ಉಜ್ವಲ ಯೋಜನೆಯಡಿ ಪ್ರಧಾನಿ ಮೋದಿ ಅವರು 5,000 ರೂ. ಕೊಡುತ್ತಾರೆಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮಾಹಿತಿಯನ್ನೇ ನಂಬಿಕೊಂಡ ಜನರು, ಕೆವೈಸಿ ಅಪ್‌ಡೇಟ್ ಮಾಡಿಸಲು ಗ್ಯಾಸ್ ಕಚೇರಿ ಎದುರು ಜಮಾಜಿಸಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಉಜ್ವಲ ಯೋಜನೆಯಡಿ ಗ್ಯಾಸ್ ಪಡೆಯುತ್ತಿರುವವರು ಆಧಾರ್, ಬ್ಯಾಂಕ್ ಬಾಸ್ ಬುಕ್ಅನ್ನು ಗ್ಯಾಸ್ ನೋಂದಣಿ ಜೊತೆಗೆ ಕೆವೈಸಿ ಅಪ್‌ಡೇಟ್ ಮಾಡಿಸಬೇಕು. ಹಾಗೆ ಮಾಡಿಸಿದರೆ ಕೇಂದ್ರ ಸರ್ಕಾರದಿಂದ 5,000 ರೂ. ನೀಡುತ್ತಾರೆ ಎಂಬ ವದಂತಿಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಹೀಗಾಗಿ, ಧಾರವಾಡ ಜಿಲ್ಲೆಯ ಕಲಘಟಗಿ ಸುತ್ತಮುತ್ತಲ ಹಳ್ಳಿಗಳ ಜನರು ಕೆವೈಸಿ ಅಪ್‌ಡೇಟ್ ಮಾಡಿಸಲು ಕಲಘಟಗಿಯ ಲೋಕಪೂಜ್ಯ ಗ್ಯಾಸ್ ಕಚೇರಿಗೆ ದೌಡಾಯಿಸಿದ್ದಾರೆ. ಅವರನ್ನು ನಿಯಂತ್ರಿಸಲು ಕಚೇರಿ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಇತ್ತೀಚೆಗೆ, ಕರಾವಳಿ ಭಾಗದಲ್ಲಿ ಇಂತದ್ದೇ ಪೋಸ್ಟ್ ವೈರಲ್ ಆಗಿತ್ತು. ಕೆವೈಸಿ ಅಪ್‌ಡೇಟ್ ಮಾಡಿಸಿದರೆ, 500 ರೂ.ಗೆ ಸಿಲಿಂಡರ್ ದೊರೆಯುತ್ತದೆ. ಅಪ್‌ಡೇಟ್ ಮಾಡಿಸದಿದ್ದರೆ ಅಡುಗೆ ಅನಿಲದ ಸಿಲಿಂಡರ್ ಕಮರ್ಷಿಯಲ್ ಆಗಿ ಬದಲಾಗುತ್ತದೆ. ಆ ಸಿಲಿಂಡರ್‌ಗೆ 1,400 ರೂ. ಕೊಡಬೇಕಾಗುತ್ತದೆ ಎಂದು ನಕಲಿ ಪೋಸ್ಟ್ ವೈರಲ್ ಆಗಿತ್ತು. ಅದು ಸುಳ್ಳೆಂಬುದು ಈಗಾಗಲೇ ಸಾಬೀತಾಗಿದೆ.
ಇದೀಗ, ಧಾರವಾಡ ಜಿಲ್ಲೆಯಲ್ಲಿ 5,000 ರೂ. ಕೊಡುತ್ತಾರೆಂಬ ಮತ್ತೊಂದು ನಕಲಿ ಸುದ್ದಿ ವೈರಲ್ ಆಗಿದೆ.
ಇಂತಹ ಪೋಸ್ಟ್‌ಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಇಂಡೇನ್ ಗ್ಯಾಸ್ ಸರಬರಾಜು ಮಾಡುವ ಕವಿತಾ ಎಂಟರ್‌ಪ್ರೈಸಸ್ ಗ್ಯಾಸ್ ಏಜೆನ್ಸಿಯ ನಿರ್ವಾಹಕ ವೆಂಕಟೇಶ್ ಅವರು “ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ ಡಿಸೆಂಬರ್ 31ರೊಳಗೆ KYC ಮಾಡಿಸಬೇಕು. ಉಳಿದ ಗ್ರಾಹಕರು ಕೆವೈಸಿ ಮಾಡಿಸಬೇಕಾದ ಅಗತ್ಯವಿಲ್ಲ. KYC ಮಾಡಿಸಿದಾಕ್ಷಣ 500 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂಬುದು ಸುಳ್ಳು” ಅಂತ ಹೇಳಿದ್ದಾರೆ.
ಒಂದು ವೇಳೆ KYC ಮಾಡಿಸದಿದ್ದರೆ ಗೃಹ ಬಳಕೆ ಸಿಲಿಂಡರ್ ಕಮರ್ಷಿಯಲ್ ಆಗಿ ಬಿಡುತ್ತದೆ ಅನ್ನೋದು ಕೂಡ ಸುಳ್ಳು. ಹಾಗೇನೂ ಆಗುವುದಿಲ್ಲ. ಗೃಹ ಬಳಕೆಯ ಗ್ರಾಹಕರಾಗಿಯೇ ಮುಂದುವರಿಯುತ್ತಾರೆ. ಆದರೆ, ಉಜ್ವಲ ಯೋಜನೆಯಡಿ ಅವರಿಗೆ ಸಿಗುತ್ತಿದ್ದ ಸಣ್ಣ ಪುಟ್ಟ ಸಬ್ಸಿಡಿ ನಿಂತು ಹೋಗಬಹುದು. ಹಾಗಾಗಿ ಕೆವೈಸಿ ಮಾಡಿಸಬೇಕು” ಅಂತ ಅವರು ಹೇಳಿದ್ದಾರೆ.
ಇನ್ನು, ಉಜ್ವಲ ಯೋಜನೆಯ ನೋಡಲ್ ಅಧಿಕಾರಿ ರಾಹುಲ್ ಅವರು ಕೂಡ ವಾಟ್ಸಾಪ್‌ನಲ್ಲಿ ವೈರಲ್ ಸಂದೇಶ ಸುಳ್ಳು ಅಂತ ಹೇಳಿದ್ದಾರೆ. ಈ ಬಗ್ಗೆ ವರದಿಗಳೂ ಪ್ರಕಟವಾಗಿವೆ. “ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ ಸಬ್ಸಿಡಿ ನೀಡುತ್ತಿದ್ದು. ಅವರು ಮಾತ್ರ ಆಧಾರ ದೃಢೀಕರಿಸಬೇಕು” ಅಂತ ಅವರು ಹೇಳಿದ್ದಾರೆ.