ಪ್ರವಾದಿ ಮುಹಮ್ಮದ್ ಅವರ ಜನ್ಮದಿನಾಚರಣೆ ‘ಮೀಲಾದುನ್ನಬಿ’ಯ ಪ್ರಯುಕ್ತ ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯ ವೇಳೆ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಘಟನೆಯ ಬಳಿಕ ಉಂಟಾದ ಪ್ರಕ್ಷುಬ್ಧ ಘಟನೆಗೂ ಎಸ್‌ಡಿಪಿಐ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಶಿವಮೊಗ್ಗ ಜಿಲ್ಲಾಧ್ಯಕ್ಷ ಇಮ್ರಾನ್ ಸ್ಪಷ್ಟೀಕರಣ ನೀಡಿದ್ದಾರೆ.
ಬಜರಂಗದಳದ ರೋಹನ್ ಕಲ್ಲೆಸೆತವೇ ಶಿವಮೊಗ್ಗ ಗಲಭೆಯ ಆರಂಭ ಬಿಂದುವೇ? ಎಂಬ ವರದಿಯನ್ನು ಈ ದಿನ.ಕಾಮ್ ಪ್ರಕಟಿಸಿತ್ತು. ವರದಿಯಲ್ಲಿ ಸ್ಥಳೀಯರ ಆರೋಪವನ್ನು ಉಲ್ಲೇಖಿಸಿ ‘ಎಸ್‌ಡಿಪಿಐನವರೂ ಕೂಡ ಪ್ರಕ್ಷುಬ್ಧ ಘಟನೆಯಲ್ಲಿ ಇದ್ದರು’ ಎಂಬುದನ್ನು ಉಲ್ಲೇಖಿಸಿತ್ತು.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಈ ದಿನ.ಕಾಮ್‌ಗೆ ಸ್ಪಷ್ಟೀಕರಣ ನೀಡಿರುವ ಶಿವಮೊಗ್ಗ ಜಿಲ್ಲಾಧ್ಯಕ್ಷ ಇಮ್ರಾನ್, “ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಒಂದು ರಾಜಕೀಯ ಪಕ್ಷ. ಮೀಲಾದುನ್ನಬಿಗೂ ಎಸ್‌ಡಿಪಿಐಗೂ ಏನೂ ಸಂಬಂಧವಿರಲ್ಲ. ನಮ್ಮ ಪಕ್ಷದಲ್ಲಿ ಎಲ್ಲ ಜಾತಿ ಧರ್ಮದವರೂ ಇದ್ದಾರೆ. ಪಕ್ಷದಲ್ಲಿ ಗುರುತಿಸಿಕೊಂಡಿರುವವರ ಪೈಕಿ ಮೀಲಾದುನ್ನಬಿ ಆಚರಿಸುವವರೂ ಇದ್ದಾರೆ. ಮಾಡದಿರುವವರೂ ಇದ್ದಾರೆ. ಮೀಲಾದುನ್ನಬಿ ಆಚರಿಸುವುದು ಅವರವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಮೊನ್ನೆ ರಾಗಿಗುಡ್ಡದಲ್ಲಿ ನಡೆದ ಘಟನೆಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ” ಎಂದು ತಿಳಿಸಿದ್ದಾರೆ.
‘ಎಸ್‌ಡಿಪಿಐ ಜನರ ಸಮಸ್ಯೆಗೆ ಸ್ಪಂದಿಸಿ ಎಲ್ಲ ಕಡೆಗೆ ಬೆಳೆಯುತ್ತಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಸ್ಥಳೀಯ ಚುನಾವಣೆಯೂ ಇದೆ. ಹೀಗಾಗಿ, ಪಕ್ಷದ ಬೆಳವಣಿಗೆ ಸಹಿಸದವರು ಬೇರೆ ಪಕ್ಷದ ಬಗ್ಗೆ ಆಸಕ್ತಿ ಇರುವವರು ನಮ್ಮನ್ನು ಎಳೆದು ತಂದಿದ್ದಾರೆ. ನಾನು ಸ್ವತಃ ಮೀಲಾದುನ್ನಬಿ ಆಚರಿಸುತ್ತೇನೆ. ಆದರೆ ಬೇರೆಯವರೂ ಮಾಡಿ ಎಂದು ನಾನು ಒತ್ತಾಯ ಮಾಡುವುದಿಲ್ಲ. ಮೊನ್ನೆ ನಡೆದ ರಾಗಿಗುಡ್ಡದ ಘಟನೆಯಲ್ಲಿ ಎಸ್‌ಡಿಪಿಐನವರು ಇದ್ದರು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾಗಲೀ, ಪೊಲೀಸ್ ಇಲಾಖೆಯಾಗಲಿ ಎಲ್ಲೂ ಹೇಳಿಕೆ ನೀಡಿಲ್ಲ. ಅಂದ ಮೇಲೆ ನಮ್ಮ ಬೆಳವಣಿಗೆ ಸಹಿಸದವರು ಪಕ್ಷದ ವಿರುದ್ಧ ನಡೆಸಿರುವ ಷಡ್ಯಂತ್ರ. ಹಾಗಾಗಿ, ಎಸ್‌ಡಿಪಿಐಗೂ ರಾಗಿಗುಡ್ಡ ಘಟನೆಗೂ ಯಾವುದೇ ಸಂಬಂಧವಿಲ್ಲ” ಎಂದು ಇಮ್ರಾನ್ ಹೇಳಿದ್ದಾರೆ.