದ ಕಾರಣ ಮೊದಲೇ ಆರ್ಥಿಕವಾಗಿ ಶಿಥಿಲವೂ ಸಾಮಾಜಿಕವಾಗಿ ಘನೀಭೂತವೂ ಆಗಿ ರೂಪಾಂತರಗೊಂಡ ಗ್ರಾಮ ಭಾರತ, ಗಾಂಧಿ ತೀರಿ 75 ವರ್ಷಗಳ ಬಳಿಕ ಯಾರೂ ತಿದ್ದಲಾರದ ಒಂದು ರೋಗಿಷ್ಠ ಎಂಟಿಟಿಯಾಗಿ ರೂಪಾಂತರಗೊಂಡಿದೆ.

ಜಾಗತೀಕರಣದ ಹರಿಕಾರರು ಊಹಿಸುವ ‘ಮಾರುಕಟ್ಟೆಯೇ ವ್ಯಕ್ತಿಯ ಸಮೃದ್ಧಿಯನ್ನು ಸಾಧಿಸುವ’ ಪರಿಕಲ್ಪನೆಯೊಳಗೆ  ಭಾರತಕ್ಕೇ ವಿಶಿಷ್ಟವಾಗಿರುವ ಸಾಮಾಜಿಕ ನ್ಯಾಯದ ಆಯಾಮವೇ ಇರಲಿಲ್ಲ. ಕಾಲ ದೇಶದ ಒತ್ತಡಕ್ಕೆ ಉದ್ಯೋಗ ಖಾತರಿ, ಸ್ವಉದ್ಯೋಗ ಸಾಲ ಇತ್ಯಾದಿಗಳಲ್ಲಿ ಮೀಸಲು ಹೊರತಾದ ದೊಡ್ಡ ಕಾಣ್ಕೆಯ ಚೌಕಟ್ಟೂ ಇರಲಿಲ್ಲ. ಅದನ್ನು ಈಗ ಸೃಷ್ಟಿಸುವ ಹಂತವೂ ದಾಟಿ ಹೋಗಿದೆಯೇನೋ.

ಗಾಂಧಿಯಷ್ಟೇ ಅಂಚಿಗೆ ಸರಿದಿರುವುದು ಭಾವುಕವಾಗಿಯೂ ಕಾಣಿಸುತ್ತದೆ. ದೇಶದ ಬಹುತೇಕ ಸಾಮಾಜಿಕ ನಾಯಕತ್ವ, ಸಂಪನ್ಮೂಲಗಳ ನಿಯಂತ್ರಣ ಹೊಂದಿದ್ದ ಸಮುದಾಯಗಳ ಆದ್ಯ ನಾಯಕರಾಗಿದ್ದ ಗಾಂಧಿ ನೆಹರೂ ಪಕ್ವವಾದ ಒಂದು ನೀಲನಕ್ಷೆ ನೀಡಿದ್ದರೆ ಒಂದು ಕ್ರಿಟಿಕಲ್‌ ಎಂಗೇಜ್‌ ಮೆಂಟ್‌ ಮೂಲಕವಾದರೂ ಅಂಬೇಡ್ಕರ್‌ ಮೂಲಕ ದಕ್ಕಿದ್ದ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಹೆಣೆಯಬಹುದಿತ್ತು. ಆದರೆ ಸದ್ಯ ಯಜಮಾನಿಕೆ ನಡೆಸುತ್ತಿರುವ ಜಾಗತೀಕರಣ ಮತ್ತು ಉದಾರವಾದಿ ನೀತಿಯಿಂದಾಗಿ ಸೃಷ್ಟಿಯಾಗಿರುವ ಈ ಕೋಲಾಹಲಕಾರಿ ರೂಪಾಂತರದಲ್ಲಿ ಬಾಬಾ ಸಾಹೇಬರ ಸಹಿತ ಎಲ್ಲರೂ ಅಂಚಿಗೆ ಸರಿದಿದ್ದಾರೆ.

ಗ್ರಾಮ ಭಾರತ ಅವ್ಯಾಹತ ನಗರೀಕೃತ ಕಾರ್ಪೋರೇಟ್‌ ಮತ್ತು ದೇಶೀಯ ಭ್ರಷ್ಟ ರಾಜಕಾರಣದ ಹಿಡಿತದ ಆಂತರಿಕ ವಸಾಹತುಗಳಾಗಿ, ಘೆಟ್ಟೋಗಳಾಗಿ ದಿನಗಳೆಯುತ್ತಿವೆ.

ಕೆ.ಪಿ. ಸುರೇಶ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...